ಕೆಲಸ ಹುಡುಕುವ ಬದಲು ಮಾಲೀಕರಾಗಿ: ಜಿಲ್ಲಾಧಿಕಾರಿ ನಿತೇಶ್ ಸಲಹೆ

ಹುಬ್ಬಳ್ಳಿ: ಸ್ಥಳೀಯ ಸಂಪನ್ಮೂಲಗಳನ್ನು ಬಳಸಿಕೊಂಡು ಉದ್ಯಮಗಳನ್ನು ಆರಂಭಿಸಿ. ಕೆಲಸಗಾರರಾಗುವ ಬದಲು ಕೆಲಸ ಕೊಡುವ ಮಾಲೀಕರಾಗಿ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಹೇಳಿದರು.
ದೇಶಪಾಂಡೆ ಫೌಂಡೇಷನ್ ಮತ್ತು ನಬಾರ್ಡ್ ವತಿಯಿಂದ ಗೋಕುಲ ರಸ್ತೆಯ ಕೆ.ಎಸ್.ಆರ್.ಟಿ.ಸಿ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಆರಂಭವಾದ ಆರು ದಿನಗಳ ಉದ್ಯಮಿ ಮೆಗಾ ಉತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ‘ಕೋವಿಡ್ ಮತ್ತು ಲಾಕ್‌ಡೌನ್ ಸಮಯದಲ್ಲಿ ಅನೇಕ ಸಣ್ಣ ಉದ್ಯಮಿಗಳಿಗೆ ಆರ್ಥಿಕವಾಗಿ ತೊಂದರೆಯಾಗಿದೆ. ಅದನ್ನು ಕಡಿಮೆ ಮಾಡಿಕೊಳ್ಳಲು ಉತ್ಸವ ಉತ್ತಮ ವೇದಿಕೆಯಾಗಿದೆ’ ಎಂದರು.
‘ಮಹಿಳೆಯರು ಸ್ವಾವಲಂಬಿ ಉದ್ಯಮಿಗಳಾಗಿ ಬೆಳೆಯಲು ಉತ್ಸವಗಳು ಅನುಕೂಲ ಒದಗಿಸಲಿವೆ. ದೇಶದಲ್ಲಿ ಅಸಂಘಟಿತ ವಲಯದ ಕಾರ್ಮಿಕರು ಸಾಕಷ್ಟು ಸಂಖ್ಯೆಯಲ್ಲಿದ್ದು, ಅವರಿಗೆ ವೇದಿಕೆ ಒದಗಿಸುವ ಕೆಲಸವನ್ನು ಎಲ್ಲರೂ ಮಾಡಬೇಕಿದೆ. ದೇಶಪಾಂಡೆ ಫೌಂಡೇಷನ್ ಮತ್ತು ನಬಾರ್ಡ್ ಸಣ್ಣ ಉದ್ಯಮಿಗಳಿಗೆ ಹಣಕಾಸಿನ ನೆರವು ನೀಡಿ ಉದ್ಯಮ ಬೆಳವಣಿಗೆಗೆ ಏಣಿಯಾಗಿವೆ’ ಎಂದು ಅಭಿಪ್ರಾಯಪಟ್ಟರು.
ನಬಾರ್ಡ್ ಜಿಲ್ಲಾಭಿವೃದ್ಧಿ ವ್ಯವಸ್ಥಾಪಕ ಮಯೂರ ಕಾಂಬ್ಳೆ ಮಾತನಾಡಿ ‘ಸ್ವಾವಲಂಬಿಯಾಗಲು ಬಯಸುವವರು ನಾವು ನೆರವು ನೀಡುತ್ತೇವೆ. ಗ್ರಾಮೀಣ ಭಾಗದಲ್ಲಿ ಮಾರುಕಟ್ಟೆ ಸೃಷ್ಟಿಸಲು ಒತ್ತು ಕೊಡಲಾಗುವುದು’ ಎಂದರು.
ಏಕಲಕ್ಷ್ಯ ಇನ್ನೊವೇಷನ್ ಲ್ಯಾಬ್ಸ್‌ನ ಒಟಿಲ್ಲೆ ಅನ್ಬನ್‌ಕುಮಾರ್ ‘ಉದ್ಯಮ ಸ್ಥಾಪನೆಯತ್ತ ಮಹಿಳೆಯರು ಆಸಕ್ತಿ ತೋರಿದರೆ ಒಂದು ಸಮಾಜವನ್ನೇ ಸ್ವಾವಲಂಬಿಯಾಗಿ ರೂಪಿಸಬಹುದು. ತನ್ನ ಸುತ್ತಲಿನ ಅಡೆತಡೆಗಳನ್ನು ಮೀರಿದರೆ ಮಹಿಳೆಯಿಂದ ಉತ್ತಮ ಸಮಾಜ ನಿರ್ಮಾಣ ಸಾಧ್ಯ’ ಎಂದರು.
ಫೌಂಡೇಷನ್ ಹಾಗೂ ನಬಾರ್ಡ್‌ನಿಂದ ನೆರವು ಪಡೆದು ಉದ್ಯಮ ಆರಂಭಿಸಿದ ಹಾಗೂ ಕೌಶಲ ಕಲಿಕಾ ತರಬೇತಿ ಪೂರ್ಣಗೊಳಿಸಿದ ಸಣ್ಣ ಉದ್ಯಮಿಗಳು ತಮ್ಮ ಅನುಭವಗಳನ್ನು ಹಂಚಿಕೊಂಡರು. ಖಾದ್ಯಗಳ, ಆಟಿಕೆಗಳ, ಬಟ್ಟೆಗಳ 101 ಮಳಿಗೆಗಳನ್ನು ತೆರೆಯಲಾಗಿದೆ.
ಫೌಂಡೇಷನ್ ಉಪ ವ್ಯವಸ್ಥಾಪಕಿ ರಾಜೇಶ್ವರಿ ಲದ್ದಿ, ಕಾರ್ಯನಿರ್ವಾಹಕ ಸಂಯೋಜಕ ವಿಜಯ ಪುರೋಹಿತ್ ಇದ್ದರು.
***
ಕೋವಿಡ್ ಎರಡೂ ಅಲೆಯ ಬಳಿಕ ದೊಡ್ಡ ಮಟ್ಟದಲ್ಲಿ ನಡೆಯುತ್ತಿರುವ ಮೊದಲ ದೊಡ್ಡ ಉತ್ಸವ ಇದಾಗಿದ್ದು, ಸಣ್ಣ ಉದ್ಯಮಿಗಳಿಗೆ ಹೆಚ್ಚು ಅನುಕೂಲವಾಗುತ್ತದೆ.
- ವಿವೇಕ ಪವಾರ್, ಸಿಇಒ ದೇಶಪಾಂಡೆ ಫೌಂಡೇಷನ್
***
ಸಣ್ಣ ಮತ್ತು ಸ್ಥಳೀಯ ಉದ್ಯಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿ
ನ.14 ರಂದು ಉತ್ಸವದ ಸಮಾರೋಪ
ಸಾಧನೆಯ ಯೋಶೋಗಾಥೆ ಹಂಚಿಕೊಂಡ ಉದ್ಯಮಿಗಳು
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.