ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ವಿಜಯ ಮುಂದುವರಿಯಬೇಕು: ಭಾನುಪ್ರಕಾಶ್

ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆ: ಬಿಜೆಪಿಯಿಂದ ಮುಖಂಡರ ಅಭಿಪ್ರಾಯ ಸಂಗ್ರಹ
Last Updated 17 ಅಕ್ಟೋಬರ್ 2019, 10:28 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಬಿಜೆಪಿಯ ವಿಜಯದ ಓಟವನ್ನು ಈ ಬಾರಿಯೂ ಮುಂದುವರಿಸಬೇಕು. ಹಾಗಾಗಿ, ಎಲ್ಲರೂ ಎಚ್ಚರಿಕೆಯಿಂದ ಕೆಲಸ ಮಾಡಬೇಕು’ ಎಂದು ಬಿಜೆಪಿ ಉಪಾಧ್ಯಕ್ಷ ಭಾನುಪ್ರಕಾಶ್ ಹೇಳಿದರು.

ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆ ಅಂಗವಾಗಿ ನಗರದಲ್ಲಿ ಗುರುವಾರ ಧಾರವಾಡ ಜಿಲ್ಲೆಯ ಮುಖಂಡರು ಹಾಗೂ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹ ಸಭೆಯಲ್ಲಿ ಮಾತನಾಡಿದ ಅವರು, ‘ಬಿಜೆಪಿ ತನ್ನ ಜಯದ ಓಟ ಆರಂಭಿಸಿದ್ದೇ ಮೇಲ್ಮನೆಯಿಂದ. ಹಾಗಾಗಿ, ಮುಂಬರುವ ಚುನಾವಣೆಯಲ್ಲಿ ಪಕ್ಷ ಅಂತಿಮಗೊಳಿಸುವ ಅಭ್ಯರ್ಥಿಯನ್ನು ಗೆಲ್ಲಿಸಬೇಕು’ ಎಂದರು.

‘ಅಭ್ಯರ್ಥಿ ಆಯ್ಕೆಗೆ ಸಂಬಂಧಿಸಿದಂತೆ ಕ್ಷೇತ್ರದ ವ್ಯಾಪ್ತಿಯ ಗದಗ, ಹಾವೇರಿ, ಹುಬ್ಬಳ್ಳಿ–ಧಾರವಾಡ ಹಾಗೂ ಉತ್ತರ ಕನ್ನಡದಲ್ಲಿ ಪ್ರವಾಸ ಮಾಡಿ ಮುಖಂಡರು ಹಾಗೂ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸುತ್ತಿದ್ದೇನೆ. ಟಿಕೆಟ್ ಆಕಾಂಕ್ಷಿಗಳ ಜತೆಗೂ ಮಾತುಕತೆ ನಡೆಸಿ, ಅಧ್ಯಕ್ಷರಿಗೆ ವರದಿ ಸಲ್ಲಿಸಲಿದ್ದೇನೆ’ ಎಂದು ತಿಳಿಸಿದರು.

‘ಬೇರೆ ಪಕ್ಷಗಳಲ್ಲಿ ಈಗಾಗಲೇ ಅಭ್ಯರ್ಥಿ ಹೆಸರು ಅಂತಿಮಗೊಳಿಸಿ, ಪ್ರಚಾರ ನಡೆಸುತ್ತಿದ್ದಾರೆ. ಆದರೆ, ನಮ್ಮಲ್ಲಿ ಅಭ್ಯರ್ಥಿ ಆಯ್ಕೆಯೇ ನಡೆದಿಲ್ಲ ಎಂದು ನಮ್ಮವರು ಬೇಸರಿಸಿಕೊಳ್ಳುವ ಅಗತ್ಯವಿಲ್ಲ. ಯಾಕೆಂದರೆ, ಬೇರೆ ಪಕ್ಷಗಳಲ್ಲಿ ಪೈಪೋಟಿಯೇ ಇಲ್ಲ. ಹಾಗಾಗಿ, ಅಭ್ಯರ್ಥಿಯನ್ನು ಅಂತಿಮಗೊಳಿಸಲಾಗಿದೆ’ ಎಂದು ಹೇಳಿದರು.

‘ಬಿಜೆಪಿಯಲ್ಲಿ ಆಕಾಂಕ್ಷಿಗಳು ಹೆಚ್ಚಾಗಿದ್ದಾರೆ. ಪಕ್ಷದ ಬೆಳವಣಿಗೆಯನ್ನು ಇದು ಸೂಚಿಸುತ್ತದೆ. ಹಾಗಾಗಿ, ಸ್ಥಳೀಯ ಮುಖಂಡರ ಹಾಗೂ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಿ ಅಭ್ಯರ್ಥಿ ಹೆಸರು ಅಂತಿಮಗೊಳಿಸಲಾಗುತ್ತದೆ. ಹಿಂದೆ, ನಾವೇ ಅಭ್ಯರ್ಥಿಯನ್ನು ಹುಡುಕಿಕೊಂಡು ಹೋಗಿ ಟಿಕೆಟ್ ಕೊಟ್ಟರೂ, ನಿಲ್ಲಲು ಹಿಂದೇಟು ಹಾಕುತ್ತಿದ್ದರು. ಈಗ ಕಾಲ ಬದಲಾಗಿದೆ. ಪಕ್ಷ ಬೆಳೆದಿದ್ದು, ದೇಶದ ಬೆಳಕಾಗಿದೆ’ ಎಂದು ಬಣ್ಣಿಸಿದರು.

ಗೆಲ್ಲುವ ಸಾಮರ್ಥ್ಯ ಮುಖ್ಯ:‘ಕ್ಷೇತ್ರದ ಹಾಲಿ ಸದಸ್ಯರ ಬದಲಿಗೆ, ಬೇರೆಯವರನ್ನು ಅಭ್ಯರ್ಥಿಯಾಗಿ ಘೋಷಿಸುತ್ತಿರಾ?’ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಪ್ರತಿ ಚುನಾವಣೆಯಲ್ಲಿ ಅಭಿಪ್ರಾಯ ಸಂಗ್ರಹಿಸಿ ಅಭ್ಯರ್ಥಿ ಘೋಷಿಸುವುದನ್ನು ಪಕ್ಷ ಪಾಲಿಸಿಕೊಂಡು ಬಂದಿದೆ. ಚುನಾವಣೆಯಲ್ಲಿ ಗೆಲುವು ಮುಖ್ಯ. ಹಾಗಾಗಿ ಹಾಲಿ ಸದಸ್ಯರು ಮಾಡಿರುವ ಕೆಲಸ, ಅವರ ಗೆಲ್ಲುವ ಸಾಮರ್ಥ್ಯ, ಎದುರಾಳಿಗಳು ಯಾರಿದ್ದಾರೆ ಹಾಗೂ ಮುಖಂಡರು ಮತ್ತು ಕಾರ್ಯಕರ್ತರ ಅಭಿಪ್ರಾಯ ಏನಿದೆ’ ಎಂಬುದರ ಆಧಾರದ ಮೇಲೆ ಅಭ್ಯರ್ಥಿಯನ್ನು ಅಂತಿಮಗೊಳಿಸಲಾಗುವುದು’ ಎಂದರು.

ಪಕ್ಷದ ಉಪಾಧ್ಯಕ್ಷ ಮಾ. ನಾಗರಾಜ, ವಿಧಾನ ಪರಿಷತ್ ಸದಸ್ಯ ಎಸ್‌.ವಿ. ಸಂಕನೂರ, ಮುಖಂಡರಾದ ನಾಗೇಶ ಕಲಬುರ್ಗಿ, ಈರಣ್ಣ ಜಡಿ, ಎಸ್‌.ಐ. ಚಿಕ್ಕನಗೌಡರ, ಶಿವಾನಂದ ಮುತ್ತಣ್ಣವರ, ಎಂ.ಆರ್. ಪಾಟೀಲ, ಲಿಂಗರಾಜ ಪಾಟೀಲ, ಹನುಮಂತಪ್ಪ ದೊಡ್ಡಮನಿ, ಜಿಲ್ಲಾ ಹಾಗೂ ತಾಲ್ಲೂಕು ಪದಾಧಿಕಾರಿಗಳು ಇದ್ದರು.

ಬಿಎಸ್‌ವೈ, ಕಟೀಲ್‌ ಇಬ್ಬರೂ ಕ್ಯಾಪ್ಟನ್‌ಗಳು
‘ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಟೀಂಗೆ ಪಕ್ಷದ ಅಧ್ಯಕ್ಷ ನಳೀನ್‌ಕುಮಾರ್ ಕಟೀಲ್ ಕ್ಯಾಪ್ಟನ್‌. ಅದೇ ರೀತಿ, ಕಟೀಲ್‌ ಅವರ ಟೀಂಗೆ ಬಿಎಸ್‌ವೈ ಕ್ಯಾಪ್ಟನ್. ಇಬ್ಬರ ಮಧ್ಯೆ ಹೊಂದಾಣಿಕೆ ಇರುವಾಗ, ಪೈಪೋಟಿಯ ಮಾತೇ ಬರುವುದಿಲ್ಲ’ ಎಂದು ಭಾನುಪ್ರಕಾಶ್ ಹೇಳಿದರು.

‘ಅಟಲ್ ಬಿಹಾರಿ ವಾಜಪೇಯಿ ಹಾಗೂ ಎಲ್‌.ಕೆ. ಅಡ್ವಾಣಿ ಅವರು ಈ ಮಾದರಿಯನ್ನು ಹಾಕಿ ಕೊಟ್ಟಿದ್ದಾರೆ. ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರು ಇರುವಂತೆ, ರಾಜ್ಯದಲ್ಲಿ ಬಿ.ಎಸ್. ಯಡಿಯೂರಪ್ಪ ಹಾಗೂ ನಳೀನ್ ಕುಮಾರ್ ಕಟೀಲ್ ಇದ್ದಾರೆ. ಅವರಿಬ್ಬರ ನೇತೃತ್ವದಲ್ಲಿ ನಾವೆಲ್ಲರೂ ಕೆಲಸ ಮಾಡುತ್ತಿದ್ದೇವೆ. ಹಾಗಾಗಿ, ಇಬ್ಬರ ಮಧ್ಯೆ ಪೈಪೋಟಿ ಅಥವಾ ಸ್ಪರ್ಧೆ ಇದೆ ಎಂಬುದು ಆರೋಪ ನಿರಾಧಾರ’ ಎಂದರು.

ಯತ್ನಾಳ್ ಉತ್ತರಿಸಲಿ:‘ಪಕ್ಷದ ಶಿಸ್ತು ಉಲ್ಲಂಘಿಸಿದಾಗ ನೋಟಿಸ್ ಕೊಡುವುದು ಸಾಮಾನ್ಯ. ಶಾಸಕ ಬಸನಗೌಡ ಪಾಟೀಲ ಯತ್ನಾಳ ಪಕ್ಷದ ಹಿರಿಯ ಶಾಸಕರು. ನೋಟಿಸ್‌ಗೆ ಉತ್ತರ ಕೊಡುವುದು ಅವರ ಕರ್ತವ್ಯ. ಬಳಿಕ, ಮುಂದೆ ಏನು ಮಾಡಬೇಕೆಂದು ವರಿಷ್ಠರು ತೀರ್ಮಾನಿಸುತ್ತಾರೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT