ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಸ್ಕಾರದಿಂದ ಸಂಸ್ಕೃತಿ ಉಳಿಸಲು ಸಾಧ್ಯ: ರಂಭಾಪುರಿ ಸ್ವಾಮೀಜಿ

ಶಿವಾಚಾರ್ಯ ಸಂಸ್ಕೃತಿ ಪುನಶ್ಚೇತನ ಚಿಂತನ ಸಮಾವೇಶ ಆರಂಭ
Last Updated 17 ಜನವರಿ 2020, 10:16 IST
ಅಕ್ಷರ ಗಾತ್ರ

ಹುಬ್ಬಳ್ಳಿ: ನಾಗರಿಕ ಸಮಾಜದಲ್ಲಿ ಅನಾಗರಿಕ ವರ್ತನೆಗಳು ಹೆಚ್ಚುತ್ತಿರುವುದು ನೋವಿನ ಸಂಗತಿ. ಸತ್ಯ, ಸಂಸ್ಕೃತಿ ಪರಿಪಾಲನೆಯಿಂದ ಶಾಂತಿ, ಸಾಮರಸ್ಯ ಬೆಳೆಯಲು ಸಾಧ್ಯ. ಸಂಸ್ಕಾರದಿಂದ ಮಾತ್ರ ಭಾರತೀಯ ಉತ್ಕೃಷ್ಟ ಸಂಸ್ಕೃತಿ ಉಳಿಯಲು ಸಾಧ್ಯ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಜಗದ್ಗುರು ಪ್ರಸನ್ನ ರೇಣುಕಾ ಡಾ. ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದರು ಹೇಳಿದರು.

ಇಲ್ಲಿನ ವಿದ್ಯಾನಗರದ ಶ್ರೀ ರಂಭಾಪುರಿ ಜಗದ್ಗುರು ವೀರ ಗಂಗಾಧರ ಸಮುದಾಯ ಭವನದಲ್ಲಿ ಬಾಳೆಹೊನ್ನೀರಿನ ಶ್ರೀಮದ್ವೀರಶೈವ ಸದ್ಬೋಧನ ಸಂಸ್ಥೆ ಹಾಗೂ ಬೆಂಗಳೂರಿನ ಅಖಿಲ ಭಾರತ ವೀರಶೈವ ಶಿವಾಚಾರ್ಯ ಸಂಸ್ಥೆ ಆಶ್ರಯದಲ್ಲಿ ಜರುಗಿದ ‘ಶಿವಾಚಾರ್ಯ ಸಂಸ್ಕೃತಿ ಪುನಶ್ಚೇತನ ಚಿಂತನ ಸಮಾವೇಶ’ದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಸಮಾರಂಭ ಉದ್ಘಾಟಿಸಿ ಮಾತನಾಡಿದ ಎಡೆಯೂರು ಕ್ಷೇತ್ರದ ರೇಣುಕಾ ಶಿವಾಚಾರ್ಯ ಸ್ವಾಮೀಜಿ, ಯುವ ಸಮುದಾಯದಲ್ಲಿ ಶ್ರದ್ಧೆ, ಸ್ವಾಭಿಮಾನ, ಕರ್ತವ್ಯನಿಷ್ಠೆ ಬೆಳೆಸಬೇಕಾಗಿದೆ. ಸಂಸ್ಕಾರದ ಕೊರತೆಯಿಂದ ಸಂಸ್ಕೃತಿ ವಿನಾಶದ ಅಂಚಿನಲ್ಲಿದೆ. ಇಂಥ ಸಂದರ್ಭದಲ್ಲಿ ಪುನಶ್ಚೇತನಗೊಳಿಸಿ ಧರ್ಮ ಸಂಸ್ಕೃತಿ ಎತ್ತಿ ಹಿಡಿಯುವ ಅವಶ್ಯಕತೆ ಇದೆ ಎಂದರು.

‘ಶಿವಾಚಾರ್ಯರ ಮೂಲಭೂತ ಕರ್ತವ್ಯಗಳು’ ಎಂಬ ವಿಷಯ ಕುರಿತು ವಿಶೇಷ ಉಪನ್ಯಾಸ ನೀಡಿದ ಶಿವಗಂಗಾ ಕ್ಷೇತ್ರ ವಲಯದ ಶಾಂತಮುನಿ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಶಿವಾಚಾರ್ಯ ಪರಂಪರೆ ಅತ್ಯಂತ ಪ್ರಾಚೀನವಾಗಿದ್ದು, ಶಿವ ಸಂಸ್ಕೃತಿಯನ್ನು ಎತ್ತಿ ಹಿಡಿಯುತ್ತಾ ಬಂದಿದೆ ಎಂದು ಹೇಳಿದರು.

ಶಿವಾಚಾರ್ಯರು ತಮ್ಮ ಮೂಲಭೂತ ಕರ್ತವ್ಯಗಳನ್ನು ನಿರ್ಲಕ್ಷ್ಯ ಮಾಡಿರುವುದರಿಂದ ಧರ್ಮದಲ್ಲಿ ಹಲವಾರು ಗೊಂದಲಗಳು ಹುಟ್ಟುತ್ತಿವೆ. ಇಂಥ ಸಂದರ್ಭದಲ್ಲಿ ಶಿವಾಚಾರ್ಯ ಸಂಸ್ಕೃತಿ ಜಾಗೃತಿಗೊಳಿಸಲು ಈ ಸಮಾರಂಭ ಪ್ರೇರಕ ಶಕ್ತಿಯಾಗಿದೆ ಎಂದರು.

‘ವೀರಶೈವ ಧರ್ಮ ಸಂಸ್ಕೃತಿ ಸಂರಕ್ಷಣೆ’ ವಿಷಯ ಕುರಿತು ವಿಶೇಷ ಉಪನ್ಯಾಸ ನೀಡಿದ ಅಮ್ಮಿನಭಾವಿ ಅಭಿನವ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ, ವೀರಶೈವ ಧರ್ಮದಲ್ಲಿ ಕೆಲವರು ದ್ವಂದ್ವಗಳನ್ನು ಹುಟ್ಟುಹಾಕಿ ಕಲುಷಿತಗೊಳಿಸುತ್ತಿರುವುದು ಸ್ವಾರ್ಥ ಮನೋಭಾವನೆಗೆ ಕಾರಣವಾಗಿದೆ ಎಂದು ಹೇಳಿದರು.

ಅಖಿಲ ಭಾರತ ಶಿವಾಚಾರ್ಯ ಸಂಸ್ಥೆ ಅಧ್ಯಕ್ಷ ಮುಕ್ತಿಮಂದಿರ ಕ್ಷೇತ್ರದ ವಿಮಲ ರೇಣುಕ ಮುಕ್ತಿಮುನಿ ಶಿವಾಚಾರ್ಯ ಸ್ವಾಮೀಜಿ, ಶ್ರೀಮದ್ವೀರಶೈವ ಸದ್ಬೋಧನ ಸಂಸ್ಥೆ ಅಧ್ಯಕ್ಷ ಡಾ.ಕೊಟ್ಟೂರ ಬಸವೇಶ್ವರ ಶಿವಾಚಾರ್ಯ ಸ್ವಾಮೀಜಿ. ಶ್ರೀಮದ್ವೀರಶೈವ ಸದ್ಬೋಧನ ಸಮಸ್ಥೆ ಹುಬ್ಬಳ್ಳಿ ತಾಲ್ಲೂಕು ಘಟಕದ ಅಧ್ಯಕ್ಷ ಪ್ರಕಾಶ ಬೆಂಡಿಗೇರಿ, ಸಿದ್ಧರಬೆಟ್ಟ ಕ್ಷೇತ್ರದ ವೀರಭದ್ರ ಶಿವಾಚಾರ್ಯ ಸ್ವಾಮೀಜಿ, ಲಕ್ಷೇಶ್ವರ ಅಜ್ಜಯ್ಯಸ್ವಾಮಿ ಗಡ್ಡದೇವರಮಠ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT