ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತ್ಯಾಗದ ಮಹತ್ವ ಸಾರುವ ‘ಬಕ್ರೀದ್’

Last Updated 12 ಆಗಸ್ಟ್ 2019, 2:38 IST
ಅಕ್ಷರ ಗಾತ್ರ

ಬಕ್ರೀದ್‌ ಅನ್ನು ಇಸ್ಲಾಮಿಕ್ ಕ್ಯಾಲೆಂಡರಿನ 12ನೇ ತಿಂಗಳಾದ ಜಿಲ್‌ಹಿಜ್‌ನ 10ನೇ ದಿನ ಆಚರಿಸಲಾಗುತ್ತದೆ. ಅಲ್ಲಾಹುವಿಗೆ ಅತ್ಯಾಪ್ತರಾಗಿದ್ದ ಪ್ರವಾದಿ ಇಬ್ರಾಹಿಂ ಅವರ ತ್ಯಾಗದ ಪ್ರತೀಕವಾಗಿ ಬಕ್ರೀದ್‌ ಆಚರಣೆ ಶತಮಾನಗಳಿಂದ ಜರುಗುತ್ತಿದೆ.

ಕುರ್ಬಾನಿ (ತ್ಯಾಗದ ಉದ್ದೇಶದಿಂದ ನೀಡುವ ಬಲಿ ಕರ್ಮ) ಹಾಗೂ ಹಜ್‌ ಯಾತ್ರೆ ಬಕ್ರೀದ್‌ ಆಚರಣೆಯ ತಿರುಳು. ಹಲವು ಷರತ್ತುಗಳಿಗೆ ಒಳಪಟ್ಟು ಕುರ್ಬಾನಿ ಹಾಗೂ ಹಜ್‌ ಯಾತ್ರೆ ಎಲ್ಲ ಮುಸ್ಲಿಮರ ಮೇಲೆ ಕಡ್ಡಾಯಗೊಳಿಸಲಾಗಿದೆ. ವ್ಯಕ್ತಿಯ ಆರ್ಥಿಕ ಸದೃಢತೆ ಇವೆರಡಕ್ಕೂ ಪ್ರಮುಖ ಷರತ್ತು. ಕುರ್ಬಾನಿಯಲ್ಲಿ ಎರಡು ಬಗೆ. ಒಂದು ಕಡ್ಡಾಯ, ಮತ್ತೊಂದು ಐಚ್ಛಿಕ. ಹಜ್‌ ಅಥವಾ ಉಮ್ರಾ ಯಾತ್ರೆಯ ವೇಳೆ ಬಲಿ ಕರ್ಮ ನಿರ್ವಹಿಸುವುದು ಕಡ್ಡಾಯ. ಆದರೆ, ಬಕ್ರೀದ್‌ನಲ್ಲಿ ನಿರ್ವಹಿಸುವ ಬಲಿ ಕರ್ಮ ಐಚ್ಛಿಕವಾಗಿರುತ್ತದೆ. ಯಾರು 52.5 ತೊಲೆಯಷ್ಟು ಬೆಳ್ಳಿ ಇಲ್ಲವೇ 7 ತೊಲೆಯಷ್ಟು ಬಂಗಾರ ಇಲ್ಲವೇ ಅಷ್ಟು ಮೊತ್ತದ ಹಣ (ಉಂಡು–ತಿಂದು ಮಿಕ್ಕಿದ್ದು) ಹೊಂದಿರುತ್ತಾರೊ ಅವರ ಮೇಲೆ ಕುರ್ಬಾನಿ ಕಡ್ಡಾಯ ಎನಿಸಿಕೊಳ್ಳುತ್ತದೆ.

ಅಪ್ರತಿಮ ‌ತ್ಯಾಗದ ಮೊಹರು
ಬಕ್ರೀದ್ ಎಂದಾಕ್ಷಣ ಬಲಿದಾನದ ಹಬ್ಬ ಎಂದೇ ಎಲ್ಲರೂ ಭಾವಿಸುತ್ತಾರೆ. ಆದರೆ, ಬಲಿಗೂ ಮೀರಿದ ಅರ್ಥ, ಆಚರಣೆ ಈ ಹಬ್ಬದ ವೈಶಿಷ್ಟ್ಯ. ಹಜ್‌ ಯಾತ್ರೆ, ಬಲಿ ಕರ್ಮ(ಕುರ್ಬಾನಿ) ಈ ಹಬ್ಬದ ಜೀವಾಳ ಎನಿಸಿದರೂ, ಇವು ಆಚರಣೆಗೆ ಸೀಮಿತ. ಮನಸ್ಸಿನಲ್ಲಿ ಅಚಲ ವಿಶ್ವಾಸದೊಂದಿಗೆ ಅಲ್ಲಾಹುವಿನ ಅನುಗ್ರಹ ಗಳಿಸುವುದು ಈ ಎರಡೂ ಆಚರಣೆಗಳ ಕ್ರೋಡೀಕೃತ ಉದ್ದೇಶ. ಏಕೆಂದರೆ ಕುರ್‌ಆನ್‌ನ ಹಲವೆಡೆ ತ್ಯಾಗದ ಉದ್ದೇಶದಿಂದ ನೀಡುವ ಬಲಿ ಕರ್ಮ ಕುರಿತು ಪ್ರಸ್ತಾಪ ಇದೆಯೆ ಹೊರತು ಕೇವಲ ಬಲಿ ಕುರಿತಾಗಿಲ್ಲ ಎಂಬುದು ವಿಶೇಷ. ‘ಕುರ್ಬಾನಿ ಎಂದರೆ ‌‌ಅತ್ಯಾಪ್ತ ವಸ್ತುವನ್ನು ಅಲ್ಲಾಹುವಿಗೆ ಸಮರ್ಪಿಸುವುದು ಎಂದರ್ಥ. ಸಾಮಾನ್ಯವಾಗಿ ಕುರಿ, ಟಗರು, ಮೇಕೆ, ಹೋತ, ಒಂಟೆ ಮತ್ತಿತರ ಪ್ರಾಣಿಗಳನ್ನು ಬಲಿ ನೀಡಲಾಗುತ್ತದೆ. ಈ ಪೈಕಿ ಯಾವುದೇ ಪ್ರಾಣಿಯ ಮಾಂಸ ಇಲ್ಲವೇ ರಕ್ತ ಅಲ್ಲಾಹುವಿಗೆ ಇಷ್ಟವೆಂದಲ್ಲ. ಅದು ಅಲ್ಲಾಹುವಿಗೆ ತಲುಪುವುದೂ ಇಲ್ಲ. ಆದರೆ, ತ್ಯಾಗದ ಉದ್ದೇಶದಿಂದ ನೀಡುವ ಬಲಿಯ ಸ್ಫೂರ್ತಿ, ಬಲಿ ನೀಡುವವರ ಧರ್ಮ ನಿಷ್ಠೆ, ಅಲ್ಲಾಹುವಿನ ರಾಜಿಗೆ ಕಾರಣವಾಗುತ್ತದೆ. ಹೀಗಾಗಿ ಬಲಿ ಕರ್ಮದ ಹಿಂದೆ ದೈವ ಭಕ್ತಿ, ದೇವ ನಿಷ್ಠೆ ಅತ್ಯಗತ್ಯ’ ಎನ್ನುತ್ತಾರೆ ಹಫೀಜ್‌ ಅನ್ವರ್‌ ಮುಲ್ಲಾ.

ಮಾಂಸದ ಮೂರು ಭಾಗ
ಕುರ್ಬಾನಿ ಕೊಡುವ ಪ್ರಾಣಿಯ ಮಾಂಸವನ್ನು ಮೂರು ಸಮಾನ ಭಾಗಗಳಾಗಿ ವಿಂಗಡಿಸಲಾಗುತ್ತದೆ. ಅದರಲ್ಲಿ ಒಂದು ಭಾಗವನ್ನು ಬಡವರಿಗೆ ಹಂಚಬೇಕು. ಎರಡನೇ ಭಾಗವನ್ನು ಸಂಬಂಧಿಕರು, ಸ್ನೇಹಿತರು ಹಾಗೂ ನೆರೆಹೊರೆಯರಿಗೆ ನೀಡಬೇಕು. ಮೂರನೇ ಭಾಗವನ್ನು ಕುಟುಂಬಕ್ಕಾಗಿ ಬಳಸುವುದು ನಿಯಮ.

‘ಖದರ್‌ ನೋಡಿ ರೊಕ್ಕಾ ಕೊಡ್ರಿ’
ಒಂದಿಷ್ಟು ಕೊಂಬುಗಳಿಗೆ ಬಣ್ಣ ಬಳಿದುಕೊಂಡು ಮಿರಿ–ಮಿರಿ ಮಿಂಚುತ್ತಿದ್ದವು. ಮತ್ತೊಂದಿಷ್ಟು ಮೈಮೇಲಿನ ಕಾಲು ಭಾಗ ಕೂದಲನ್ನು ಒಪ್ಪವಾಗಿ ಟ್ರಿಮ್‌ ಮಾಡಿಕೊಂಡು ಜನಾಕರ್ಷಿಸುತ್ತಿದ್ದವು. ಮಗದೊಂದಿಷ್ಟು ಠೀವಿಯಿಂದ ಕಾದಾಟಕ್ಕೆ ಸಜ್ಜಾದಂತೆ ಗುಟುರು ಹಾಕುತ್ತಿದ್ದವು...

ಹುಬ್ಬಳ್ಳಿ ಎಪಿಎಂಸಿಯ ವಿಶಾಲ ಮೈದಾನದಲ್ಲಿ ಗಿಜುಗುಡುತ್ತಿದ್ದ ಜನರ ನಡುವೆ ಟಗರು–ಹೋತಗಳು ಶನಿವಾರ ಬೀಗುತ್ತಿದ್ದ ಪರಿಯಿದು. ಬಕ್ರೀದ್ ನಿಮಿತ್ತ ಶನಿವಾರ (ಆ.10) ಟಗರು–ಹೋತಗಳ ವ್ಯಾಪಾರ ಜೋರಾಗಿತ್ತು. ‘ಖದರ್‌ ನೋಡಿ ರೊಕ್ಕಾ ಕೊಡ್ರಿ’, ‘ಒಂದ್ಸಲ ತೂಕನಾದ್ರೂ ಮಾಡ್ಸಿ, ಆಮೇಲೆ ದುಡ್ಡು ಕೊಡ್ರಿ’, ‘ಇಲ್ಲ ಅಷ್ಟಕ್ಕ ಕೊಡುವುದೇ ಇಲ್ಲ, ಬೇರೆ ನೋಡ್ಕೊಳ್ಳಿ’ ಎಂದು ಟಗರು/ಹೋತಗಳ ಮಾಲೀಕರು ಕಡ್ಡಿ ಮುರಿದಂತೆ ಹೇಳುತ್ತಿದ್ದರು. ‘ಇನ್ನೊಂದು ಐದುನೂರು ಕೊಡ್ತೀವಿ’, ‘ಇನ್ನೆರಡು ನೂರು ಕೊಡ್ತೀವಿ ಕೊಟ್ಟ ಬಿಡ್ರಿ’ ಎಂದೆಲ್ಲ ಖರೀದಿದಾರರು ಚೌಕಾಸಿ ಮಾಡುತ್ತಿದ್ದರು..

‘ಮೂರು ಟಗರು ತೆಗೆದುಕೊಂಡೆವು. ಒಂದಕ್ಕೆ ₹17 ಸಾವಿರ ಕೊಟ್ಟೆವು. ಇನ್ನುಳಿದ ಎರಡಕ್ಕೆ ₹32 ಸಾವಿರ ಕೊಟ್ಟು ಖರೀದಿಸಿದ್ದೇವೆ. ಮೂರು ಒಂದೂವರೆ ವರ್ಷದ ಆಸುಪಾಸಿನ ವಯೋಮಾನದವು. ಕಳೆದ ಸಲಕ್ಕೆ ಹೋಲಿಸಿದರೆ, ಈ ಬಾರಿ ಒಂದೊಂದು ಟಗರಿಗೆ ಸರಾಸರಿ ₹2 ಸಾವಿರ ಹೆಚ್ಚಾಗಿದೆ’ ಎಂದು ಹುಬ್ಬಳ್ಳಿ ನಿವಾಸಿ ಮೊಹಮ್ಮದ್ ಇಸಾಕ್‌ ಅಭಿಪ್ರಾಯಪಟ್ಟರು.

‘ನಾನು ಒಂದು ವರ್ಷದ ಟಗರಿಗೆ ₹17 ಸಾವಿರ ಕೊಟ್ಟೆ. ಈ ಸಲ ನನಗೇನೋ ₹3 ಸಾವಿರ ಹೆಚ್ಚಾಯಿತು ಎನಿಸುತ್ತಿದೆ’ ಎಂದು ಮತ್ತೊಬ್ಬರು ದನಿಗೂಡಿಸಿದರು.

ಧಾರವಾಡದ ತೇಜಸ್ವಿ ನಗರದ ಇಲಿಯಾಸ್‌ ದೊಡಮನಿ ಆಳೆತ್ತರ ಹೋತ ಖರೀದಿಸಿ ಆಟೊಗೆ ಕಟ್ಟಿಕೊಂಡು ನಿಂತಿದ್ದರು. ‘ಎಷ್ಟಾಯಿತು?’ ಎಂದು ವಿಚಾರಿಸಿದರೆ, ‘₹17 ಸಾವಿರ ಕೊಟ್ಟು ಖರೀದಿಸಿದೆ. ಸ್ವಲ್ಪ ಜಾಸ್ತಿಯಾಯಿತು. ಆದರೆ, ಹಬ್ಬ ಅಲ್ವಾ ಬೇಕೇಬೇಕು. ದರ ಹೆಚ್ಚಾದರೂ ಏನು ಮಾಡುವಂತಿಲ್ಲ’ ಎಂದರು.

ಭಟ್ಕಳದಿಂದ ಬಂದಿದ್ದ ಅಹ್ಮದ್‌ ಅವರನ್ನೊಳಗೊಂಡ ಐದಾರು ಜನರು 12 ಕುರಿಗಳನ್ನು ಕೊಳ್ಳುವ ಯೋಜನೆಯೊಂದಿಗೆ ಬಂದಿದ್ದರು. ಅವರನ್ನು ಮಾತಿಗೆ ಎಳೆದಾಗ ‘ಕಳೆದ ಸಲಕ್ಕೆ ಹೋಲಿಸಿದರೆ ದರ ಸ್ವಲ್ಪಹೆಚ್ಚಾಗಿದೆ. ಆದರೆ, ಅಂತ ದೊಡ್ಡ ವ್ಯತ್ಯಾಸವೇನೂ ಆಗಿಲ್ಲ’ ಎಂದರು.

ಸಾಕಷ್ಟು ಖರ್ಚು
‘ನಮ್ಮ ಟಗರಿನ ಹೆಸರು ದತ್ತಾತ್ರೇಯ. 2 ವರ್ಷ 8 ತಿಂಗಳು. ಆರು ಹಲ್ಲುಗಳಿವೆ. ಹುರುಳಿ ಕಾಳು, ಮೊಟ್ಟೆ, ಹಾಲು ಕುಡಿಸಿ ಬೆಳೆಸಿದ್ದೇವೆ. ಉತ್ತಮ ದರ ಸಿಕ್ಕರೆ ಮಾರುತ್ತೇವೆ. ಇಲ್ಲದಿದ್ದರೆ ಮಾರುವುದಿಲ್ಲ. ಇವುಗಳನ್ನು ಸಾಕಲು ನಿತ್ಯ ಸರಾಸರಿ ₹200 ಖರ್ಚಾಗುತ್ತದೆ. ಸಂತೆಯಲ್ಲಿ ಸಿಕ್ಕ ದರಕ್ಕೆ ಮಾರಿದರೆ, ನಷ್ಟವಾಗುತ್ತದೆ’ ಎಂದವರು ಬಿ.ಗುಡಿಹಾಳದಿಂದ ಬಂದಿದ್ದ ಈಶ್ವರ ಇಂಗುಲಿ.

‘ನನ್ನ ಮರಿ ಎರಡು ವರ್ಷದ್ದು. 6 ಹಲ್ಲುಗಳಿವೆ. ₹30 ಸಾವಿರಕ್ಕೆ ಕಮ್ಮಿಕೊಡುವ ಮಾತೇ ಇಲ್ಲ’ ಎಂದು ಬಿಳಿ ಶುಭ್ರವಾದ ಬಿಳಿ ಬಣ್ಣದ ಟಗರು ಮಾರಲು ಬಂದಿದ್ದ ಅಮೀನಗಡದ ರಫೀಕ್‌ ಹೇಳಿದರು.

‘ನಾವು ಏಳು ಮರಿ ತಂದಿದ್ದೇವು. ಆದರೆ, ಒಂದೂ ಮಾರಾಟ ಆಗಲಿಲ್ಲ. ಗಾಡಿ ಮಾಡಿಕೊಂಡು ಬಂದಿದ್ದ ಖರ್ಚೂ ಮೈಮೇಲೆ ಆಯ್ತು. ಒಂದು ವರ್ಷ ಪ್ರಾಯದ ಮರಿಗಳನ್ನು ಬರೀ ₹9 ಸಾವಿರ, ₹10 ಸಾವಿರಕ್ಕೆ ಕೇಳ್ತಿದ್ದಾರೆ. ಕನಿಷ್ಠ ₹11,500ಕ್ಕೂ ಕಡಿಮೆ ಕೊಟ್ರೆ ನಷ್ಟ ಆಗುತ್ತದೆ. ಹೀಗಾಗಿ ಮರಿ ತೆಗೆದುಕೊಂಡು ಹೋಗುತ್ತಿದ್ದೇವೆ’ ಎಂದು ಹಾವೇರಿ ಜಿಲ್ಲೆಯ ತಡಸದಿಂದ ಬಂದಿದ್ದ ಅಬ್ದುಲ್‌ ಕರೀಂ ನಿರಾಸೆ ವ್ಯಕ್ತಪಡಿಸಿದರು.

₹55 ಸಾವಿರಕ್ಕೆ ಕಮ್ಮಿಯಿಲ್ಲ...
‘ಇದರ ಹೆಸರು ಬಾದಲ್‌. ನಾಲ್ಕು ವರ್ಷ ಪ್ರಾಯದ್ದು. ₹60 ಸಾವಿರ ಹೇಳಿದ್ದೇವೆ. 80 ಕೆ.ಜಿಯಷ್ಟು ತೂಗುತ್ತದೆ. ₹55 ಸಾವಿರ ಬಂದರೆ ಕೊಡುತ್ತೇವೆ. ಇದಕ್ಕೆ ನಾವು ಬೆಳಿಗ್ಗೆ ಒಂದು ಕೆ.ಜಿ ಹುರುಳಿ ತಿನಿಸುತ್ತೇವೆ. ರಾತ್ರಿ ಎರಡು ಜವಾರಿ ಮೊಟ್ಟೆ, ಒಂದು ಲೀಟರ್‌ ಹಾಲು ಕುಡಿಸುತ್ತೇವೆ. ಅದರೊಂದಿಗೆ ಕಡಲೆ ಹೊಟ್ಟು, ಹಸಿ ಮೇವು ಕೊಡುತ್ತೇವೆ’ ಎಂದು ಗದಗ ಜಿಲ್ಲೆಯಿಂದ ಬಂದಿದ್ದ ಮುಸ್ತಾಕ್‌ ಬಾವಿಕಟ್ಟಿ ತಿಳಿಸಿದರು.

ಮೈತುಂಬಿದ ಎಮ್ಮೆ ಕರುವಿನಂತೆ ಭಾಸವಾಗುತ್ತಿದ್ದ ‘ಬಾದಲ್‌’ಗೆ ಎಪಿಎಂಸಿಗೆ ಭೇಟಿ ಕೊಟ್ಟವರ ಕೇಂದ್ರ ಬಿಂದುವಾಗಿತ್ತು. ಬಿಳಿ, ಕಪ್ಪು ಮಿಶ್ರಿತ ಕೆಂಬಣ್ಣದ ಚೆಲುವು ಹೊಂದಿದ್ದ ‘ಬಾದಲ್‌’, ಕಾಳಗಕ್ಕೆ ಇಳಿಯುವಂತೆ ಗುಟುರು ಹಾಕುತ್ತಲೇ ನಿಂತಿತ್ತು.

‘ಇವುಗಳನ್ನು ನಾವು ಜೀವಕ್ಕಿಂತಲೂ ಹೆಚ್ಚಾಗಿ ಕಾಳಜಿ ವಹಿಸಿ ಸಾಕಿರುತ್ತೇವೆ. ₹55 ಸಾವಿರ ಬಂದರೆ ಕೊಡುತ್ತೇವೆ. ಇಲ್ಲದಿದ್ದರೆ, ತಂದ ಖರ್ಚು ಮೈಮೇಲೆ ಬಂದರೂ ಪರವಾಗಿಲ್ಲ. ವಾಪಸ್‌ ತೆಗೆದುಕೊಂಡು ಹೋಗುತ್ತೇವೆ. ಇಂಥ ಐದು ಟಗರು ತಂದಿದ್ದೇವೆ. ಸದ್ಯ 2 ವರ್ಷ ವಯಸ್ಸಿನ ಎರಡು ಮರಿಗಳನ್ನು ₹25 ಸಾವಿರ ಹಾಗೂ ₹27 ಸಾವಿರದಂತೆ ಮಾರಾಟ ಮಾಡಿದ್ದೇವೆ’ ಎಂದು ತಿಳಿಸಿದರು.

ಹುಬ್ಬಳ್ಳಿಯ ಎಪಿಎಂಸಿಯಲ್ಲಿ ಮಾರಾಟಕ್ಕೆ ಬಂದ ಟಗರು
ಹುಬ್ಬಳ್ಳಿಯ ಎಪಿಎಂಸಿಯಲ್ಲಿ ಮಾರಾಟಕ್ಕೆ ಬಂದ ಟಗರು

ಹಬ್ಬದ ಆಚರಣೆ ಹೇಗೆ?

*ಬೆಳಿಗ್ಗೆ ಬೇಗ ಎದ್ದು ‘ನಸುಕಿನ’ ನಮಾಜ್‌

*ಅರುಣೋದಯವಾಗುತ್ತಿದ್ದಂತೆ ಹೊಸ ಬಟ್ಟೆ ಉಟ್ಟು, ಸುಗಂಧದ್ರವ್ಯಪೂಸಿಕೊಂಡು, ಸುರ್ಮಾ ಹಚ್ಚಿಕೊಂಡು ಸಿದ್ಧ

*ಮೆರವಣಿಗೆಯಲ್ಲಿ ಈದ್ಗಾ ಮೈದಾನಕ್ಕೆ ತೆರಳಿ ಪ್ರಾರ್ಥನೆ

*ಬಳಿಕ ಪರಸ್ಪರ ಹಸ್ತಲಾಘವ, ಆಲಿಂಗಿಸಿಕೊಂಡುಈದ್ ಶುಭಾಶಯ

*ಖಬರಸ್ತಾನ್‌ಗೆ ತೆರಳಿ ಮೃತರಿಗಾಗಿ ದುವಾ

*ವಿಶೇಷ ನಮಾಜ್‌ ಬಳಿಕ ಬಲಿ ಕರ್ಮ

*ಬಡವರು, ನೆರೆಹೊರೆ, ಸಂಬಂಧಿಕರಿಗೆ ಬಲಿ ಪ್ರಾಣಿಯ ಮಾಂಸ ಹಂಚಿಕೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT