ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಜ್ಜೇನು ದಾಳಿ: 25 ಮಕ್ಕಳು ಆಸ್ಪತ್ರೆಗೆ ದಾಖಲು

Last Updated 28 ನವೆಂಬರ್ 2019, 13:46 IST
ಅಕ್ಷರ ಗಾತ್ರ

ಹುಬ್ಬಳ್ಳಿ: ನಗರದ ಕುಸುಗಲ್ ರಸ್ತೆಯಲ್ಲಿರುವ ಶ್ರೀ ಚೈತನ್ಯ ಟೆಕ್ನೊ ಶಾಲೆಯಲ್ಲಿ ಗುರುವಾರ, ಹೆಜ್ಜೇನುಗಳ ದಾಳಿಯಿಂದ 25 ಮಕ್ಕಳು ಹಾಗೂ ನಾಲ್ವರು ಸಿಬ್ಬಂದಿ ಅಸ್ವಸ್ಥರಾಗಿದ್ದಾರೆ. ಎಲ್ಲರನ್ನೂ ಕಿಮ್ಸ್‌ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ.

ಎರಡು ಅಂತಸ್ತಿನ ಶಾಲೆಯ ಕಟ್ಟಡದ ತುದಿಯಲ್ಲಿ ಹೆಜ್ಜೇನು ಗೂಡು ಕಟ್ಟಿತ್ತು. ಸಂಜೆ 4.30ರ ಹೊತ್ತಿಗೆ ಹೈಸ್ಕೂಲು ವಿದ್ಯಾರ್ಥಿಗಳು ಶಾಲೆಯ ಮೈದಾನದಲ್ಲಿ ಆಟವಾಡುತ್ತಿದ್ದಾಗ, ಇದ್ದಕ್ಕಿದ್ದಂತೆ ಹೆಜ್ಜೇನುಗಳು ದಾಳಿ ನಡೆಸಿವೆ.

‘ಹೆಜ್ಜೇನುಗಳ ದಾಳಿಯಿಂದ ಮಕ್ಕಳು ಚೀರಾಡತೊಡಗಿದರು. ಕೈಗೆ ಸಿಕ್ಕವರನ್ನು ಅಕ್ಕಪಕ್ಕದ ಕೊಠಡಿಗಳಿಗೆ ಕಳಿಸಿದೆವು. ಕೆಲ ಮಕ್ಕಳು ಮಕಾಡೆ ಮಲಗಿದ್ದರಿಂದ ಹೆಚ್ಚಿನ ಕಡಿತದಿಂದ ಪಾರಾದರು’ ಎಂದು ಶಾಲೆಯ ಕರಾಟೆ ಮಾಸ್ಟರ್ ಸುರೇಶ ತೊಂಗಲ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ನನ್ನ ಮುಖ ಮತ್ತು ತಲೆಯನ್ನು ಹೆಜ್ಜೇನುಗಳು ಮುತ್ತಿಕೊಂಡವು. ನೆಲಕ್ಕೆ ಮುಖ ಮಾಡಿ ತಲೆಯನ್ನು ಕೊಡವಿಕೊಂಡಾಗ, ಹುಳುಗಳು ಹಾರಿ ಹೋದವು. ಎರಡ್ಮೂರು ನಿಮಿಷದ ದಾಳಿಯಲ್ಲಿ ಎಲ್ಲರೂ ದಿಕ್ಕಾಪಾಲಾದರು. ಹುಳುಗಳು ಹೋದ ಬಳಿಕ, ಮಕ್ಕಳನ್ನು ವಾಹನದಲ್ಲಿ ಕಿಮ್ಸ್‌ಗೆ ಕರೆ ತಂದೆವು’ ಎಂದು ಹೇಳಿದರು.

‘ಶಾಲೆಯ ತೋಟದಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ಕಾರ್ಮಿಕರಿಗೆ ಹೆಚ್ಚಿನ ಹುಳುಗಳು ಕಚ್ಚಿದ್ದು, ಅವರಿಬ್ಬರೂ ಅಸ್ವಸ್ಥರಾಗಿದ್ದಾರೆ. ಗೂಡಿಗೆ ಯಾರಾದರೂ ಕಲ್ಲು ಹೊಡೆದಿದ್ದರಿಂದ ಹುಳುಗಳು ಎದ್ದವೊ ಅಥವಾ ಅವಾಗಿಯೇ ದಾಳಿ ನಡೆಸಿದವೊ ಎಂಬುದು ಗೊತ್ತಿಲ್ಲ’ ಎಂದರು.

ಒಂದು ದಿನ ನಿಗಾದಲ್ಲಿರಬೇಕು:ವಿದ್ಯಾರ್ಥಿಗಳಿಗೆ ಅಗತ್ಯ ಚಿಕಿತ್ಸೆ ನೀಡಲಾಗಿದೆ. ಕಡಿಮೆ ಹುಳು ಕಚ್ಚಿದವರು ಚೇತರಿಸಿಕೊಂಡಿದ್ದಾರೆ. ಹೆಚ್ಚಿನ ದಾಳಿಗೊಳಗಾದವರಿಗೆ ಮೈ ಹಾಗೂ ಮುಖ ಊದಿಕೊಂಡಿದೆ. ಅಂತಹವರನ್ನು ಒಂದು ದಿನ ನಿಗಾದಲ್ಲಿರಿಸಿ ಚಿಕಿತ್ಸೆ ನೀಡಬೇಕಿದೆ ಎಂದು ಕಿಮ್ಸ್‌ ಮಕ್ಕಳ ವಿಭಾಗದ ವೈದ್ಯರು ತಿಳಿಸಿದರು.

‘ಎರಡು ಸಲ ತೆರವು ಗೊಳಿಸಿದ್ದೆವು’ :‘ಶಾಲೆಯ ಎರಡನೇ ಅಂತಸ್ತಿನ ತುದಿಯಲ್ಲಿ ಕಟ್ಟಿದ್ದ ಹೆಜ್ಜೇನು ಗೂಡನ್ನು ಎರಡು ಸಲ ತೆರವುಗೊಳಿಸಿದ್ದೆವು. ಇತ್ತೀಚೆಗೆ ಅದೇ ಸ್ಥಳದಲ್ಲಿ ಗೂಡು ಕಟ್ಟಿದ್ದ ಹೆಜ್ಜೇನುಗಳು, ವಿದ್ಯಾರ್ಥಿಗಳ ಮೇಲೆ ದಾಳಿ ನಡೆಸಿವೆ. ವೈದ್ಯರು ಎಲ್ಲರಿಗೂ ಚಿಕಿತ್ಸೆ ನೀಡುತ್ತಿದ್ದು, ಯಾವುದೇ ತೊಂದರೆ ಇಲ್ಲ ಎಂದು ಹೇಳಿದ್ದಾರೆ. ಮಕ್ಕಳ ಪಾಲಕರಿಗೆ ವಿಷಯ ತಿಳಿಸಿದ್ದು, ಎಲ್ಲರೂ ಬಂದು ಮಕ್ಕಳಿಗೆ ಧೈರ್ಯ ತುಂಬುತ್ತಿದ್ದಾರೆ’ ಎಂದು ಶಾಲೆಯ ಉಸ್ತುವಾರಿ ಗೋಪಿನಾಯಕ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT