ಶನಿವಾರ, ಅಕ್ಟೋಬರ್ 1, 2022
20 °C
ಅಮೃತ ಮಹೋತ್ಸವ

ಧಾರವಾಡ: ನಗರದೆಲ್ಲೆಡೆ ದೀಪಾಲಂಕಾರವಿದ್ದರೂ ಪ್ರಸಿದ್ಧ ಕೋಟೆಗಿಲ್ಲ ಸಿಂಗಾರ

ಇ.ಎಸ್. ಸುಧೀಂದ್ರ ಪ್ರಸಾದ್ Updated:

ಅಕ್ಷರ ಗಾತ್ರ : | |

Prajavani

ಧಾರವಾಡ: ಊರಿನ ಹೆಸರಿಗೆ ಕಾರಣವಾದ ಧಾರವಾಡ ಕಿಲ್ಲಾ ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ದೀಪಾಲಂಕಾರವಿಲ್ಲದೆ ಕಳೆಗುಂದಿದೆ.

12ನೇ ಶತಮಾನದಿಂದ ಚಾಲುಕ್ಯರ ಆಳ್ವಿಕೆಗೆ ಒಳಪಟ್ಟಿದ್ದ ಧಾರವಾಡ, 14ನೇ ಶತಮಾನದಲ್ಲಿ ಭಾಸ್ಕರ ದೇವನ ಆಳ್ವಿಕೆಗೆ ಒಳಪಟ್ಟಿತ್ತು ಎಂದು ಶಾಸನ ಹೇಳುತ್ತದೆ. ನಂತರದಲ್ಲಿ ಬಹಮನಿ ಸುಲ್ತಾನರ ಆಳ್ವಿಕೆಯಲ್ಲಿ ಇಲ್ಲಿ ಕೋಟೆ ನಿರ್ಮಿಸಲಾಯಿತು. ಮುಂದೆ ವಿಜಯನಗರ ಸಾಮ್ರಾಜ್ಯಕ್ಕೆ ಒಳಪಟ್ಟ ಕಾಲದಲ್ಲಿ ‘ದ್ವಾರ’ ಎಂಬ ಹೆಸರು ಪಡೆಯಿತು.

ತಾಳಿಕೋಟೆ ಯುದ್ಧದ ನಂತರ ಧಾರವಾಡ ಸ್ವತಂತ್ರಗೊಂಡಿತಾದರೂ, 1573ರಲ್ಲಿ ಬಿಜಾಪುರದ ಸುಲ್ತಾನರು ನಗರವನ್ನು ತಮ್ಮ ಕೈವಶ ಮಾಡಿಕೊಂಡರು. ಆದಿಲ್ ಶಾಹಿ ಕಾಲದಲ್ಲಿ ಮನ್ನ ಕಿಲ್ಲಾದಲ್ಲಿ ಸುಂದರ ಕೋಟೆ ನಿರ್ಮಿಸಲಾಯಿತು. ಹೀಗೆ ಕಾಲ ಕಳೆದಂತೆ ಮೊಗಲರು, ಪೇಶ್ವೆಯರು, ಹೈದರಾಲಿ, ಟಿಪ್ಪು ಹಾಗೂ ಅಂತಿಮವಾಗಿ ಬ್ರಿಟಿಷರು ಧಾರವಾಡವನ್ನು ತಮ್ಮ ವಶ ಮಾಡಿಕೊಳ್ಳಲು ಹಾತೊರೆದರು ಎಂಬುದು ಇತಿಹಾಸ.

ಇಂಥ ಐತಿಹಾಸಿಕ ಪ್ರಸಿದ್ಧ ಕಿಲ್ಲಾ ನಂತರದಲ್ಲಿ ನಿರ್ಲಕ್ಷ್ಯಕ್ಕೆ ಒಳಗಾಯಿತು. ಸದ್ಯ ಪುರಾತತ್ವ ಇಲಾಖೆ ಅಧೀನದಲ್ಲಿದ್ದರೂ, ಅದನ್ನು ಸುಂದರಗೊಳಿಸಿ, ಪ್ರೇಕ್ಷಣೀಯ ಸ್ಥಳವಾಗಿಸುವ ಪ್ರಕ್ರಿಯೆ ನಡೆದಿಲ್ಲ ಎಂಬ ಆರೋಪಗಳು ಕೇಳಿಬರುತ್ತಲೇ ಇವೆ.

ಇದೀಗ ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ನಗರದ ಐತಿಹಾಸಿ ಕಿಲ್ಲಾ ಕಡೆಗಣನೆಗೆ ಒಳಗಾಗಿದೆ ಎಂಬ ಆರೋಪ ಎದುರಾಗಿದೆ. ನಗರದ ಕಾಲೇಜು ರಸ್ತೆ, ಕಟ್ಟಡಗಳನ್ನು ತ್ರಿವರ್ಣ ಬೆಳಕಿನ ದೀಪಗಳಿಂದ ಅಂದಗೊಳಿಸಲಾಗಿದೆ. ಎಲ್ಲೆಡೆ ಹಬ್ಬದ ವಾತಾವರಣ ಕಂಡುಬರುತ್ತಿದೆ. ಆದರೆ ಕಿಲ್ಲಾ ಮಾತ್ರ ಅಲಂಕಾರಗಳಿಲ್ಲದೆ ಕಳೆಗುಂದಿದೆ.

ಈ ಕುರಿತು ಪ್ರತಿಕ್ರಿಯಿಸಿದ ಸಾಮಾಜಿಕ ಹೋರಾಟಗಾರ ಪಿ.ಎಚ್.ನೀರಲಕೇರಿ, ‘ಕಿಲ್ಲಾ ಕಡೆಗಣನೆ ಕುರಿತು ಈ ಹಿಂದೆಯೂ ಹೋರಾಟ ನಡೆಸಲಾಗಿದೆ. ಐತಿಹಾಸಿಕ ಮಹತ್ವ ಇರುವ ಕಿಲ್ಲಾ ಮತ್ತು ದುರ್ಗಾ ದೇವಿ ಗುಡಿಯನ್ನು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳುವ ಮತ್ತು ಜನರಿಗೆ ಅವುಗಳ ಮಹತ್ವ ಸಾರಬೇಕಾದ ಕೆಲಸವನ್ನು ಸರ್ಕಾರ ಮಾಡಬೇಕಿತ್ತು. ಆದರೆ ಈವರೆಗೂ ಅಂಥ ಯಾವುದೇ ಪ್ರಯತ್ನ ನಡೆದಿಲ್ಲ’ ಎಂದು ಆರೋಪಿಸಿದರು.

*
ಯಾವುದನ್ನೂ ಉದ್ದೇಶಪೂರ್ವಕವಾಗಿ ಕಡೆಗಣಿಸಿಲ್ಲ. ಕಿಲ್ಲಾಕ್ಕೂ ದೀಪಾಲಂಕಾರ ಮಾಡುವ ಕುರಿತು ಪಾಲಿಕೆ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು.
-ಗುರುದತ್ತ ಹೆಗಡೆ, ಜಿಲ್ಲಾಧಿಕಾರಿ 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು