ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಕಲು ಮಾಡಿದವರ ಪರ ಕಾಂಗ್ರೆಸ್‌ ಲಾಬಿ ಮಾಡುತ್ತಿದೆ: ಸಿ.ಟಿ. ರವಿ ಆರೋಪ

Last Updated 30 ಏಪ್ರಿಲ್ 2022, 12:59 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಪಿಎಸ್‌ಐ ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎಂದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಆದ್ದರಿಂದ ಸರ್ಕಾರ ಮರುಪರೀಕ್ಷೆ ನಡೆಸುವ ಸರಿಯಾದ ನಿರ್ಧಾರ ತೆಗೆದುಕೊಂಡಿದೆ. ಇದನ್ನು ವಿರೋಧಿಸುತ್ತಿರುವ ವಿರೋಧ ಪಕ್ಷಗಳು ಪರೀಕ್ಷೆಯಲ್ಲಿ ನಕಲು ಮಾಡಿದವರ ಪರ ಲಾಬಿ ಮಾಡುತ್ತಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಆರೋಪಿಸಿದರು.

ನಗರದಲ್ಲಿ ಶನಿವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು ‘ಈಗಿನ ಆಯ್ಕೆಪಟ್ಟಿಯನ್ನು ರದ್ದು ಮಾಡುವುದರಿಂದ ಪ್ರಾಮಾಣಿಕವಾಗಿ ಪರೀಕ್ಷೆ ಬರೆದ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತದೆ ನಿಜ. ಆದರೆ, ಪಾರದರ್ಶಕವಾಗಿ ಆಯ್ಕೆ ನಡೆಯಲು ಮರುಪರೀಕ್ಷೆ ಉತ್ತಮ ನಿರ್ಧಾರ. ಮರುಪರೀಕ್ಷೆಯ ಬದಲು ಇದೇ ಪಟ್ಟಿಯನ್ನು ಮುಂದುವರಿಸಿದ್ದರೂ ವಿರೋಧ ಪಕ್ಷಗಳು ಟೀಕಿಸುತ್ತಿದ್ದವು’ ಎಂದರು.

‘ಮರು ಪರೀಕ್ಷೆ ನಡೆಸುವಾಗ ಹಿಂದೆ ಆದ ಯಾವ ತಪ್ಪುಗಳು ಮರುಕಳಿಸದಂತೆ ಎಚ್ಚರಿಕೆ ವಹಿಸಬೇಕು. ತನಿಖೆ ಪೂರ್ಣಗೊಂಡು ದೋಷಾರೋಪ ಪಟ್ಟಿ ಸಲ್ಲಿಸಿ ನ್ಯಾಯಾಲಯ ತೀರ್ಪು ಕೊಡುವ ತನಕ ಕಾದಿದ್ದರೆ ಈಗ ಆಯ್ಕೆಯಾದ ವಿದ್ಯಾರ್ಥಿಗಳು ನಿವೃತ್ತಿ ವಯಸ್ಸಿಗೆ ಬಂದಿರುತ್ತಿದ್ದರು. ಆದ್ದರಿಂದ ಮರುಪರೀಕ್ಷೆ ನಿರ್ಧಾರ ಸರಿಯಿದೆ’ ಎಂದು ಸರ್ಕಾರದ ನಿರ್ಧಾರ ಸಮರ್ಥಿಸಿಕೊಂಡರು.

ಮತಬ್ಯಾಂಕ್‌ ರಾಜಕಾರಣ: ಸಂವಿಧಾನದಲ್ಲಿ ನಂಬಿಕೆಯಿಡದೇ ಕೇವಲ ಮತಬ್ಯಾಂಕ್‌ ರಾಜಕಾರಣಕ್ಕಾಗಿ ಕಾಂಗ್ರೆಸ್‌ ಮತಾಂಧತೆಯನ್ನು ಬೆಂಬಲಿಸುತ್ತಿದೆ. ತುಕಡೇ ಗ್ಯಾಂಗ್‌ಗಳಿಗೂ ಪ್ರೋತ್ಸಾಹಿಸುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

’ಹಳೇ ಹುಬ್ಬಳ್ಳಿ ಪ್ರಕರಣದ ಆರೋಪಿಗಳ ಕುಟುಂಬಕ್ಕೆ ಕಿಟ್‌ ವಿತರಿಸಲು ಮುಂದಾದ ಜಮೀರ್‌ ಅಹ್ಮದ್‌ ಹಾಗೂ ಕಾಂಗ್ರೆಸ್‌ ತನಿಖೆ ಪೂರ್ಣಗೊಳ್ಳುವ ಮೊದಲೇ ಆರೋಪಿಗಳನ್ನು ಅಮಾಯಕರು ಎಂದು ಬಿಂಬಿಸಲು ಹೊರಟಿದ್ದಾರೆ. ಜಮೀರ್‌ ಮತ್ತು ಡಿ.ಕೆ. ಶಿವಕುಮಾರ್‌ ತಮ್ಮದೇ ಪಕ್ಷದ ಶಾಸಕನ ಮನೆಗೆ ಬಿದ್ದಾಗಲೂ ಇದೇ ರೀತಿ ನಡೆದುಕೊಂಡಿದ್ದರು. ಆರೋಪಿಗಳಿಗೆ ಬೆಂಬಲ ಕೊಡುವ ಮೂಲಕ ನಾವು ಗಲಭೆಕೋರರ ಪರ ಎಂದು ಕಾಂಗ್ರೆಸ್‌ ಸಾಬೀತು ಮಾಡಿದೆ’ ಎಂದರು.

‘ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ತನ್ನ ಕೆಲಸವನ್ನು ಕಟ್ಟುನಿಟ್ಟಾಗಿ ಮಾಡುತ್ತಿದೆ. ಹಳೇ ಹುಬ್ಬಳ್ಳಿ ಪೊಲೀಸ್‌ ಠಾಣೆ ಮೇಲೆ ಕಲ್ಲು ಹೊಡೆದವರ ನಾಲ್ಕು ತಲೆಗಳನ್ನು ಉರುಳಿಸಿದ್ದರೆ ಹುಬ್ಬಳ್ಳಿ 50 ವರ್ಷ ಶಾಂತವಾಗಿ ಇರುತ್ತಿತ್ತು. ಯಾರೂ ಕಲ್ಲು ಹೊಡೆಯುವ ಸಾಹಸ ಮಾಡುತ್ತಿರಲಿಲ್ಲ ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT