ಮಂಗಳವಾರ, ಆಗಸ್ಟ್ 20, 2019
25 °C

ಬಣವಿ ಕೊಲೆ ಪ್ರಕರಣ: ಬಾಂಗ್ಲಾದ ನುಸುಳುಕೋರ ಬಂಧನ

Published:
Updated:
Prajavani

ಹುಬ್ಬಳ್ಳಿ: ‘ರಾಜನಗರದ ಉದ್ಯಮಿ ವೆಂಕಣ್ಣ ಬಣವಿ ಅವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಬಾಂಗ್ಲಾ ಮೂಲದ ಮಾಣಿಕ್‌ ಅಲಿಯಾಸ್‌ ಇಮ್ರಾನ್‌ ಮುಲಾಲಿಫ್‌ ಎಂಬಾತನನ್ನು ದೆಹಲಿಯಲ್ಲಿ ಬಂಧಿಸಲಾಗಿದೆ’ ಎಂದು ಹುಬ್ಬಳ್ಳಿ ಧಾರವಾಡ ಪೊಲೀಸ್‌ ಕಮಿಷನರ್‌ ಎಂ.ಎನ್‌. ನಾಗಾರಾಜ ಹೇಳಿದರು.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಆರೋಪಿಯಿಂದ ಕೃತ್ಯಕ್ಕೆ ಬಳಸಿದ್ದ ಸ್ಕ್ರೂ ಡ್ರೈವರ್‌, ಕಟರ್‌ ಹಾಗೂ 4 ಗ್ರಾಂ ಬಂಗಾರದ ಚೈನ್‌ ವಶಪಡಿಸಿಕೊಳ್ಳಲಾಗಿದೆ’ ಎಂದರು.

‘ಜನವರಿ 22ರಂದು ಬಣವಿ ಅವರನ್ನು ಕೊಲೆ ಮಾಡಿ ₹11.15 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ಆರು ಜನರ ತಂಡ ದೋಚಿ ಪರಾರಿಯಾಗಿತ್ತು. ಅವರ ಪೈಕಿ ಆರೋಪಿ ಮಾಣಿಕ್‌ನನ್ನು ಬಂಧಿಸಲಾಗಿದೆ. ಅವನ ವಿರುದ್ಧ ರಾಜಸ್ಥಾನ, ಛತ್ತೀಸಗಡ, ಕೇರಳ ರಾಜ್ಯದ ವಿವಿಧ ಠಾಣೆಗಳಲ್ಲಿ ಕೊಲೆ, ದರೋಡೆ ಪ್ರಕರಣಗಳು ದಾಖಲಾಗಿರುವುದು ತಿಳಿದು ಬಂದಿದೆ. ತಿಹಾರ ಜೈಲಿನಲ್ಲಿ ಐದು ವರ್ಷ ಶಿಕ್ಷೆ ಅನುಭವಿಸಿರುವ ಕುರಿತೂ ಮಾಹಿತಿ ದೊರೆತಿದೆ’ ಎಂದು ತಿಳಿಸಿದರು.

‘ಈ ಹಿಂದೆ ಬಂಧಿಸಿದ್ದ ಬಾಂಗ್ಲಾದೇಶ ಮೂಲದ ಮೂವರು ಆರೋಪಿಗಳಿಗೆ ಮತ್ತು ಬಣವಿ ಕೊಲೆ ಪ್ರಕರಣಕ್ಕೆ ಯಾವುದೇ ಸಂಬಂಧವಿಲ್ಲ. ಅವರೆಲ್ಲ ಧಾರವಾಡದ ಕಲ್ಯಾಣ ನಗರದಲ್ಲಿ ನಡೆದ ಕೊಲೆ ಪ್ರಕರಣದ ಆರೋಪಿಗಳಾಗಿದ್ದಾರೆ. ಬಣವಿ ಕೊಲೆಗೂ ಸಂಬಂಧ ಇರಬಹುದು ಎಂದು ಸಂಶಯ ವ್ಯಕ್ತಪಡಿಸಲಾಗಿತ್ತು’ ಎಂದು ಸ್ಪಷ್ಟೀಕರಣ ನೀಡಿದರು.

ಡಿಸಿಪಿ ಡಿ.ಎಲ್‌. ನಾಗೇಶ, ಎಸಿಪಿಗಳಾದ ಎಚ್‌.ಕೆ. ಪಠಾಣ, ರವಿಕುಮಾರ ಗುಣಾರಿ, ಇನ್‌ಸ್ಪೆಕ್ಟರ್‌ ಜಗದೀಶ ಹಂಚಿನಾಳ ಇದ್ದರು.

Post Comments (+)