ಸೋಮವಾರ, ಸೆಪ್ಟೆಂಬರ್ 20, 2021
27 °C

ಪಾಲಿಕೆಯ ಕಾಂಗ್ರೆಸ್‌ ನೂತನ ಸದಸ್ಯರಿಗೆ ಸನ್ಮಾನ: ಸವದಿ ಕಿವಿಮಾತು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ನಾವು ನಮ್ಮ ಧರ್ಮವನ್ನು ಗೌರವಿಸಿ, ಪೂಜಿಸುವಂತೆಯೇ ಜನರ ಸಂಕಷ್ಟ ಹಾಗೂ ಸಮಸ್ಯೆಗಳಿಗೆ ಕಿವಿಯಾಗುವ, ಅವುಗಳನ್ನು ಪರಿಹರಿಸುವ ಗುಣ ಮೈಗೂಡಿಸಿಕೊಳ್ಳಬೇಕು. ಜನರ ಮಾತಿಗೆ ಬೆಲೆ ಕೊಡಬೇಕು ಎಂದು ಮಾಜಿ ಸಂಸದ ಹಾಗೂ ಕಾಂಗ್ರೆಸ್‌ ಮುಖಂಡ ಐ.ಜಿ. ಸನದಿ ಹೇಳಿದರು.

ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಆಯ್ಕೆಯಾದ ಹೊಸ ಸದಸ್ಯರಿಗೆ ನಗರದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸನ್ಮಾನ ಮತ್ತು ವಿಶ್ವಪ್ರಕಾಶ ಉಳ್ಳಾಗಡ್ಡಿಮಠ ಅವರ 10ನೇ ಪುಣ್ಯಸ್ಮರಣೆ ಸಮಾರಂಭದಲ್ಲಿ ಮಾತನಾಡಿದ ಅವರು ‘ಜನ ವಿಶ್ವಾಸವಿಟ್ಟು ನಿಮ್ಮನ್ನು ಆಯ್ಕೆ ಮಾಡಿದ್ದಾರೆ. ಅವರ ಸಮಸ್ಯೆಗಳನ್ನು ಪರಿಹರಿಸಬೇಕು. ಅಧಿಕಾರ ಹುಡುಕಿಕೊಂಡು ಬರುವುದು ದರ್ಪ ತೋರಲು ಅಲ್ಲ, ಜನಸೇವೆ ಮಾಡಲು ಎನ್ನುವುದನ್ನು ಎಲ್ಲರೂ ನೆನಪಿನಲ್ಲಿಟ್ಟುಕೊಳ್ಳಬೇಕು’ ಎಂದು ಕಿವಿಮಾತು ಹೇಳಿದರು.

‘ಅಭಿವೃದ್ಧಿ ಕಾರ್ಯಗಳ ಮೂಲಕ ಜನರ ಮನಸ್ಸು ಗೆಲ್ಲುವ ಕೆಲಸ ಮಾಡಿ. ಮತದಾರರೇ ದೊಡ್ಡವರು ಎನ್ನುವ ವಾಸ್ತವಿಕತೆಯನ್ನು ಅರ್ಥಮಾಡಿಕೊಳ್ಳಬೇಕು. ಸಮಸ್ಯೆಗಳ ಬಗ್ಗೆ ಪ್ರಾಮಾಣಿಕವಾಗಿ ಚರ್ಚೆ ಮಾಡಿ, ವಿನಾಕಾರಣ ಪ್ರಚಾರದ ಗೀಳಿಗಾಗಿ ಗದ್ದಲ ಮಾಡಿಕೊಳ್ಳಬೇಡಿ. ಅಧಿಕಾರಿಗಳ ಪ್ರೀತಿ ಸಂಪಾದಿಸಿ ಅವರ ಮನವೊಲಿಸಿ  ನಗರದ ಅಭಿವೃದ್ಧಿಗೆ ಶ್ರಮಿಸಬೇಕು’ ಎಂದರು.

ಮೂರುಸಾವಿರ ಮಠದ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಮಾತನಾಡಿ ‘ವಿಶ್ವಪ್ರಕಾಶ ಉಳ್ಳಾಗಡ್ಡಿಮಠ ಅವರು ಸಾಮಾಜಿಕವಾಗಿ ಎಲ್ಲರೊಂದಿಗೆ ಬೆರೆಯುತ್ತಿದ್ದರು. ಸುಂದರವಾಗಿ ಸಾಮಾಜಿಕ ಬದುಕು ರೂಪಿಸಿಕೊಂಡಿದ್ದರು. ಮುಕ್ತಿ ಮಂದಿರದ ರಂಭಾಪುರಿ ಶ್ರೀಗಳ ಪರಮ ಶಿಷ್ಯರಾಗಿದ್ದರು. ಉತ್ತಮ ನಾಯಕತ್ವ ಹೊಂದಿದ್ದ ಅವರು ಈಗ ಇದ್ದಿದ್ದರೆ ಉನ್ನತ ಸ್ಥಾನ ಹೊಂದಿರುತ್ತಿದ್ದರು’ ಎಂದರು.

ಕಾಂಗ್ರೆಸ್‌ನಿಂದ ಪಾಲಿಕೆ ಸದಸ್ಯರಾಗಿ ಚುನಾಯಿತರಾದ ಶ್ರುತಿ ಚಲವಾದಿ, ಪ್ರಕಾಶ ಕುರಹಟ್ಟಿ, ಸಂದೀಲ್‌ಕುಮಾರ ಎಸ್‌. ಆರೀಫ ಭದ್ರಾಪುರ, ಇಕ್ಬಾಲ್‌ ನವಲೂರ ಮತ್ತು ಸುವರ್ಣ ಕಲ್ಲಕುಂಟ್ಲ ಅವರನ್ನು ಸನ್ಮಾನಿಸಯಾಯಿತು.

ನವನಗರದ ಕಾಶಿಮಠದ ರಾಜಶೇಖರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಕಾಂಗ್ರೆಸ್‌ನ ಜಿಲ್ಲಾ ಘಟಕದ ಅಧ್ಯಕ್ಷ ಅಲ್ತಾಫ ಹಳ್ಳೂರ, ಮುಖಂಡರಾದ ರಾಜಶೇಖರ ಮೆಣಸಿನಕಾಯಿ, ಬಂಗಾರೇಶ ಹಿರೇಮಠ, ಪಾರಸಮಲ್ ಜೈನ್, ಶರಣಪ್ಪ ಕೊಟಗಿ, ರಜತ ಉಳ್ಳಾಗಡ್ಡಿಮಠ, ಶಹಜಮಾನ ಮುಜಾಹಿದ, ಮಹಾಂತೇಶ ಗುಡೇನಕಟ್ಟಿ ಪಾಲ್ಗೊಂಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.