ಬುಧವಾರ, ಸೆಪ್ಟೆಂಬರ್ 18, 2019
23 °C

ಬಿಜೆಪಿ ಸರ್ಕಾರಕ್ಕೂ ಮೈತ್ರಿ ಸರ್ಕಾರದ ಪರಿಸ್ಥಿತಿ ಎದುರಾಗಲಿದೆ: ಹೊರಟ್ಟಿ

Published:
Updated:

ಹುಬ್ಬಳ್ಳಿ: 'ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರಕ್ಕೆ ಮುಕ್ತವಾಗಿ ಆಡಳಿತ ನಡೆಸಲು ಕೇಂದ್ರದ ಬಿಜೆಪಿ ನಾಯಕರು ಸಂಪೂರ್ಣ ಸ್ವಾತಂತ್ರ್ಯ ನೀಡಬೇಕು. ಇಲ್ಲದಿದ್ದರೆ ಸಮ್ಮಿಶ್ರ ಸರ್ಕಾರಕ್ಕೆ ಬಂದ ಪರಿಸ್ಥಿತಿಯೇ ಎದುರಾಗಲಿದೆ' ಎಂದು ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಭವಿಷ್ಯ ನುಡಿದರು.

ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಬಿಜೆಪಿ ಹೈಕಮಾಂಡ್, ಯಡಿಯೂರಪ್ಪ ಅವರನ್ನು ಕಟ್ಟಿ ಹಾಕುತ್ತಿದೆ. ಎಲ್ಲ ಜಾತಿಯ ನಾಯಕರನ್ನು ಸಮಾಧಾನಿಸಲು ಮೂರು, ನಾಲ್ಕು ಉಪ ಮುಖ್ಯಮಂತ್ರಿಗಳನ್ನು ನೇಮಕ ಮಾಡಲು ಹೊರಟಿದೆ. ಹೈಕಮಾಂಡ್ ಹೇಳಿದಂತೆ ಆಡಳಿತ ನಡೆಸುವ ಪರಿಸ್ಥಿತಿ ಮುಂದುವರಿದರೆ ಈ ಸರ್ಕಾರವೂ ಶೀಘ್ರ ಪತನವಾಗಲಿದೆ' ಎಂದರು.

'ಮೈತ್ರಿ ಸರ್ಕಾರ ಪತನದ ನಂತರ ಎಚ್.ಡಿ. ದೇವೇಗೌಡ, ಸಿದ್ದರಾಮಯ್ಯ ಇಬ್ಬರೂ ದುಡುಕಿ ಮಾತನಾಡುತ್ತಿದ್ದಾರೆ. ಇದರಿಂದ ಎರಡೂ ಪಕ್ಷಕ್ಕೆ ಸಾಕಷ್ಟು ಹಾನಿಯಾಗಲಿದೆ. ಸಮನ್ವಯ ಸಮಿತಿ ಈಗಲೂ ಅಸ್ತಿತ್ವದಲ್ಲಿದೆ ಈ ಬಗ್ಗೆ ಕೂಲಂಕಷ ಚರ್ಚೆ ನಡೆಸಬಹುದಿತ್ತು. ಇಲ್ಲವೇ, ನಾಲ್ಕು ಗೋಡೆಗಳ ನಡುವೆ ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸಿಕೊಳ್ಳಬಹುದಿತ್ತು' ಎಂದರು.

‘ಜೆಡಿಎಸ್‌ ಜತೆಗೆ ಮೈತ್ರಿ ಮಾಡಿಕೊಳ್ಳಲು ಸಿದ್ದರಾಮಯ್ಯ ಅವರಿಗೆ ಮನಸ್ಸಿರಲಿಲ್ಲ. ಹೈಕಮಾಂಡ್‌ ಒತ್ತಡಕ್ಕೆ ಬಿದ್ದು ಅವರು ಒಲ್ಲದ ಮನಸ್ಸಿನಿಂದ ಒಪ್ಪಿಕೊಂಡಿದ್ದರು. ಅಲ್ಲದೆ, ಎರಡು ಪಕ್ಷದ ಮುಖಂಡರು ಗಡಿಬಿಡಿಯಲ್ಲಿ ಮೈತ್ರಿ ಮಾಡಿಕೊಂಡು ನಾಡಿನ ಜನತೆಯ ಎದುರು ತಲೆ ತಗ್ಗಿಸುವಂತೆ ಮಾಡಿದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿದರು.

Post Comments (+)