ಗುರುವಾರ , ಮೇ 19, 2022
21 °C

ಧಾರವಾಡ | ಹೋಟೆಲ್‌ ಸಿಬ್ಬಂದಿ ಮೇಲೆ ಹಲ್ಲೆ; ಜೀವ ಬೆದರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ಬಿರಿಯಾನಿಗೆ ಮಸಾಲೆ ನೀಡಲಿಲ್ಲವೆಂದು ಇಲ್ಲಿನ ನಿಯಾಜ್ ಹೋಟೆಲ್‌ನಲ್ಲಿ ತಗಾದೆ ತೆಗೆದ ವ್ಯಕ್ತಿಯೊಬ್ಬ, ತನ್ನ ಮೂವರು ಸ್ನೇಹಿತರೊಂದಿಗೆ ಹೋಟೆಲ್‌ನ ಇಬ್ಬರು ಸಿಬ್ಬಂದಿ ಮೇಲೆ ಸೋಮವಾರ ರಾತ್ರಿ ಹಲ್ಲೆ ನಡೆಸಿದ್ದಾನೆ. ವ್ಯವಸ್ಥಾಪಕ ಜಾನ್ಸನ್, ಸಪ್ಲೈಯರ್ ದೀಪಕ ಸಂಶಿಪುರ ಹಾಗೂ ಕ್ಯಾಷಿಯರ್ ಅಖಿಲ್ ಹಲ್ಲೆಗೊಳಗಾಗಿದ್ದು, ಬಾಕಳೆ ಗಲ್ಲಿಯ ಅಭಿ ಮತ್ತು ಆತನ ಸ್ನೇಹಿತರ ವಿರುದ್ಧ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಊಟಕ್ಕೆ ಬಂದಿದ್ದ ಅಭಿ ಬಿರಿಯಾನಿಗೆ ಎರಡನೇ ಬಾರಿ ಮಸಾಲ ನೀಡುವಂತೆ ಸಿಬ್ಬಂದಿಗೆ ಹೇಳಿದ್ದಾನೆ. ಎರಡು ಸಲ ನೀಡುವುದಿಲ್ಲ ಎಂದಾಗ ಕ್ಯಾಷ್‌ ಕೌಂಟರ್‌ನಲ್ಲಿದ್ದ ಅಖಿಲ್ ಜೊತೆ ತಗಾದೆ ತೆಗೆದು ಹಲ್ಲೆ ನಡೆಸಿದ್ದಾನೆ. ನಂತರ ಸ್ಥಳಕ್ಕೆ ಮೂವರು ಸ್ನೇಹಿತರನ್ನು ಕರೆಸಿಕೊಂಡು, ದೀಪಕ್ ಮತ್ತು ಜಾನ್ಸನ್ ಮೇಲೆ ಪೋರ್ಕ್‌ನಿಂದ ಹೊಡೆದಿದ್ದಾನೆ. ಹೋಟೆಲ್‌ನ ₹80 ಸಾವಿರ ಮೌಲ್ಯದ ಸಾಮಗ್ರಿಗಳನ್ನು ನಾಶಪಡಿಸಿ ಜೀವ ಬೆದರಿಕೆ ಹಾಕಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಚಿನ್ನಾಭರಣ ದೋಚಿದ ಕಳ್ಳರು: ಇಲ್ಲಿನ ಸದರಸೊಫಾ ಕುಂಬಾರಗಲ್ಲಿಯ ಅನ್ವರ ಹಾವೇರಿಪೇಟ ಅವರ ಮನೆ ಬಾಗಿಲು ಮುರಿದು ಒಳ ನುಗ್ಗಿರುವ ಕಳ್ಳರು, ₹30 ಸಾವಿರ ಮೌಲ್ಯದ ಚಿನ್ನಾಭರಣ ಹಾಗೂ ₹13 ಸಾವಿರ ನಗದು ದೋಚಿದ್ದಾರೆ. ಕಸಬಾ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಳವು: ನೀಲಿಜಿನ್‌ ರಸ್ತೆಯ ಅಜಂತಾ ಪ್ಲಂಬಿಂಗ್‌ ಅಂಗಡಿಯ ಬಾಗಿಲು ಮುರಿದು ₹90 ಸಾವಿರ ಮೌಲ್ಯದ ಸಾಮಗ್ರಿಗಳನ್ನು ಕಳವು ಮಾಡಲಾಗಿದೆ. ಕೃಷಿ ಉಪಕರಣಗಳು, ಲ್ಯಾಪ್‌ಟಾಪ್‌ ಹಾಗೂ ನಗದು ಕಳವು ಆಗಿದೆ ಎಂದು ಅಂಗಡಿ ಮಾಲೀಕ ಗಣಪತಿ ಬದ್ದಿ ಉಪನಗರ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

ಹಣ ಕಿತ್ತು ಪರಾರಿ: ‘ಅಣ್ಣಾ, ಬಾಳ್‌ ದಿನ ಆದಮೇಲ್ ನೀ ಸಿಕ್ಕಿ’ ಎಂದು ಧಾರವಾಡದ ಲಕಮಾಪುರದ ಮೆಹಬೂಬಸಾಬ್‌ ಕಂಪ್ಲಿ ಅವರನ್ನು ತಬ್ಬಿಕೊಂಡ ಯುವಕನೊಬ್ಬ, ಅವರ ಪ್ಯಾಂಟ್‌ ಜೇಬಲ್ಲಿದ್ದ ಹಣ ಕಿತ್ತು ಪರಾರಿಯಾಗಿದ್ದಾನೆ. ಮತ್ತೊಬ್ಬ ವ್ಯಕ್ತಿ ಅವರ ಮೇಲೆ ಹಲ್ಲೆ ನಡೆಸಿದ್ದಾನೆ.

ನಗರದ ಸ್ಟೇಷನ್‌ ರಸ್ತೆಯ ಅಂಕುಷ ಆರ್ಕೇಡ್‌ ಬಳಿ ಪ್ರಕರಣ ನಡೆದಿದೆ. ಹಣ ಕಿತ್ತುಕೊಂಡು ಓಡುತ್ತಿದ್ದ ವ್ಯಕ್ತಿಯನ್ನು ಆಟೊ ಚಾಲಕ ಹತ್ತಿಸಿಕೊಂಡು, ಅವನ ಮೇಲೆ ಯಾಕೆ ಸುಳ್ಳು ಆರೋಪ ಮಾಡುತ್ತಿದ್ದೀಯ ಎಂದು ಮೆಹಬೂಬಸಾಬ್‌ ಮೇಲೆಯೇ ಹಲ್ಲೆ ನಡೆಸಿದ್ದಾನೆ. ಶಹರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.