ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉದ್ಯೋಗಿ ಬದಲು ಉದ್ಯಮಿಯಾಗಲಿ

ಕುಟುಂಬ ನಿರ್ವಹಣೆ ಉದ್ಯಮ ಕಾರ್ಯಾಗಾರ; ಉದ್ಯಮಿ ಉಲ್ಲಾಸ ಕಾಮತ್‌ ಸಲಹೆ
Last Updated 15 ಮಾರ್ಚ್ 2023, 9:16 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಮಕ್ಕಳನ್ನು ಉದ್ಯೋಗಿಯನ್ನಾಗಿ ಮಾಡುವ ಬದಲು, ಉದ್ಯಮಿಯನ್ನಾಗಿ ಮಾಡಬೇಕು. ಆಗ ಅವರೇ ಅನೇಕರಿಗೆ ಉದ್ಯೋಗ ನೀಡುವ ಉದ್ಯೋಗದಾತರಾಗುತ್ತಾರೆ’ ಎಂದು ಎಫ್ಐಸಿಸಿಐ ರಾಜ್ಯ ಘಟಕದ ಅಧ್ಯಕ್ಷ, ಉದ್ಯಮಿ ಉಲ್ಲಾಸ ಕಾಮತ್ ಹೇಳಿದರು.

ನಗರದ ಕ್ಯೂಬಿಕ್ಸ್ ಹೋಟೆಲ್‌ನಲ್ಲಿ ಬುಧವಾರ ನಡೆದ ‘ಕುಟುಂಬ ನಿರ್ವಹಣೆ ಉದ್ಯಮ ಕಾರ್ಯಾಗಾರ’ ಉದ್ಘಾಟಿಸಿ ಅವರು ಮಾತನಾಡಿದರು. ‘ಕೈಗಾರಿಕಾ ಕ್ಷೇತ್ರದ ಅಭಿವೃದ್ಧಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹೊಸ ಹೊಸ ಯೋಜನೆಗಳನ್ನು ತರುತ್ತಿದ್ದು, ಅವುಗಳನ್ನು ಸದುಪಯೋಗಪಡಿಸಿಕೊಳ್ಳಬೇಕು. ಕೈಗಾರಿಕೆಗಳು ಬೆಳೆದರೆ ದೇಶದ ಆರ್ಥಿಕ ಸ್ಥಿತಿಗತಿ ಪ್ರಗತಿಯಾಗುವುದಲ್ಲದೆ, ವ್ಯಕ್ತಿಗತ ಆದಾಯವೂ ಹೆಚ್ಚಳವಾಗಲಿದೆ’ ಎಂದರು.

‘ಮುಂದಿನ 10 ವರ್ಷಗಳಲ್ಲಿ ವಿಶ್ವದಲ್ಲಿಯೇ ಹುಬ್ಬಳ್ಳಿ 20 ಅಗ್ರಗಣ್ಯ ನಗರಗಳಲ್ಲಿ ಒಂದಾಗಲಿದೆ. ಹೊಸ ಉದ್ಯಮಗಳು ನಗರದಲ್ಲಿ ತಲೆ ಎತ್ತಲಿದ್ದು, ಈಗಾಗಲೇ ಬೇರೆಡೆಯ ಉದ್ದಿಮೆಗಳು ಸಹ ಇಲ್ಲಿ ಹೂಡಿಕೆ ಮಾಡಲು ಮುಂದೆ ಬರುತ್ತಿದ್ದಾರೆ. ಉದ್ಯಮ ವಲಯದಲ್ಲಿ ಪ್ರಗತಿಹೊಂದಲು ಸಾಕಷ್ಟು ಅವಕಾಶಗಳಿದ್ದು, ಪಾಲಕರು ಅದನ್ನು ಮಕ್ಕಳಿಗೆ ಮನವರಿಕೆ ಮಾಡಿಕೊಡಬೇಕು. ಬೇರೆಡೆ ತೆರಳಿ ಉದ್ಯೋಗಿಯಾಗಿ ಸಂಬಳ ಪಡೆಯುವ ಬದಲು, ನಿಮ್ಮದೇ ಉದ್ಯಮವನ್ನು ಇನ್ನಷ್ಟು ಅಭಿವೃದ್ಧಿಪಡಿಸಿ ಅವರು ಇನ್ನೊಬ್ಬರಿಗೆ ಸಂಬಳ ನೀಡುವಂತಾಗಬೇಕು. ಕುಟುಂಬ ವ್ಯವಹಾರದಲ್ಲಿ ಭಾವನಾತ್ಮಕ ಸಂಬಂಧ ಅಡಗಿದೆ’ ಎಂದರು.

‘ಸರ್ಕಾರ ಮತ್ತು ಬ್ಯಾಂಕ್‌ಗಳು ಕೈಗಾರಿಕೆಗಳ ಪರವಾಗಿದೆ. ಉದ್ಯಮ ಸ್ಥಾಪಿಸಬೇಕೆಂದರೆ ಇತ್ತೀಚೆಗೆ ಶೀಘ್ರವಾಗಿ ಅನುಮತಿ ಮತ್ತು ಸಾಲಸೌಲಭ್ಯಗಳನ್ನು ಒದಗಿಸುತ್ತವೆ. ನೂತನ ಕೈಗಾರಿಕಾ ನೀತಿ ಸಹ ಉದ್ಯಮಿಗಳ ಪರವಾಗಿಯೇ ಇದೆ’ ಎಂದು ಹೇಳಿದರು.

ಎಂಎಸ್ಎಂಇ ಹೆಚ್ಚುವರಿ ನಿರ್ದೇಶಕ ಎಚ್.ಎಂ. ಶ್ರೀನಿವಾಸ, ‘ದೇಶದಲ್ಲಿ ಕೃಷಿ ವಲಯದ ನಂತರ ಹೆಚ್ಚು ಪ್ರಾಧಾನ್ಯತೆ ಪಡೆದಿದ್ದು ಕೈಗಾರಿಕಾ ವಲಯ. ಉತ್ತರ ಕರ್ನಾಟಕದ 13 ಜಿಲ್ಲೆಗಳಲ್ಲಿ ಸಾಕಷ್ಟು ನೈಸರ್ಗಿಕ ಸಂಪತ್ತುಗಳಿದ್ದು, ಉದ್ಯಮ ಕ್ಷೇತ್ರಕ್ಕೆ ಸಮರ್ಥವಾಗಿ ಬಳಸಿಕೊಳ್ಳಬೇಕಿದೆ. ಕೆಐಎಡಿಬಿ ಅಭಿವೃದ್ಧಿಪಡಿಸಿದ 161 ಕೈಗಾರಿಕಾ ಪ್ರದೇಶಗಳಲ್ಲಿ 60 ಪ್ರದೇಶಗಳು ಉತ್ತರ ಕರ್ನಾಟಕದಲ್ಲಿವೆ. ಕಳೆದ ಬಜೆಟ್‌ನಲ್ಲಿ ಮಖ್ಯಮಂತ್ರಿ ಒಂಬತ್ತು ಕೈಗಾರಿಕಾ ವಸಹಾತು ಪ್ರದೇಶಗಳನ್ನು ಘೋಷಿಸಿದ್ದು, ಅವುಗಳಲ್ಲಿ ಆರು ಪ್ರದೇಶ ಈ ಭಾಗದಲ್ಲಿಯೇ ಇವೆ’ ಎಂದರು.

ಎಸ್.ಬಿ.ಐ ಸಹಾಯಕ ಪ್ರಧಾನ ವ್ಯವಸ್ಥಾಪಕ ಉಪ್ಪು ರವಿ, ಕೆಸಿಸಿಐ ಅಧ್ಯಕ್ಷ ವಿನಯ ಜವಳಿ, ಪ್ರವೀಣ ಅಗಡಿ, ಅನಿಲ ದೇಸಾಯಿ ಇದ್ದರು.

‘ವಿದ್ಯಾರ್ಥಿಗಳಲ್ಲಿ ನಿರಾಸಕ್ತಿ’

‘ಉದ್ಯಮ ಸ್ಥಾಪನೆಗೆ ಸಾಕಷ್ಟು ಅವಕಾಶ, ಸೌಲಭ್ಯಗಳಿದ್ದರೂ ನಿರೀಕ್ಷಿತ ಪ್ರಮಾಣದಲ್ಲಿ ಅಭಿವೃದ್ಧಿಯಾಗುತ್ತಿಲ್ಲ. ಶೇ 1ರಿಂದ ಶೇ 2ರಷ್ಟು ವಿದ್ಯಾರ್ಥಿಗಳು ಮಾತ್ರ ಈ ಕ್ಷೇತ್ರಕ್ಕೆ ಬರುತ್ತಿದ್ದಾರೆ. ಕುಟುಂಬದಲ್ಲಿನ ಉದ್ಯಮ ವ್ಯವಹಾರ ಬಾಲ್ಯದಿಂದಲೇ ನೋಡುತ್ತ ಬಂದಿರುವುದರಿಂದ ಬಹುಶಃ ಅವರು ಬೇಸತ್ತಿರಬಹುದು. ಪಾಲಕರು ಮತ್ತು ಸಂಘ–ಸಂಸ್ಥೆಗಳು ಅವರನ್ನು ಉದ್ಯಮದೆಡೆಗೆ ಸೆಳೆಯುವ ಪ್ರಯತ್ನ ಮಾಡಬೇಕು’ ಎಂದು ಎಂಎಸ್ಎಂಇ ಹೆಚ್ಚುವರಿ ನಿರ್ದೇಶಕ ಎಚ್.ಎಂ. ಶ್ರೀನಿವಾಸ ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT