ಕುಂದಗೋಳ: ಹೆರಿಗೆ ನೋವಿನಿಂದ ಬಳಲುತ್ತಿದ್ದ ಗರ್ಭಿಣಿಯೊಬ್ಬರನ್ನು ಆಸ್ಪತ್ರೆಗೆ ಸಾಗಿಸುವಾಗ ಆಂಬುಲೆನ್ಸ್‌ನಲ್ಲಿ ಅವಳಿ ಗಂಡು ಮಕ್ಕಳಿಗೆ ಜನ್ಮ ನೀಡಿದ ಘಟನೆ ಬುಧವಾರ ಬೆಳಿಗ್ಗೆ ನಡೆದಿದೆ.
ಕುಂದಗೋಳ ತಾಲ್ಲೂಕಿನ ದೇವನೂರು ಗ್ರಾಮದ ಅಕ್ಕಮಹಾದೇವಿ ಗೋಡಿ ಎಂಬುವವರಿಗೆ ಬುಧವಾರ ನಸುಕಿನಲ್ಲಿ ಹೆರಿಗೆ ನೋವು ಕಾಣಿಸಿದೆ, ತಕ್ಷಣ ಕುಟುಂಬಸ್ಥರು ಆಂಬುಲೆನ್ಸ್ ಕರೆ ಮಾಡಿದ್ದಾರೆ. ಕುಂದಗೋಳ ಸರ್ಕಾರಿ ಆಸ್ಪತ್ರೆಯ ಆಂಬುಲೆನ್ಸ್ ದೇವನೂರು ಗ್ರಾಮಕ್ಕೆ ಆಗಮಿಸಿ ಗರ್ಭಿಣಿಯನ್ನು ಆಸ್ಪತ್ರೆಗೆ ಕರೆ ತರುವ ವೇಳೆ ಹೆರಿಗೆ ನೋವು ಹೆಚ್ಚಾಗಿ ದೇವನೂರು-ಕುಂದಗೋಳ ಮಾರ್ಗ ಮಧ್ಯೆ ಮಹಿಳೆ ಆಂಬುಲೆನ್ಸ್'ನಲ್ಲಿ ಅವಳಿ ಗಂಡು ಮಕ್ಕಳಿಗೆ ಜನ್ಮ ನೀಡಿದ್ದಾರೆ.
ಆಂಬುಲೆನ್ಸ್ ನರ್ಸಿಂಗ್ ಆಫೀಸರ್ ಪರಶುರಾಮ ಚಂದಾವರಿ ಹೆರಿಗೆ ಸಮಯದಲ್ಲಿ ಸೂಕ್ತ ಪ್ರಜ್ಞೆ ವಹಿಸಿ ಸುರಕ್ಷತೆಯಿಂದ ಅವಳಿ ಮಕ್ಕಳ ಹೆರಿಗೆ ಮಾಡಿಸಿದ್ದಕ್ಕೆ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಆಂಬುಲೆನ್ಸ್ ಚಾಲಕ ಸೋಮಪ್ಪ, ಆಶಾ ಕಾರ್ಯಕರ್ತೆ ಶಾಂತಾ ಕಮಡೊಳ್ಳಿ ಸಹಾಯ ಮಾಡಿದರು.
ಮಹಿಳೆಯ ಪ್ರಸವ ನಂತರದ ಆರೈಕೆಯನ್ನು ಕುಂದಗೋಳ ತಾಲ್ಲೂಕು ಆಸ್ಪತ್ರೆಯಲ್ಲಿ ನೀಡಲಾಯಿತು. ತಾಯಿ ಮತ್ತು ಅವಳಿ ಮಕ್ಕಳು ಆರೋಗ್ಯವಾಗಿದ್ದಾರೆ ಎಂದು ಡಾ.ಗಿರೀಶ್ ಮರಡ್ಡಿ ತಿಳಿಸಿದ್ದಾರೆ.
ಕುಂದಗೋಳ ತಾಲ್ಲೂಕಿನ ದೇವನೂರ- ಕುಂದಗೋಳ ಮಾರ್ಗ ನಡುವೆ ಆಂಬುಲೆನ್ಸ್‌ನಲ್ಲಿ ಸಿಬ್ಬಂದಿ ಗರ್ಭಿಣಿಗೆ ಸುರಕ್ಷಿತವಾಗಿ ಹೆರಿಗೆ ಮಾಡಿಸಿದರು