ಶುಕ್ರವಾರ, ಸೆಪ್ಟೆಂಬರ್ 24, 2021
26 °C
ಸಾಮಾಜಿಕ ಜಾಲತಾಣದಲ್ಲಿ ಆಕಾಂಕ್ಷಿಗಳ ಮನದಿಚ್ಛೆ ಬಹಿರಂಗ

ಪಾಲಿಕೆ ಚುನಾವಣೆ: ಟಿಕೆಟ್ ಸಿಗುವ ಮುಂಚೆಯೇ ಪ್ರಚಾರ

ಓದೇಶ ಸಕಲೇಶಪುರ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ಮಹಾನಗರ ಪಾಲಿಕೆಯ ಚುನಾವಣೆ ನಿಗದಿಯಾದ ಬೆನ್ನಲ್ಲೇ, ಟಿಕೆಟ್ ಆಕಾಂಕ್ಷಿಗಳು ಸಾಮಾಜಿಕ ಜಾಲತಾಣದಲ್ಲಿ ಪ್ರಚಾರಕ್ಕಿಳಿದಿದ್ದಾರೆ. ಪಕ್ಷ ಟಿಕೆಟ್ ನೀಡುವುದಕ್ಕೆ ಮುಂಚೆಯೇ ತಮ್ಮ ಪರ ಜನಾಭಿಪ್ರಾಯ ರೂಪಿಸಿಕೊಂಡು ನಾಯಕರ ಗಮನ ಸೆಳೆಯಲು ಪ್ರಯತ್ನಿಸುತ್ತಿದ್ದಾರೆ. ಇನ್ನೊಂದೆಡೆ, ತಮ್ಮನ್ನು ಬೆಂಬಲಿಸುವಂತೆ ಮತದಾರರಲ್ಲೂ ಕೋರುತ್ತಿದ್ದಾರೆ.

ಬಿಜೆಪಿ, ಕಾಂಗ್ರೆಸ್, ಜೆಡಿಎಸ್, ಬಿಎಸ್‌ಪಿ, ಎಎಪಿ, ಎಐಎಂಐಎಂ ಟಿಕೆಟ್ ಆಕಾಂಕ್ಷಿಗಳಷ್ಟೇ ಅಲ್ಲದೆ, ಸ್ವತಂತ್ರವಾಗಿ ಸ್ಪರ್ಧಿಸಲು ತಯಾರಿ ನಡೆಸುತ್ತಿರುವವರು ಕೂಡ ಜನರನ್ನು ತಲುಪಲು ಸಾಮಾಜಿಕ ಜಾಲತಾಣದಲ್ಲಿ ಆಕಾಂಕ್ಷಿಯಾಗಿರುವುದನ್ನು ತಿಳಿಸುವ ಜೊತೆಗೆ, ಮತದಾರರ ಬೆಂಬಲ ಗಳಿಸಲೂ ಮುಂದಾಗಿದ್ದಾರೆ. ಪ್ರಚಾರಕ್ಕೆ ಮುಂದಡಿ ಹೆಜ್ಜೆ ಇಡುವ ಮೂಲಕ ನಾಯಕರ ಮೇಲೆ ಪರೋಕ್ಷವಾಗಿ ಒತ್ತಡ ಹಾಕುವ ತಂತ್ರಕ್ಕೆ ಮೊರೆ ಹೋಗಿದ್ದಾರೆ.

ವಾರ್ಡ್‌ ಮಟ್ಟದಲ್ಲಿ ತಮ್ಮ ಹಿತೈಷಿಗಳು ಹಾಗೂ ಸಮುದಾಯದವರ ಬೆಂಬಲ ಕೋರಿದ್ದಾರೆ. ಆಕಾಂಕ್ಷಿಗಳ ಪೋಸ್ಟರ್‌ಗಳು ಫೇಸ್‌ಬುಕ್ ಮತ್ತು ವಾಟ್ಸ್‌ಆ್ಯಪ್‌ಗಳಲ್ಲಿ ಈಗಾಗಲೇ ಹರಿದಾಡುತ್ತಿವೆ.

ಭರವಸೆ ಬಳಿಕವೇ ಪ್ರಚಾರ

‘ಟಿಕೆಟ್ ಆಕಾಂಕ್ಷಿಯಾಗಿದ್ದೇನೆ. ಈ ಕುರಿತು ಮುಖಂಡರಿಗೂ ತಿಳಿಸಿದ್ದೇನೆ. ಟಿಕೆಟ್ ನೀಡುವ ಭರವಸೆ ನೀಡಿರುವ ಅವರು, ಚುನಾವಣೆಗೆ ಬೇಕಾದ ತಯಾರಿ ಮಾಡಿಕೊಳ್ಳುವಂತೆ ಸೂಚಿಸಿದ್ದಾರೆ. ಹಾಗಾಗಿ, ಕಾರ್ಯಕರ್ತರ ಮನೆ ಮನೆಗೆ ಭೇಟಿ ಜೊತೆಗೆ ಸಾಮಾಜಿಕ ಜಾಲತಾಣಗಳಲ್ಲೂ ಪ್ರಚಾರ ಕೈಗೊಂಡಿದ್ದೇನೆ’ ಎಂದು ಸೆಂಟ್ರಲ್ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ವಾರ್ಡ್ 51ರ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಸಂದಿಲ್ ಕುಮಾರ್ ಎಸ್. ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ಹದಿನೈದು ವರ್ಷಗಳಿಂದ ಪಕ್ಷದಲ್ಲಿ ದುಡಿಯುತ್ತಿದ್ದೇವೆ. ಟಿಕೆಟ್ ಸಿಗುವ ಭರವಸೆ ಸಿಕ್ಕಿದೆ. ಸಾಮಾಜಿಕ ಜಾಲತಾಣದ ಮೂಲಕ ವಾರ್ಡ್‌ ಜನರ ಬೆಂಬಲ ಕೋರಿದ್ದೇನೆ’ ಎಂದು 37ನೇ ವಾರ್ಡ್‌ನ ಬಿಜೆಪಿ ಟಿಕೆಟ್ ಆಕಾಂಕ್ಷಿ ವಿನೋದ ಚಂದ್ರಕಾಂತ ಅಲಾಡಿ ಹೇಳಿದರು.

ಪ್ರಚಾರದ ಅನಿವಾರ್ಯ ವೇದಿಕೆ

ಕೋವಿಡ್–19 ಮೂರನೇ ಅಲೆಯ ಆತಂಕದ ನಡುವೆಯೂ ಪಾಲಿಕೆಯ ಚುನಾವಣೆ ಬಂದಿದೆ. ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವಾಗ ಮೆರವಣಿಗೆ ಮಾಡಬಾರದು. ಪ್ರಚಾರ ಸಂದರ್ಭದಲ್ಲಿ ನೂರಕ್ಕಿಂತ ಹೆಚ್ಚು ಜನರಿಗೆ ಅವಕಾಶ ಇಲ್ಲ ಎಂಬ ಷರತ್ತನ್ನು ಅಧಿಕಾರಿಗಳು ವಿಧಿಸಿದ್ದಾರೆ. ಹಾಗಾಗಿ, ಈ ಬಾರಿ ಹಿಂದಿಗಿಂತ ಹೆಚ್ಚು ಸಾಮಾಜಿಕ ಜಾಲತಾಣವನ್ನು ಪ್ರಚಾರಕ್ಕೆ ಬಳಸಿಕೊಳ್ಳಲು ಆರಂಭಿಸಿದ್ದಾರೆ.

‘ಅಬ್ಬರವಿಲ್ಲದ ಪ್ರಚಾರಕ್ಕೆ ಸಾಮಾಜಿಕ ಜಾಲತಾಣ ಸೂಕ್ತ ವೇದಿಕೆ. ಕೋವಿಡ್ ಸಂದರ್ಭದಲ್ಲಿ ಇದೊಂದು ಒಳ್ಳೆಯ ಮಾರ್ಗವೂ ಹೌದು’ ಎಂದು ಬಿಜೆಪಿ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಕಿರಣ ಉಪ್ಪಾರ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು