ಭಾನುವಾರ, ನವೆಂಬರ್ 17, 2019
29 °C

ಮಧ್ಯಂತರ ಚುನಾವಣೆಗೆ ಬಿಜೆಪಿ ಹುನ್ನಾರ: ರಾಯರಡ್ಡಿ

Published:
Updated:

ಹುಬ್ಬಳ್ಳಿ: ‘ಕಾಂಗ್ರೆಸ್‌ನ ಇಬ್ಬರು ಶಾಸಕರ ರಾಜೀನಾಮೆ ಪ್ರಹಸನದ ಹಿಂದೆ ಬಿಜೆಪಿ ಇದೆ. ಇಂತಹ ಗೊಂದಲಗಳನ್ನು ಸೃಷ್ಟಿಸಿ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಿ, ಮಧ್ಯಂತರ ಚುನಾವಣೆ ನಡೆಸಲು ಬಿಜೆಪಿಯವರು ಹುನ್ನಾರ ನಡೆಸುತ್ತಿದ್ದಾರೆ’ ಎಂದು ಕಾಂಗ್ರೆಸ್ ಮುಖಂಡ ಬಸವರಾಜ ರಾಯರಡ್ಡಿ ಆರೋಪಿಸಿದರು.

‘ಆಪರೇಷನ್ ಕಮಲ ನಡೆಸಿ ಸರ್ಕಾರವನ್ನು ಬೀಳಿಸಿ, ತಕ್ಷಣ ಬಿ.ಎಸ್. ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಮಾಡಲು ಸ್ವತಃ ಬಿಜೆಪಿ ಹೈಕಮಾಂಡ್‌ಗೆ ಇಷ್ಟವಿಲ್ಲ. ಹಾಗಾಗಿ, ಹಿಂಬಾಗಿಲ ಮೂಲಕ ಸರ್ಕಾರ ಬೀಳಿಸಲು ಯತ್ನಿಸುತ್ತಿದ್ದಾರೆ’ ಎಂದು ಹುಬ್ಬಳ್ಳಿಯಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಸದ್ಯ 120 ಸಂಖ್ಯಾಬಲವಿರುವ ಸರ್ಕಾರವನ್ನು ಕೆಡವಲು ಕನಿಷ್ಠ 16 ಶಾಸಕರನ್ನು ಖರೀದಿಸಬೇಕು. ಒಬ್ಬೊಬ್ಬರು ಕನಿಷ್ಠ ₹30 ಕೋಟಿ ಕೇಳುತ್ತಾರೆ. ಅದಕ್ಕಾಗಿ ₹600 ಕೋಟಿ  ಬೇಕಾಗುತ್ತದೆ. ಈ ಲೆಕ್ಕಾಚಾರವೆಲ್ಲ ಗೊತ್ತಿರುವುದರಿಂದಲೇ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಹಾಗೂ ಗೃಹ ಸಚಿವರೂ ಆಗಿರುವ ಅಮಿತ್ ಶಾ, ಅಷ್ಟು ಖರ್ಚು ಮಾಡುವ ಬದಲು ಹೊಸದಾಗಿ ಚುನಾವಣೆ ಎದುರಿಸುವುದೇ ಲೇಸು ಎಂಬ ಆಲೋಚನೆಯಲ್ಲಿದ್ದಾರೆ’ ಎಂದರು.

‘ಶಾಸಕರಾದ ಆನಂದ್ ಸಿಂಗ್ ಹಾಗೂ ರಮೇಶ ಜಾರಕಿಹೊಳಿ ಅವರ ರಾಜೀನಾಮೆ ಅಸಿಂಧುಗೊಳ್ಳಲಿದೆ. ಇದು ಅವರಿಗೆ ಗೊತ್ತಿದ್ದರೂ, ಒತ್ತಡದ ರಾಜಕೀಯ ಮಾಡುತ್ತಿದ್ದಾರೆ. ರಾಜೀನಾಮೆ ಅಂಗೀಕರಿಸಲು ಸ್ಪೀಕರ್‌ಗೆ ಒಂದು ತಿಂಗಳು ಕಾಲಾವಕಾಶವಿದೆ. ಒಬ್ಬಿಬ್ಬರು ಈ ರೀತಿ ಮಾಡುವುದರಿಂದ ಸರ್ಕಾರ ಬೀಳುವುದಿಲ್ಲ. ಇದರಿಂದ ಅವರಿಗೇ ನಷ್ಟವಾಗಲಿದೆ’ ಎಂದು ಹೇಳಿದರು.

ಕಾಂಗ್ರೆಸ್‌ಗೆ ನಷ್ಟವಾಗಿದೆ:

‘ಮೈತ್ರಿಯಿಂದಾಗಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ನಷ್ಟವಾಗಿರುವುದು ನಿಜ. ಕೋಮುವಾದಿ ಬಿಜೆಪಿಯನ್ನು ಅಧಿಕಾರದಿಂದ ದೂರ ಇಡುವುದೇ ಮೈತ್ರಿಯ ಉದ್ದೇಶವಾಗಿತ್ತು. ಗಂಡ– ಹೆಂಡತಿ ಮಧ್ಯೆ ಜಗಳ ಸಾಮಾನ್ಯವಾಗಿ ಇರುತ್ತದೆ. ಸೂಕ್ತ ಕಾರಣವಿದ್ದಾಗ ಮಾತ್ರ ವಿಚ್ಛೇದನ ಸಿಗುತ್ತದೆ. ಎಲ್ಲಿಯವರೆಗೆ ನಮ್ಮ ಸಂಬಂಧ ಗಟ್ಟಿಯಾಗಿರುತ್ತದೊ, ಅಲ್ಲಿಯವರೆಗೆ ಮೈತ್ರಿ ಮುಂದುವರಿಯುತ್ತದೆ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಪ್ರತಿಕ್ರಿಯಿಸಿ (+)