ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾತ್ರಿ, ಹಗಲು ನಡೆದ ಮತಯಂತ್ರ ಸ್ವೀಕಾರ

ಕೃಷಿ ವಿಶ್ವವಿದ್ಯಾಲಯದಲ್ಲಿ ಮತಯಂತ್ರಗಳು ಭದ್ರ
Last Updated 24 ಏಪ್ರಿಲ್ 2019, 20:15 IST
ಅಕ್ಷರ ಗಾತ್ರ

ಧಾರವಾಡ: ಲೋಕಸಭಾ ಚುನಾವಣೆಯ ಧಾರವಾಡ ಕ್ಷೇತ್ರದ 1872 ಮತಗಟ್ಟೆಗಳ ಮತಯಂತ್ರಗಳನ್ನು ಭದ್ರತಾ ಕೊಠಡಿಯೊಳಗೆ ಇರಿಸಿಬುಧವಾರ ಮಧ್ಯಾಹ್ನ ಭದ್ರತಾ ಕೊಠಡಿಗೆ ಬೀಗಮುದ್ರೆ ಹಾಕಲಾಯಿತು.

ಇಲ್ಲಿನ ಕೃಷಿ ವಿಶ್ವವಿದ್ಯಾಲಯದಲ್ಲಿ ಸ್ಥಾಪಿಸಲಾಗಿರುವ ಭದ್ರತಾ ಕೊಠಡಿಯಲ್ಲಿ ಅಭ್ಯರ್ಥಿಗಳು ಮತ್ತು ವಿವಿಧ ಪಕ್ಷಗಳ ಏಜೆಂಟರ ಸಮ್ಮುಖದಲ್ಲಿಬೀಗಮುದ್ರೆ ಹಾಕುವ ಕಾರ್ಯ ಮಂಗಳವಾರ ರಾತ್ರಿಯಿಂದ ಬುಧವಾರ ಮಧ್ಯಾಹ್ನದವರೆಗೂ ನಿರಂತರವಾಗಿ ನಡೆಯಿತು.ಚುನಾವಣಾ ಆಯೋಗದ ವೀಕ್ಷಕ ಭಾನುಪ್ರಕಾಶ ಏಟೂರು, ಜಿಲ್ಲಾಧಿಕಾರಿ ದೀಪಾ ಚೋಳನ್, ಪೊಲೀಸ್ ಆಯುಕ್ತ ಎಂ.ಎನ್.ನಾಗರಾಜ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ. ಸಂಗೀತಾ, ಹೆಚ್ಚುವರಿ ಜಿಲ್ಲಾಧಿಕಾರಿ ಡಾ. ಸುರೇಶ ಇಟ್ನಾಳ ಅವರು ಈ ಸಂದರ್ಭದಲ್ಲಿ ಹಾಜರಿದ್ದರು.

ಲೋಕಸಭಾ ಕ್ಷೇತ್ರವ್ಯಾಪ್ತಿಯ ಎಂಟು ವಿಧಾನಸಭಾ ಕ್ಷೇತ್ರಗಳ ಮತಯಂತ್ರಗಳನ್ನು ಪ್ರತ್ಯೇಕವಾಗಿ ಭದ್ರತಾ ಕೊಠಡಿಯಲ್ಲಿ ಇರಿಸಲಾಗಿದೆ. ಈ ಕೊಠಡಿಗಳ ಪಕ್ಕದಲ್ಲಿಯೇ ಆಯಾ ಕ್ಷೇತ್ರಗಳ ಮತ ಎಣಿಕೆ ಕೊಠಡಿಗಳನ್ನು ಗುರುತಿಸಲಾಗಿದೆ. ಆಯಾಯ ವಿಧಾನಸಭಾ ಕ್ಷೇತ್ರಗಳ ಮತಯಂತ್ರಗಳ ಸಂಖ್ಯೆಗೆ ಅನುಗುಣವಾಗಿ ಕೊಠಡಿಗಳನ್ನು ಹಂಚಿಕೆ ಮಾಡಲಾಗಿದೆ. ಮತಯಂತ್ರಗಳ ಭದ್ರತೆಗೆ ಕೊಠಡಿಗಳ ಕಿಟಕಿಗಳನ್ನು ಇಟ್ಟಿ ಮತ್ತು ಸಿಮೆಂಟ್‌ ಮೂಲಕ ಮುಚ್ಚಲಾಗಿದೆ. ಬಾಗಿಲುಗಳನ್ನು ಪ್ಲೈವುಡ್ ಬಳಸಿ ಮುಚ್ಚಲಾಗಿದೆ.

ಚುನಾವಣಾ ಕಾರ್ಯಕ್ಕೆ ಒಟ್ಟು 2208 ಕಂಟ್ರೋಲ್ ಯೂನಿಟ್‌ಗಳು, 2820 ವಿವಿಪ್ಯಾಟ್‌ಗಳು, 4408 ಬ್ಯಾಲೆಟ್ ಯೂನಿಟ್‌ಗಳನ್ನು ಬಳಸಲಾಗಿತ್ತು. ನವಲಗುಂದ ವಿಧಾನಸಭಾ ಕ್ಷೇತ್ರದಲ್ಲಿ 234,ಕುಂದಗೋಳ-214, ಧಾರವಾಡ- 231, ಹುಬ್ಬಳ್ಳಿ-ಧಾರವಾಡ ಪೂರ್ವ-210, ಹುಬ್ಬಳ್ಳಿ-ಧಾರವಾಡ ಸೆಂಟ್ರಲ್- 253, ಹುಬ್ಬಳ್ಳಿ-ಧಾರವಾಡ ಪಶ್ಚಿಮ-266, ಕಲಘಟಗಿ-226, ಶಿಗ್ಗಾವಿ- 238 ಮತಗಟ್ಟೆಗಳಲ್ಲಿ ಮಂಗಳವಾರ ಶಾಂತಿಯುತವಾಗಿ ಮತದಾನ ನಡೆದಿತ್ತು.

ಮತದಾನದ ನಂತರ ಕರ್ತವ್ಯನಿರತ ಸಿಬ್ಬಂದಿ ಆಯಾ ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಥಾಪಿಸಲಾಗಿದ್ದ ಡಿಮಸ್ಟರಿಂಗ್ ಕೇಂದ್ರಗಳಿಗೆ ಮತಯಂತ್ರಗಳನ್ನು ತಲುಪಿಸಿದರು. ಡಿಮಸ್ಟರಿಂಗ್ ಕೇಂದ್ರಗಳಿಂದ ಕೃಷಿ ವಿಶ್ವವಿದ್ಯಾಲಯದ ಮತ ಎಣಿಕಾಕೇಂದ್ರಕ್ಕೆ ಸೂಕ್ತ ಭದ್ರತೆಯೊಂದಿಗೆ ಮತಯಂತ್ರಗಳನ್ನು ಕಳುಹಿಸಿಕೊಡಲಾಯಿತು. ಬುಧವಾರ ಬೆಳಗಿನ ಜಾವ 3ರಿಂದ ಕೃಷಿ ವಿಶ್ವವಿದ್ಯಾಲಯಕ್ಕೆ ವಿವಿಧ ವಿಧಾನಸಭಾ ಕ್ಷೇತ್ರಗಳಿಂದ ಬಂದ ಮತಯಂತ್ರಗಳನ್ನು ಸ್ವೀಕರಿಸುವ ಕಾರ್ಯ ನಡೆಯಿತು. ಮತಯಂತ್ರಗಳನ್ನು ಭದ್ರತಾ ಕೊಠಡಿಗಳಲ್ಲಿರಿಸಿ ಬೀಗಮುದ್ರೆ ಹಾಕಲಾಯಿತು.

ಕಲಘಟಗಿಯಿಂದ ಬುಧವಾರ ಬೆಳಿಗ್ಗೆ 6ಕ್ಕೆ ಮತಯಂತ್ರಗಳು ಬಂದವು. ಹಾಗೆಯೇ ಶಿಗ್ಗಾವಿ ಮತಯಂತ್ರ ಕೃಷಿ ವಿವಿ ತಲುಪುವ ಹೊತ್ತಿಗೆ 11 ಆಗಿತ್ತು.ಆಯಾ ವಿಧಾನಸಭಾ ಕ್ಷೇತ್ರಗಳ ಸಹಾಯಕ ಚುನಾವಣಾಧಿಕಾರಿಗಳು, ತಹಶೀಲ್ದಾರರು ಹಾಗೂ ಸಿಬ್ಬಂದಿವರ್ಗದವರು ಮತಯಂತ್ರಗಳನ್ನು ಅವುಗಳ ಸಂಖ್ಯೆಗೆ ಪ್ರಕಾರ ಕೊಠಡಿಯಲ್ಲಿ ಇರಿಸಿದರು.ಮೇ 23ರಂದು ಮತ ಎಣಿಕೆ ಕಾರ್ಯ ನಡೆಯಲಿದೆ. ಅಲ್ಲಿಯವರೆಗೂ ಭದ್ರತಾ ಕೊಠಡಿಗಳಿಗೆ ಬಿಗಿಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗಿದೆ.

ಪೊಲೀಸ್, ಅರೆಸೇನಾಪಡೆ ಸಿಬ್ಬಂದಿಯನ್ನು ಭದ್ರತೆ ನಿಯೋಜಿಸಲಾಗಿದೆ. ಪ್ರತಿದಿನ ಮೂರು ಪಾಳಿಯಲ್ಲಿ ಇವರು ಕಾರ್ಯನಿರ್ವಹಿಸಲಿದ್ದಾರೆ. ಅಭ್ಯರ್ಥಿಗಳು ಹಾಗೂ ಏಜೆಂಟರು ತಮ ಎಣಿಕೆ ಕೇಂದ್ರಕ್ಕೆ ನಿರಂತರವಾಗಿ ಭೇಟಿ ನಿಡಿ ಭದ್ರತಾ ವ್ಯವಸ್ಥೆ ವೀಕ್ಷಿಸಲು ಚುನಾವಣಾಧಿಕಾರಿ ಅವಕಾಶ ಕಲ್ಪಿಸಿದ್ದಾರೆ. ಭದ್ರತಾ ಕಾರ್ಯ ಸಂಪೂರ್ಣವಾಗಿ ಪಾರದರ್ಶಕವಾಗಿ ನಡೆಯಲಿದೆ ಎಂದು ಪೊಲೀಸ್ ಆಯುಕ್ತ ಎಂ.ಎನ್. ನಾಗರಾಜ ತಿಳಿಸಿದರು.

ಚುನಾವಣಾ ಪ್ರಕ್ರಿಯೆ ಸಂಪೂರ್ಣವಾಗಿ ಶಾಂತಿಯುತವಾಗಿ ನಡೆದು ಯಶಸ್ವಿಯಾಗಿದ್ದಕ್ಕೆ ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ದೀಪಾ ಚೋಳನ್ ಸಂತಸ ವ್ಯಕ್ತಪಡಿಸಿದ್ದಾರೆ.ಈ ಮಹತ್ವದ ಕಾರ್ಯಕ್ಕೆ ಸಹಕರಿಸಿದ ಜಿಲ್ಲೆಯ ಸಾರ್ವಜನಿಕರು, ಪೊಲೀಸ್, ಅರೆಸೇನಾಪಡೆ, ಜಿಲ್ಲಾ ಸ್ವೀಪ್ ಸಮಿತಿ, ಚುನಾವಣಾ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಅವರು ಕೃತಜ್ಞತೆ ಸಲ್ಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT