ಭಾನುವಾರ, ಆಗಸ್ಟ್ 18, 2019
22 °C

ತ್ರಿವಳಿ ತಲಾಖ್‌ ನಿಷೇಧ: ಬಿಜೆಪಿ ಸ್ವಾಗತ

Published:
Updated:

ಹುಬ್ಬಳ್ಳಿ: ಕೇಂದ್ರ ಸರ್ಕಾರವು ತ್ರಿವಳಿ ತಲಾಖ್‌ ಅನ್ನು ನಿಷೇಧಿಸಿ ಕಾನೂನು ಜಾರಿಗೆ ತಂದಿರುವುದನ್ನು ಹುಬ್ಬಳ್ಳಿ–ಧಾರವಾಡ ಮಹಾನಗರ ಜಿಲ್ಲಾ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಎಂ.ಎಚ್‌.ಚಳ್ಳಮರದ ಸ್ವಾಗತಿಸಿದರು.

ತ್ರಿವಳಿ ತಲಾಖ್‌ ಅನ್ನು ನಿಷೇಧಿಸುವ ಮೂಲಕ ಮುಸ್ಲಿಂ ಮಹಿಳೆಯರಿಗೆ ದೊಡ್ಡ ಕೊಡುಗೆ ನೀಡಿರುವ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಭಿನಂದಿಸುವುದಾಗಿ ಅವರು ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ವಿಶ್ವದ 24 ಮುಸ್ಲಿಂ ರಾಷ್ಟ್ರಗಳಲ್ಲಿ ಈಗಾಗಲೇ ತ್ರಿವಳಿ ತಲಾಖ್‌ ನಿಷೇಧಿಸಲಾಗಿದೆ. ಇದರಿಂದ ಮುಸ್ಲಿಂ ಮಹಿಳೆಯರು ಧೈರ್ಯದಿಂದ ಜೀವನ ಸಾಗಿಸಲು ಅನುವು ಮಾಡಿಕೊಟ್ಟಂತಾಗಿದೆ ಎಂದರು.

ಬಿಜೆಪಿ ಅಲ್ಪ ಸಂಖ್ಯಾತ ಮೋರ್ಚಾದ ರಾಜ್ಯ ಘಟಕದ ಉಪಾಧ್ಯಕ್ಷ ಇಮ್ತಿಯಾಜ್‌ ಮುಲ್ಲಾ, ವಾಟ್ಸ್‌ಆ್ಯಪ್‌ ಮೂಲಕವೂ ತ್ರಿವಳಿ ತಲಾಖ್‌ ನೀಡುವ ಮೂಲಕ ದುರುಪಯೋಗಪಡಿಸಿ ಕೊಳ್ಳಲಾಗುತ್ತಿತ್ತು. ಇದನ್ನು ನಿಷೇಧಿಸಿರುವುದರಿಂದ ಅನುಕೂಲವಾಗಿದೆ ಎಂದು ಹೇಳಿದರು.

ಟಿಪ್ಪು ಜಯಂತಿಯನ್ನು ಸರ್ಕಾರ ಆಚರಿಸಲು ಆರಂಭಿಸಿದ ಬಳಿಕ ಕೋಮುಗಲಭೆ, ಗಲಾಟೆಗಳು ಆರಂಭವಾಯಿತು. ಈ ಹಿನ್ನೆಲೆಯಲ್ಲಿ ಜಯಂತಿಯನ್ನು ರಾಜ್ಯ ಸರ್ಕಾರ ರದ್ದುಪಡಿಸಿದೆ. ಸರ್ಕಾರದ ಕ್ರಮ ತಪ್ಪೋ, ಸರಿಯೋ ಎಂಬುದರ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಆದರೆ, ಪ್ರತಿ ವರ್ಷ ಮುಸ್ಲಿಂ ಸಮಾಜದಿಂದ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಲಾಗುವುದು ಎಂದು ಹೇಳಿದರು.

ಸಿಹಿ ಹಂಚಿ ಸಂಭ್ರಮ: ತ್ರಿವಳಿ ತಲಾಖ್‌ ನಿಷೇಧ ಮಾಡಿರುವ ಕೇಂದ್ರ ಸರ್ಕಾರದ ಕ್ರಮವನ್ನು ಸ್ವಾಗತಿಸಿ ಮುಸ್ಲಿಂ ಮಹಿಳೆಯರು ಬಿಜೆಪಿ ಮಹಾನಗರ ಜಿಲ್ಲಾ ಸಮಿತಿ ಅಧ್ಯಕ್ಷ ನಾಗೇಶ ಕಲಬುರ್ಗಿ ಅವರಿಗೆ ಸಿಹಿ ತಿನಿಸುವ ಮೂಲಕ ಸಂಭ್ರಮಿಸಿದರು.

ಬಿಜೆಪಿ ಮುಖಂಡರಾದ ದತ್ತಮೂರ್ತಿ ಕುಲಕರ್ಣಿ, ಮಕ್ತೂಮ್‌ ಸಾಬ್‌ ನಾಯ್ಕರ್‌, ಹನುಮಂತಪ್ಪ ದೊಡ್ಡಮನಿ ಇದ್ದರು.

Post Comments (+)