ಹುಬ್ಬಳ್ಳಿ: ಬೇರೆಯವರ ಪ್ಯಾನ್ ಕಾರ್ಡ್ ಸಂಖ್ಯೆಯ ಮಾಹಿತಿ ದುರ್ಬಳಕೆ ಮಾಡಿಕೊಂಡು ಕ್ರೆಡಿಟ್ ಕಾರ್ಡ್ ಮೂಲಕ ಸಾಲ ಪಡೆದು ಹಿಂತಿರುಗಿಸದೇ ಮೋಸ ಮಾಡುತ್ತಿದ್ದ ವ್ಯಕ್ತಿಯನ್ನು ಸೈಬರ್, ಆರ್ಥಿಕ ಅಪರಾಧಗಳು ಮತ್ತು ಮಾದಕ ವಸ್ತು ನಿಯಂತ್ರಣ ವಿಶೇಷ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಕಳೆದು ಹೋದ ಪ್ಯಾನ್ ಕಾರ್ಡ್ ಬಳಸಿಕೊಂಡು ತಾನೇ ಅದರ ವಾರಸುದಾರನೆಂದು ನಂಬಿಸಿ ಸಿಟಿ ಬ್ಯಾಂಕ್, ಇಂಡಸ್ ಬ್ಯಾಂಕ್‌ಗಳ ಕ್ರೆಡಿಟ್ ಕಾರ್ಡ್‌ಗಳನ್ನು ಆ ವ್ಯಕ್ತಿ ಪಡೆದುಕೊಂಡಿದ್ದ. ನಿಗದಿತ ಅವಧಿಯಲ್ಲಿ ಸಾಲ ಮರುಪಾವತಿಸದೆ ನೈಜ ವಾರಸುದಾರರ ಕ್ರೆಡಿಟ್ ಸ್ಕೋರ್ ಕಡಿಮೆ ಬರುವಂತೆ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಕೃತ್ಯಕ್ಕೆ ಬಳಸಿದ ಮೊಬೈಲ್ ಫೋನ್ ಹಾಗೂ ಎರಡು ಕ್ರೆಡಿಟ್ ಕಾರ್ಡ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.
ರೌಡಿಗಳ ಪರೇಡ್: ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ ಗುರುವಾರವೂ ರೌಡಿಗಳ ಪರೇಡ್ ಮುಂದುವರಿಯಿತು. ಅಕ್ರಮ ಚಟುವಟಿಕೆಗಳಲ್ಲಿ ತೊಡಗಬಾರದು; ಒಂದು ವೇಳೆ ಅಂಥ ಕೃತ್ಯಗಳಲ್ಲಿ ತೊಡಗಿದ್ದು ಕಂಡುಬಂದರೆ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಪೊಲೀಸರು ಎಚ್ಚರಿಕೆ ನೀಡಿದರು.
ವ್ಯಕ್ತಿ ಮೃತ: ನವಲಗುಂದ ರಸ್ತೆಯ ಕುಸುಗಲ್ ಗ್ರಾಮದ ಬಳಿ ಬುಧವಾರ ರಸ್ತೆ ದಾಟುವಾಗ ಕಾರು ಡಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಂಡಿದ್ದ ಹೆಬಸೂರಿನ ಈರಣ್ಣ ಕನಕಣ್ಣವರ ಗುರುವಾರ ಮೃತಪಟ್ಟಿದ್ದಾರೆ. ಚಿಕಿತ್ಸೆಗಾಗಿ ಅವರನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹುಬ್ಬಳ್ಳಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.