ಭಾನುವಾರ, ಮೇ 22, 2022
21 °C
ಮಹಾನಗರ ಬಿಜೆಪಿ ಕಾರ್ಯಕಾರಿಣಿಯಲ್ಲಿ ಶಾಸಕ ಜಗದೀಶ ಶೆಟ್ಟರ್ ಹೇಳಿಕೆ

ಚುನಾವಣಾ ಯುದ್ಧಕ್ಕೆ ಬಿಜೆಪಿ ಸನ್ನದ್ಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ‘ಇನ್ನೊಂದು ವರ್ಷದಲ್ಲಿ ವಿಧಾನಸಭೆಗೆ ಚುನಾವಣೆ ಬರುತ್ತದೆ. ಆದರೆ, ನಾಳೆಯೇ ಚುನಾವಣೆ ಘೋಷಣೆಯಾದರೂ ಯುದ್ಧಕ್ಕೆ ಬಿಜೆಪಿ ಸಿದ್ಧವಾಗಿದೆ. ಕಾರ್ಯಕರ್ತರ ದೊಡ್ಡ ಪಡೆಯೇ ನಮ್ಮ ಬೆಂಬಲಕ್ಕೆ ಇದೆ’ ಎಂದು ಶಾಸಕ ಜಗದೀಶ ಶೆಟ್ಟರ್ ವಿಶ್ವಾಸ ವ್ಯಕ್ತಪಡಿಸಿದರು.

ನಗರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಹುಬ್ಬಳ್ಳಿ–ಧಾರವಾಡ ಮಹಾನಗರ ಬಿಜೆಪಿ ಕಾರ್ಯಕಾರಿಣಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ‘ರಾಜ್ಯದ ಕೆಲವು ಕಡೆ ಪಕ್ಷವು ದುರ್ಬಲವಾಗಿದೆ. ಮೊದಲು ಅದನ್ನು ಸರಿಪಡಿಸಬೇಕು. ಜನರೊಂದಿಗೆ ನಿರಂತರವಾಗಿ ಸಂಪರ್ಕ ಇಟ್ಟುಕೊಳ್ಳಬೇಕು’ ಎಂದು ಕಾರ್ಯಕರ್ತರಿಗೆ ಸಲಹೆ ನೀಡಿದರು.

‘ರಾಜ್ಯ ಘಟಕದ ಅಧ್ಯಕ್ಷರ ಜತೆ ರಾಜ್ಯದ ನಾಲ್ಕು ವಿಭಾಗಗಳಲ್ಲಿ ಪ್ರವಾಸ ಮಾಡಿರುವೆ. ಪ್ರಮುಖ ಕಾರ್ಯಕರ್ತರು, ಕೋರ್‌ ಕಮಿಟಿ ಸದಸ್ಯರು, ಜಿಲ್ಲೆಯ ಪ್ರಮುಖರ ಸಭೆ ನಡೆಸಿ ಮುಕ್ತವಾಗಿ ಅಭಿಪ್ರಾಯ ಆಲಿಸಿದ್ದೇವೆ. ಅಲ್ಲಿ ವ್ಯಕ್ತವಾದ ಅಭಿಪ್ರಾಯಗಳನ್ನು ಅನುಷ್ಠಾನಕ್ಕೆ ತಂದರೆ 130 ಸ್ಥಾನಗಳು ಖಚಿತ' ಎಂದು ನುಡಿದರು.

‘ಅಮಿತ್‌ ಶಾ, ಜೆ.ಪಿ. ನಡ್ಡಾ 150 ಸ್ಥಾನಗಳ ಟಾರ್ಗೆಟ್‌ ಕೊಟ್ಟಿದ್ದಾರೆ. ಮೋದಿ ಹಾಗೂ ರಾಜ್ಯ ಸರ್ಕಾರದ ಸಾಧನೆಗಳನ್ನು ಮುಂದಿಟ್ಟುಕೊಂಡು ಕೆಲಸ ಮಾಡಬೇಕಿದೆ’ ಎಂದರು.

ಶಾಸಕ ಅರವಿಂದ ಬೆಲ್ಲದ ಮಾತನಾಡಿ, ‘ಬರುವ ಚುನಾವಣೆಯಲ್ಲಿ ಪೇಜ್ ಪ್ರಮುಖರ ಜವಾಬ್ದಾರಿ ಹೆಚ್ಚಾಗಿದೆ. ಪಾಲಿಕೆ ಸದಸ್ಯರು, ಕಾರ್ಯಕರ್ತರು ಈ ನಿಟ್ಟಿನಲ್ಲಿ ಕೆಲಸ‌ ಮಾಡಬೇಕು. ಈಗಾಗಲೇ ತಯಾರಿಸಿದ ಪೇಜ್‌ ಪ್ರಮುಖರ ಪಟ್ಟಿಯಲ್ಲಿ ಲೋಪಗಳಿವೆ. ಅವುಗಳನ್ನು ಸರಿಪಡಿಸಬೇಕು’ ಎಂದು ತಿಳಿಸಿದರು.‌

ಜಿಲ್ಲಾ ಘಟಕದ ಅಧ್ಯಕ್ಷ ಸಂಜಯ ಕಪಟಕರ ಮಾತನಾಡಿದರು. ವಿಧಾನ ಪರಿಷತ್ ಸದಸ್ಯ ಪ್ರದೀಪ ಶೆಟ್ಟರ್, ಸೀಮಾ ಮಸೂತಿ, ಹುಡಾ ಅಧ್ಯಕ್ಷ ನಾಗೇಶ ಕಲಬುರ್ಗಿ, ಮುಖಂಡರಾದ ವೀರಭದ್ರಪ್ಪ ಹಾಲಹರವಿ, ಸುನೀಲ್ ಮೋರೆ, ದತ್ತಮೂರ್ತಿ ಕುಲಕರ್ಣಿ, ಬಸವರಾಜ ಗರಗ ಪಾಲ್ಗೊಂಡಿದ್ದರು. ತಿಪ್ಪಣ್ಣ ಮಜ್ಜಗಿ ಸ್ವಾಗತಿಸಿ, ಪ್ರಭು ನವಲಗುಂದ ಮಠ ವಂದಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.