ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಯಾಣಿಕರಿಗಾಗಿ ಕಾದಿರುವ ಆಟೊ ಚಾಲಕರು!

ಅಂಗಡಿಗಳು ತೆರೆದರೂ ಬಾರದ ಗ್ರಾಹಕರು, ಜನರ ಓಡಾಟವೂ ಕಡಿಮೆ
Last Updated 20 ಮೇ 2020, 14:52 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಲಾಕ್‌ಡೌನ್ ಸಡಿಲಿಕೆಯಾಗಿ ಎರಡು ದಿನವಾದರೂ ಬುಧವಾರ ನಗರದಲ್ಲಿ ಹೆಚ್ಚು ಜನ ಸಂಚಾರ ಕಂಡುಬರಲಿಲ್ಲ. ಕೊರೊನಾ ಸೋಂಕಿನ ಭೀತಿಯ ಕಾರಣಕ್ಕೆ ಎರಡು ತಿಂಗಳು ಮನೆಯಲ್ಲೇ ಕಾಲ ಕಳೆದಿದ್ದ ಆಟೊ ಚಾಲಕರಿಗೆ ಲಾಕ್‌ಡೌನ್‌ ಸಡಿಲಿಕೆಯ ಬಳಿಕವೂ ನೆಮ್ಮದಿ ಸಿಗುತ್ತಿಲ್ಲ.

ಆಟೊಗಳಲ್ಲಿ ಓಡಾಡಲು ಪ್ರಯಾಣಿಕರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿಲ್ಲ. ಇದೇ ವೃತ್ತಿಯನ್ನು ನೆಚ್ಚಿಕೊಂಡ ಆಟೊ ಚಾಲಕರ ಸಂಕಷ್ಟು ಇದರಿಂದ ಇನ್ನಷ್ಟು ಹೆಚ್ಚಾಗಿದೆ. ಆಟೊ ಚಾಲಕರಿಗೆ ಆರ್ಥಿಕವಾಗಿ ಮತ್ತಷ್ಟು ಹೊರೆಯಾಗುತ್ತಿದೆ. ನಗರದಲ್ಲಿ ಬಹಳಷ್ಟು ಆಟೊಗಳು ಪ್ರಯಾಣಿಕರಿಲ್ಲದೇ ಸಂಚರಿಸುತ್ತಿದ್ದ ಚಿತ್ರಣ ಕಂಡುಬಂತು.

22 ವರ್ಷಗಳಿಂದ ಆಟೊ ಚಲಾಯಿಸುತ್ತಿರುವ ಗೋಪನಕೊಪ್ಪದ ಪುಂಡಲೀಕ ಬಡಿಗೇರ ಆದರ್ಶ ನಗರದ ಆಟೊ ನಿಲ್ದಾಣದಿಂದ ನಿತ್ಯದ ಕಾಯಕ ಆರಂಭಿಸುತ್ತಾರೆ. ಅವರ ಬುಧವಾರದ ದುಡಿಮೆ ₹30!

‘ಚಾಲಕರು ಮಾಸ್ಕ್‌ ಧರಿಸುತ್ತಿದ್ದೇವೆ. ಆಟೊದಲ್ಲಿ ಬರುವ ಪ್ರಯಾಣಿಕರಿಗೆ ಸ್ಯಾನಿಟೈಸರ್‌ ನೀಡಿ ಸುರಕ್ಷತಾ ಕ್ರಮಗಳನ್ನು ಅನುಸರಿಸುತ್ತಿದ್ದೇವೆ. ಆದರೂ ಪ್ರಯಾಣಿಕರು ಆಟೊದಲ್ಲಿ ಬರುತ್ತಿಲ್ಲ. ಬಸ್‌ ಸಂಚಾರ ಆರಂಭವಾದರೂ ಪ್ರಯೋಜನವಾಗಿಲ್ಲ’ ಎಂದು ಹುಬ್ಬಳ್ಳಿ ಆಟೊ ರಿಕ್ಷಾ ಮಾಲೀಕರ ಹಾಗೂ ಚಾಲಕರ ಸಂಘದ ಪ್ರಧಾನ ಕಾರ್ಯದರ್ಶಿಯೂ ಆದ ಪುಂಡಲೀಕ ಬೇಸರ ವ್ಯಕ್ತಪಡಿಸಿದರು.

ಧಾರವಾಡದಲ್ಲಿ ಜಿಲ್ಲಾಧಿಕಾರಿ ಕಚೇರಿ, ಮಾರುಕಟ್ಟೆ ಪ್ರದೇಶದಲ್ಲಿ ಹೆಚ್ಚಾಗಿ ಆಟೊ ಓಡಿಸುವ ಧಾರವಾಡ ಆಟೊ ರಿಕ್ಷಾ ಚಾಲಕರ ಅಭಿವೃದ್ಧಿ ಸಂಘದ ಅಧ್ಯಕ್ಷ ಜೀವನ್‌ ‘ಮೊದಲಾಗಿದ್ದರೆ ನಿತ್ಯ ₹500 ಸಂಪಾದಿಸುತ್ತಿದ್ದೆ. ಎರಡು ದಿನಗಳಿಂದ ನಿತ್ಯ ₹100 ಗಳಿಕೆಯಾದರೆ ಅದೇ ಹೆಚ್ಚು’ ಎಂದರು.

‘ಕೋಳಿಕೆರೆಯಲ್ಲಿ ಕೋವಿಡ್‌ 19 ಪ್ರಕರಣ ದೃಢಪಟ್ಟಾಗ ಆ ವ್ಯಕ್ತಿ ಆಟೊ ಚಾಲಕ ಎಂದು ವದಂತಿ ಹಬ್ಬಿಸಲಾಗಿತ್ತು. ಈ ಕಾರಣದಿಂದಲೂ ಪ್ರಯಾಣಿಕರು ಆಟೊದಲ್ಲಿ ಬರಲು ಹಿಂದೇಟು ಹಾಕುತ್ತಿದ್ದಾರೆ’ ಎಂದರು.

ಮಾರುಕಟ್ಟೆ ಖಾಲಿ: ನಗರದ ಪ್ರಮುಖ ಮಾರುಕಟ್ಟೆ ಕೇಂದ್ರವಾದ ಜನತಾ ಬಜಾರ್‌, ದುರ್ಗದ ಬೈಲ್‌ನಲ್ಲಿ ಅಲ್ಲಲ್ಲಿ ಮಾತ್ರ ಜನ ಕಂಡು ಬಂದರು. ಜನತಾ ಬಜಾರ್‌ನಲ್ಲಿ ಬಹುತೇಕ ಎಲ್ಲ ಅಂಗಡಿಗಳು ತೆರೆದಿದ್ದರೂ ಗ್ರಾಹಕರು ಅತ್ತ ಸುಳಿಯಲಿಲ್ಲ. ವ್ಯಾಪಾರಿಗಳು ಗ್ರಾಹಕರನ್ನೇ ಎದುರು ನೋಡುತ್ತಿದ್ದ ಚಿತ್ರಣ ಕಂಡುಬಂತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT