ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಹ್ಲಾದ ಜೋಶಿ ಪ್ರಮಾಣವಚನ: ಬಿಜೆಪಿ ಕಾರ್ಯಕರ್ತರ ಸಂಭ್ರಮಾಚರಣೆ

Last Updated 31 ಮೇ 2019, 10:10 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಧಾರವಾಡ ಲೋಕಸಭಾ ಕ್ಷೇತ್ರವನ್ನು ಸತತ ನಾಲ್ಕನೇ ಬಾರಿ ಪ್ರತಿನಿಧಿಸಿರುವ ಸಂಸದ ಪ್ರಹ್ಲಾದ ಜೋಶಿ ಅವರು, ಗುರುವಾರ ಕೇಂದ್ರ ಸಚಿವರಾಗಿ ಪ್ರಮಾಣವಚನ ಸ್ವೀಕರಿಸುತ್ತಿದ್ದಂತೆ ಹುಬ್ಬಳ್ಳಿಯ ವಿವಿಧೆಡೆ ಬಿಜೆಪಿ ಕಾರ್ಯಕರ್ತರು ಹಾಗೂ ಜೋಶಿ ಅವರ ಅಭಿಮಾನಿಗಳು ಸಾರ್ವಜನಿಕರಿಗೆ ಸಿಹಿ ಹಂಚಿ ಸಂಭ್ರಮಿಸಿದರು.

ಇಲ್ಲಿನ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಬಿಜೆಪಿ ಮಹಾನಗರ ಘಟಕದ ಅಧ್ಯಕ್ಷ ನಾಗೇಶ ಕಲಬುರ್ಗಿ ಅವರ ನೇತೃತ್ವದಲ್ಲಿ ಜಮಾಯಿಸಿದ ಕಾರ್ಯಕರ್ತರು ಜೋಶಿ ಅವರಿಗೆ ಜೈಕಾರ ಕೂಗಿದರು. ಬಳಿಕ, ಸಾರ್ವಜನಿಕರಿಗೆ ಸಿಹಿ ವಿತರಿಸಿ ವಿಜಯೋತ್ಸವ ಆಚರಿಸಿದರು.

ಮಹಿಳಾ ಪದಾಧಿಕಾರಿಗಳು ಸ್ಥಳದಲ್ಲಿ ಕಾರ್ಯನಿರತರಾಗಿದ್ದ ಗೃಹರಕ್ಷಕ ದಳದ ಸಿಬ್ಬಂದಿಗೂ ಸಿಹಿ ಹಂಚಿದರು. ಬಿಜೆಪಿ ಮುಖಂಡರಾದ ಮಲ್ಲಿಕಾರ್ಜುನ ಸಾವಕಾರ, ಹನುಮಂತಪ್ಪ ದೊಡ್ಡಮನಿ, ಬೀರಪ್ಪ ಖಂಡೇಕಾರ, ದತ್ತಮೂರ್ತಿ ಕುಲಕರ್ಣಿ ಸೇರಿದಂತೆ ಇತರರು ಇದ್ದರು.

ಪ್ರಮಾಣವಚನ ಕಣ್ತುಂಬಿಕೊಂಡರು:

ಪ್ರಧಾನಿಯಾಗಿ ನರೇಂದ್ರ ಮೋದಿ ಅವರು ಪ್ರಮಾಣವಚನ ಸ್ವೀಕರಿಸುವ ಕ್ಷಣವನ್ನು ಸಾರ್ವಜನಿಕರು ವೀಕ್ಷಿಸುವುದಕ್ಕಾಗಿ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ದೊಡ್ಡ ಡಿಜಿಟಲ್ ಪರದೆಯನ್ನು ಅಳವಡಿಸಲಾಗಿತ್ತು. ಸಾರ್ವಜನಿಕರು ಇಲ್ಲಿ ಪ್ರಮಾಣವಚನ ಸಮಾರಂಭವನ್ನು ಕಣ್ತುಂಬಿಕೊಂಡರು. ಈ ವೇಳೆ ಭಾರತ್ ಮಾತಾಕೀ ಜೈ, ಬಿಜೆಪಿಗೆ ಜಯವಾಗಲಿ, ಮೋದಿಗೆ ಜಯವಾಗಲಿ ಎಂಬ ಘೋಷಣೆಗಳು ಮೊಳಗಿದವು.

ಮೋದಿ ಭಾವಚಿತ್ರಕ್ಕೆ ಪೂಜೆ:

ಇಲ್ಲಿನ ಸಿದ್ಧಾರೂಢ ಮಠದಲ್ಲಿ ನರೇಂದ್ರ ಮೋದಿ ಅಭಿಮಾನಿಗಳು ಹಾಗೂ ಬಿಜೆಪಿ ಕಾರ್ಯಕರ್ತರು ಪ್ರಧಾನಿ ಮೋದಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ದೇಶವನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯಲು ಸಿದ್ಧಾರೂಢರು ಮೋದಿ ಅವರಿಗೆ ಶಕ್ತಿ ತುಂಬಲಿ ಎಂದು ಕೋರಿಕೊಂಡರು.

ಮೋದಿ ಅವರು ಎರಡನೇ ಸಲ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಕ್ಕಾಗಿ ಕಾರವಾರ ರಸ್ತೆಯ ಶ್ರೀನಗರ ನಿವಾಸಿಗಳ ಕಲ್ಯಾಣ ಕೇಂದ್ರದ ವತಿಯಿಂದ ಸಾರ್ವಜನಿಕರಿಗೆ ಉಚಿತವಾಗಿ ಚಹಾ ವಿತರಿಸಲಾಯಿತು.

ರಾಜನ ವೀ. ಅಣವೇಕರ, ಪಟ್ಟಾಭಿ ಸಿತಾರಾಮ, ವಿ.ಸಿ. ಕೊಳ್ಳೊಳ್ಳಿ, ಲಕ್ಕಣ್ಣವರ, ಡಮಾಮಘರ, ಮಾಹುಬ ನಾಯಕ, ಶಶಿ ಅಣವೇಕರ ಸತೀಶ ಶೇಜವಾಡಕರ, ಅಶೋಕ ದಾನಿ, ಅಂಬಾಸಾ ಹಬೀಬ, ಶ್ರೀಧರ ಹೆಗಡೆ, ಮಂಜುನಾಥ ಅಟೋ, ಕೋಟೆಕರ ಬಾಲಕೃಷ್ಣ, ದ್ರೂನಾವತ, ವಿಠ್ಠಲ್ ಶೆಟ್ಟಿ, ಅನವರ ಬದಾಮಿ ಇದ್ದಾರೆ.

ಸಸಿ ನೆಟ್ಟು ಸಂಭ್ರಮ

ಪ್ರಧಾನಿಯಾಗಿ ನರೇಂದ್ರ ಮೋದಿ ಹಾಗೂ ಕೇಂದ್ರ ಸಚಿವರಾಗಿ ಪ್ರಹ್ಲಾದ ಜೋಶಿ ಅವರು ಪ್ರಮಾಣವಚನ ಸ್ವೀಕರಿಸಿದ್ದರ ನೆನಪಿನಾರ್ಥವಾಗಿ ಹುಬ್ಬಳ್ಳಿಯ 34ನೇ ವಾರ್ಡಿನಲ್ಲಿ ಬಿಜೆಪಿ ಮುಖಂಡರು ಸಸಿ ನೆಡುವ ಮೂಲಕ ಸಂಭ್ರಮಾಚರಿಸಿದರು.

ಬಿಜೆಪಿ ಮುಖಂಡರಾದ, ಪರಶುರಾಮ ಶಿಂಧೆ, ಈರಣ್ಣ ಅಂಗಡಿ, ಗಜಾನನ ರಾಜೊಳ್ಳಿ, ಮಹೇಶ ಗದಗ, ನವೀನ್, ನಾಗರಾಜ್ ಕಟಾವಿ, ಮಹದೇವ ರಮೇಶ, ಸಚಿನ್, ಜಿತೇಂದ್ರ ಶಿಗೇಹಳ್ಳಿ, ಅಮೋಲ್ ಕುಲಕರ್ಣಿ ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT