ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಧಾನಿಯ 25 ಕ್ಷೇತ್ರ ಗೆದ್ದೇ ಗೆಲ್ಲುತ್ತೇವೆ

Last Updated 4 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ನಗರದ 28 ವಿಧಾನಸಭಾ ಕ್ಷೇತ್ರಗಳಲ್ಲಿ 25 ಕ್ಷೇತ್ರಗಳನ್ನು ಗೆದ್ದೇ ಗೆಲ್ಲುತ್ತೇವೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದರು.

ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ವಿವಿಧ ಕಾಮಗಾರಿಗಳನ್ನು ಉದ್ಘಾಟಿಸಿ, ಬಳಿಕ ನಡೆದ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಯಶವಂತಪುರ ಕ್ಷೇತ್ರದ ಶಾಸಕ ಎಸ್‌.ಟಿ.ಸೋಮಶೇಖರ್‌ ಮತ್ತು ಕೆ.ಆರ್.ಪುರ ಕ್ಷೇತ್ರದ ಶಾಸಕ ಭೈರತಿ ಬಸವರಾಜು ಮತ್ತೆ ಗೆಲ್ಲುವುದು ಕೂಡ ಪೂರ್ವದಲ್ಲಿ ಸೂರ್ಯ ಉದಯಿಸುವಷ್ಟೇ ಸತ್ಯ’ ಎಂದರು.

‘ಯಶವಂತಪುರ ಕ್ಷೇತ್ರವನ್ನು ಹಿಂದೆ ಪ್ರತಿನಿಧಿಸಿದ್ದ ಶೋಭಾ ಕರಂದ್ಲಾಜೆ, 5 ವರ್ಷ ಸಚಿವೆಯಾಗಿದ್ದರು. ಆದರೂ ಕ್ಷೇತ್ರ ಅಭಿವೃದ್ಧಿಪಡಿಸಲಿಲ್ಲ. ಸೋಲುವ ಭೀತಿಯಿಂದ ಕಳೆದ ಚುನಾವಣೆ ವೇಳೆ ಶೋಭಾ ಪಲಾನಯನ ಮಾಡಿದ್ದರು. ಸಂಸದೆಯಾದ ಬಳಿಕವೂ ಬಾಯಿಗೆ ಬಂದಂತೆ ಮಾತನಾಡುತ್ತಾಳೆ. ಆಯಮ್ಮನಿಗೆ ನಾಲಿಗೆ ಮೇಲೆ ಹಿಡಿತವಿಲ್ಲ’ ಎಂದು ಹರಿಹಾಯ್ದರು.

‘ನಾವು ಅಧಿಕಾರಕ್ಕೆ ಬಂದ ಮೇಲೆ ಈ ಕ್ಷೇತ್ರದ ಶಾಸಕರು ಕೇಳಿದಷ್ಟು ಅನುದಾನ ನೀಡಿದ್ದೇನೆ. ಅವರು ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದಾರೆ’ ಎಂದರು.

‘ಚುನಾವಣೆಗೆ ಮುನ್ನ ನೀಡಿದ್ದ 165 ಭರವಸೆಗಳಲ್ಲಿ 158 ಈಡೇರಿಸಿದ್ದೇವೆ. ಉಪನಗರ ರೈಲು ಯೋಜನೆಗೆ ಕೇಂದ್ರ ₹17,000 ಕೋಟಿ ಪ್ರಕಟಿಸಿತು. ಆದರೆ, ₹1 ಕೋಟಿ ಮಾತ್ರ ಹಣ ಠೇವಣಿ ಇಟ್ಟಿದೆ. ಆದರೆ, ನಾವು ₹300 ಕೋಟಿ ಕಾಯ್ದಿರಿಸಿದ್ದೇವೆ. ಬಿಜೆಪಿಯವರು ಎಷ್ಟೊಂದು ಡೋಂಗಿಗಳೆನ್ನುವುದು ಇದರಲ್ಲೇ ಗೊತ್ತಾಗುತ್ತದೆ. ಆದರೆ, ನಾವು ನುಡಿದಂತೆ ನಡೆದಿದ್ದೇವೆ’ ಎಂದರು.

‘ನಮ್ಮ ಕೂಲಿಗೆ ತಕ್ಕ ಪ್ರತಿಫಲ ಕೇಳಲು ಮೇ ತಿಂಗಳಲ್ಲಿ ಮತದಾರರ ಮುಂದೆ ಬರಲಿದ್ದೇವೆ. ಕಾಂಗ್ರೆಸ್‌ ಪಕ್ಷವನ್ನು ಪುನಃ ಅಧಿಕಾರಕ್ಕೆ ತನ್ನಿ’ ಎಂದು ಮನವಿ ಮಾಡಿದರು.

‘ಜೆಡಿಎಸ್‌ ಬಗ್ಗೆ ಮಾತನಾಡುವುದಿಲ್ಲ. ಪಾಪ, ಅವರು ಈ ಬಾರಿ ನಗರದಲ್ಲಿ ಒಂದು ಸ್ಥಾನವನ್ನೂ ಗೆಲ್ಲುವುದಿಲ್ಲ. ಕಳೆದ ಬಾರಿ ಅಪ್ಪಿತಪ್ಪಿ ಮೂರು ಸ್ಥಾನ ಗೆದ್ದಿದ್ದರು. ಅದರಲ್ಲಿ ಇಬ್ಬರು ಪಕ್ಷ ಬಿಟ್ಟಿದ್ದಾರೆ’ ಎಂದು ವ್ಯಂಗ್ಯವಾಡಿದರು.

ಮುಖ್ಯಮಂತ್ರಿ ಮುಕ್ಕಾಲು ಗಂಟೆ ಭಾಷಣದುದ್ದಕ್ಕೂ ಬಿಜೆಪಿ ನಾಯಕರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ತಮ್ಮ ಸರ್ಕಾರದ ಸಾಧನೆಗಳು ಮತ್ತು ಜಾರಿಗೊಳಿಸಿದ ಹಲವು ಭಾಗ್ಯಗಳ ಬಗ್ಗೆಯೂ ಎಳೆಎಳೆಯಾಗಿ ವಿವರಿಸಿದರು.

ಕೆಂ‍ಪೇಗೌಡ ಬಡಾವಣೆಗೆ ಭೂಮಿ ನೀಡಿದ ರೈತರಿಗೆ ಮೊದಲ ಹಂತದಲ್ಲಿ 2,000 ನಿವೇಶನ ಮತ್ತು ಅರ್ಜಿದಾರರಿಗೆ 5,000 ನಿವೇಶನಗಳ ಹಕ್ಕುಪತ್ರ ಕೊಟ್ಟಿದ್ದೇವೆ. ಭೂಮಿ ಕಳೆದುಕೊಂಡ ಸಂತ್ರಸ್ತ ರೈತರಿಗೆ 2ನೇ ಹಂತದಲ್ಲಿ 2,000 ನಿವೇಶನ ಮತ್ತು ಅರ್ಜಿದಾರರಿಗೆ 5,000 ನಿವೇಶನ ಹಂಚಿಕೆ ಮಾಡಲಿದ್ದೇವೆ ಎಂದು ಮುಖ್ಯಮಂತ್ರಿ ತಿಳಿಸಿದರು.

₹806.88 ಕೋಟಿ 1ನೇ ಪ್ಯಾಕೇಜ್‌ ಮತ್ತು ₹813.13 ಕೋಟಿ 2ನೇ ಪ್ಯಾಕೇಜ್‌ನಲ್ಲಿ ಕೆಂಪೇಗೌಡ ಬಡಾವಣೆಗೆ ಮೂಲಸೌಕರ್ಯ ಕಲ್ಪಿಸಲಾಗುತ್ತಿದೆ. ₹465.80 ಕೋಟಿ ವೆಚ್ಚದಲ್ಲಿ ಬಡಾವಣೆಯ ಮುಖ್ಯ ಸಂಪರ್ಕ ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ.

ಬನಶಂಕರಿ 6ನೇ ಹಂತ ಮತ್ತು ಹೇರೋಹಳ್ಳಿ ವಾರ್ಡ್‌ಗೆ ₹49 ಕೋಟಿ ವೆಚ್ಚದಲ್ಲಿ ಕಾವೇರಿ ನೀರಿನ ಸಂಪರ್ಕ ಒದಗಿಸುವ ಯೋಜನೆಗೆ ಚಾಲನೆ ನೀಡಲಾಯಿತು. ಬ್ಯಾಡರಹಳ್ಳಿಯಿಂದ ಸರ್ ಎಂ.ವಿಶ್ವೇಶ್ವರಯ್ಯ ಬಡಾವಣೆ ಮೂಲಕ ಮೈಸೂರು ರಸ್ತೆವರೆಗೆ ಚತುಷ್ಪಥ ರಸ್ತೆ ನಿರ್ಮಿಸುವ ₹40 ಕೋಟಿ ವೆಚ್ಚದ ಯೋಜನೆಗೆ ಶಂಕುಸ್ಥಾಪನೆ ಮಾಡಲಾಯಿತು.

ಯಶವಂತಪುರ ಕ್ಷೇತ್ರದ 6,500 ಕುಟುಂಬಗಳಿಗೆ ನಿವೇಶನ ಹಕ್ಕುಪತ್ರ ವಿತರಿಸಲಾಯಿತು. ಬಿಬಿಎಂಪಿ ವ್ಯಾಪ್ತಿಯಲ್ಲಿ ಮನೆ ಕಟ್ಟಿರುವ 2,450 ಮಂದಿಗೆ ಕ್ರಯಪತ್ರ, ಖಾತಾ ಪತ್ರ, 94 ಸಿಸಿ ಅಡಿಯಲ್ಲಿ 1,853 ಜನರಿಗೆ ಮನೆ ಮಂಜೂರಾತಿ ಪತ್ರ ಹಾಗೂ ಕೊಳೆಗೇರಿ ಅಭಿವೃದ್ಧಿ ನಿಗಮದಿಂದ 360 ಕುಟುಂಬಗಳಿಗೆ ಹಕ್ಕುಪತ್ರ ನೀಡಲಾಯಿತು.

ವಿಮಾನ ನಿಲ್ದಾಣಕ್ಕೆ ಪರ್ಯಾಯ ರಸ್ತೆ ಉದ್ಘಾಟನೆ

ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಸಂಪರ್ಕಿಸುವ ಮೈಲನಹಳ್ಳಿ ಪರ್ಯಾಯ ರಸ್ತೆಯನ್ನು ಮುಖ್ಯಮಂತ್ರಿ ಉದ್ಘಾಟಿಸಿದರು. ₹108 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಈ ರಸ್ತೆಯು ಬಳ್ಳಾರಿ ರಸ್ತೆಯಲ್ಲಿ ವಾಹನ ಸಂಚಾರ ದಟ್ಟಣೆ ಸಮಸ್ಯೆ ಬಗೆಹರಿಸಲು ಸಹಕಾರಿ.

ಈ ರಸ್ತೆಯ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಚುನಾವಣೆ ಸಮೀಪಿಸುತ್ತಿರುವುದರಿಂದ ತರಾತುರಿಯಲ್ಲಿ ಇದನ್ನು ಉದ್ಘಾಟಿಸಲಾಗಿದೆ. 100 ಅಡಿ ರಸ್ತೆಯನ್ನು ನಿರ್ಮಿಸುವುದಾಗಿ ಹೇಳಿ ಕೇವಲ 30 ಅಡಿ ರಸ್ತೆ ನಿರ್ಮಿಸಿದ್ದಾರೆ. ವಿಮಾನನಿಲ್ದಾಣದ ಪೂರ್ವ ದಿಕ್ಕಿನ ಪ್ರವೇಶ ದ್ವಾರ ಇನ್ನೂ ತೆರೆದಿಲ್ಲ. ಅಲ್ಲಿ ವಿದ್ಯುದ್ದೀಪ ಅಳವಡಿಸಿಲ್ಲ ಎಂದು ಗ್ರಾಮಸ್ಥರು ದೂರಿದರು.

‘ಭೂಸ್ವಾಧೀನ ಪ್ರಕ್ರಿಯೆ ವಿಳಂಬವಾಗಿದ್ದರಿಂದ 100 ಅಡಿ ರಸ್ತೆ ನಿರ್ಮಿಸಲು ಸಾಧ್ಯವಾಗಿಲ್ಲ. ಈಗ ಈ ಪ್ರಕ್ರಿಯೆ ಪೂರ್ಣಗೊಂಡಿದೆ. 100 ರಸ್ತೆಯನ್ನೂ ಶೀಘ್ರವೇ ನಿರ್ಮಿಸುತ್ತೇವೆ’ ಎಂದು ಲೋಕೋಪಯೋಗಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಲಕ್ಷ್ಮೀನಾರಾಯಣ್‌ ಪ್ರತಿಕ್ರಿಯಿಸಿದರು.

ವಿಮಾನ ನಿಲ್ದಾಣದ ಸುತ್ತಮುತ್ತಲಿನ ನಾಲ್ಕು ರಸ್ತೆ ಅಭಿವೃದ್ಧಿಪಡಿಸುವ ₹59 ಕೋಟಿ ವೆಚ್ಚದ ಕಾಮಗಾರಿಗೆ ಹಾಗೂ ಕೆ.ಆರ್‌.‍ಪುರ ಸಂತೆ ಮೈದಾನದಲ್ಲಿ ₹50 ಕೋಟಿ ವೆಚ್ಚದಲ್ಲಿ ಬಹೂಪಯೋಗಿ ವಾಣಿಜ್ಯ ಹಾಗೂ ವಾಹನ ನಿಲ್ದಾಣ ಸಂಕೀರ್ಣ ನಿರ್ಮಿಸುವ ಕಾಮಗಾರಿಗೆ ಮುಖ್ಯಮಂತ್ರಿ ಶಂಕುಸ್ಥಾಪನೆ ನೆರವೇರಿಸಿದರು.

ಭೈರತಿ ಬಸವರಾಜು ಶಾಸಕರ ವೇತನ ಮತ್ತು ಭತ್ಯೆ ಹಣ ಕೂಡಿಸಿ ಸ್ಥಾಪಿಸಿರುವ ಅಂಬೇಡ್ಕರ್‌ ಮತ್ತು ಕೆಂಪೇಗೌಡ ಪ್ರತಿಮೆ ಅನಾವರಣಗೊಳಿಸಿದರು. ಕೆ.ಆರ್‌.ಪುರ ಕ್ಷೇತ್ರದಲ್ಲಿ ಬಿಬಿಎಂಪಿ ಪೌರಕಾರ್ಮಿಕರಿಗೆ ಗೃಹ ಭಾಗ್ಯ ಯೋಜನೆಯಡಿ ನಿರ್ಮಿಸಿರುವ ವಸತಿ ಗೃಹಗಳನ್ನು ಹಂಚಿಕೆ ಮಾಡಿದರು. ಈ ಯೋಜನೆಗೆ ₹15 ಕೋಟಿ ವೆಚ್ಚವಾಗಿದೆ.

ಉದ್ಘಾಟನೆಗೊಂಡ ಪ್ರಮುಖ ಯೋಜನೆಗಳು ಮತ್ತು ವೆಚ್ಚ

* ಬಾಗಲೂರು ಕೆರೆಗೆ ನೀರು ತುಂಬಿಸುವ ಯೋಜನೆ, ₹20 ಕೋಟಿ

* ಹೊರವರ್ತುಲ ರಸ್ತೆಯ ಹೆಣ್ಣೂರು ಜಂಕ್ಷನ್‌ನ ಮೇಲ್ಸೇತುವೆ, ₹97.89 ಕೋಟಿ

* ಹೊರಮಾವು ರೈಲ್ವೆ ಲೆವೆಲ್‌ ಕ್ರಾಸಿಂಗ್‌ನಲ್ಲಿ ಬಲಪಥದ ಕೆಳಸೇತುವೆ, ₹26 ಕೋಟಿ

* ಹೊರವರ್ತುಲ ರಸ್ತೆಯ ರಾಮಮೂರ್ತಿ ನಗರ ಜಂಕ್ಷನ್‌ನಲ್ಲಿ ಪಾದಚಾರಿ ಮೇಲ್ಸೇತುವೆ, ₹1.5 ಕೋಟಿ

* ಹೊರವರ್ತುಲ ರಸ್ತೆಯ ಕಸ್ತೂರಿನಗರ ಜಂಕ್ಷನ್‌ನಲ್ಲಿ ಪಾದಚಾರಿ ಮೇಲ್ಸೇತುವೆ, ₹1.5 ಕೋಟಿ

* ಹಳೇ ಮದ್ರಾಸ್‌ ರಸ್ತೆಯ ಕೆ.ಆರ್‌.ಪುರ ಸಂತೆ ಮೈದಾನ ಜಂಕ್ಷನ್‌ನಲ್ಲಿ ಪಾದಚಾರಿ ಮೇಲ್ಸೇತುವೆ, ₹1.5 ಕೋಟಿ

* ಕೆ.ಆರ್‌.ಪುರ ಕ್ಷೇತ್ರದಲ್ಲಿ ನಿರ್ಮಿಸಿರುವ ಪ್ರಥಮ ದರ್ಜೆ ಕಾಲೇಜು ಮತ್ತು ಆಡಿಟೋರಿಯಂ, ₹5 ಕೋಟಿ

* ಎಚ್‌.ಎಸ್‌.ಆರ್‌. ಬಡಾವಣೆಯ ಸೆಕ್ಟರ್‌ 3ರ ನಿವಾಸಿಗಳ ‘ಸ್ವಾಭಿಮಾನ ವೃಕ್ಷವನ’, ₹4.30 ಕೋಟಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT