ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಕುವಿನಿಂದ ಇರಿದು ಕೊಲೆಗೆ ಯತ್ನ; ದೂರು ದಾಖಲು

Last Updated 26 ಜನವರಿ 2022, 3:56 IST
ಅಕ್ಷರ ಗಾತ್ರ

ಹುಬ್ಬಳ್ಳಿ: ವ್ಯಕ್ತಿಯೊಬ್ಬ, ಇಬ್ಬರಿಗೆ ಚಾಕುವಿನಿಂದ ಇರಿದು ಕೊಲೆ ಮಾಡಲು ಯತ್ನಿಸಿದ ಘಟನೆಉಪನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ನಗರದ ಹಳೆ ಪಿ.ಬಿ ರಸ್ತೆಯ ಆಶ್ರಯ ಲಾಡ್ಜ್ ಸಮೀಪ ಕುಶಲಾ ಕುರಕುಡಿ ಮತ್ತು ರೋಹನ ಕಿಲ್ಲೆದಾರ ಹಲ್ಲೆಗೊಳಗಾಗಿದ್ದಾರೆ. ಇವರು ಹೋಗುವ ರಸ್ತೆಯಲ್ಲಿ ನಿಂತವನಿಗೆ ರಸ್ತೆ ಬಿಟ್ಟು ನಿಲ್ಲಿ ಎಂದು ಹೇಳಿದ್ದಕ್ಕೆ ಏಕಾಏಕಿ ಚಾಕುವಿನಿಂದ ಚುಚ್ಚಿ ಹಲ್ಲೆ ಮಾಡಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಜೀವ ಬೆದರಿಕೆ: ವ್ಯಕ್ತಿಯೊಬ್ಬ ಬೇರೆಯವರ ಹೆಸರು ಹೇಳಿಕೊಂಡು ರವೀಂದ್ರನಾಥ ಎಂಬುವರಿಗೆ ಕರೆ ಮಾಡಿ ಅವಾಚ್ಯ ಪದಗಳಿಂದ ನಿಂದಿಸಿ ಜೀವ ಬೆದರಿಕೆ ಹಾಕಿದ್ದಾನೆ. ಈ ಕುರಿತು ಘಂಟಿಕೇರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕರೆ ಮಾಡಿದ ವ್ಯಕ್ತಿ ‘ನಾನು ಅಕ್ಬರ್ ಪಾಷಾ ಕಡೆಯವನು. ಇತ್ತೀಚೆಗೆ ಟೊಯೊಟಾ ಫೈನಾನ್ಸ್‌, ಟೊಯೊಟಾ ಕಂಪನಿ ಹಾಗೂ ವಿಡಿಯೊ ಕಾನ್‌ ಲಿಬರ್ಟಿ ಕಂಪನಿ ವಿರುದ್ಧ ಹಾಕಿದ ಪ್ರಕರಣ ವಾಪಸ್‌ ಪಡೆಯಬೇಕು. ಇಲ್ಲವಾದಲ್ಲಿ ಜೀವಸಹಿತ ಬಿಡುವುದಿಲ್ಲ’ ಎಂದು ಬೆದರಿಕೆ ಒಡ್ಡಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ರೈತ ಸಾವು: ಹಲವು ಕಡೆ ಸಾಲ ಮಾಡಿಕೊಂಡಿದ್ದ ಧಾರವಾಡ ಜಿಲ್ಲೆಯ ಮುಳಮುತ್ತಲದ ನಿವಾಸಿ ಈರಯ್ಯ ಬಸಲಿಂಗಯ್ಯ ಹಿರೇಮಠ (65) ಕಾಲುವೆಗೆ ಹಾರಿ ಮೃತಪಟ್ಟಿದ್ದಾರೆ. ಹುಬ್ಬಳ್ಳಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇವರು ನವಲಗುಂದ ತಾಲೂಕಿನ ಬ್ಯಾಲಿಹಾಳದಲ್ಲಿ ನೆಲೆಸಿದ್ರುದ. ಮೃತ ರೈತ ತಮ್ಮ ಜಮೀನಿನ ಮೇಲೆ ₹2 ಲಕ್ಷ ಬೆಳೆಸಾಲ ಹಾಗೂ ₹1 ಲಕ್ಷ ಕೈಗಡ ಸಾಲ ಮಾಡಿದ್ದರು.

ಸಾಲದ ಜೊತೆಗೆ ಪತ್ನಿಯ ಅನಾರೋಗ್ಯ ಕೂಡ ಅವರ ಚಿಂತೆಗೆ ಕಾರಣವಾಗಿತ್ತು ಎನ್ನಲಾಗಿದ್ದು, ಮೃತದೇಹ ಬ್ಯಾಹಟ್ಟಿ ಗ್ರಾಮದ ಹದ್ದಿನ ಕಾಲುವೆ ನೀರಿನಲ್ಲಿ ದೊರೆತಿದೆ.

ವಶ: ಹುಬ್ಬಳ್ಳಿ ಶಹರ ಠಾಣೆ ಪೊಲೀಸರು ಗುಡ್‌ಶೆಡ್‌ ರಸ್ತೆಯಲ್ಲಿ ಸೋಮವಾರ ಬೆಳಗಿನ ಜಾವ ಪೆಟ್ರೋಲಿಂಗ್ ಮಾಡುವ ವೇಳೆ ಹರಿತವಾದ ಶಸ್ತ್ರಾಸ್ತಗಳನ್ನು ಹೊಂದಿದ್ದ ಮೂವರನ್ನು ಬಂಧಿಸಿದ್ದಾರೆ.

ಉದ್ಯಮಿ ಶಾಂತಿನಗರದ ರಮೇಶ ವೆಂಕಟೇಶ, ಕಾರ್ಮಿಕರಾದ ರಾಮಜಾನ್‌ ಅಲಿಯಾಸ್‌ ಖತಿಲ್‌ಸಾಬ್‌ ಮತ್ತು ಕುಮಾರ ಮಂಜುನಾಥ ಬಂಡಿವಡ್ಡರ ಬಂಧಿತರು. ಈ ಕುರಿತು ಕರ್ತವ್ಯದಲ್ಲಿದ್ದ ಶಹರ ಠಾಣೆ ಪಿಎಸ್‌ಐ ಪದ್ಮಮ್ಮ ದೂರು ದಾಖಲಿಸಿದ್ದಾರೆ. ಶಸ್ತ್ರಾಸ್ತ್ರಗಳನ್ನು ಎಲ್ಲಿಂದ ತೆಗೆದುಕೊಂಡು ಬಂದಿದ್ದು, ಎಲ್ಲಿಗೆ ತೆಗೆದುಕೊಂಡು ಹೋಗಲಾಗುತ್ತಿದೆ ಎನ್ನುವ ಬಗ್ಗೆ ಆರೋಪಿಗಳು ಸರಿಯಾಗಿ ಮಾಹಿತಿ ನೀಡಿಲ್ಲ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT