ಶುಕ್ರವಾರ, ಜುಲೈ 1, 2022
27 °C

ಎಟಿಎಂ ಕಾರ್ಡ್‌ ಅದಲು–ಬದಲು; ವಂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ಇಲ್ಲಿನ ಕುಸಗಲ್‌ ರಸ್ತೆಯ ಎಸ್‌ಬಿಐ ಎಟಿಎಂ ಕೇಂದ್ರದಿಂದ ಹಣ ಡ್ರಾ ಮಾಡುತ್ತಿದ್ದ ಮಧುರಾ ಕಾಲೊನಿಯ ಪುರಂದರ ಹೆಗಡೆ ಅವರಿಗೆ ಯಾಮಾರಿಸಿ, ಅವರ ಎಟಿಎಂ ಕಾರ್ಡ್‌ ಹಾಗೂ ಪಾಸವರ್ಡ್‌ ಪಡೆದ ವಂಚಕ ಅದರಿಂದ ₹88,700 ಡ್ರಾ ಮಾಡಿಕೊಂಡಿದ್ದಾನೆ.

ಪುರಂದರ ಅವರು ಎಟಿಎಂ ಕೇಂದ್ರದಿಂದ ಹಣ ಪಡೆಯುತ್ತಿರುವಾಗ, ಅಲ್ಲಿಯೇ ಪಕ್ಕದಲ್ಲಿದ್ದ ವ್ಯಕ್ತಿ ಏಕಾಏಕಿ ಯಂತ್ರದಲ್ಲಿ ಕ್ಲೋಸ್‌ ಬಟನ್‌ ಒತ್ತಿ ಅವರ ಎಟಿಎಂ ಕಾರ್ಡ್‌ ತಾನು ಇಟ್ಟುಕೊಂಡು ತನ್ನಲ್ಲಿರುವ ಎಟಿಎಂ ಕಾರ್ಡ್‌ ಅವರಿಗೆ ನೀಡಿ ಯಾಮಾರಿಸಿದ್ದಾನೆ. ನಂತರ ಬೇರೆ ಬೇರೆ ಎಟಿಎಂ ಕೇಂದ್ರಗಳಿಂದ ಐದು ಬಾರಿ ಹಣ ಡ್ರಾ ಮಾಡಿದ್ದಲ್ಲದೆ, ಕಾರ್ಡ್‌ ಸ್ವೈಪ್‌ ಮಾಡಿ ಬಂಗಾರದ ಅಂಗಡಿಯಿಂದ ಚಿನ್ನ ಸಹ ಖರೀದಿಸಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಕೇಶ್ವಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮನೆ ಬಾಡಿಗೆ ನೆಪದಲ್ಲಿ ವಂಚನೆ: ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದ ಮನೆ ಬಾಡಿಗೆ ಜಾಹೀರಾತು ನೋಡಿದ ವಂಚಕರು, ನವನಗರದ ಪ್ರೀತಿ ವಾಂಡಕರ ಅವರಿಗೆ ಕರೆ ಮಾಡಿ, ₹49 ಸಾವಿರ ವರ್ಗಾಯಿಸಿಕೊಂಡ ವಂಚಿಸಿದ್ದಾರೆ.

ಕ್ವಿಕ್ಕರ್‌ ಡಾಟ್‌ ಕಾಮ್‌ನಿಂದ ಪ್ರೀತಿ ಅವರನ್ನು ಸಂಪರ್ಕಿಸಿದ ವಂಚಕರು, ಬೆಂಗಳೂರಿನ ವಿಮಾನ ನಿಲ್ದಾಣದಲ್ಲಿ ಕೇಂದ್ರ ಕೈಗಾರಿಕಾ ಭದ್ರತಾ ದಳದ ಸಿಬ್ಬಂದಿಯಾಗಿ ನಾವು ಕರ್ತವ್ಯ ನಿರ್ವಹಿಸುತ್ತಿದ್ದು, ಇದೀಗ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ವರ್ಗವಾಗಿದೆ. ಅಲ್ಲಿ ಬಾಡಿಗೆ ಮನೆ ಬೇಕಾಗಿದ್ದು, ಮುಂಗಡವಾಗಿ ₹50 ಸಾವಿರ ಆನ್‌ಲೈನ್‌ನಲ್ಲಿ ಪಾವತಿಸುತ್ತೇವೆ.

ಸೇನಾ ನಿಯಮದ ಪ್ರಕಾರ ಮೊದಲು ₹5 ನಮಗೆ ಸಂದಾಯ ಮಾಡಿದರೆ, ನಿಮಗೆ ₹10 ಪಾವತಿಯಾಗುತ್ತದೆ ಎಂದು ನಂಬಿಸಿದ್ದಾರೆ. ಅದನ್ನು ನಂಬಿದ ಪ್ರೀತಿ ₹49 ಸಾವಿರ ಹಣವನ್ನು ವರ್ಗಾಯಿಸಿದ್ದಾರೆ. ಹುಬ್ಬಳ್ಳಿ ಸೈಬರ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಂಚನೆ: ಹೊಸ ಗಬ್ಬೂರಿನ ರಾಷ್ಟ್ರೀಯ ಹೆದ್ದಾರಿ ಪಕ್ಕ ಇರುವ ಬೆಲ್ಲದ ಅಂಡ್ ಕಂಪನಿಯ ಗೋದಾಮಿನಲ್ಲಿದ್ದ ₹72 ಲಕ್ಷ ಮೌಲ್ಯದ ಕಬ್ಬಿಣದ ಸಾಮಗ್ರಿಗಳನ್ನು ಕಳವು ಮಾಡಲಾಗಿದೆ. ಈ ಕುರಿತು ಗಂಗಾಧರ ತೋಟಗೇರ ಅವರು ಬೆಂಡಿಗೇರಿ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

ಇಬ್ಬರು ಸಾವು: ಬೈರಿದೇವರಕೊಪ್ಪದ ದಾಸನೂರು ಟಿವಿಎಸ್ ಷೋರೂಂ ಬಳಿ ರಸ್ತೆ ವಿಭಜಕಕ್ಕೆ ಬೈಕ್‌ ಡಿಕ್ಕಿ ಹೊಡೆದಿದ್ದರಿಂದ  ಈಶ್ವರನಗರದ ಭೀಮಪ್ಪ ಚಿಗರಳ್ಳಿ (20) ಮೃತಪಟ್ಟಿದ್ದಾರೆ. ಹುಬ್ಬಳ್ಳಿ ಕಡೆಯಿಂದ ಧಾರವಾಡ ಕಡೆಗೆ ಭೀಮಪ್ಪ ಹೊರಟಿದ್ದರು. ಉತ್ತರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೈರಿದೇವರಕೊಪ್ಪದ ಸನಾ ಕಾಲೇಜು ಬಳಿ ರಸ್ತೆ ದಾಡುತ್ತಿದ್ದ ಕಲಬುರಗಿ ಮೂಲದ ಸ್ಥಳೀಯ ನಿವಾಸಿ ಉಸ್ಮಾನಸಾಬ್‌(48) ಅವರಿಗೆ ಬೈಕ್‌ ಡಿಕ್ಕಿ ಹೊಡೆದಿದ್ದರಿಂದ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಬೈಕ್‌ ಸವಾರ ಪರಾರಿಯಾಗಿದ್ದು, ಉತ್ತರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು