ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊಬೈಲ್ ಬದಿಗಿಡ್ರಿ; ಮಕ್ಕಳಿಗೆ ಟೈಂ ಕೊಡ್ರಿ: ಡಾ.ಆನಂದ ಪಾಂಡುರಂಗಿ ಸಲಹೆ

Last Updated 30 ಜನವರಿ 2019, 5:53 IST
ಅಕ್ಷರ ಗಾತ್ರ

‘ಪ್ರಜಾವಾಣಿ’ ಹುಬ್ಬಳ್ಳಿ ಕಚೇರಿಯಲ್ಲಿ ಮಂಗಳವಾರ ಆಯೋಜಿಸಿದ್ದ ‘ಫೋನ್‌–ಇನ್‌’ ಕಾರ್ಯಕ್ರಮದಲ್ಲಿ ಹತ್ತಾರು ಸಮಸ್ಯೆಗಳ ಬಗ್ಗೆ ನೂರಾರು ಓದುಗರ ಫೋನ್‌ ಕರೆಗಳಿಗೆ ಮನೋರೋಗ ತಜ್ಞ ಡಾ.ಆನಂದ ಪಾಂಡುರಂಗಿಸಾವಧಾನವಾಗಿ ಉತ್ತರಿಸಿದರು.

---

ಹದಿಹರೆಯ ಭಾವನಾತ್ಮಕವಾಗಿ ಉತ್ತುಂಗದಲ್ಲಿ ಹಾಗೂ ಮಾನಸಿಕವಾಗಿ ತುಮುಲದಲ್ಲಿರುವ ವಯಸ್ಸು. ಅಂತಹ ಸಮಯದಲ್ಲಿ ಪಾಲಕರು ಮಕ್ಕಳ ಮನಸ್ಸು ಅರಿತು, ಪ್ರೀತಿ , ಮಮತೆ, ಅಂತಃಕರಣ ಪೂರ್ವಕವಾಗಿ ಮಾರ್ಗದರ್ಶನ ನೀಡಬೇಕು, ಅವರೊಂದಿಗೆ ಹೆಚ್ಚು ಸಮಯ ಕಳೆಯಬೇಕು, ಹೀಗೆ ಮಾಡಿದಲ್ಲಿ ಯಾವ ಮಕ್ಕಳು ಕೂಡ ಹಾದಿ ತಪ್ಪುವ ಸಂಭವ ಇರುವುದಿಲ್ಲ ಎನ್ನುತ್ತಾರೆ ಹಿರಿಯ ಮನೋರೋಗ ತಜ್ಞ ಡಾ.ಆನಂದ ಪಾಂಡುರಂಗಿ.

ಹಾದಿ ತಪ್ಪಿರುವ ಬಹಳಷ್ಟು ಮಕ್ಕಳನ್ನು ಆಪ್ತ ಸಮಾಲೋಚನಾ ಕೇಂದ್ರಕ್ಕೆ ಕರೆತರುತ್ತಾರೆ. ಆದರೆ ಅಂತಹ ಪುಟ್ಟ ಮಕ್ಕಳಿಗಿಂತ ಪೋಷಕರಿಗೇ ಹೆಚ್ಚಿನ ತಿಳಿವಳಿಕೆ, ಅರಿವು ಮೂಡಿಸುವ ಕೆಲಸ ಆಗಬೇಕಿರುತ್ತದೆ ಎನ್ನುವುದು ವೈದ್ಯರ ಅಭಿಮತ.

ಬಾಲ್ಯದಿಂದ ಪ್ರೌಢಾವಸ್ಥೆಗೆ ಬರುವ ಸಮಯದಲ್ಲಿ ಹಾರ್ಮೋನುಗಳಲ್ಲಿ ಬದಲಾವಣೆಯಾಗುತ್ತದೆ. ಹದಿಹರೆಯದ ವಯಸ್ಸು ಅತ್ಯಂತ ಚಟುವಟಿಕೆಯ ಕಾಲ.ಮಕ್ಕಳಿಗೆ ಸಾವಿರಾರು ಕನಸು ಹುಟ್ಟಿಕೊಳ್ಳುವ ಸಮಯ. ಅವರಿಗೆ ಸಹಜವಾಗಿ ಬೆಳೆಯಲು ಅನುವು ಮಾಡಿಕೊಡಬೇಕು. ಅವರನ್ನು ಅತಿಯಾಗಿ ಮುದ್ದುಮಾಡದೇ, ಒತ್ತಡ ಹೇರದೇ ಅವರ ಭಾವನೆ,ಕನಸು ಆಲಿಸಿ ಸರಿಯಾದ ದಾರಿಯಲ್ಲಿ ಸಾಗುವಂತೆ ಮಾರ್ಗದರ್ಶನ ನೀಡುವುದು ಪಾಲಕರ ಕರ್ತವ್ಯ. ಅಲ್ಲಿ ಎಡವಿದರೆ ಮುಂದೆ ಮಕ್ಕಳು ದಾರಿ ತಪ್ಪುವ ಸಂಭವ ಜಾಸ್ತಿ ಎನ್ನುತ್ತಾರೆ ಮನೋವೈದ್ಯರು.

ಮಕ್ಕಳಿಗೆ ಪುಸ್ತಕದ ಬಗ್ಗೆ ಆಸಕ್ತಿ ಹುಟ್ಟಿಸಿ, ಎಲ್ಲದಕ್ಕೂ ಡಿಜಿಟಲ್‌ ಅವಲಂಬನೆ ಬೇಡ. ಅತಿಯಾದ ತಂತ್ರಜ್ಞಾನದ ಅವಲಂಬನೆ ನಮ್ಮ ಕ್ರಿಯಾಶೀಲತೆ, ಬುದ್ಧಿಶಕ್ತಿ ಹಾಗೂ ಯೋಚನಾಶಕ್ತಿಯನ್ನು ಕುಂಠಿತಗೊಳಿಸುತ್ತದೆ. ಮಕ್ಕಳು ಅತಿಯಾಗಿ ಮೊಬೈಲ್‌, ಕಂಪ್ಯೂಟರ್‌ ಬಳಸದಂತೆ ಮುನ್ನೆಚ್ಚರಿಕೆ ವಹಿಸಬೇಕು ಜತಗೆ ಪಾಲಕರು ಕೂಡ ಎನ್ನುತ್ತಾರೆ ಅವರು.

ಯುವ ಜನಾಂಗ ಮೊಬೈಲ್ ಜಾಲದಲ್ಲಿ ಸಿಲುಕಿ ವಿಲ ವಿಲ ಒದ್ದಾಡುತ್ತಿದೆ. ‘ಡಿಜಿಟಲ್‌ ಮೋಹ’ ಮದ್ಯವ್ಯಸನದಷ್ಟೇ ಅಪಾಯಕಾರಿ. ಇದು ದೊಡ್ಡವರಿಗೂ ಅಷ್ಟೇ, ಮಕ್ಕಳು, ಯುವಜನರಿಗೂ ಅಷ್ಟೇ ಮಾರಕ. ಕುಟುಂಬದಲ್ಲಿ ಪರಸ್ಪರ ಸಂವಹನ ಸಾಧ್ಯವಾಗುತ್ತಿಲ್ಲ. ದೊಡ್ಡವರು ಮಕ್ಕಳಿಗೆ ತಮ್ಮ ಸಮಯ ಕೊಡುತ್ತಿಲ್ಲ. ಹದಿಹರೆಯದವರು ದಾರಿತಪ್ಪುತ್ತಿದ್ದಾರೆ. ಒಟ್ಟಿನಲ್ಲಿ ಈ ಎಲ್ಲ ಸಮಸ್ಯೆಗಳಿಗೆ ಈಗಿನ ಅತಿಯಾದ ತಂತ್ರಜ್ಞಾನದ ಬಳಕೆಯೂ ಕಾರಣ. ಹೀಗಾಗಿ ದುಷ್ಪರಿಣಾಮ ಬೀರುವ ಈ ಮಾಯಾಜಾಲದಿಂದ ಹೊರಬರುವುದು ಇಂದಿನ ತುರ್ತು ಅಗತ್ಯ ಎಂದರು.

ಎಸ್‌ಎಸ್‌ಎಲ್‌ಸಿ, ಪಿಯುಸಿ ಹಂತದ ಮಕ್ಕಳ ಮನಸ್ಸು ತಂಬಾ ಸೂಕ್ಷ್ಮವಾಗಿರುತ್ತದೆ. ಈ ಹಂತದಲ್ಲಿ ಅವರು ತುಂಬ ಬೇಗ ಕೆಟ್ಟದ್ದಕ್ಕೆ ಅಂಟಿಕೊಳ್ಳುವ ಸಾಧ್ಯತೆ ಇರುತ್ತದೆ.ನಿಮ್ಮ ಮಗು ಶಾಲೆಯಿಂದ ಬಂದು ಬಾಗಿಲು ಹಾಕಿ ಕುಳಿತುಕೊಳ್ಳುತ್ತಿದೆ, ಮನೆಯವರೊಟ್ಟಿಗೆ ಬೆರೆಯುತ್ತಿಲ್ಲ, ಮನೆಗೆ ಬರುವ ಸಂಬಂಧಿಕರು, ಬಂಧುಗಳೊಂದಿಗೆ ಸರಿಯಾಗಿ ಮಾತನಾಡುತ್ತಿಲ್ಲ ಎಂದಾದರೆ, ನೀವು ಮಕ್ಕಳನ್ನು ಆಪ್ತ ಸಮಾಲೋಚಕರ ಬಳಿ ಕರೆದೊಯ್ಯುವ ಅಗತ್ಯವಿದೆ ಎಂದೇ ಅರ್ಥ.

ನಿಮ್ಮ ಮಗುವಿನ ನಡವಳಿಕೆಯಲ್ಲಿ ಅಲ್ಪ–ಸ್ವಲ್ಪ ಏರುಪೇರು ಕಂಡಾಕ್ಷಣ ಆಪ್ತಸಮಾಲೋಚಕರನ್ನು ಕಂಡು ಸಲಹೆ ಪಡೆದರೆ, ಮುಂದಿನ ಸಮಸ್ಯೆ ತಪ್ಪಿಸಬಹುದು. ಆದರೆ, ನಮ್ಮ ಬಳಿ ಬಂದಾಗ ಮಗು ಬಹುತೇಕ ಖಿನ್ನತೆಯಲ್ಲಿ ಇರುತ್ತವೆ. ಅದು ಆಗಬಾರದು. ಸಮಸ್ಯೆ ಕಂಡ ಕೂಡಲೇ ಮಕ್ಕಳನ್ನು ಸಮೀಪದ ಆಪ್ತ ಸಮಾಲೋಚಕರ ಬಳಿಗೆ ಕರೆದೊಯ್ಯಬೇಕು ಎಂದು ಈ ಕಾರ್ಯಕ್ರಮದ ಮೂಲಕ ಮನವಿ ಮಾಡುತ್ತೇನೆ ಎಂದರು.

ಹಲವು ಜಿಲ್ಲೆಗಳಿಂದ ಕರೆ ಮಾಡಿದ ಓದುಗರ ಪ್ರಶ್ನೆಗಳು ಹಾಗೂ ಅವುಗಳಿಗೆ ಡಾ.ಆನಂದ ಪಾಂಡುರಂಗಿ ಅವರು ನೀಡಿದ ಉತ್ತರಗಳು ಇಲ್ಲಿವೆ

*ರೇಷ್ಮಾ, ಗೃಹಿಣಿ, ಇನಾಂಹೊಂಗಲ: 4 ಮತ್ತು 5ನೇ ತರಗತಿ ಓದುತ್ತಿರುವ ನಮ್ಮ ಇಬ್ಬರು ಮಕ್ಕಳಿಗೆ ಓದಿನಲ್ಲಿಆಸಕ್ತಿ ಇದ್ದಂತಿಲ್ಲ. ಪರಿಹಾರವೇನು ?

ಡಾ.ಆನಂದ ಪಾಂಡುರಂಗಿ: ನಿಮ್ಮ ಮಕ್ಕಳು ಈಗಷ್ಟೇ 4 ಮತ್ತು 5ನೇ ತರಗತಿ ಓದುತ್ತಿದ್ದಾರೆ. ಅವರ ಮೇಲೆ ಅತಿಯಾದ ಒತ್ತಡ ಹಾಕಬೇಡಿ. ಮೈದಾನದಲ್ಲಿ ಅವರ ಜೊತೆ ಆಡಲು ನೀವು ಸಹ ಹೋಗಿ, ಕೇವಲ ಟಿವಿ, ಮೊಬೈಲ್‌ ಗೀಳು ಮಕ್ಕಳನ್ನು ಸಹಜ ಆಟದಿಂದಲೂ ದೂರ ಇಡುತ್ತಿದೆ. ಇದರಿಂದ ಮಕ್ಕಳ ಕ್ರಿಯಾಶೀಲತೆಯೂ ಕುಂಠಿತವಾಗುತ್ತಿದೆ. ಮಕ್ಕಳು ಮೊದಲು ಚೆನ್ನಾಗಿ ಊಟ ಮಾಡಬೇಕು, ನಂತರ ನಿದ್ರೆ, ಅಭ್ಯಾಸ ಮತ್ತು ಕೊನೆಗೆ ಪರೀಕ್ಷೆ. ಇತರ ಮಕ್ಕಳ ಸಾಮರ್ಥ್ಯದ ಜೊತೆ ಹೋಲಿಕೆ ಮಾಡಬೇಡಿ. ಪ್ರತಿಯೊಬ್ಬರ ಸಾಮರ್ಥ್ಯ, ಆಸಕ್ತಿ ಭಿನ್ನವಾಗಿರುತ್ತದೆ ಎಂಬುದು ನಿಮ್ಮ ನೆನಪಿನಲ್ಲಿ ಇರಲಿ.

*ವಿಲಾಸರಡ್ಡಿ ಕೋನರಡ್ಡಿ, ನವಲಗುಂದ: ನಿದ್ರಾಹೀನತೆ ಕಾಡುತ್ತಿದೆ, ಪರಿಹಾರವೇನು ?

–ಈ ಸಮಸ್ಯೆ ನಿಮ್ಮ ವಯಸ್ಸಿನವರೆಗೆ ಬರುವುದು ಸಾಮಾನ್ಯ. ಇದಕ್ಕೆ ತಜ್ಞ ವೈದ್ಯರಿಂದ ಪರಿಹಾರವಿದೆ. ಮೊದಲು ನಿಮ್ಮ ಫ್ಯಾಮಿಲಿ ಡಾಕ್ಟರ್‌ ಅನ್ನು ಸಂಪರ್ಕಿಸಿ. ನಂತರ ಅವರಿಗೆ ನನ್ನ ಜೊತೆ ಮಾತನಾಡಲು ತಿಳಿಸಿ. ಇದರ ಬಗ್ಗೆ ಯಾವುದೇ ಭಯ ಬೇಡ.

* ಶರಣಪ್ಪ, ಸ್ನಾತಕೋತ್ತರ ವಿದ್ಯಾರ್ಥಿ, ನವಲಗುಂದ‌: ಓದಿದ್ದು ನೆನಪಿನಲ್ಲಿ ಇಟ್ಟುಕೊಳ್ಳುವುದು ಹೇಗೆ ?

-ನಮ್ಮನ್ನು ಆಕರ್ಷಿಸುವುದು ಮಾತ್ರ ನಮ್ಮ ನೆನಪಿನಲ್ಲಿ ಉಳಿಯುತ್ತದೆ. ಅಲ್ಲಿ ಮಾತ್ರ ಏಕಾಗ್ರತೆ ಬರುವುದು ಬೇರೆ ಕಡೆ ಏಕೆ ಬರುವುದಿಲ್ಲ ಎಂಬುದನ್ನು ನಿಮಗೆ ನೀವೇ ಪ್ರಶ್ನೆ ಹಾಕಿಕೊಳ್ಳಿ. ಮೂರು ‘ಆರ್‌’ (R)ಗಳು ತುಂಬಾ ಮುಖ್ಯ. ರೆಕಗ್ನೈಸ್‌-ಗುರುತಿಸಿ, ರೆಜಿಸ್ಟರ್‌-ದಾಖಲಿಸಿ, ರಿಲೀಸ್‌-ಹರಿದು ಹೋಗಬೇಕು ನದಿಯಂತೆ. ನಮಗೆ ಬರುವ ನಕಾರಾತ್ಮಕವಿಚಾರಗಳನ್ನು ಸಕಾರಾತ್ಮಕವಾಗಿ ಮಾರ್ಪಡಿಸಿ ಕೊಳ್ಳಬೇಕು.

* ಕನಕರಾಯ, ಧಾರವಾಡ: ನನಗೆ ಹಿಡಿದ ಕೆಲಸವನ್ನು ಪೂರ್ಣ ಮುಗಿಸುವುದಿಲ್ಲ. ಸದಾ ಗೊಂದಲದಲ್ಲಿ ಇರುತ್ತೇನೆ ?

–ನಿಮ್ಮ ಜೀವನಶೈಲಿ ಬದಲಾಯಿಸಿ ಕೊಳ್ಳಿ. ಸಕಾರಾತ್ಮಕ ಚಿಂತನೆ ರೂಢಿಸಿಕೊಂಡರೆ ಖಂಡಿತ ಪರಿಹಾರವಿದೆ.

* ಸಚಿನ್, ಧಾರವಾಡ, ಮಂಜುನಾಥ, ಜಮಖಂಡಿ: ಪುಸ್ತಕ ಹಿಡಿಯಲು ಮನಸ್ಸು ಬರುತ್ತಿಲ್ಲ. ಏನು ಮಾಡಬೇಕು?

–ನಿನ್ನ ಕೆಲಸ ವಿದ್ಯಾರ್ಥಿಯಾಗಿ ಕೇವಲ ಓದುವುದು, ನಿನ್ನ ಕೆಲಸ ಆನಂದಿಸು, ನಂತರ ಪರೀಕ್ಷೆ ಆನಂದಿಸು, ಕೊನೆಗೆ ಪರಿಣಾಮವನ್ನು ಆನಂದಿಸು. ಗುರಿ ಯಾವಾಗಲೂ ದೊಡ್ಡದಾಗಿ ಇರಲಿ, ಅದಕ್ಕೆ ನೂರಕ್ಕೆ ನೂರರಷ್ಟು ಶ್ರಮ ಹಾಕಿ.

* ಕೆ.ಎಸ್‌. ವೀರೇಂದ್ರ, ಹೊಸಪೇಟೆ, ಬಳ್ಳಾರಿ ಜಿಲ್ಲೆ: ಹದಿಹರೆಯದ ವಯಸ್ಸಿನಲ್ಲಿ ಏಕಾಗ್ರತೆ ಸಾಧಿಸುವುದು ಹೇಗೆ?

-ಮೊಬೈಲ್‌, ವಾಟ್ಸ್‌ಆ್ಯಪ್‌, ಫೇಸ್‌ಬುಕ್‌ನಂಥ ಗ್ಯಾಜೆಟ್‌ಗಳಿಂದ, ಟಿ.ವಿಯಿಂದ ಏಕಾಗ್ರತೆಯ ಕೊರತೆ ಕಾಣಿಸಿಕೊಳ್ಳುತ್ತದೆ. ಏಕಾಗ್ರತೆ ಎಂಬುದು ಎಲ್ಲಿಯೋ ಇರುವುದಲ್ಲ. ಅದು ನಿಮ್ಮಲ್ಲೆ ಇರುತ್ತೆ. ನಿಮ್ಮ ಒಳಗೆ ಇರುತ್ತದೆ. ‘concentration must be learnt and practise’ ಎಂಬ ಮಾತಿದೆ. ಅಂದರೆ, ಅದನ್ನು ನಾವೇ ಸಾಧಿಸಿಕೊಳ್ಳಬೇಕು. ಅದಕ್ಕಾಗಿ ಟಿ.ವಿ.,ಮೊಬೈಲ್‌, ಸ್ನೇಹಿತರೊಂದಿಗೆ ಹರಟೆಯಂಥ ಆಕರ್ಷಣೆಗಳಿಂದ ದೂರ ಇರಬೇಕು. ಒಂದೈದು ನಿಮಿಷ ಧ್ಯಾನ ಮಾಡಿ, ಗಮನ ಕೇಂದ್ರಿಕರಿಸಿದರೆ ಏಕ್ರಾಗತೆ ಸಾಧಿಸಬಹುದು.

* ರವಿ, ಕಲಘಟಗಿ: ನಾನು ಕೆ.ಎ.ಎಸ್‌ಗೆ ಸಿದ್ಧತೆ ನಡೆಸಿದ್ದು,ಓದಿನಲ್ಲಿ ಏಕಾಗ್ರತೆ ಹೆಚ್ಚಿಸಿಕೊಳ್ಳುವುದು ಹೇಗೆ?

–ಮೊದಲಿಗೆಆಕರ್ಷಣೆ ಬದಿಗಿಡಬೇಕು. ನಿಮ್ಮ ಗುರಿ ಸ್ಪಷ್ಟವಾಗಿ ಹಾಗೂ ಅಚಲವಾಗಿರಬೇಕು. ಮಹಾನ್‌ ಸಾಧಕರೆಲ್ಲ ‘self motivated’ (ಸ್ವಯಂ ಪ್ರೇರಕರು). ಅದನ್ನು ನಿಮ್ಮ ಮನಸ್ಸಿಗೆ ಹೇಳಬೇಕು. ಎರಡನೆಯದಾಗಿ ಏಕಾಗ್ರತೆ ಎಂಬುದು ನಿಮ್ಮಲ್ಲೆ ಇರುತ್ತದೆ. ಅದನ್ನು ಜಾಗೃತಗೊಳಿಸಬೇಕು. ಗುರಿ ಮುಟ್ಟುವತ್ತ ನಿಮ್ಮ ನಡೆ ಅಚಲವಾಗಿರಬೇಕು. ನಿಮ್ಮಗುರಿಹುಣ್ಣಿಮೆಯ ಚಂದ್ರನಂತೆ ಕಾಣುತ್ತಿರಬೇಕು. ಒಂದಿಷ್ಟು ಮೋಡ ಬಂದಾಗ ಅದು ಮಸುಕಾಗಬಾರದು. ‘Nothing is impossible’ (ಯಾವುದೂ ಅಸಾಧ್ಯವಲ್ಲ) ಎಂಬುದನ್ನು ನಿಮ್ಮ ಮನಸ್ಸಿಗೆ ನೀವೇ ಮತ್ತೆ ಮತ್ತೆ ಹೇಳುತ್ತಿರಬೇಕು. ಹೀಗೆ ನಿರಂತರ ಪ್ರಯತ್ನದಿಂದ ಏಕಾಗ್ರತೆ ಸಾಧಿಸಬೇಕು.

* ಬಸವರಾಜ, ಗಜೇಂದ್ರಗಡ:ರಾತ್ರಿ ನಿದ್ದೆ ಬರಲ್ಲ, ಭಯ ಆಗುತ್ತದೆ ಏನು ಮಾಡಬೇಕು?

–ಮನುಷ್ಯನಿಗೆ ಆತಂಕದಿಂದ ಹೀಗೆಲ್ಲ ಆಗುತ್ತದೆ. ಇದು ದೊಡ್ಡ ಕಾಯಿಲೆ ಅಲ್ಲ. ನಿಮ್ಮ ಫ್ಯಾಮಿಲಿ ಡಾಕ್ಟರ್‌ ಅನ್ನು ಇಲ್ಲವೇ ಆಪ್ತ ಸಮಾಲೋಚಕರನ್ನು ಭೇಟಿ, ಮಾಡಿ ಸಲಹೆ ಪಡೆಯಬಹುದು.

* ಗಣೇಶ ನಾಯಕ, ಚಿಕ್ಕೋಡಿ: ಮಾನಸಿಕವಾಗಿ ತುಂಬ ಬೇಜಾರಾಗಿದೆ.ಯಾವಾಗಲೂ ಟೆನ್ಶನ್‌ ಆಗುತ್ತದೆ?

–ನೀವು ಕೃಷಿಕರು. ಕೆಲಸದ ಭಾರದಿಂದ ನಿಮಗೆ ಹೀಗಾಗುತ್ತಿರಬಹುದು. ನೀವು ಕೆಲಸದ ಒತ್ತಡದಿಂದ ಮನಸ್ಸಿನ ಆರೋಗ್ಯಹಾಗೂ ಸ್ವಾಸ್ಥ್ಯವನ್ನು ಕಾಪಾಡಿಕೊಳ್ಳುವತ್ತ ಗಮನ ಕೊಡಿ. ಆರೋಗ್ಯವನ್ನು ಯಾರೂ ಕೊಡಲ್ಲ. ನೀವೇ ಅದನ್ನು ಪಡೆಯಬೇಕು. ಅದಕ್ಕಾಗಿಜೀವನ ಶೈಲಿ ಬದಲಿಸಿಕೊಳ್ಳಿ.ಒಂದಿಷ್ಟು ವ್ಯಾಯಾಮ ಮಾಡಿ,ಹಾಡು, ಸಂಗೀತ ಕೇಳಿ, ಧ್ಯಾನ ಮಾಡಿ.

ಒತ್ತಡ ಯಾರಿಗಿಲ್ಲ ಹೇಳಿ. ವಿದ್ಯಾರ್ಥಿಗಳಿಂದ ಹಿಡಿದು ವೃದ್ಧರ ತನಕ ಎಲ್ಲರಿಗೂ ತಮ್ಮದೇ ಆದಟೆನ್ಶನ್‌ ಇರುತ್ತದೆ. ಹೀಗಾಗಿ ಒತ್ತಡವನ್ನು ನಿರ್ವಹಣೆ ಮಾಡುವ ಕಲೆ, ಕೌಶಲವನ್ನು ರೂಢಿಸಿಕೊಳ್ಳಬೇಕು. ಅದರಿಂದ ನೆಮ್ಮದಿ ಪಡೆಯಲು ಸಾಧ್ಯವಿದೆ. ಪ್ರಯತ್ನಿಸಿ ನೋಡಿ.

* ಅಂಬಿಕಾ, ರಟ್ಟೀಹಳ್ಳಿ: ಇನ್ನೆರಡು ದಿನದಲ್ಲಿ ದ್ವಿತೀಯ ಪಿ.ಯು.ಸಿ ಲ್ಯಾಬ್‌ ಪರೀಕ್ಷೆಗಳಿದ್ದು, ಫಿಜಿಕ್ಸ್‌ ಲ್ಯಾಬ್‌ನ ಭಯ ಕಾಡುತ್ತಿದೆ. ಖಿನ್ನತೆಯ ಲಕ್ಷಣಗಳೂ ನನ್ನಲ್ಲಿವೆ ಅನಿಸುತ್ತಿದೆ.

–ನಿಮಗೆ ಭಯ ಬೇಡ. ಭಯ ರಹಿತವಾಗಿ ಪರೀಕ್ಷೆ ಎದುರಿಸಿ. ಮಾನಸಿಕವಾಗಿ ಪರೀಕ್ಷೆಗೆ ಸಿದ್ಧರಾಗಿ. ಚೆನ್ನಾಗಿ ಅಂಕ ಬರಲ್ಲ ಎಂಬ ಆತಂಕ ನಿಮ್ಮಲ್ಲಿ ಇದ್ದಂತಿದೆ. ಆದರೆ, ನೀವೋಬ್ಬರೇ ಅಲ್ಲ. ರ‍್ಯಾಂಕ್‌ ಬರುವ ವಿದ್ಯಾರ್ಥಿಯಲ್ಲೂ ‘performance anxiety’ ಇದ್ದೇ ಇರುತ್ತದೆ. ಆಗೆಲ್ಲ ‘I can do it. I am capable to do it’ ಎಂದು ಹೇಳಿಕೊಳ್ಳಿ. ಪಿ.ಯು.ಸಿ ಭವಿಷ್ಯಕ್ಕೊಂದು ಮಾರ್ಗ ಅಷ್ಟೇ. ಇಲ್ಲಿಗೆ ಗೆಲುವೇ ಅಂತಿಮವಲ್ಲ. ಸೋಲು ಅಪಮಾನವಲ್ಲ. ಹೋರಾಟ ಮುಖ್ಯ ಎಂಬುದು ನಿಮಗೆ ತಿಳಿದಿರಲಿ.

ಇನ್ನು, ಖಿನ್ನತೆ ಲಕ್ಷಣದ ಕುರಿತು ಹೇಳಿದಿರಿ, ನೀವು ಇಷ್ಟೊಂದು ಲವಲವಿಕೆಯಿಂದ ಮಾತನಾಡುತ್ತಿರುವುದನ್ನು ಗಮನಿಸಿದರೆ, ನಿಮಗೆ ಖಿನ್ನತೆ ಇದ್ದಂತಿಲ್ಲ. ಧೈರ್ಯವಾಗಿ ಪರೀಕ್ಷೆಗೆ ಸಿದ್ಧರಾಗಿ.

*ಆನಂದ, ಬಾಗಲಕೋಟೆ: ಮಂಜುನಾಥ್, ಹಾವೇರಿ, ನೇತ್ರಾ, ಹುಬ್ಬಳ್ಳಿ: ಬೆಳಿಗ್ಗೆ ಓದಿದ್ದು ನೆನಪಿನಲ್ಲಿ ಉಳಿಯುವುದಿಲ್ಲ. ಆಗ ಭಯ ಆವರಿಸುತ್ತದೆ.

–ಮಿದುಳು ‘ಮೆಮೊರಿ ಚಿಪ್‌’ ಇದ್ದಂತೆ. ಓದಿದ, ನೋಡಿದ ವಿಷಯಗಳು ಅಲ್ಲಿ ಸಂಗ್ರಹವಾಗಿರುತ್ತವೆ. ಭಯ ಎಂಬುದು ‘ವೈರಸ್‌’ನಂತೆ. ಭಯಗೊಂಡಾಗ ’ಮಿದುಳಿ’ನ ಚಿಪ್‌ಗೆ ‘ವೈರಸ್‌’ ಅಂಟಿದಂತೆ. ಆಗ ವಿಷಯಗಳೆಲ್ಲ ಮರೆಯಾಗುತ್ತದೆ. ಇದರಿಂದ ಗೊಂದಲ ಉಂಟಾಗುತ್ತದೆ. ಶಾಂತ, ಏಕಾಗ್ರತೆಯ ಮನಸ್ಸು ಎಲ್ಲಕ್ಕೂ ಪರಿಹಾರ.

* ಶ್ರೀದೇವಿ, ಜಮಖಂಡಿ: ಬಿ.ಇಡಿ ಪದವೀಧರೆ, ಓದು ಮುಂದುವರಿಸಿದ್ದೇನೆ. ಮದುವೆಯೂ ಆಗಿದೆ. ಅಧ್ಯಯನದಲ್ಲಿ ಏಕಾಗ್ರತೆ ಮೂಡುತ್ತಿಲ್ಲ.

–ಶಿಕ್ಷಕಿಯಾಗುವ ನಿಮ್ಮ ಬಯಕೆ ಶ್ಲಾಘನೀಯ. ನೀವು ಗೃಹಿಣಿ ಹಾಗೂ ವಿದ್ಯಾರ್ಥಿಯ ಪಾತ್ರಗಳನ್ನು ಏಕಕಾಲಕ್ಕೆ ನಿಭಾಯಿಸುತ್ತಿದ್ದೀರಿ. ಮನೆಯಲ್ಲಿ ಗೃಹಿಣಿಯಾಗಿ ಎಲ್ಲರ ಪೋಷಣೆ ಮಾಡುವುದು ಹಾಗೂ ಕಾಲೇಜಿನಲ್ಲಿ ವಿದ್ಯಾರ್ಥಿನಿಯಾಗಿ ಅಧ್ಯಯನದಲ್ಲಿ ತೊಡಗುತ್ತಿದ್ದೀರಿ. ಈ ಎರಡು ಪಾತ್ರಗಳಿಂದಾಗಿ ಮನಸ್ಸಿನಲ್ಲಿ ಓದುವಾಗ ತಳಮಳ ಆಗಬಹುದು. ಓದಿನ ವಿಷಯದಲ್ಲಿ ಆಸಕ್ತಿ ಇರಲಿ. ಆ ವೇಳೆ ಮನೆಯ ವಿಷಯಗಳನ್ನು ನೆನಪು ಮಾಡಿಕೊಳ್ಳಬೇಡಿ

* ಮಂಜುನಾಥ ನಾಡಿಗೇರ, ಹಾವೇರಿ: ಮೊಬೈಲ್‌ನಿಂದ ದೂರ ಇರುವುದು ಹೇಗೆ?

–ಮೊಬೈಲ್ ಬಳಸುವುದು ಕಡ್ಡಾಯ ಎಂಬ ಮನಸ್ಥಿತಿ ನಿರ್ಮಾಣವಾಗಿದೆ. ಒಂದು ಕ್ಷಣವೂ ಅದನ್ನು ಬಿಡಲಾಗದಂತ ಸ್ಥಿತಿ ಇದೆ. ಇದಕ್ಕೆ ಗಟ್ಟಿ ಮನಸ್ಸು ಬೇಕು. ಆಪ್ತ ಸಮಾಲೋಚನಾ ಕೇಂದ್ರಕ್ಕೆ ಒಮ್ಮೆ ಭೇಟಿ ನೀಡಿ.

* ಹೆಸರು ಬೇಡ, ಊರು ಬೇಡ: ಮನೆಯಲ್ಲಿ ದಿನವೂ ಜಗಳ. ತಾಯಿಯೊಂದಿಗೆ ಮನಸ್ತಾಪ. ಮನೆಯಿಂದ ಹೊರಗೆ ಹೋದರೆ ಸಿಡುಕುತ್ತಾರೆ.

–ತಾಯಿಯೇ ನಿಜವಾದ ದೇವರು. ನಿಮ್ಮ ಸಂತೋಷದಲ್ಲಿ ಅವರೂ ಸಂತೋಷ ಕಾಣುತ್ತಾರೆ. ಆದರೆ, ವಯಸ್ಸಾದಂತೆ ಮಗುವಿನಂತಾಗುತ್ತಾರೆ. ತಾಯಿಯೊಂದಿಗೆ ನಿತ್ಯವೂ ಒಂದಷ್ಟು ಸಮಯ ಕಳೆಯಿರಿ. ಯಾವುದೇ ವಿಷಯದ ಬಗ್ಗೆ ಮುಕ್ತವಾಗಿ ಮಾತನಾಡಿ.

* ಸೂರಜ್, ವಿಜಯಪುರ: ವಯಸ್ಸು 49. ಮಕ್ಕಳಿಗೋಸ್ಕರ ಇತ್ತೀಚೆಗೆ ಮದ್ಯಪಾನ ಬಿಟ್ಟಿದ್ದೇನೆ. ಇದರಿಂದಾಗಿ ನಿದ್ರಾಹೀನತೆ ಹೆಚ್ಚಾಗಿದೆ. ಜತೆಗೆ, ರಕ್ತದೊತ್ತಡ ಹೆಚ್ಚಾಗುತ್ತದೆಯಂತೆ ನಿಜವೇ?

–ಮಕ್ಕಳಿಗೆ ನಾವು ಆದರ್ಶಗಳನ್ನು ಕೊಡಬೇಕು. ಆ ನಿಟ್ಟಿನಲ್ಲಿ ನೀವು ಮದ್ಯಪಾನ ತ್ಯಜಿಸಿರುವುದಕ್ಕೆ ಅಭಿನಂದನೆಗಳು. ಮದ್ಯಪಾನವನ್ನು ಒಮ್ಮೆಲೆ ಬಿಟ್ಟಾಗ, ನಿದ್ರಾಹೀನತೆ ಸಾಮಾನ್ಯ. ಅದಕ್ಕಾಗಿ, ನೀವು ಕುಟುಂಬದ ವೈದ್ಯರನ್ನು ಭೇಟಿಯಾದರೆ, ನಿದ್ರಾಹೀನತೆ ಮತ್ತು ರಕ್ತದೊತ್ತಡ ನೀಗಿಸುವ ಕೆಲ ಮಾತ್ರೆಗಳನ್ನು ನೀಡುತ್ತಾರೆ. ಇದರ ಜತೆಗೆ, ನೀವು ಮಕ್ಕಳೊಂದಿಗೆ ಹೆಚ್ಚು ಸಮಯ ಕಳೆಯಿರಿ. ಆರೋಗ್ಯಕರ ಅಭ್ಯಾಸಗಳನ್ನು ಬೆಳೆಸಿಕೊಳ್ಳಿ.

* ಸೋಮಣ್ಣ, ಹೊಸಪೇಟೆ: 10ನೇ ಓದುತ್ತಿರುವ ನನ್ನ ಮಗಳು ಪ್ರತಿಭಾವಂತೆ. ಎಲ್ಲಾ ವಿಷಯಗಳಲ್ಲೂ ಶೇ 95ರಷ್ಟು ಅಂಕ ಪಡೆದಿದ್ದಾಳೆ. ಮುಂದಿನ ವಿದ್ಯಾಭ್ಯಾಸಕ್ಕೆ ಸಂಬಂಧಿಸಿದಂತೆ, ಆಕೆಯ ಆಸಕ್ತಿಯನ್ನು ಗುರುತಿಸುವುದು ಹೇಗೆ?

–ಆಕೆಯ ಆಸಕ್ತಿಯ ವಿಷಯ, ಕ್ಷೇತ್ರ ಹಾಗೂ ಕನಸು ಯಾವುದು ಎಂದು ಮೊದಲು ಅರಿತು, ಅದಕ್ಕೆ ನೀರೆರೆದು ಪೋಷಿಸಿ. ಯಾವುದೇ ಕಾರಣಕ್ಕೂ ನಿಮ್ಮ ಆಸೆ–ಆಕಾಂಕ್ಷೆ ಹಾಗೂ ಕನಸನ್ನು ಆಕೆಯ ಮೇಲೆ ಹೇರಬೇಡಿ. ಎಂಜಿನಿಯರಿಂಗ್, ವೈದ್ಯಕೀಯ, ಕೃಷಿ, ಬೋಧನೆ ಸೇರಿದಂತೆ ಯಾವ ಕ್ಷೇತ್ರದ ಬಗ್ಗೆ ಆಕೆ ಒಲವು ತೋರುತ್ತಾಳೊ, ಅದಕ್ಕೆ ಪೂರಕವಾದ ವಿಷಯವನ್ನು ಆಕೆಗೆ ಕೊಡಿಸಿ.

* ದಿನೇಶ್, ಧಾರವಾಡ: ಡಿಪ್ಲೊಮಾ ಓದಿರುವ 26 ವರ್ಷದ ಪುತ್ರ ನೆರೆಹೊರೆಯವರ ವಿಷಯಗಳಿಗೆ ಅನಗತ್ಯವಾಗಿ ತಲೆ ಕೆಡಿಸಿಕೊಳ್ಳುತ್ತಾನೆ. ಜತೆಗೆ, ಮನೆಯವರೊಂದಿಗೂ ಒರಟಾಗಿ ಮಾತನಾಡುತ್ತಾನೆ. ಆತನನ್ನು ಸರಿದಾರಿಗೆ ತರುವ ದಾರಿ ಹೇಳಿ.

–ವಯಸ್ಸಿಗನುಗುಣವಾಗಿ ಕಂಡುಬರುವ ವರ್ತನೆ ಇದು. ಇದಕ್ಕೆ ಶಿಕ್ಷೆ ನೀಡಿದರೆ, ಆತ ರೆಬೆಲ್ ಆಗಿ ತಿರುಗಿ ಬೀಳುತ್ತಾನೆ. ಅದಕ್ಕಾಗಿ, ನೀವು ‘ಎಂಪಥಿ ಟ್ರಿಕ್ಸ್‌’ ಬಳಸಬೇಕು. ಅಂದರೆ, ಆತನ ಸ್ಥಾನದಲ್ಲಿ ನಿಂತು ಅವನ ಮನಸ್ಥಿತಿಯನ್ನು ಅರ್ಥ ಮಾಡಿಕೊಂಡು, ಸರಿದಾರಿಗೆ ತರಲು ಪ್ರಯತ್ನಿಸಿ. ಇಷ್ಟಕ್ಕೂ ಸರಿಯಾಗದಿದ್ದರೆ, ಒಮ್ಮೆ ಮಗನೊಂದಿಗೆ ನನ್ನನ್ನು ಭೇಟಿ ಮಾಡಿ.

* ಲವೀನಾ, ಎಂಜಿನಿಯರಿಂಗ್ ವಿದ್ಯಾರ್ಥಿ, ಬಾಗಲಕೋಟೆ: ಮೊಬೈಲ್ ಬಳಕೆಯ ಪರಿಣಾಮಗಳೇನು?

–ಮೊಬೈಲ್‌ನ ಇತಿ–ಮಿತಿ ಅರಿಯದೆ ಬಳಸಿದರೆ, ಮೊದಲಿಗೆ ಏಕಾಗ್ರತೆಯ ಭಂಗವಾಗುತ್ತದೆ. ವಿಶ್ಲೇಷಣಾ ಮನೋಭಾವ ಕಡಿಮೆಯಾಗುತ್ತದೆ. ಸ್ಮರಣೆ ಶಕ್ತಿ ತಗ್ಗುತ್ತದೆ. ಉತ್ಪಾದನಾ ಸಾಮರ್ಥ್ಯ ಕುಸಿಯುತ್ತದೆ. ಕಣ್ಣಿಗೂ ತ್ರಾಸವಾಗುತ್ತದೆ. ಇವೆಲ್ಲವುಗಳು ವ್ಯಕ್ತಿತ್ವದ ಮೇಲೆ ನಕಾರಾತ್ಮಕ ಪ್ರಭಾವ ಬೀರುತ್ತವೆ. ಅದರಲ್ಲೂ ಹೆಣ್ಣು ಮಕ್ಕಳು ಅಪರಿಚಿತ ಸಂದೇಶಗಳಿಗೆ ಯಾವುದೇ ಕಾರಣಕ್ಕೂ ಪ್ರತಿಕ್ರಿಯಿಸಬಾರದು. ಆ ವ್ಯೂಹದಲ್ಲಿ ಒಮ್ಮೆ ಸಿಲುಕಿದರೆ, ಹೊರ ಬರುವುದು ಕಷ್ಟ.

* ಕಿರಣ, ರಬಕವಿ: ಡಿಪ್ಲೊಮಾ ಓದಿರುವ ನಾನು ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದೇನೆ. ಓದಿನ ಮಧ್ಯೆ ಅನಗತ್ಯ ಆಲೋಚನೆಗಳು ನುಸುಳುತ್ತವೆ. ಇದರಿಂದ ಆತಂಕ ಶುರುವಾಗುತ್ತದೆ. ಜತೆಗೆ, ತೂಕವೂ ತಗ್ಗಿದೆ. ಇದಕ್ಕೆ ಪ‍ರಿಹಾರ ಏನು?

–ಇದು ಸಹಜ ಪ್ರಕ್ರಿಯೆ. ಅನಗತ್ಯ ಆಲೋಚನೆ ಮತ್ತು ಆತಂಕ ಶುರುವಾದಾಗ, ಓದು ನಿಲ್ಲಿಸಿ. ಕೋಣೆಯಿಂದ ಹೊರಬಂದು ಪ್ರಕೃತಿಯೊಂದಿಗೆ ಮುಖಾಮುಖಿಯಾಗಿ. ವಾಯುವಿಹಾರ ಮಾಡಿ. ಪಕ್ಷಿಗಳ ಕಲರವ ಆಲಿಸಿ. ಸಂಗೀತ ಕೇಳಿ. ಹೀಗೆ ನಿಮ್ಮ ಮನಸ್ಸನ್ನು ಟ್ಯೂನ್ ಮಾಡಿಕೊಳ್ಳಿ. ಕ್ರಮೇಣ ನಿಮ್ಮ ಮನಸ್ಸು ಹಗುರವಾಗುತ್ತದೆ. ಪ್ರೋಟಿನ್‌ಯುಕ್ತ ಆಹಾರ ಸೇವಿಸಿದರೆ, ತೂಕ ತನ್ನಿಂತಾನೆ ಹೆಚ್ಚಾಗುತ್ತದೆ.

ಫೋನ್‌ ಇನ್‌ ನಿರ್ವಹಣೆ: ಬಿ.ಎನ್‌.ಶ್ರೀಧರ, ರಾಮಕೃಷ್ಣ ಸಿದ್ರಪಾಲ, ಬಸವರಾಜ ಹವಾಲ್ದಾರ, ಆರ್. ಮಂಜುನಾಥ, ರವಿ.ಎಸ್‌.ಬಳೂಟಗಿ, ಓದೇಶ ಸಕಲೇಶಪುರ, ಬಸೀರಅಹ್ಮದ್ ನಗಾರಿ, ಮಂಜುನಾಥ ಗೌಡರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT