ರಸ್ತೆ ಗುಂಡಿ ಮುಚ್ಚಲು ಆಗ್ರಹಿಸಿ ಅಟೊ ಚಾಲಕರ ಪ್ರತಿಭಟನೆ

7

ರಸ್ತೆ ಗುಂಡಿ ಮುಚ್ಚಲು ಆಗ್ರಹಿಸಿ ಅಟೊ ಚಾಲಕರ ಪ್ರತಿಭಟನೆ

Published:
Updated:
ರಸ್ತೆ ಗುಂಡಿ ಮುಚ್ಚುವಂತೆ ಆಗ್ರಹಿಸಿ ಹುಬ್ಬಳ್ಳಿ ಆಟೊ ರಿಕ್ಷಾ ಮಾಲೀಕರ ಹಾಗೂ ಚಾಲಕರ ಸಂಘದ ಸದಸ್ಯರು ಪಾಲಿಕೆ ಎದುರು ಗುರುವಾರ ಪ್ರತಿಭಟನೆ ನಡೆಸಿದರು. ಪ್ರಜಾವಾಣಿ ಚಿತ್ರ

ಹುಬ್ಬಳ್ಳಿ: ರಸ್ತೆ ಗುಂಡಿಗಳನ್ನು ಮುಚ್ಚುವಂತೆ ಆಗ್ರಹಿಸಿ ಹುಬ್ಬಳ್ಳಿ ಆಟೊ ರಿಕ್ಷಾ ಮಾಲೀಕರ ಹಾಗೂ ಚಾಲಕರ ಸಂಘದ ಸದಸ್ಯರು ಪಾಲಿಕೆ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಸಿದರು.

ಪಾಲಿಕೆ ಎದುರು ಕೆಲ ಕಾಲ ರಸ್ತೆ ತಡೆ ನಡೆಸಿದ ಅವರು ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ರಸ್ತೆ ಗುಂಡಿಯ ಪರಿಣಾಮ ಒಡೆದು ಹೋದ ವಾಹನದ ಗಾಜು ಹಾಗೂ ಹಾಳಾದ ಟೈರ್‌ಗಳನ್ನು ಪ್ರದರ್ಶಿಸಿದರು. ಮೇಯರ್ ಅವರು ಆಟೊ ಚಾಲಕರ ಸಭೆ ಕರೆದು ಸಮಸ್ಯೆಗಳನ್ನು ಆಲಿಸಿ ಪರಿಹಾರ ನೀಡಲು ಪ್ರಯತ್ನಿಸಬೇಕು, ಇಲ್ಲವಾದರೆ ಹೋರಾಟ ತೀವ್ರಗೊಳಿಸಬೇಕಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದರು.

ಸಂಘದ ಅಧ್ಯಕ್ಷ ಶೇಖರಯ್ಯ ಮಠಪತಿ ಮಾತನಾಡಿ, ಹುಬ್ಬಳ್ಳಿಯಲ್ಲಿ 22 ಸಾವಿರ ಆಟೊ ರಿಕ್ಷಾಗಳಿವೆ, ಆದರೆ ಆಟೊ ನಿಲ್ದಾಣಗಲೇ ಇಲ್ಲ. ಇದರಿಂದಾಗಿ ಚಾಲಕರು ವಾಹನ ನಿಲುಗಡೆಗೆ ಸ್ಥಳ ಇಲ್ಲದೆ ಪರದಾಡುವಂತಾಗಿದೆ. ಈ ಕೂಡಲೇ 150 ಆಟೊ ರಿಕ್ಷಾ ನಿಲ್ದಾಣಗಳನ್ನು ನಿರ್ಮಾಣ ಮಾಡಲು ಕ್ರಮ ಕೈಗೊಳ್ಳಬೇಕು. ಆಗ ಸಂಚಾರ ದಟ್ಟಣೆಯೂ ಕಡಿಮೆ ಆಗಲಿದೆ ಎಂದು ಅವರು ಹೇಳಿದರು.

ರಸ್ತೆ ಗುಂಡಿ ಆಟೊ ಚಾಲಕರ ಬಹುದೊಡ್ಡ ಸಮಸ್ಯೆಯಾಗಿದೆ. ನಗರದ ಎಲ್ಲ ರಸ್ತೆಗಳು ಗುಂಡಿಮಯವಾಗಿದ್ದು ವಾಹನ ಸಂಚಾರಕ್ಕೆ ಯೋಗ್ಯವಾಗಿಲ್ಲ. ದೊಡ್ಡ ಹೊಂಡಗಳು ಬಿದ್ದಿರುವ ಕಾರಣ ವಾಹನ ಪದೇ ಪದೇ ರಿಪೇರಿಗೆ ಬರುತ್ತಿದೆ. ಗಾಜುಗಳು ಸಹ ಒಡೆದ ಹಲವು ಉದಾಹರಣೆಗಳಿವೆ. ಚನ್ನಮ್ಮ ವೃತ್ತದ ಅಯೋಧ್ಯಾ ಹೋಟೆಲ್ ಎದುರು ದೊಡ್ಡ ದೊಡ್ಡ ಗುಂಡಿಗಳಿದ್ದು, ಮಳೆ ಬಂದರೆ ಅದರೊಳಗೆ ದೋಣಿಯನ್ನೇ ನಿಲ್ಲಿಸಬಹುದು ಎಂದು ವ್ಯಂಗ್ಯವಾಡಿದರು. ಈ ಕೂಡಲೇ ಗುಂಡಿಗಳನ್ನು ಮುಚ್ಚಿಸಬೇಕು ಎಂದು ಆಗ್ರಹಿಸಿದರು.

ರಸ್ತೆ ತಡೆ ನಡೆಸಿದ ಕಾರಣ ಪಾಲಿಗೆ ಮುಂಭಾಗದ ರಸ್ತೆ, ಚನ್ನಮ್ಮ ವೃತ್ತ ಹಾಗೂ ಸುತ್ತಮುತ್ತಲಿನ ರಸ್ತೆಗಳಲ್ಲಿ ಕೆಲ ಕಾಲ ಸಂಚಾರ ದಟ್ಟಣೆ ಉಂಟಾಗಿ ವಾಹನ ಸವಾರರು ತೊಂದರೆ ಅನುಭವಿಸಿದರು. ಮುಖಂಡರಾದ ಪುಂಡಲೀಕ ಬಡಿಗೇರ, ಚಿದಾನಂದ ಸವದತ್ತಿ, ಮುಸ್ಕತ ಕರಜಗಿ, ಬಸವರಾಜ ಉಣಕಲ್ ಇದ್ದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !