ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ್ತೆ ಗರಿಗೆದರಿದ ವ್ಯಾಪಾರ, ವಹಿವಾಟು

ಲಾಕ್‌ಡೌನ್‌ ಸಡಿಲಿಕೆ; ದೈನಂದಿನ ಕೆಲಸ ಕಾರ್ಯಕ್ಕೆ ಅಣಿಯಾದ ಜನತೆ
Last Updated 21 ಜೂನ್ 2021, 15:20 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಲಾಕ್‌ಡೌನ್‌ ಸಡಿಲಿಕೆಯಾಗುತ್ತಿದ್ದಂತೆ ವಾಣಿಜ್ಯ ನಗರಿಯಲ್ಲಿ ಸೋಮವಾರ ಮತ್ತೆ ವ್ಯಾಪಾರ ವಹಿವಾಟು ಗರಿಗೆದರಿವೆ. ವಾಣಿಜ್ಯ ಮಳಿಗೆಗಳು, ಮಾಲ್‌ಗಳು, ಹೋಟೆಲ್‌ಗಳು, ಬಟ್ಟೆ ಅಂಗಡಿಗಳು, ಬಾರ್‌–ರೆಸ್ಟೊರೆಂಟ್‌ಗಳು ಬಾಗಿಲು ತೆರೆದು ವ್ಯಾಪಾರ ಆರಂಭಿಸಿವೆ.

ಲಾಕ್‌ಡೌನ್‌ನಿಂದಾಗಿ ವ್ಯಾಪಾರ ವಹಿವಾಟಿನ ಕೇಂದ್ರವಾದ ಹುಬ್ಬಳ್ಳಿಯಲ್ಲಿ ವ್ಯಾಪಾರ ಸಂಪೂರ್ಣ ಸ್ತಬ್ಧವಾಗಿತ್ತು. ಲಾಕ್‌ಡೌನ್‌ ಸಡಿಲವಾಗುತ್ತಿದ್ದಂತೆ ವಾಣಿಜ್ಯ ನಗರಿಯಲ್ಲಿ ವಹಿವಾಟು ಜೋರಾಗಿರುವುದು ಕಂಡು ಬಂತು. ಖಾಸಗಿ ಸಂಸ್ಥೆಗಳ ಉದ್ಯೋಗಿಗಳು, ವ್ಯಾಪಾರಸ್ಥರು ಹೊರಬಿದ್ದರು. ಖರೀದಿಗಾಗಿ ಜನರೂ ಧಾವಿಸಿದರು. ಇದರಿಂದ ಮಾರುಕಟ್ಟೆ ಪ್ರದೇಶದಲ್ಲಿ ಅಂತರ ಕಾಪಾಡಿಕೊಂಡುರುವುದು ಕಂಡು ಬರಲಿಲ್ಲ.

ದುರ್ಗದ ಬೈಲ್‌, ದಾಜೀಬಾನ ಪೇಟೆ, ಸಿಬಿಟಿ, ಸ್ಟೇಷನ್‌ ರಸ್ತೆ ಸೇರಿದಂತೆ ಪ್ರಮುಖ ಮಾರುಕಟ್ಟೆ ಪ್ರದೇಶಗಳಲ್ಲಿನ ಅಂಗಡಿಗಳು ತೆರೆದಿದ್ದವು. ಕೆಲವೆಡೆ ಅಂಗಡಿಗಳನ್ನು ಶುಚಿಗೊಳಿಸುತ್ತಿದ್ದ ದೃಶ್ಯಗಳು ಕಂಡು ಬಂದವು.

ಬಸ್‌ಲ್ಲಿ ಶೇ 50 ರಷ್ಟು ಮಂದಿಗೆ ಪ್ರಯಾಣಿಸಲು ಅವಕಾಶ ನೀಡಿದ್ದರಿಂದ, ಸಿಬಿಟಿ, ಹೊಸೂರು ಪ್ರಾದೇಶಿಕ ಬಸ್‌ ನಿಲ್ದಾಣ, ಗೋಕುಲ ರಸ್ತೆ ಹೊಸ ಬಸ್‌ ನಿಲ್ದಾಣಗಳಲ್ಲಿ ವಿವಿಧೆಡೆ ತೆರಳು ಪ್ರಯಾಣಿಕರು ಜಮಾಯಿಸಿದ್ದರು. ಹಳೇ ಬಸ್‌ ನಿಲ್ದಾಣದಿಂದ ಧಾರವಾಡ–ಹುಬ್ಬಳ್ಳಿ ನಡುವಿನ ಬಸ್‌ಗಳು ಸಂಚರಿಸಿದವು. ಬೆಂಗಳೂರು, ಚಿತ್ರದುರ್ಗ, ದಾವಣಗೆರೆಗೆ ತೆರಳುವ ಬಸ್‌ಗಳೂ ಇಲ್ಲಿಂದಲೇ ಹೊರಟವು. ಪ್ರಯಾಣಿಕರ ಸಂಖ್ಯೆ ಕಡಿಮೆ ಇದ್ದ ಕಾರಣ ಬಸ್‌ಗಳ ಸಂಖ್ಯೆಯೂ ಕಡಿಮೆ ಇತ್ತು.

ಹೆಚ್ಚಿನ ಸಂಖ್ಯೆಯಲ್ಲಿ ವಾಹನಗಳು ರಸ್ತೆಗೆ ಇಳಿದಿದ್ದರಿಂದ ಪ್ರಮುಖ ಸಿಗ್ನಲ್‌ಗಳಲ್ಲಿ ವಾಹನ ದಟ್ಟಣೆ ಉಂಟಾಗಿತ್ತು. ಲಾಕ್‌ಡೌನ್‌ ಪೂರ್ವದ ಸನ್ನಿವೇಶ ಕಂಡು ಬಂತು. ಕೋರ್ಟ್‌ ರಸ್ತೆ ಸಾಯಿಬಾಬಾ ಮಂದಿರದ ಎದುರು ಮಲ್ಟಿ ಕಾರ್‌ ಪಾರ್ಕಿಂಗ್‌ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಆ ಮಾರ್ಗ ಬಂದ್‌ ಮಾಡಲಾಗಿದೆ. ಅದರಿಂದ ಚನ್ನಮ್ಮ ವೃತ್ತದಲ್ಲಿ ವಿಪರೀತ ಟ್ರಾಫಿಕ್‌ ಜಾಮ್‌ ಉಂಟಾಗಿತ್ತು. ಸಂಚಾರ ಸುವ್ಯವಸ್ಥೆಗೆ ಬೆಳಿಗ್ಗೆಯಿಂದ ಸಂಜೆವರೆಗೂ ಪೊಲೀಸರು ಹರಸಾಹಸಪಟ್ಟರು.

ಮೊದಲ ದಿನ 127 ಬಸ್‌ಗಳ ಸಂಚಾರ

ಹುಬ್ಬಳ್ಳಿ: ಹೊಸೂರು ಹಾಗೂ ಗೋಕುಲ ರಸ್ತೆಯ ಹೊಸ ಬಸ್ ನಿಲ್ದಾಣ ಸೇರಿದಂತೆ ಜಿಲ್ಲೆಯ ತಾಲ್ಲೂಕು ಕೇಂದ್ರಗಳ ಬಸ್ ನಿಲ್ದಾಣಗಳಿಂದ ಸೋಮವಾರ ಸಂಜೆ ವೇಳೆಗೆ ಒಟ್ಟು 127 ಬಸ್‌ಗಳು ಸಂಚರಿಸಿವೆ.

ಪ್ರಯಾಣಿಕರ ಕೊರತೆಯಿಂದ 127 ಬಸ್‌ಗಳು ಮಾತ್ರ ಸಂಚರಿಸಿವೆ. ಮಂಗಳವಾರದಿಂದ ಹೆಚ್ಚಿನ ಪ್ರಯಾಣಿಕರ ಸಂಚಾರ ನಿರೀಕ್ಷಿಸಲಾಗಿದ್ದು, ಬೇಡಿಕೆಗೆ ತಕ್ಕಂತೆ ಬಸ್‌ಗಳ ಸಂಖ್ಯೆ ಹೆಚ್ಚಿಸಲಾಗುವುದು ಎಂದು ಸಂಸ್ಥೆ ಪ‍್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT