ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

3 ಜಿಲ್ಲೆಯಲ್ಲಿ 30 ಲಕ್ಷ ಸಸಿ ನೆಡುವ ಗುರಿ

ಧಾರವಾಡ, ಗದಗ, ಹಾವೇರಿ ಜಿಲ್ಲೆಯಲ್ಲಿ ಅರಣ್ಯ ವೃದ್ಧಿಗೆ ಇಲಾಖೆ ಕ್ರಮ
Last Updated 5 ಜೂನ್ 2018, 8:15 IST
ಅಕ್ಷರ ಗಾತ್ರ

ಧಾರವಾಡ: ಅಖಂಡ ಧಾರವಾಡ ಜಿಲ್ಲೆ (ಧಾರವಾಡ, ಹಾವೇರಿ, ಗದಗ)ಯ ಭಾಗದ ಅರಣ್ಯದೊಳಗೆ ಹಾಗೂ ರಸ್ತೆ ಬದಿ, ನಗರ, ಗ್ರಾಮೀಣ ಪ್ರದೇಶಗಳಲ್ಲಿ ಅಂದಾಜು 30 ಲಕ್ಷ ಸಸಿಗಳನ್ನು ನೆಡುವ ಗುರಿಯನ್ನು ಅರಣ್ಯ ಇಲಾಖೆ ಹಾಕಿಕೊಂಡಿದೆ.

ಹಾವೇರಿ ಹಾಗೂ ಧಾರವಾಡ ಜಿಲ್ಲೆಯ ಅರಣ್ಯ ವ್ಯಾಪ್ತಿಯೊಳಗೆ ತಲಾ 4 ಲಕ್ಷ ಸಸಿಗಳನ್ನು, ಹಾಗೂ ಗದಗ ಜಿಲ್ಲೆಯಲ್ಲಿ  2 ಲಕ್ಷ
ಸಸಿಗಳನ್ನು ನೆಡುವ ಗುರಿ ಹೊಂದಲಾಗಿದೆ. ವಿವಿಧ ಪ್ರದೇಶಗಳಲ್ಲಿ 4 ಲಕ್ಷ ಹಾಗೂ 16 ಲಕ್ಷ ಸಸಿಗಳನ್ನು ಸಾರ್ವಜನಿಕರಿಗೆ ವಿತರಿಸಲಾಗುವುದು.

ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಟಿ.ವಿ.ಮಂಜುನಾಥ, ‘ಕಳೆದ ವರ್ಷ ಬರಗಾಲವಿದ್ದರೂ 46 ಲಕ್ಷ ಸಸಿಗಳನ್ನು ನೆಡಲಾಗಿತ್ತು. ಜನ ವಸತಿ ಪ್ರದೇಶದಲ್ಲಿ ನೆಡಲಾದ 4ಲಕ್ಷ ಸಸಿಗಳಲ್ಲಿ ಶೇ 90ರಷ್ಟು ಬದುಕುಳಿದಿವೆ. ಹಾಗೆಯೇ ಅರಣ್ಯದೊಳಗೆ ನೆಡಲಾದ 20ಲಕ್ಷ ಸಸಿಗಳಲ್ಲಿ ಶೇ 60ರಿಂದ 80ರಷ್ಟು ಸಸಿಗಳು ಬದುಕುಳಿದಿವೆ. ಹೀಗಾಗಿ ಈ ಬಾರಿ ನೆಡಬೇಕಿರುವ ಸಸಿಗಳ ಸಂಖ್ಯೆ ಕಡಿತಗೊಳಿಸಲಾಗಿದೆ’ ಎಂದರು.

‘ನರೇಗಾದಡಿ ಸಸಿಗಳನ್ನು ನೆಡಲಾಗುತ್ತಿದೆ. ಸಿರಿ ಚಂದನವನ, ಮಗುವಿಗೊಂದು ಮರ, ಶಾಲೆಗೊಂದು ವನ, ಹಸಿರು ನೆಮ್ಮದಿಯ ಗ್ರಾಮ ಯೋಜನೆ, ಕೃಷಿ ಅರಣ್ಯ ಯೋಜನೆ, ಆರ್‌ಎಸ್‌ಪಿಡಿ ಇತ್ಯಾದಿ ಯೋಜನೆಗಳ ಮೂಲಕ ಸಸಿ ಹಾಗೂ  ಬೀಜಗಳನ್ನು ಹಂಚಲಾಗುತ್ತಿದೆ’ ಎಂದು ತಿಳಿಸಿದರು.

ಕಳೆದ ವರ್ಷ 1,165 ಹೆಕ್ಟೇರ್ ಪ್ರದೇಶದಲ್ಲಿ ಸಸಿಗಳನ್ನು ನೆಡಲಾಗಿದೆ. ಉಳಿದೆಡೆ 824 ಕಿ.ಮೀ. ಉದ್ದಕ್ಕೆ ಸಸಿಗಳನ್ನು ಬೆಳೆಸಲಾಗಿದೆ. ಮಳೆಯ ಅಭಾವ, ಕಾಡು ಪ್ರಾಣಿ ಹಾಗೂ ಸಾಕು ಪ್ರಾಣಿಗಳು ತಿನ್ನುವುದರಿಂದ ಕೆಲವೊಂದಿಷ್ಟು ಸಸಿಗಳು ಬದುಕುಳಿಯುವುದಿಲ್ಲ’ ಎಂದರು.

‘ಪ್ಲಾಸ್ಟಿಕ್ ಮುಕ್ತ ಎಂಬುದು ಪರಿಸರ ದಿನದ ಘೋಷಣೆಯಾಗಿರುವುದರಿಂದ ಆ ಬಗ್ಗೆ ಹೆಚ್ಚು ಗಮನ ಕೇಂದ್ರೀಕರಿಸಲಾಗಿದೆ. ಮಳೆ ಉತ್ತಮವಾಗಿರುವುದರಿಂದ ಬೀಜ ನೆಟ್ಟರೂ ಮೊಳಕೆಯೊಡೆದು ಸಸಿಗಳಾಗುವ ಸಾಧ್ಯತೆ ಹೆಚ್ಚು. ಮಕ್ಕಳ ಮೂಲಕ ಶಾಲೆಗಳ ಸುತ್ತ–ಮುತ್ತ ನೆಡಲು ನೇರಳೆ, ಮಾವು, ಅಂಜೂರ, ಹಲಸು, ಶ್ರೀಗಂಧದ ಸಸಿ ಹಾಗೂ ಬೀಜಗಳನ್ನು ವಿತರಿಸಲು ಸಿದ್ಧತೆ ನಡೆದಿದೆ’ ಎಂದು ಮಂಜುನಾಥ ವಿವರಿಸಿದರು.

**
ಅಭಿವೃದ್ಧಿ ಯೋಜನೆಗಳಲ್ಲಿ ಅರಣ್ಯ ಇಲಾಖೆಗಾಗಿ ರಸ್ತೆ ಬದಿ 5 ಮೀ. ಜಮೀನು ಸ್ವಾಧೀನಪಡಿಸಿಕೊಳ್ಳುವ ಪ್ರಸ್ತಾವವನ್ನು ವಿಸ್ತೃತ ಯೋಜನಾ ವರದಿಯಲ್ಲಿ ಸೇರಿಸುವಂತೆ ಮನವಿ ಮಾಡಲಾಗಿದೆ
- ಟಿ.ವಿ.ಮಂಜುನಾಥ, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT