ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭವ್ಯ ಪರಂಪರೆಗೆ ಕೊಡುಗೆ ನೀಡಿದ ಮಠಗಳು: ಬಸವರಾಜ ಬೊಮ್ಮಾಯಿ

ಮೃತ್ಯುಂಜಯ ಮಹಾಂತ ಪ್ರಶಸ್ತಿ ಸ್ವೀಕರಿಸಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಭಿಮತ
Last Updated 26 ಜನವರಿ 2023, 4:58 IST
ಅಕ್ಷರ ಗಾತ್ರ

ಧಾರವಾಡ: ‘ನಾಡಿನ ಜನತೆಯಲ್ಲಿ ಉತ್ಕೃಷ್ಟ ಜೀವನ ಪದ್ದತಿ, ಸಚ್ಚಾರಿತ್ರ್ಯ ರೂಪಿತವಾಗಲು ನಾಡಿನ ವೀರಶೈವ ಲಿಂಗಾಯತ ಮಠಗಳ ಕೊಡುಗೆ ಅಪಾರವಾಗಿದೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಮುರುಘಾಮಠದ ಮದಥಣಿ ಮುರುಘೇಂದ್ರ ಸ್ವಾಮೀಜಿ ಅವರ 93ನೇ ಜಾತ್ರಾ ಮಹೋತ್ಸವದ ಅಂಗವಾಗಿ ನೀಡಲಾದ ಪ್ರಸಕ್ತ ಸಾಲಿನ ಮೃತ್ಯುಂಜಯ ಮಹಾಂತ ಪ್ರಶಸ್ತಿಯನ್ನು ಬುಧವಾರ ಸ್ವೀಕರಿಸಿ ಅವರು ಮಾತನಾಡಿದರು.

‘ಉತ್ತರ ಕರ್ನಾಟಕದ ಭವ್ಯ ಪರಂಪರೆಗೆ ಧಾರವಾಡ ಮುರಘಾಮಠದ ಕೊಡುಗೆ ಮಹತ್ವದ್ದಾಗಿದೆ. ಸಾಮಾಜಿಕ ಪ್ರಜ್ಞೆಯಿಂದ ಸ್ವಾತಂತ್ರ್ಯ ಪೂರ್ವದಲ್ಲೇ ಮೃತ್ಯುಂಜಯಪ್ಪವರು ಪ್ರಾರಂಭಿಸಿದ ಮಠವು ಅಕ್ಷಯ ಪಾತ್ರೆಯಂತೆ ವರ್ಷದಿಂದ ವರ್ಷಕ್ಕೆ ಬೆಳೆಯುತ್ತಲೇ ಇದೆ. ಒಳ್ಳೆಯ ಉದ್ದೇಶದಿಂದ ಆರಂಭಿಸುವ ಯಾವುದೇ ಕೆಲಸದ ಫಲ ದೀರ್ಘಕಾಲ ಇರುತ್ತದೆ ಎನ್ನುವುದಕ್ಕೆ ಮಠ ಹಾಗೂ ಅದರ ಕಾರ್ಯ ಉತ್ತಮ ಉದಾರಹಣೆ’ ಎಂದರು.

‘ಹೇಳಲು ನಮಗೆ ಐದು ಸಾವಿರ ವರ್ಷಗಳ ಚರಿತ್ರೆ ಇದೆ. ಆದರೆ ಇಂದು ಬೇಕಿರುವುದು ಚಾರಿತ್ರ್ಯವಿರುವ ಸಮಾಜ. ಅಸಮಾನತೆ, ಲಿಂಗ ಬೇಧ ಹಾಗೂ ಮೌಡ್ಯತೆ ದೂರ ಮಾಡಿದ್ದ ಬಸವಣ್ಣನವರು ಅಂದು ಹಾಕಿಕೊಟ್ಟ ಪ್ರಾಮಾಣಿಕತೆ, ದುಡಿಮೆಯ ಚಾರಿತ್ರ್ಯ ಇಂದಿನ ಸಮಾಜದ ಅಗತ್ಯವಾಗಿದೆ. ಜಾತಿ, ಮತಗಳ ಸಂಘರ್ಷ ಇಂದು ನಡೆಯುತ್ತಿವೆ. ಆದರೆ ಸಮಾಜಕ್ಕೆ ಬೇಕಿರುವುದು ವರ್ಗ ಸಂಘರ್ಷವಿರದ ಮಾನವ ಧರ್ಮ’ ಎಂದರು.

‘ಕೆಲವರು ದೇವರ ಹೆಸರಿನಲ್ಲಿ ಭಯೋತ್ಪಾದನೆ ನಡೆಸುತ್ತಿರುವುದನ್ನು ನಾವು ಇಂದು ಕಾಣುತ್ತಿದ್ದೇವೆ. ಆದರೆ ಅವುಗಳಿಗೆ ಧರ್ಮ ಅವಕಾಶ ನೀಡುವುದಿಲ್ಲ’ ಎಂದು ಬೊಮ್ಮಾಯಿ ಹೇಳಿದರು.

‘ಶತಮಾನ ಕಂಡ ಮುರುಘಾಮಠದ ಅಭಿವೃದ್ಧಿಗೆ ಈಗಾಗಲೇ ₹3ಕೋಟಿ ಅನುದಾನ ನೀಡಲಾಗಿದೆ. ಭವ್ಯ ಇತಿಹಾಸ ಹೊಂದಿರುವ ಮುರುಘರಾಜೇಂದ್ರ ವಿದ್ಯಾರ್ಥಿ ನಿಲಯದ ಅಭಿವೃದ್ಧಿಗೆ ಸರ್ಕಾರದಿಂದ ಇನ್ನೂ ಹೆಚ್ಚಿನ ಅನುದಾನ ನೀಡಲಾಗುವುದು’ ಎಂದು ಭರವಸೆ ನೀಡಿದರು.

ಪ್ರಶಸ್ತಿ ಪ್ರದಾನ ಮಾಡಿದ ಗದುಗಿನ ಡಾ. ತೋಂಟದ ಸಿದ್ಧರಾಮ ಸ್ವಾಮೀಜಿ ಮಾತನಾಡಿ, ‘ವಿದ್ಯಾಕಾಶಿ ಎಂಬ ಹೆಸರು ಧಾರವಾಡಕ್ಕೆ ಬಂದಿದೆ ಎಂದರೆ ಅದು ಮುರುಘಾಮಠದ ಅನ್ನ, ವಸತಿ ಹಾಗೂ ಜ್ಞಾನ ದಾಸೋಹದಿಂದಾಗಿ ಮಾತ್ರ’ ಎಂದರು.

ಡಾ. ಮಲ್ಲಿಕಾರ್ಜುನ ಸ್ವಾಮೀಜಿ, ಚಿತ್ತರಗಿ-ಇಲಕಲ್ಲ ವಿಜಯ ಮಹಾಂತೇಶ್ವರ ಮಠದ ಗುರುಮಹಾಂತ, ಬೆಳಗಾವಿ ನಾಗನೂರಮಠದ ಅಲ್ಲಮಪ್ರಭು ಇದ್ದರು. ಶಿವಲೀಲಾ ಕುಲಕರ್ಣಿ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಅರವಿಂದ ಬೆಲ್ಲದ, ಬಯಲುಸೀಮೆ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ತವನಪ್ಪ ಅಷ್ಟಗಿ, ಮಠದ ನಾಗರಾಜ ಪಟ್ಟಣಶೆಟ್ಟಿ, ಡಿ.ಬಿ.ಲಕ್ಕಮನಹಳ್ಳಿ, ಶಿವಶಂಕರ ಹಂಪಣ್ಣವರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT