‘ಭಗವದ್ಗೀತೆ ಧರ್ಮಗ್ರಂಥ ಅನ್ನೋದಕ್ಕಿಂತಲೂ ಅದೊಂದು ಜೀವನಕ್ರಮ..’

7

‘ಭಗವದ್ಗೀತೆ ಧರ್ಮಗ್ರಂಥ ಅನ್ನೋದಕ್ಕಿಂತಲೂ ಅದೊಂದು ಜೀವನಕ್ರಮ..’

Published:
Updated:
Deccan Herald

ಧಾರವಾಡ ಜಿಲ್ಲೆಯಲ್ಲಿ ನಡೆಯುತ್ತಿರುವ ಭಗವದ್ಗೀತಾ ಅಭಿಯಾನದ ಕುರಿತು ಸ್ವರ್ಣವಲ್ಲಿ ಮಠಾಧೀಶ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿಯವರು ‘ಮೆಟ್ರೊ’ಕ್ಕೆ ನೀಡಿದ ಸಂದರ್ಶನದ ಸಾರಾಂಶ ಇಲ್ಲಿದೆ.

*11 ವರ್ಷಗಳಿಂದ ನಡೆಯುತ್ತಿರುವ ಭಗವದ್ಗೀತಾ ಅಭಿಯಾನದ ಫಲಶ್ರುತಿ ಹೇಗಿದೆ?

ಸ್ವಾಮೀಜಿ: ಒಳ್ಳೆಯ ಪ್ರತಿಫಲ ಸಿಕ್ಕಿದೆ. ಜನರಿಂದ ಒಳ್ಳೆಯ ಪ್ರತಿಕ್ರಿಯೆಯಿದೆ. ನಾಲ್ಕು ವರ್ಷಗಳಿಂದ ಪ್ರತಿಭಾ ಕಾರಂಜಿಯ ಸ್ಪರ್ಧಾ ವಿಭಾಗದಲ್ಲಿ ಭಗವದ್ಗೀತೆ ಶ್ಲೋಕ ಪಠಣ ಸ್ಪರ್ಧೆಯನ್ನು ನಡೆಸಲಾಗುತ್ತಿದೆ. ಇದು ಒಳ್ಳೆಯ ಬೆಳವಣಿಗೆ. ಶೃಂಗೇರಿ ಮಠದಿಂದ ದೊಡ್ಡ ಮೊತ್ತದ ಬಹುಮಾನದೊಂದಿಗೆ ಭಗವದ್ಗೀತೆ ಸ್ಪರ್ಧೆ ನಡೆಯುತ್ತಿದ್ದು, ನಮ್ಮ ಅಭಿಯಾನದಲ್ಲಿ ಪಾಲ್ಗೊಂಡರು ಬಹುಮಾನವನ್ನು ತಮ್ಮದಾಗಿಸಿಕೊಂಡಿದ್ದಾರೆ. ಉತ್ತರ ಕರ್ನಾಟಕದ ನೂರಾರು ಶಾಲೆಗಳಲ್ಲಿ ಭಗವದ್ಗೀತೆ ಪಠಣ ನಡೆಯುತ್ತಿದೆ. ಬೆಳಗಾವಿಯ ಹಿಂಡಲಗಾ ಜೈಲುವಾಸಿಗಳಿಂದ ಪತ್ರ ಬಂದಿದ್ದು, ಗೀತಾ ಪಠಣದಿಂದ ತಮಗೆ ಒಳ್ಳೆಯದಾಗಿದೆ ಎಂದು ತಿಳಿಸಿದ್ದಾರೆ. ಅಭಿಯಾನ ಇದೊಂದು ಪ್ರವಾಹವಿದ್ದಂತೆ. ಆಗಬೇಕಾದದ್ದು ಇನ್ನು ಬಹಳಷ್ಟಿವೆ.

*ಭಗವದ್ಗೀತೆ ಖಿನ್ನತೆಗೆ ಯಾವ ರೀತಿಯಲ್ಲಿ ಪರಿಹಾರ ನೀಡಲಿದೆ?

–ಮನುಷ್ಯ ಯಾವುದೇ ವಿಷಯದಲ್ಲಿ ಅತಿಯಾದ ಹಾಗೂ ನಿರಂತರ ಯೋಚನೆಗೆ ಬಿದ್ದಾಗ ಮನಸ್ಸು ಖಿನ್ನತೆಗೆ ಜಾರಲಿದೆ. ಆತ್ಮಹತ್ಯೆಗೂ ಪ್ರೇರಣೆ ನೀಡಲಿದೆ. ಖಿನ್ನತೆಗೆ ಭಗವದ್ಗೀತೆ ಹೇಗೆ ಪರಿಹಾರ ನೀಡಲಿದೆ ಎನ್ನಲು ಅರ್ಜುನನೇ ಉದಾಹರಣೆ. ಯುದ್ಧಭೂಮಿಯಲ್ಲಿ ನಿಂತು ಯುದ್ಧ ಮುಂದುವರಿಸಲೋ, ಬೇಡವೋ ಎಂಬ ಗೊಂದಲದಲ್ಲಿದ್ದಾಗ ಅದು ಆತನನ್ನು ಖಿನ್ನತೆಗೆ ದೂಡುತ್ತದೆ. ಆಗ ಶ್ರೀಕೃಷ್ಣನ ಗೀತೋಪದೇಶ ಅವನನ್ನು ಆ ಗೊಂದಲದಿಂದ ಹೊರಬರುವಂತೆ ಮಾಡಿ, ಖಿನ್ನತೆಗೆ ಪರಿಹಾರವಾಗುತ್ತದೆ.

ವೈಜ್ಞಾನಿಕವಾಗಿ ಹೇಳಬೇಕೆಂದರೆ ಭಗವದ್ಗೀತೆ ಪಠಣದಿಂದ ಮನಸ್ಸನ್ನು ಬೇರೆಡೆಗೆ ಸೆಳೆದು ಆ ಮೂಲಕ ಖಿನ್ನತೆಗೆ ಪರಿಹಾರ ಪಡೆಯಬಹುದು. ಭಗವದ್ಗೀತೆಯನ್ನು ಶ್ರದ್ಧೆಯಿಂದ ಕೇಳಬೇಕು, ಜೀವನದಲ್ಲಿ ಕ್ರಮಬದ್ಧವಾಗಿ ರೂಢಿಸಿಕೊಂಡಾಗ ಖಿನ್ನತೆ ಹಾಗೂ ರೋಗಗಳಿಂದ ದೂರವಿರಬಹುದು. ಗೀತೆ ಪಠಣದಿಂದ ಆಹಾರ, ನಿದ್ದೆ, ವ್ಯವಹಾರದಲ್ಲಿ ಯುಕ್ತತೆಯನ್ನು ಸಾಧಿಸಬಹುದು. ಇಂದಿನ ಒತ್ತಡದ ಯುಗದಲ್ಲಿ ರೋಗ, ಆತ್ಮಹತ್ಯೆ ಪ್ರವೃತ್ತಿ ಹೆಚ್ಚುತ್ತಿದೆ. ಗೀತೆ ಪಠಣದಿಂದ ಕಾರ್ಯಕ್ಷಮತೆ ಹೆಚ್ಚಿ ಒತ್ತಡದಿಂದ ಮುಕ್ತರಾಗಬಹುದು.

*ಸಾಮಾಜಿಕವಾಗಿ ಯಾವ ತರಹದ ಬದಲಾವಣೆಗಳನ್ನು ಕಾಣಬಹುದು?

–ಇತ್ತೀಚೆಗೆ ಹೃದಯ ಸಂಬಂಧಿ ಕಾಯಿಲೆಯಿಂದ ಕಿರಿ ವಯಸ್ಸಿನವರು ಜೀವನದ ಅಂತ್ಯ ಕಾಣುತ್ತಿದ್ದಾರೆ. ವಿಶೇಷವಾಗಿ ಭಾರತೀಯರಲ್ಲಿ ಸರಾಸರಿ ಜೀವಿಸುವ ವಯಸ್ಸು ಕಮ್ಮಿಯಾಗುತ್ತಿದೆ. ಉದ್ವೇಗ ಹೆಚ್ಚುತ್ತಿದೆ. ಮಾನಸಿಕ ಹಾಗೂ ದೈಹಿಕ ಕಾಯಿಲೆಗಳು ಹೆಚ್ಚುತ್ತಿವೆ. ಅಪರಾಧ ಪ್ರಕರಣಗಳು ಏರುಮುಖವಾಗಿ ಸಾಗುತ್ತಿದೆ. ಇಂಥ ಸಮಸ್ಯೆಗಳಿಗೆಲ್ಲ ಭಗವದ್ಗೀತೆ ಟಾನಿಕ್‌ ಇದ್ದಂತೆ. ಭಗವದ್ಗೀತೆಯನ್ನು ಜೀವನದಲ್ಲಿ  ಕ್ರಮಬದ್ಧವಾಗಿ ಅಳವಡಿಸಿಕೊಂಡರೆ ಪರಿಹಾರ ಸಿಗಲಿದೆ. ರೋಗ ಬಂದ ಮೇಲೆ ಒದ್ದಾಡುವುದಕ್ಕಿಂತ ಬರದಂತೆ ನೋಡಿಕೊಳ್ಳುವುದು ಅತ್ಯಗತ್ಯ. ಇಂದಿನ ದಿನಗಳಲ್ಲಿ ಉದ್ವೇಗ ಅನಿವಾರ್ಯ. ಅದನ್ನು ಕರಗಿಸಿಕೊಳ್ಳಲು ಉಪಾಯ ಭಗವದ್ಗೀತೆಯಲ್ಲಿದೆ.

*ಭಗವದ್ಗೀತೆ ಮಕ್ಕಳ ಮನಸ್ಸಿನ ಮೇಲೆ ಹೇಗೆ ಪರಿವರ್ತನೆಯನ್ನುಂಟುಮಾಡಿದೆ ?

–ಶಾಲೆಗಳಲ್ಲಿ ಕಂಡು ಬಂದ ಅನುಭವಗಳಿವು–ಮಕ್ಕಳಲ್ಲಿ ಸಾತ್ವಿಕವಾದ ಬದಲಾವಣೆಯಾಗಿದೆ. ಭಗವದ್ಗೀತೆ ಮಕ್ಕಳಿಗೆ ಅರ್ಥವಾಗದಿದ್ದರೂ ಅವರಲ್ಲಿ ಏಕಾಗ್ರತೆ, ಸಾತ್ವಿಕ ಪ್ರವೃತ್ತಿ ಹೆಚ್ಚಿಸಿದೆ. ಇದರಿಂದ ಓದಿನಲ್ಲಿ ಪ್ರಗತಿ ಆಗಿದೆ.

*ಶಾಲಾ ಪಠ್ಯಕ್ರಮದಲ್ಲಿ ಭಗವದ್ಗೀತೆ ಅಳವಡಿಸುವ ನಿಮ್ಮ ಪ್ರಯತ್ನ ಎಲ್ಲಿಗೆ ಬಂದಿದೆ?

–ಪ್ರಯತ್ನ ಮುಂದುವರಿದಿದೆ. ಯೋಗವನ್ನು ಹೇಗೆ ಅಳವಡಿಸಿಕೊಳ್ಳಲಾಗಿದೆಯೋ ಹಾಗೆ ಮುಂದಿನ ದಿನಗಳಲ್ಲಿ ಕ್ರಮೇಣ ಪಠ್ಯದಲ್ಲಿ ಅಳವಡಿಕೆಯಾಗಲಿದೆ ಎಂಬ ಭರವಸೆ ಇದೆ. ಸರ್ಕಾರ ಅಧಿಕೃತವಾಗಿ ಪಠ್ಯದಲ್ಲಿ ಅಳವಡಿಸದಿದ್ದರೂ ಕೆಲವು ಶಾಲೆಗಳಲ್ಲಿ ಭಗವದ್ಗೀತೆ ಪಠಣ ನಡೆಯುತ್ತಿದೆ. ಪ್ರತಿಭಾ ಕಾರಂಜಿಯಲ್ಲಿ ಈಗಾಗಲೇ ಸ್ಪರ್ಧೆಯಾಗಿದೆ.

*ಭಗವದ್ಗೀತೆ ಇಂದಿನ ಜೀವನಕ್ಕೆ ಎಷ್ಟು ಅವಶ್ಯ?

–ಭಗವದ್ಗೀತೆ ಅದೊಂದು ಧರ್ಮಗ್ರಂಥ ಅನ್ನೋದಕ್ಕಿಂತ ಅದೊಂದು ಜೀವನಕ್ರಮ ಅನ್ನೋ ವಿಚಾರಕ್ಕೆ ಹೆಚ್ಚು ಒತ್ತು ಕೊಡಬೇಕಿದೆ.

*ಮುಂದಿನ ಭಗವದ್ಗೀತೆ ಅಭಿಯಾನ ಎಲ್ಲಿ?

–ಮುಂದಿನ ಅಭಿಯಾನ ಎಲ್ಲಿ ಅನ್ನೋದು ಇನ್ನೂ ನಿರ್ಧಾರವಾಗಿಲ್ಲ. ಆದರೂ ನಿರಂತರವಾಗಿರಲಿದೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !