ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವರ್ಗ ಭೇದ ತೊಡೆದು‌ ಹಾಕಿದ ಬಸವಣ್ಣ: ಶಾಂತಲಿಂಗ ಸ್ವಾಮೀಜಿ

ಎಪಿಎಂಸಿಯಲ್ಲಿ ಬಸವ ಜಯಂತಿ ಉತ್ಸವ; ಗಮನ ಸೆಳೆದ ಬಸವಣ್ಣನ ಪ್ರತಿಮೆಯ ಮೆರವಣಿಗೆ
Last Updated 3 ಮೇ 2022, 5:07 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಬಸವಣ್ಣನವರು ಈ ನಾಡಿನಲ್ಲಿ ಜನಿಸದಿದ್ದಿದ್ದರೆ ನಾವಿನ್ನೂ ವರ್ಣಾಶ್ರಮ ವ್ಯವಸ್ಥೆಯ ಕೂಪದಲ್ಲೇ ಇರಬೇಕಿತ್ತು. ಹೋರಾಟಗಾರರಾದ ಬಸವಣ್ಣ ಲಿಂಗ ಮತ್ತು ವರ್ಗ ಭೇದವನ್ನು ತೊಡೆದು‌ ಹಾಕಿದರು. ವಚನ ಸಾಹಿತ್ಯದ ಮೂಲಕ ಕನ್ನಡ ಭಾಷೆಗೆ ಮಹತ್ತದ ಕೊಡುಗೆ ನೀಡಿದರು’ ಎಂದು ಬೈರನಹಟ್ಟಿಯ ದೊರೆಸ್ವಾಮಿ ವಿರಕ್ತಮಠದ ಶಾಂತಲಿಂಗ ಸ್ವಾಮೀಜಿ ಹೇಳಿದರು.

ನಗರದ ಅಮರಗೋಳದ ಎಪಿಎಂಸಿ ಬಸವ ಉತ್ಸವ ಸಮಿತಿ, ಎಪಿಎಂಸಿ ಸಂಘ- ಸಂಸ್ಥೆಗಳು ಹಾಗೂ ಬಸವ ಸಮಿತಿ ಸೋಮವಾರ ಆಯೋಜಿಸಿದ್ದ ಬಸವ ಜಯಂತಿ ಹಾಗೂ ಮುಷ್ಠಿ ಅಕ್ಕಿ ಅಭಿಯಾನದಲ್ಲಿ ಮಾತನಾಡಿದ ಅವರು, ‘ಸಮಾಜದ ಆಗುಹೋಗುಗಳ ಚರ್ಚೆಗಾಗಿ ಬಸವಣ್ಣ ಅನುಭವ ಮಂಟಪ ಸ್ಥಾಪಿಸಿದ್ದರು. ಬದುಕಿಗೆ ದಾರಿದೀಪವಾಗಿರುವ ಅವರ ವಚನಗಳು ಸಾರ್ವಕಾಲಿಕವಾಗಿವೆ’ ಎಂದರು.

ಮೂರುಸಾವಿರ ಮಠದ ಗುರುಸಿದ್ಧರಾಜ ಯೋಗೀಂದ್ರ ಸ್ವಾಮೀಜಿ, ‘ನಗರದಲ್ಲಿ ಹುಚ್ಚನ ಮಠಕ್ಕೆ 300-400 ವರ್ಷಗಳ ಹಿಂದೆ ಮುಷ್ಟಿ ಅಕ್ಕಿ ನೀಡುತ್ತಿದ್ದರು. ಅದನ್ನು ಶ್ರೀಮಠದ ಅನ್ನದಾಸೋಹಕ್ಕೆ ಬಳಸಲಾಗುತ್ತಿತ್ತು. ಈಗ ಎಪಿಎಂಸಿ ವ್ಯಾಪಾರಸ್ಥರು ಮುಷ್ಟಿ ಅಕ್ಕಿ ಅಭಿಯಾನ ಆರಂಭಿಸಿದ್ದು ಶ್ಲಾಘನೀಯ’ ಎಂದರು.

‘ನನಗೆ ಮೂರುಸಾವಿರಮಠದ ಪೀಠಾಧ್ಯಕ್ಷ ಸ್ಥಾನವೇ ಸಾಕಾಗಿದೆ. ಇನ್ನು ಶಿವಯೋಗ ಮಂದಿರದ ಅಧ್ಯಕ್ಷ ಸ್ಥಾನ ಬಯಸುವುದು ಎಲ್ಲಿಂದ ಬಂತು.ನಾನು ಯಾವುದಕ್ಕೂ ಆಸೆಪಡುವವನಲ್ಲ. ಆದರೂ, ಕೆಲ ಮಠಾಧೀಶರು ಸೇರಿಕೊಂಡು ನನ್ನನ್ನು ಅಧ್ಯಕ್ಷನನ್ನಾಗಿ ಮಾಡಿದ್ದಾರೆ’ ಎಂದು ಹೇಳಿದರು.

ಶಾಸಕ ಅರವಿಂದ ಬೆಲ್ಲದ ಮಾತನಾಡಿ, ‘ದುಡಿಮೆಯ ಒಂದು ಪಾಲನ್ನು ಸಮಾಜದ ಒಳ್ಳೆಯ ಕೆಲಸಗಳಿಗೆ‌ ವಿನಿಯೋಗಿಸಬೇಕು’ ಎಂದು ಸಲಹೆ ನೀಡಿದರು.

ಕೆಎಲ್ಇ‌ ಸಂಸ್ಥೆಯ ನಿರ್ದೇಶಕ ಶಂಕರಣ್ಣ ಮುನವಳ್ಳಿ, ‘ಬಸವಣ್ಣನವರ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು’ ಎಂದರು.

ಎಪಿಎಂಸಿ ಆವರಣದ ಪ್ರಮುಖ ಬೀದಿಗಳಲ್ಲಿ ಬೆಳಿಗ್ಗೆ ಅಶ್ವಾರೂಢ ಬಸವಣ್ಣನವರ ಮೂರ್ತಿ ಹಾಗೂ ಎತ್ತುಗಳ ಮೆರವಣಿಗೆ ಸಕಲ ವಾದ್ಯ ಮೇಳದೊಂದಿಗೆ ನಡೆಯಿತು. ಎಪಿಎಂಸಿ ಕಾರ್ಯದರ್ಶಿ ಪ್ರಭಾಕರ ಅಂಗಡಿ ಮೆರವಣಿಗೆಗೆ ಚಾಲನೆ ನೀಡಿದರು. ಮುಷ್ಠಿ ಅಭಿಯಾನದ ಅಂಗವಾಗಿ ವ್ಯಾಪಾರಿಗಳು ಮೂರುಸಾವಿರ ಮಠ ಮತ್ತು ವಿರಕ್ತ ಮಠಕ್ಕೆ ಅಕ್ಕಿಯನ್ನು ದಾನವಾಗಿ ನೀಡಿದರು. ಪ್ರಭುದೇವ ಹುಗ್ಗಿ ಶೆಟ್ಟರ, ಕೃಷ್ಣ ಬಡಿಗೇರ ಹಾಗೂ ಸಂಗಡಿಗರು ವಚನ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.

ಎಪಿಎಂಸಿ ಸದಸ್ಯ ಚನ್ನು ಹೊಸಮನಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಎಪಿಎಂಸಿ ಅಧ್ಯಕ್ಷ ಬಸವನಗೌಡ ಚನ್ನಗೌಡರ, ಮಹಾನಗರ ಪಾಲಿಕೆ ಸದಸ್ಯ ರಾಜಣ್ಣ ಕೊರವಿ, ಮಲ್ಲಿಕಾರ್ಜುನ ಗುಂಡೂರ, ಅಜ್ಜ‍ಪ್ಪ ಬೆಂಡಿಗೇರಿ, ಅಜಯ ಕೆಸರಪ್ಪನವರ, ಬಸವರಾಜ ಯಕಲಾಸಪುರ, ಮುತ್ತಣ್ಣ ಜವಳಿ, ಮಲ್ಲು ಬುರಟ್ಟಿ, ರಾಜು ಶೀಲವಂತರ, ಮುತ್ತು ಪಾಟೀಲ, ರಾಜು ಶೆಟ್ಟರ್, ಸುರೇಶ ಹಬೀಬ, ಪ್ರಕಾಶ ಸಾಮ್ರಾಣಿ ಇದ್ದರು.ಜನಪದ ತಜ್ಞ ಡಾ. ರಾಮು ಮೂಲಗಿ ನಿರೂಪಣೆ ಮಾಡಿದರು.

‘ಬಸವ ತತ್ವಗಳ ಪ್ರಸಾರ ಅಗತ್ಯ’
ಹುಬ್ಬಳ್ಳಿ:
‘ಬಸವಣ್ಣನವರ ತತ್ವ– ಸಿದ್ದಾಂತಗಳು ಜಗತ್ತಿನಾದ್ಯಂತ ಪ್ರಸಾರವಾಗಿ, ಲಿಂಗಾಯತ ಧರ್ಮವು ಜಗತ್ತಿನ ಧರ್ಮಗಳ ಸಾಲಿನಲ್ಲಿ ನಿಲ್ಲುವಂತಾಗಬೇಕು’ ಎಂದು ಕೂಡಲಸಂಗಮ ಬಸವಧರ್ಮ ಪೀಠಾಧ್ಯಕ್ಷೆ ಡಾ. ಗಂಗಾಮಾತಾಜಿ ಹೇಳಿದರು.

ಬಸವ ಜಯಂತಿ ಅಂಗವಾಗಿ ಬಸವ ಕೇಂದ್ರದ ವತಿಯಿಂದ ವಿ.ಎಂ. ಕೊಟಗಿ ಬಸವ ಸಂಸ್ಕತಿ ಶಾಲೆಯಲ್ಲಿ ‘ಶರಣರ ಚಿಂತನೆಗಳು’ ವಿಷಯ ಕುರಿತು ಆಯೋಜಿಸಿದ್ದ ಅನುಭಾವ ಕಾರ್ಯಕ್ರಮದಲ್ಲಿ ಅವರು ಮಾತನಾಡಿ ‘ವಚನ ಸಾಹಿತ್ಯ ಓದಿಕೊಂಡರೆ ಮಾನವತ್ವದಿಂದ ದೈವತ್ವದ ಕಡೆಗೆ ಹೋಗುತ್ತೇವೆ’ ಎಂದರು.

ಸವದತ್ತಿ ಬಸವತತ್ವ ಪ್ರಸಾರಕರಾದ ಬಸವನಗೌಡ ಲಿಂಗಾಯತ, ನಿವೃತ್ತ ಪ್ರಾಧ್ಯಾಪಕಿ ಡಾ. ಸ್ನೇಹಾ ಭೂಸನೂರ, ಬಸವ ಕೇಂದ್ರದ ಅಧ್ಯಕ್ಷ ಡಾ. ಬಿ.ವಿ. ಶಿರೂರ,ಉಪಾಧ್ಯಕ್ಷ ಪ್ರೊ.ಜಿ.ಬಿ. ಹಳ್ಳಾಳ, ಬಸವ ಪರಿಸರ ಸಂರಕ್ಷಣಾ ಸಮಿತಿ ಕಾರ್ಯದರ್ಶಿ ಸುರೇಶ ಡಿ. ಹೊರಕೇರಿ,ಅಕ್ಕ ನಾಗಲಾಂಬಿಕಾ, ರಾಜು ಅಣೆಪ್ಪನವರ, ಬಿ.ಎಲ್. ಲಿಂಗಶೆಟ್ಟರ, ಪ್ರೊ. ಎಸ್.ಸಿ. ಇಂಡಿ, ವೈ.ವಿ. ಗಜಕೋಶ, ಬಸವರಾಜ ಯಕಲಾಸಪೂರ, ಎಂ.ಬಿ. ಕಟ್ಟಿ, ಅನೀಲ ಲಿಂಗಶೆಟ್ಟರ, ಕಲ್ಲಪ್ಪ, ಸುನೀಲ, ಉಮಾ, ದಾನಮ್ಮ, ನೀಲಾಂಬಿಕಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT