ಗುರುವಾರ , ಆಗಸ್ಟ್ 22, 2019
27 °C

‘ಗೋ ರಕ್ಷಣೆ ಹೆಸರಲ್ಲಿ ಮುಸ್ಲಿಮರ ಮೇಲೆ ಹಲ್ಲೆ’

Published:
Updated:
Prajavani

ಹುಬ್ಬಳ್ಳಿ: ದೇಶದ ವಿವಿಧ ಭಾಗಗಳಲ್ಲಿ ಗೋ ರಕ್ಷಣೆ ಹೆಸರಿನಲ್ಲಿ ಮುಸ್ಲಿಮರ ಮೇಲೆ ಹಲ್ಲೆಗಳಾಗುತ್ತಿದ್ದು, ಇದರಿಂದ ಮುಸ್ಲಿಮರು ವಿನಾಕಾರಣ ಬಲಿಯಾಗುತ್ತಿದ್ದಾರೆ. ಇದನ್ನು ತಡೆಯಲು ಕ್ರಮ ತೆಗೆದುಕೊಳ್ಳಬೇಕು ಎಂದು ಸುನ್ನಿ ಮಶಾಯಲ್‌ ಕೌನ್ಸಿಲ್‌ ಧಾರವಾಡ ಜಿಲ್ಲಾ ಘಟಕ ಒತ್ತಾಯಿಸಿದೆ.

ಮುಸ್ಲಿಂ ಸಮಾಜದ ಪ್ರಮುಖರು ಗುರುವಾರ ಪ್ರತಿಭಟನೆ ಮಾಡಿ ರಾಷ್ಟ್ರಪತಿಗೆ ಬರೆದ ಪತ್ರವನ್ನು ತಹಶೀಲ್ದಾರ್‌ ಕಚೇರಿಯ ಅಧಿಕಾರಿಗಳಿಗೆ ಸಲ್ಲಿಸಿದರು. ಮಿನಿ ವಿಧಾನಸೌಧದ ಎದುರು ಘೋಷಣೆ ಕೂಗಿದರು.

ಮಧ್ಯಪ್ರದೇಶ, ಉತ್ತರ ಪ್ರದೇಶ, ದೆಹಲಿ ಸೇರಿದಂತೆ ಅನೇಕ ರಾಜ್ಯಗಳಲ್ಲಿ ಮುಸ್ಲಿಮರ ಮೇಲೆ ನಿರಂತರವಾಗಿ ದಾಳಿ ನಡೆಯುತ್ತಲೇ ಇದೆ. ಇದರಿಂದ ದೇಶದಲ್ಲಿ ಪ್ರಜಾಪ್ರಭುತ್ವ ಇನ್ನೂ ಇದೆಯೇ ಎನ್ನುವ ಪ್ರಶ್ನೆ ಕಾಡುತ್ತಿದೆ. ಪ್ರಜಾಪ್ರಭುತ್ವವನ್ನು ರಕ್ಷಿಸುವ ಕೆಲಸವಾಗಬೇಕಿದೆ ಎಂದು ಜಿಲ್ಲಾ ಘಟಕದ ಪದಾಧಿಕಾರಿಗಳು ಹೇಳಿದರು.

ಕಾಂಗ್ರೆಸ್‌ ಮುಖಂಡ ಎ.ಎಂ. ಹಿಂಡಸಗೇರಿ ಮಾತನಾಡಿ ‘ರಾಜ್ಯದಲ್ಲಿಯೂ ಅಮಾಯಕ ಮುಸ್ಲಿಮರ ಮೇಲೆ ಕೋಮುವಾದಿಗಳು ಹಲ್ಲೆ ಮಾಡಿ ಸಮಾಜದ ಶಾಂತಿ ಕದಡುತ್ತಿದ್ದಾರೆ. ಇದರಿಂದ ಪ್ರಜಾಪ್ರಭುತ್ವವನ್ನು ರಕ್ಷಿಸಲು ಸಾಕಷ್ಟು ಹೋರಾಟ ಮಾಡಬೇಕಾಗಿದೆ’ ಎಂದರು.

‘ದೇಶದ ಸ್ವಾತಂತ್ರ್ಯಕ್ಕಾಗಿ ಅನೇಕ ಮುಸ್ಲಿಮರು ತ್ಯಾಗ ಮಾಡಿದ್ದಾರೆ. ಅವರು ಭಾರತವನ್ನೇ ಮಾತೃಭೂಮಿ ಎಂದು ತಿಳಿದು, ಸಹಬಾಳ್ವೆಯಿಂದ ನಡೆಸುತ್ತಿದ್ದಾರೆ. ಆದರೆ, ಪದೇ ಪದೇ ಅವರ ಮೇಲೆಯೇ ಹಲ್ಲೆಗಳು ನಡೆಯುತ್ತಿವೆ. ಇವುಗಳನ್ನು ತಡೆಗಟ್ಟಲು ರಾಷ್ಟ್ರಪತಿಯವರು ಸೂಕ್ತ ಕ್ರಮ ತೆಗೆದುಕೊಳ್ಳಬೇಕು’ ಎಂದು ಮನವಿ ಮಾಡಿದರು.

ಮುಸ್ಲಿಂ ಸಮಾಜದ ಪ್ರಮುಖರಾದ ಮೌಲಾನ್ ಶಂಶುದ್ದೀನ್‌, ಎ.ಎ. ಚೌಧರಿ, ರಿಯಾಜ್‌ ಆಲಂಶೇಖ್‌, ತಾಜಾವುದ್ದೀನ್‌ ಫೀರಾ, ಅಲಿ ಖಾಜಿ, ನಾಸೀರ್‌ ಭಗವಾನ್‌, ಸಿರಾಜ್ ಕುಡಚಿವಾಲಾ, ಇಸ್ಮಾಯಿಲ್‌ ಸಾಬ್‌, ಸೈಯದ್‌ ತಾಜುದ್ದೀನ್‌ ಎಸ್‌. ಖಾದ್ರಿ ಪಾಲ್ಗೊಂಡಿದ್ದರು.

Post Comments (+)