ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧಾರವಾಡ: ಸ್ಮಾರ್ಟ್ ಸಿಟಿ ಅಂದಕ್ಕೆ ಬ್ಯಾನರ್ ಕಪ್ಪು ಚುಕ್ಕೆ

ತೆರವು ಮಾಡುವುದಷ್ಟೇ ಪಾಲಿಕೆ ಕೆಲಸ: ದಂಡ ವಿಧಿಸಲು ಇಲ್ಲ ಸ್ಪಷ್ಟ ನಿರ್ದೇಶನ
Last Updated 6 ಮಾರ್ಚ್ 2023, 16:47 IST
ಅಕ್ಷರ ಗಾತ್ರ

ಧಾರವಾಡ: ಸರ್ಕಾರವೇ ಪ್ಲಾಸ್ಟಿಕ್‌ ಫ್ಲೆಕ್ಸ್‌ ಮುದ್ರಣ ನಿಷೇಧಿಸಿದೆ. ಮಹಾನಗರ ಪಾಲಿಕೆ ಬ್ಯಾನರ್, ಫ್ಲೆಕ್ಸ್, ಬಂಟಿಂಗ್ಸ್ ಅಳವಡಿಕೆಗೆ ಅನುಮತಿಯೂ ನೀಡುತ್ತಿಲ್ಲ. ಆದರೂ ಎಲ್ಲೆಂದರಲ್ಲಿ ಫ್ಲೆಕ್ಸ್‌ಗಳು ಕಣ್ಣಿಗೆ ರಾಚುತ್ತಿವೆ. ಹೀಗೆ ಸ್ಮಾರ್ಟ್ ಸಿಟಿ ಹೋಗಿ ಬ್ಯಾನರ್, ಫ್ಲೆಕ್ಸ್‌ಗಳ ಸಿಟಿ ಆಗುತ್ತಿದ್ದು, ನಗರದ ಸೌಂದರ್ಯ ಹಾಳಾಗುತ್ತಿದೆ.

ಸ್ಮಾರ್ಟ್‌ ಸಿಟಿ ಎಂಬ ಹೆಗ್ಗಳಿಕೆ ಒಂದೆಡೆಯಾದರೆ, ನಗರದ ಸೌಂದರ್ಯಕ್ಕೆ ಧಕ್ಕೆ ತರುವ ಫ್ಲೆಕ್ಸ್‌, ಬ್ಯಾನರ್, ಬಂಟಿಂಗ್ಸ್ ಹಾವಳಿ ಬಗ್ಗೆ ಮಹಾನಗರ ಪಾಲಿಕೆ, ಜಿಲ್ಲಾಡಳಿತ ಕಣ್ಣು ಮುಚ್ಚಿಕೊಂಡಿವೆ. ತಮಗೂ ಅದಕ್ಕೂ ಸಂಬಂಧವೇ ಇಲ್ಲ ಎಂಬಂತೆ ವರ್ತಿಸುತ್ತಿವೆ. ಹೀಗಾಗಿ ಜನಸಾಮಾನ್ಯರು ಫ್ಲೆಕ್ಸ್‌ಗಳಿಗೆ ಕಡಿವಾಣ ಯಾವಾಗ ಎಂದು ಪ್ರಶ್ನಿಸಿದರೂ ಅಧಿಕಾರಿಗಳು ಜಾಣ ಮೌನ ತಾಳಿದ್ದಾರೆ.

ನಗರದ ಪ್ರಮುಖ ವೃತ್ತ, ರಸ್ತೆ ವಿಭಜಕಗಳ ಮೇಲೆ, ಬಿಆರ್‌ಟಿಎಸ್ ರಸ್ತೆಯಲ್ಲಿನ ಬ್ಯಾರಿಕೇಡ್ ಹೀಗೆ ನಗರದ ಹತ್ತಾರು ಪ್ರದೇಶದಲ್ಲಿ ಲಂಗು ಲಗಾಮು ಇಲ್ಲದೇ ಆಳೆತ್ತೆರದ ಫ್ಲೆಕ್ಸ್, ಬ್ಯಾನರ್‌ ಹಾಕಲಾಗುತ್ತಿದೆ. ಇನ್ನೆರೆಡು ತಿಂಗಳಲ್ಲಿ ವಿಧಾನಸಭಾ ಚುನಾವಣೆ ಇರುವುದರಿಂದ ನಗರದಲ್ಲಿ ನಿತ್ಯವೂ ಒಂದಿಲ್ಲೊಂದು ಪಕ್ಷದ ಕಾರ್ಯಕರ್ತರು ಫ್ಲೆಕ್ಸ್‌ ಅಳವಡಿಸುತ್ತಲೇ ಇದ್ದಾರೆ. ಕೆಲವು ಕಡೆ ಜಾಹೀರಾತು ತೆರವುಗೊಳಿಸದೆ ಹಾಗೇ ಬಿಟ್ಟಿದ್ದರಿಂದ ವಿದ್ಯುತ್‌ ಕಂಬಗಳಲ್ಲಿ ನೇತಾಡುತ್ತಿವೆ.

‘ಅಧಿಕಾರಿಗಳ ಕಣ್ಣು ತಪ್ಪಿಸಿ ರಾಜಕೀಯ ಪಕ್ಷಗಳ ಕಾರ್ಯಕರ್ತರು ರಾತ್ರೋರಾತ್ರಿ ನಗರದಲ್ಲಿ ಫ್ಲೆಕ್ಸ್, ಬ್ಯಾನರ್ ಅಳವಡಿಸುತ್ತಿರುವುದು ನಿರಂತರವಾಗಿದೆ. ಕ್ರಮ ಕೈಗೊಳ್ಳಬೇಕಾದ ಅಧಿಕಾರಿಗಳು ಸುಮ್ಮನೆ ಕುಳಿತಿದ್ದಾರೆ. ಇದಕ್ಕೆ ರಾಜಕೀಯ ಒತ್ತಡವೂ ಕಾರಣವಿರಬಹುದು’ ಎಂದು ಸ್ಥಳೀಯ ನಿವಾಸಿ ಅರುಣ ಅನುಮಾನ ವ್ಯಕ್ತಪಡಿಸುತ್ತಾರೆ.

‍ಪರಿಸರಕ್ಕೆ ಮಾರಕವಾಗಿರುವ ಫ್ಲೆಕ್ಸ್‌, ಬ್ಯಾನರ್‌ಗಳನ್ನು ಸರ್ಕಾರ ನಿಷೇಧಿಸಿದೆ. ಈ ಬಗ್ಗೆ ನ್ಯಾಯಾಲಯಗಳು ಸರ್ಕಾರವನ್ನು ಸಾಕಷ್ಟು ಬಾರಿ ಎಚ್ಚರಿಸುವ ಕೆಲಸ ಮಾಡಿವೆ. ಆದರೂ ಅನಧಿಕೃತವಾಗಿ ಫ್ಲೆಕ್ಸ್‌, ಬ್ಯಾನರ್‌ ಅಳವಡಿಸುವುದನ್ನು ನಿಲ್ಲಿಸಲು ಸಾಧ್ಯವಾಗಿಲ್ಲ. ಹಾಗಾದರೆ ಸರ್ಕಾರ, ನ್ಯಾಯಾಲಯಗಳು ಹೊರಡಿಸಿದ ಆದೇಶಕ್ಕೆ ಕಿಮ್ಮತ್ತಿಲ್ಲವೇ ಎಂಬ ಪ್ರಶ್ನೆ ಎದ್ದಿದೆ.

‘ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆಯು ಬ್ಯಾನರ್, ಫ್ಲೆಕ್ಸ್‌ ಅಳವಡಿಕೆಗೆ ಅನುಮತಿ ನೀಡುತ್ತಿಲ್ಲ. ಆದರೆ, ಸಾಕಷ್ಟು ಜಾಹೀರಾತು ಏಜೆನ್ಸಿಗಳು ಬ್ಯಾನರ್ ಅಳವಡಿಕೆ ಕಾರ್ಯ ಮಾಡುತ್ತಿದ್ದು, ಅವುಗಳಿಂದ ಪಾಲಿಕೆಗೆ ಆದಾಯ ಬರುತ್ತಿದೆ. 2022–23ನೇ ಸಾಲಿನಲ್ಲಿ ₹74 ಲಕ್ಷ ಜಾಹೀರಾತು ತೆರಿಗೆ ಸಂಗ್ರಹವಾಗಿದೆ. ಸಾಕಷ್ಟು ಜನ ರಾತ್ರೋರಾತ್ರಿ ಬ್ಯಾನರ್ ಅಳವಡಿಸುತ್ತಿದ್ದಾರೆ. ಅಂತಹಗಳನ್ನು ತೆರವುಗೊಳಿಸುವುದನ್ನು ಬಿಟ್ಟರೆ, ಗುರುತಿಸಿ ದಂಡ ವಿಧಿಸಲು ಸ್ಪಷ್ಟ ಆದೇಶ ಪಾಲಿಕೆಗಿಲ್ಲ. ಆದ್ದರಿಂದ ಸಮಸ್ಯೆ ಹೆಚ್ಚಾಗಿದೆ’ ಎಂದು ಮಹಾನಗರ ಪಾಲಿಕೆ ಹೆಚ್ಚುವರಿ ಆಯುಕ್ತ ಶಂಕರಾನಂದ ಬನಶಂಕರಿ ‘ಪ್ರಜಾವಾಣಿ’ಗೆ ತಿಳಿಸಿದರು.

ಎಲ್ಲ ಕಾಯ್ದೆ–ಕಾನೂನುಗಳು ಗೊತ್ತಿದ್ದವರೇ ಹೆಚ್ಚು ಸಾರ್ವಜನಿಕ ಆಸ್ತಿಗಳಲ್ಲಿ ಎಲ್ಲೆಂದರಲ್ಲಿ ಬ್ಯಾನರ್ ಅಳವಡಿಕೆ ಮಾಡುತ್ತಿದ್ದಾರೆ. ಅವರಿಗೆ ಬಿಸಿ ಮುಟ್ಟಿಸಬೇಕು ನಿಜ. ಆದರೆ, ದಂಡ ವಿಧಿಸಲು ಪಾಲಿಕೆಗೆ ಸ್ಪಷ್ಟ ನಿರ್ದೇಶನ ಇಲ್ಲ. ಆದ್ದರಿಂದ ಬ್ಯಾನರ್ ಹಾವಳಿ ಹೆಚ್ಚಾಗಿದೆ. ಅವುಗಳನ್ನು ತೆರವುಗೊಳಿಸುವುದಾಗಿ ಅವರು ತಿಳಿಸಿದರು.

ಸಾಮಾನ್ಯ ಎಂಬಂತಾಗಿರುವ ಬ್ಯಾನರ್ ಅಳವಡಿಕೆ

ಉಪ್ಪಿನಬೆಟಗೇರಿ: ಪ್ರಜಾಪ್ರತಿನಿಧಿಗಳ ಪೋಸ್ಟರ್‌ಗಳನ್ನು ಮನೆಗಳಿಗೆ, ಅಂಗಡಿಗಳ ಮುಂಭಾಗದಲ್ಲಿ ಅಂಟಿಸುವುದು ಹಾಗೂ ಪ್ರಮುಖ ರಸ್ತೆಗಳ ಪಕ್ಕ, ಬಸ್ ನಿಲ್ದಾಣ ಮತ್ತು ದೊಡ್ಡ ಕಟ್ಟಡದ ಮೇಲೆ ಬ್ಯಾನರ್ ಗಳನ್ನು ಹಾಕುವುದು ಸಾಮಾನ್ಯವಾಗಿದೆ. ಆದರೆ ಗ್ರಾಮೀಣ ವ್ಯಾಪ್ತಿಯಲ್ಲಿ ಹೆಚ್ಚಾಗಿ ಬಳಸುವುದು ಜಾತ್ರೆ, ಜನ್ಮದಿನ ಶುಭ ಕೋರಲು, ಪಂದ್ಯಾವಳಿಗಳ ಬ್ಯಾನರ್ ಹಾಗೂ ಸಾರ್ವತ್ರಿಕ ಚುನಾವಣೆಗಳಲ್ಲಿ ರಾಷ್ಟ್ರೀಯ ಮತ್ತು ಪ್ರಾದೇಶಿಕ ಪಕ್ಷಗಳು ತಮ್ಮ ಜನನಾಯಕರ ಕಟೌಟ್‌ಗಳಲ್ಲಿ ಸ್ಥಳೀಯ ಅಭ್ಯರ್ಥಿ ಜನಪ್ರಿಯತೆಯನ್ನು ಗಳಿಸಲು ನಾನಾ ರೀತಿಯಲ್ಲಿ ಜನರ ಮನವೊಲಿಸಲು ಕಸರತ್ತು ನಡೆಸಲು ಪ್ರಯತ್ನ ಸಾಗಿದೆ.

ಪಟ್ಟಣದ ಸೌಂದರ್ಯ ಹಾಳು ಮಾಡುತ್ತಿರುವ ಪೋಸ್ಟರ್

ಕುಂದಗೋಳ: ವಿಧಾನಸಭಾ ಚುನಾವಣೆ ಕೆಲವೇ ದಿನಗಳು ಬಾಕಿ. ಈ ಸಮಯದಲ್ಲಿ ಪಟ್ಟಣದಲ್ಲಿ ಫ್ಲೆಕ್ಸ್‌ ಬ್ಯಾನರ್‌ಗಳ ಹಾವಳಿ ಹೆಚ್ಚಾಗಿದೆ. ಇದು ಪಟ್ಟಣದ ಸೌಂದರ್ಯಕ್ಕೆ ಕುತ್ತು ತಂದಿದೆ. ಚುನಾವಣೆ ಸಮಿಪಿಸುತ್ತಿದ್ದಂತೆ ಪಟ್ಟಣದ ಪ್ರಮುಖ ‌ಬೀದಿಗಳಲ್ಲಿ ಫ್ಲೆಕ್ಸ್‌ ಬ್ಯಾನರ್‌ಗಳು ಎಲ್ಲೆಂದರಲ್ಲಿ ತಲೆ ಎತ್ತಿ ನಿಂತಿವೆ. ಇವುಗಳು ಜನಾಕ್ರೋಶಕ್ಕೆ ಕಾರಣವಾಗಿವೆ.

ರೈತ ಮುಖಂಡ ಶಂಕರಗೌಡ ದೊಡ್ಡಮನಿ ಪ್ರತಿಕ್ರಿಯಿಸಿ, ‘ಪಟ್ಟಣದಲ್ಲಿ ಅನುಮತಿ ಪಡೆಯದೇ ಬ್ಯಾನರ್‌ಗಳು ಮತ್ತು ಫ್ಲೆಕ್ಸ್‌ಗಳನ್ನು ಹಾಕುವುದರಿಂದ ಪಟ್ಟಣದ ಸೌಂದರ್ಯ ಹಾಳಾಗಿ ಪಟ್ಟಣ ಪಂಚಾಯ್ತಿಗೆ ಆದಾಯ ನಷ್ಟವಾಗುತ್ತಿದೆ. ಪಟ್ಟಣ ಪಂಚಾಯ್ತಿ ಅಧಿಕಾರಿಗಳು ಈ ಕುರಿತು ಇರುವ ನಿಯಮಗಳನ್ನು ಪಾಲಿಸಬೇಕು. ಸೌಂದರ್ಯಕ್ಕೆ ಧಕ್ಕೆಯಾಗದಂತೆ ಹಾಗೂ ಆದಾಯ ಬರುವಂತೆ ಕ್ರಮ ಕೈಗೊಳ್ಳಬೇಕು’ ಎಂದರು.

ಪ್ರಜಾವಾಣಿ ತಂಡ: ರಾಯಸಾಬ ಅನಸರಿ, ಗಣೇಶ ವೈದ್ಯ, ರಮೇಶ ಓರಣಕರ, ಗಿರೀಶ ಘಾಟಗೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT