ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಚಿಗರಿ’ ಮಾರ್ಗ ಇನ್ನು ‘ಬಣ್ಣದ ಚಿಗರಿ’

ಹು–ಧಾ ಅವಳಿ ನಗರದ ಬಿಆರ್‌ಟಿಎಸ್‌ ಟರ್ಮಿನಲ್, ಕಾರಿಡಾರ್, ಫ್ಲೈಓವರ್ ಅಡಿ ಕಲಾಕೃತಿಗಳು
Last Updated 21 ಆಗಸ್ಟ್ 2022, 19:30 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಅವಳಿ ನಗರದ ನಡುವೆ ‘ಚಿಗರಿ’ ಬಸ್ ಸಂಚರಿಸುವ ಮೇಲ್ಸೇತುವೆಗಳು, ಕಾರಿಡಾರ್ ಮತ್ತು ಬಸ್‌ ನಿಲ್ದಾಣಗಳು ಇನ್ನು ವರ್ಣಮಯವಾಗಲಿವೆ. ಇವುಗಳನ್ನು ಕಲಾಕೃತಿ ಹಾಗೂ ಶಿಲ್ಪಕಲಾಕೃತಿಗಳಿಂದ ಅಲಂಕರಿಸಲಾಗುತ್ತಿದೆ.

ಇದಕ್ಕಾಗಿ ಬಿಆರ್‌ಟಿಎಸ್‌ ಕಂಪನಿಯು ನಗರ ಭೂ ಸಾರಿಗೆ ನಿರ್ದೇಶನಾಲಯದ (DULT) ಸಹಭಾಗಿತ್ವದಲ್ಲಿ ’ಬಣ್ಣದ ಚಿಗರಿ’ ಯೋಜನೆ ರೂಪಿಸಿದ್ದು ಕಲಾವಿನ್ಯಾಸಗೊಳಿಸಲು ಕಲಾವಿದರಿಗೆ ಆಹ್ವಾನ ನೀಡಿದೆ.

ಯೋಜನೆ ಉದ್ದೇಶ:

ಹುಬ್ಬಳ್ಳಿ–ಧಾರವಾಡ ಅವಳಿ ನಗರದ ನಡುವಿನ 'ಚಿಗರಿ’ ಬಸ್‌ ನಿಲ್ದಾಣಗಳು ಮತ್ತು ಇದನ್ನು ಜೋಡಿಸುವ ಪ್ರದೇಶಗಳನ್ನು ಇನ್ನಷ್ಟು ಚಂದಗೊಳಿಸುವ ಯೋಜನೆ ಇದಾಗಿದೆ. ಪ್ರಯಾಣಕ್ಕಾಗಿ ಬರುವ ಜನರಿಗೆ ನಿಲ್ದಾಣ ಅಥವಾ ಕಾರಿಡಾರ್‌ನಲ್ಲಿ ಆಹ್ಲಾದಕರ ಅನುಭವವನ್ನು ನೀಡುವುದು ಒಂದೆಡೆಯಾದರೆ, ಕಾರಿಡಾರ್‌ನ ಉದ್ದಕ್ಕೂ ಫ್ಲೈಓವರ್ ಅಡಿಯಲ್ಲಿ ಬಳಕೆಯಾಗದ ಸ್ಥಳಗಳನ್ನು ಚಟುವಟಿಕೆಯ ತಾಣಗಳಾಗಿ ಪುನರುಜ್ಜೀವನಗೊಳಿಸುವುದು ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ. ಈ ಸ್ಥಳಗಳಲ್ಲಿ ಚಿತ್ರ ಹಾಗೂ ಶಿಲ್ಪಕಲಾಕೃತಿಗಳಿಂದ ಮಹಾನಗರದ ಅಂದವನ್ನು ಹೆಚ್ಚಿಸಲಾಗುತ್ತಿದೆ ಎಂದು ಬಿಆರ್‌ಟಿಎಸ್‌ನ ಹಿರಿಯ ನಗರ ಯೋಜನೆ ವಿನ್ಯಾಸಕಿ ಪ್ರಿಯದರ್ಶಿನಿ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಮುಖ ಸ್ಥಳಗಳು:

‘ಬಣ್ಣದ ಚಿಗರಿ’ ಯೋಜನೆಯ ಭಾಗವಾಗಿ ಗುರುತಿಸಲಾದ ಐದು ಸಂಭಾವ್ಯ ತಾಣಗಳೆಂದರೆ ಹುಬ್ಬಳ್ಳಿಯ ಹೊಸೂರು ಪ್ರಾದೇಶಿಕ ಬಸ್ ಟರ್ಮಿನಲ್ ಮತ್ತು ಬಿಆರ್‌ಟಿಎಸ್‌ ಬಸ್‌ ನಿಲ್ದಾಣ, ಕಾರಿಡಾರ್ ಹಾಗೆಯೇ ಇಲ್ಲಿನ ಫ್ಲೈಓವರ್ ಅಡಿ.

ಇನ್ನು ಧಾರವಾಡದ ಪ್ರಮುಖ ಬಿಆರ್‌ಟಿಎಸ್ ಟರ್ಮಿನಲ್‌ (ಮಿತ್ರ ಸಮಾಜ ನಿಲ್ದಾಣ) ಪ್ರದೇಶ. ಫ್ಲೈಓವರ್ ಜಾಗದ ಅಡಿ. ಬಿಆರ್‌ಟಿಎಸ್‌ ಸಂಚರಿಸುವ ಮಾರ್ಗದ ಉದ್ದಕ್ಕೂ ಮೂರು ಬಸ್ ಹಾಗೂ ಮೇಲ್ಸೇತುವೆಗಳು ವರ್ಣಮಯವಾಗಲಿವೆ. ನವನಗರ, ಉಣಕಲ್ ಕೆರೆ, ಉಣಕಲ್ ಕ್ರಾಸ್ ಅನ್ನು ಒಳಗೊಂಡಿರುವ ಫ್ಲೈಓವರ್‌ಗಳ ಅಡಿಯಲ್ಲಿ ಬಳಕೆಯಾಗದ ಜಾಗದಲ್ಲಿ ಕಲಾಕೃತಿ ಹಾಗೂ ಶಿಲ್ಪ ಕಲಾಕೃತಿಗಳನ್ನು ಹಾಕಲಾಗುತ್ತದೆ.

ಕಲಾಕೃತಿಗಳು ನಮ್ಮ ಸ್ಥಳೀಯ ಪರಿಸರವನ್ನು ಬಿಂಬಿಸುವ ಹಾಗೂ ಅವುಗಳ ಗುಣಮಟ್ಟ ಹೆಚ್ಚಿಸುವ ಗುರಿ ಹೊಂದಿರಬೇಕು. ಅಂತಹ ಕಲಾಕೃತಿಗಳನ್ನು ಇಲ್ಲಿ ಅಳವಡಿಸಲಾಗುತ್ತದೆ. ಸ್ಥಳೀಯ ಇತಿಹಾಸ, ಭೌಗೋಳಿಕತೆ ಮತ್ತು ಸಮುದಾಯಕ್ಕೆ ಜನರನ್ನು ಸಂಪರ್ಕಿಸುವ ಸ್ಥಳೀಯ ವಿಷಯಗಳಿಗೆ ಮೊದಲ ಆದ್ಯತೆ. ಜತೆಗೆ ಜನರನ್ನು ಹೊಸ ಆಲೋಚನೆಗಳಿಗೆ ಒಯ್ಯುವ ಕಲಾಕೃತಿಗಳಿಗೂ ಇಲ್ಲಿ ಅವಕಾಶಗಳಿವೆ.

‘ಈ ಸ್ಥಳಗಳ ಸದ್ಬಳಕೆಗೆ ಸಾರ್ವಜನಿಕರನ್ನು ಒಳಗೊಳ್ಳುವಂತೆ ಮಾಡುವುದು, ಜತೆಗೆ ಸ್ಥಳೀಯ ಕಲಾವಿದರಿಂದ ಕಲಾಕೃತಿ ಮಾಡಿಸುವುದು ಮುಖ್ಯ ಉದ್ದೇಶ’
– ಭರತ್‌ ಎಸ್., ಪ್ರಧಾನ ವ್ಯವಸ್ಥಾಪಕ, ಬಿಆರ್‌ಟಿಎಸ್‌/ಕೆಎಸ್‌ಆರ್‌ಟಿಸಿ

ಕಲಾವಿದರಿಂದ ಆಹ್ವಾನ

ದೃಶ್ಯ/ಲಲಿತಕಲೆಗಳಲ್ಲಿ ಸ್ನಾತಕೋತ್ತರ ಪದವಿ/ಡಿಪ್ಲೊಮಾ ಹೊಂದಿರುವ ಕಲಾವಿದರು ಅರ್ಜಿ ಸಲ್ಲಿಸಬಹುದು. ಶಿಲ್ಪ, ಕೆತ್ತನೆ, ಮಾಡೆಲಿಂಗ್, ವೆಲ್ಡಿಂಗ್ ಅಥವಾ ರೂಪದಲ್ಲಿ ಮೂರು ಆಯಾಮದ ಶಿಲ್ಪಗಳು, ಇಲ್ಲದಿದ್ದರೆ ಸಾಂಕೇತಿಕ ಅಥವಾ ಅಮೂರ್ತ ಕೃತಿಗಳನ್ನು ಇಲ್ಲಿ ಅಳವಡಿಸಲಾಗುತ್ತಿದೆ. ಕಲಾವಿದರು ಎಲ್ಲ ಅಥವಾ ಯಾವುದಾದರೂ ಒಂದಕ್ಕೆ ಅರ್ಜಿ ಸಲ್ಲಿಸಬಹುದು ಆನ್‌ಲೈನ್‌ ನೋಂದಣಿಗೆ ಆ.21 ಕೊನೆಯ ದಿನ. https://dult.karnataka.gov.in/162/bannada-chigari/en

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT