ಹೆಸರು ಖರೀದಿ ಕೇಂದ್ರಕ್ಕೆ ಚಾಲನೆ, ಮಧ್ಯವರ್ತಿಗಳ ಹಾವಳಿ ತಪ್ಪಿಸಲು ಸೂಚನೆ

7

ಹೆಸರು ಖರೀದಿ ಕೇಂದ್ರಕ್ಕೆ ಚಾಲನೆ, ಮಧ್ಯವರ್ತಿಗಳ ಹಾವಳಿ ತಪ್ಪಿಸಲು ಸೂಚನೆ

Published:
Updated:
Deccan Herald

ಧಾರವಾಡ: ‘ಹೆಸರು ಖರೀದಿಗೆ ಸಂಬಂಧಿಸಿದಂತೆ ಎಪಿಎಂಸಿ ಆವರಣದಲ್ಲಿ ಮಧ್ಯವರ್ತಿಗಳ ಹಾವಳಿ ಮತ್ತು ಗುಣಮಟ್ಟದ ಹೆಸರಿನಲ್ಲಿ ರೈತರಿಗೆ ಕಿರಿಕಿರಿ ಆಗದಂತೆ ಅಧಿಕಾರಿಗಳು ಎಚ್ಚರವಹಿಸಬೇಕು’ ಎಂದು ಶಾಸಕ ಅಮೃತ ದೇಸಾಯಿ ಹೇಳಿದರು.

ಬೆಂಬಲ ಬೆಲೆ ಯೋಜನೆ ಅಡಿಯಲ್ಲಿ ಎಫ್‌ಎಕ್ಯೂ ಗುಣಮಟ್ಟದ ಹೆಸರುಕಾಳು ಖರೀದಿ ಕೇಂದ್ರದ ಉದ್ಘಾಟನೆಯಲ್ಲಿ ಸೋಮವಾರ ಪಾಲ್ಗೊಂಡು ಅವರು ಮಾತನಾಡಿದರು.

‘ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆ ಅಡಿಯಲ್ಲಿ ಈ ಕೇಂದ್ರ ಇಲ್ಲಿ ಆರಂಭವಾಗಿದೆ. ಧಾರವಾಡ ತಾಲ್ಲೂಕಿನಲ್ಲಿ 12ಸಾವಿರ ಕ್ವಿಂಟಲ್ ಹೆಸರು ಉತ್ಪಾದನೆಯಾಗಿದೆ. ಮಾರುಕಟ್ಟೆಯಲ್ಲಿ ಹೆಸರುಕಾಳು ಕಡಿಮೆ ಬೆಲೆಯಲ್ಲಿ ಮಾರಾಟವಾಗುತ್ತಿದೆ. ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರ ಸಲ್ಲಿಸಿದ ಪ್ರಸ್ತಾವನೆ ಅಡಿಯಲ್ಲಿ ಪ್ರತಿ ಕ್ವಿಂಟಲ್ ಹೆಸರುಕಾಳು ಖರಿದಿಗೆ ₹6975ರಂತೆ ಖರೀದಿಸಲು ಸರ್ಕಾರ ಸೂಚಿಸಿದೆ. ಇದರ ಪ್ರಯೋಜನ ರೈತರಿಗೆ ದೊರೆಯಬೇಕೆಂದು ಜಿಲ್ಲೆಯಲ್ಲಿ ಒಟ್ಟು ಎಂಟು ಕೇಂದ್ರಗಳನ್ನು ಆರಂಭಿಸಲಾಗಿದೆ’ ಎಂದರು.

‘ನ್ಯಾಫೆಡ್ ಸಂಸ್ಥೆ, ಕೃಷಿ ಇಲಾಖೆ ಮತ್ತು ಕೃಷಿ ಉತ್ಪನ್ನ ಮಾರುಕಟ್ಟೆ ಇಲಾಖೆ ಸಂಯುಕ್ತವಾಗಿ ಜವಾಬ್ದಾರಿಯಿಂದ ಖರೀದಿ ಕಾರ್ಯವನ್ನು ನಿರ್ವಹಿಸಬೇಕು. ಹಿಂದೆ ಈರುಳ್ಳಿ, ನೆಲಗಡಲೆ, ಕಡಲೆ, ಹತ್ತಿ ಉತ್ಪನ್ನಗಳ ಖರೀದಿಯಲ್ಲಿ ರೈತರಿಗೆ ಸರಿಯಾದ ಮಾಹಿತಿ ಇಲ್ಲದೆ ಗೊಂದಲ ಉಂಟಾಗಿತ್ತು. ಅದರಲ್ಲಿನ ಕೆಲ ರೈತರಿಗೆ ಇನ್ನೂ ಬೆಂಬಲ ಬೆಲೆಯ ಲಾಭ ಸಿಕ್ಕಿಲ್ಲ. ಈಗ ಹೆಸರುಕಾಳು ಖರೀದಿಯಲ್ಲಿ ಅಂಥ ತಪ್ಪುಗಳು ಮರುಕಳಿಸದಂತೆ ಎಚ್ಚರಿಕೆ ವಹಿಸಬೇಕು’ ಎಂದರು.

‘ಎಪಿಎಂಸಿ ಆವರಣದಲ್ಲಿ ಪೊಲೀಸ್‌ ಚೌಕಿ ಆರಂಭ ಹಾಗೂ ಖರೀದಿ ಕೇಂದ್ರಗಳಲ್ಲಿ ಪಾರದರ್ಶಕತೆ ಕಾಪಾಡಲು ಸಿಸಿಟಿವಿ ಅಳವಡಿಸಲು ಆಡಳಿತ ಮಂಡಳಿ ಸದಸ್ಯರು ಬೇಡಿಕೆ ಇಟ್ಟಿದ್ದಾರೆ. ಇದನ್ನು ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು’ ಎಂದು ಅಮೃತ ದೇಸಾಯಿ ಹೇಳಿದರು.

ಖರೀದಿ ಕೇಂದ್ರ ಉದ್ಘಾಟಿಸಿದ ಸಂಸದ ಪ್ರಹ್ಲಾದ ಜೋಶಿ ಮಾತನಾಡಿ, ‘ರಾಜ್ಯ ಸರ್ಕಾರದ ಕೋರಿಕೆಯನ್ನು ಶೀಘ್ರವಾಗಿ ಒಪ್ಪಿದ ಕೇಂದ್ರ ಸರ್ಕಾರ, ಹೆಸರುಕಾಳು ಖರೀದಿಗೆ ಬೆಂಬಲ ಬೆಲೆ ನೀಡಲು ಆದೇಶಿಸಿದೆ. ರೈತರು ಮಾರಾಟ ಮಾಡಿದ ಉತ್ಪನ್ನಕ್ಕೆ ಮೂರು ದಿನಗಳ ಒಳಗಾಗಿ ಹಣ ಪಾವತಿಸಬೇಕು. ನ್ಯಾಫೆಡ್ ಸಂಸ್ಥೆ ಮೂಲಕ ಕೇಂದ್ರಕ್ಕೆ ಹೆಸರುಕಾಳು ತಲುಪಿದ 15 ದಿನಗಳಲ್ಲಿ ರಾಜ್ಯ ಸರ್ಕಾರಕ್ಕೆ ಹಣ ಸಿಗಲಿದೆ. ಇದಕ್ಕಾಗಿ ರಾಜ್ಯ ಸರ್ಕಾರ ತಕ್ಷಣವೇ ಆವರ್ತನಿಧಿ ಸ್ಥಾಪಿಸಬೇಕು. ಆ ಮೂಲಕ ಸಕಾಲಕ್ಕೆ ಹೆಸರುಕಾಳು ಉತ್ಪನ್ನ ಖರೀದಿಗೆ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.

‘ಗುಣಮಟ್ಟ ಕಾಯುವ ಸಲುವಾಗಿ ಅಧಿಕಾರಿಗಳಿಗೆ ರೈತರು ಸಹಕಾರ ನೀಡಬೇಕು. ರೈತರೊಂದಿಗೆ ಅಧಿಕಾರಿಗಳು ಮಾನವೀಯತೆಯಿಂದ ವರ್ತಿಸಬೇಕು. ವಿನಾಕಾರಣ ಎಫ್‌ಎಕ್ಯೂ ಮಾದರಿ ಅಥವಾ ಇತರ ತಾಂತ್ರಿಕ ಕಾರಣಗಳ ನೆಪಹೇಳಿ ತೊಂದರೆ ಕೊಡಬಾರದು’ ಎಂದರು.

ಅಧ್ಯಕ್ಷತೆ ವಹಿಸಿದ್ದ ಎಪಿಎಂಸಿ ಅಧ್ಯಕ್ಷ ಸಿದ್ದಣ್ಣ ಪ್ಯಾಟಿ ಮಾತನಾಡಿದರು. ತಹಶೀಲ್ದಾರ್ ಪ್ರಕಾಶ ಕುದರಿ, ಕೆಎಂಎಫ್ ಅಧ್ಯಕ್ಷ ಶಂಕರ ಮುಗದ, ಮಾರಾಟ ಮಹಾ ಮಂಡಳದ ಜಿಲ್ಲಾ ವ್ಯವಸ್ಥಾಪಕ ಮಲ್ಲಿಕಾರ್ಜುನ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !