ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಎಎ ವಿರೋಧಿಸಿದವರ ಮೇಲಿನ ಹಲ್ಲೆ ಪೂರ್ವನಿಯೋಜಿತ

ಬಿಜೆಪಿ ಸರ್ಕಾರವಿರುವ ರಾಜ್ಯಗಳಲ್ಲೇ ಹಿಂಸಾಚಾರ: ಎಸ್‌ಡಿಪಿಐ ಅಧ್ಯಕ್ಷ ತುಂಬೆ ಆರೋಪ
Last Updated 2 ಜನವರಿ 2020, 15:38 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಪೌರತ್ವ (ತಿದ್ದುಪಡಿ) ಕಾಯ್ದೆ ಹಾಗೂ ರಾಷ್ಟ್ರೀಯ ಪೌರತ್ವ ನೋಂದಣಿ ವಿರೋಧಿಸಿ ಪ್ರತಿಭಟಿಸಿದವರ ಮೇಲೆ ನಡೆದಿರುವ ಹಲ್ಲೆ, ಪೊಲೀಸರಿಂದಲೇ ನಡೆದ ಪೂರ್ವನಿಯೋಜಿತ ಕೃತ್ಯವಾಗಿದೆ’ ಎಂದು ಎಸ್‌ಡಿಪಿಐ ಅಧ್ಯಕ್ಷ ಇಲಿಯಾಸ್ ಮಹಮ್ಮದ್ ತುಂಬೆ ಆರೋಪಿಸಿದರು.

‘ಸಿಎಎ ಮತ್ತು ಎನ್‌ಆರ್‌ಸಿ ವಿರೋಧಿಸಿ ದೇಶದಾದ್ಯಂತ ನಡೆದ ಪ್ರತಿಭಟನೆಯಲ್ಲಿ 28 ಮಂದಿ ಬಲಿಯಾಗಿದ್ದಾರೆ. ಈ ಪೈಕಿ, ಕರ್ನಾಟಕದಲ್ಲಿ ಇಬ್ಬರು ಗೋಲಿಬಾರ್‌ನಿಂದ ಮೃತಪಟ್ಟಿದ್ದಾರೆ. ನೂರಾರು ಮಂದಿ ಗಾಯಗೊಂಡಿದ್ದಾರೆ. ಆ ಮೂಲಕ, ಸರ್ಕಾರ ಪೊಲೀಸರ ಮೂಲಕವೇ ಪ್ರತಿಭಟನಾಕಾರರ ಮೇಲೆ ಪ್ರತೀಕಾರ ತೀರಿಸಿಕೊಂಡಿದೆ’ ಎಂದು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ನ್ಯಾಯಮೂರ್ತಿ ತನಿಖೆ ನಡೆಸಲಿ:‘ಮಂಗಳೂರು ಪ್ರತಿಭಟನೆ ವೇಳೆ ನಡೆದ ಘರ್ಷಣೆಯಲ್ಲಿ, ಪೊಲೀಸರ ಕರ್ತವ್ಯ ಲೋಪ ಎಸಗಿರುವ ವಿಡಿಯೊ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಇಷ್ಟಾದರೂ, ಅಧಿಕಾರಿಗಳ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ಘಟನೆಯನ್ನು ಸಿಐಡಿ ಮತ್ತು ಮ್ಯಾಜಿಸ್ಟ್ರಿಯಲ್ ತನಿಖೆಗೆ ಆದೇಶಿಸಲಾಗಿದೆ. ಇದರಿಂದ ನ್ಯಾಯ ಸಿಗುವ ವಿಶ್ವಾಸವಿಲ್ಲ. ಹಾಗಾಗಿ, ಹೈಕೋರ್ಟ್ ನ್ಯಾಯಮೂರ್ತಿಯಿಂದ ತನಿಖೆ ನಡೆಸಬೇಕು’ ಎಂದು ಒತ್ತಾಯಿಸಿದರು.

‘ಧರ್ಮದ ಆಧಾರದ ಮೇಲೆ ಪೌರತ್ವ ನೀಡುವುದು ದೇಶದ ಸಂವಿಧಾನಕ್ಕೆ ವಿರುದ್ಧವಾದ ನಡೆಯಾಗಿದೆ. ಈ ಬಗ್ಗೆ ವಿಶ್ವಸಂಸ್ಥೆ ಸೇರಿದಂತೆ, 83 ದೇಶಗಳು ಆಕ್ಷೇಪ ವ್ಯಕ್ತಪಡಿಸಿವೆ. ಬಿಜೆಪಿ ತನ್ನ ಹಿಂದುತ್ವ ಅಜೆಂಡಾ ಜಾರಿಯ ಭಾಗವಾದ ಸಿಎಎಗೆ ಪೂರಕವಾಗಿ, ಎನ್‌ಆರ್‌ಸಿ ಮತ್ತು ಎನ್‌ಪಿಆರ್‌ ಕೂಡ ಜಾರಿಗೆ ತೆರೆ ಮರೆಯಲ್ಲಿ ತಯಾರ ನಡೆಸುತ್ತಿದೆ. ಇದು, ಜನರ ಆತಂಕವನ್ನು ಹೆಚ್ಚಿಸಿದೆ’ ಎಂದು ಹೇಳಿದರು.

‘ಎನ್‌ಆರ್‌ಸಿ ನಡೆದ ಅಸ್ಸಾಂನಲ್ಲಿ ಈಗಾಗಲೇ ಬಂಧನ ಕೇಂದ್ರಗಳನ್ನು ತೆರೆದು ಹಿಂದೂ, ಮುಸ್ಲಿಂ ಸೇರಿದಂತೆ ಅನೇಕ ಸಮುದಾಯಗಳ ಸಾವಿರಾರು ಜನರನ್ನು ದೂಡಲಾಗಿದೆ. ಬೆಂಗಳೂರಿನ ನೆಲಮಂಗಲದ ಬಳಿಯೂ ಬಂಧನ ಕೇಂದ್ರ ನಿರ್ಮಾಣವಾಗುತ್ತಿದ್ದು, ರಾಜ್ಯದಾದ್ಯಂತ ನಿರ್ಮಿಸಲು ಸರ್ಕಾರ ಆದೇಶ ಹೊರಡಿಸಿದೆ’ ಎಂದರು.

‘ಸಿಎಎ, ಎನ್‌ಆರ್‌ಸಿ, ಎನ್‌ಪಿಆರ್ ವಿರುದ್ಧ ನಮ್ಮ ಪಕ್ಷವು ಮುಸ್ಲಿಂ, ದಲಿತ ಹಾಗೂ ಪ್ರಗತಿಪರ ಸಂಘಟನೆಗಳೊಂದಿಗೆ ನಿರಂತರವಾಗಿ ಹೋರಾಟ ರೂಪಿಸಲಿದೆ. ಜನರಲ್ಲಿ ಜಾಗೃತಿ ಮೂಡಿಸಲು ಪುಸ್ತಕ ಮುದ್ರಿಸಿ ಹಂಚುವುದು, ವಿಚಾರ ಸಂಕಿರಣ ಹಾಗೂ ಕಾರ್ಯಾಗಾರಗಳನ್ನು ಆಯೋಜಿಸಲಾಗುವುದು’ ಎಂದು ಹೇಳಿದರು.

ಎಸ್‌ಡಿಪಿಐನ ರಾಜ್ಯ ಕಾರ್ಯದರ್ಶಿ ಅಶ್ರಫ್ ಮಾಚಾರ್, ಇರ್ಷಾದ್ ಹೈಮದ್ ಅತ್ತಾರ್, ಮೌಲಾನ ಮಹಮ್ಮದ್ ಅಲಿ ಖಾದ್ರಿ, ಸೈಯದ್ ತಾಜುದ್ದೀನ್ ಖಾದ್ರಿ, ಮೌಲಾನ ಅಜೀಂ ಖಾದ್ರಿ, ಮೌಲಾನಾ ನಿಯಾಜ್ ಆಲಂ ಶೇಕ್, ಕೃಷ್ಣಾ ತಿಬೇಲಿ ಹಾಗೂ ಸಮತಾ ಸೈನಿಕ ದಳದ ಸಂಘಟನಾ ಕಾರ್ಯದರ್ಶಿ ಕೃಷ್ಣ ಉಮ್ಮಗೋಳ, ಮಂಜುನಾಥ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT