ಶನಿವಾರ, ಏಪ್ರಿಲ್ 1, 2023
29 °C

ಎಚ್‌ಡಿಕೆ ಹೇಳಿಕೆಗೆ ಬ್ರಾಹ್ಮಣ ಸಮಾಜ ಖಂಡನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ಬ್ರಾಹ್ಮಣ ಸಮಾಜ ಹಾಗೂ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರ ಬಗ್ಗೆ ಜೆಡಿಎಸ್ ನಾಯಕ ಎಚ್‌.ಡಿ. ಕುಮಾರಸ್ವಾಮಿ ಅವರ ಹೇಳಿಕೆಯನ್ನು ಧಾರವಾಡ ಜಿಲ್ಲಾ ಬ್ರಾಹ್ಮಣ ಸೇವಾ ಸಂಘ ಖಂಡಿಸಿದೆ. ತಮ್ಮ ಹೇಳಿಕೆಗೆ ಕ್ಷಮೆ ಕೋರುವಂತೆ ಒತ್ತಾಯಿಸಿದೆ.

‘ತಮ್ಮ ಪಕ್ಷ ಹೀನಾಯ ಸ್ಥಿತಿಯಲ್ಲಿರುವುದರಿಂದ ಹತಾಶರಾಗಿರುವ ಕುಮಾರಸ್ವಾಮಿ ಅವರು, ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರ ಬಗ್ಗೆ ಮತ್ತು ಬ್ರಾಹ್ಮಣ ಸಮಾಜದ ಬಗ್ಗೆ ಎಳ್ಳಷ್ಟೂ ತಿಳಿವಳಿಕೆ ಇಲ್ಲದೆ ಲಘುವಾಗಿ ಆಪಾದನೆ ಮಾಡಿರುವುದು ಖಂಡನೀಯ. ಮುಂದಿನ ಚುನಾವಣೆಯಲ್ಲಿ ಅವರ ಪಕ್ಷ ನೆಲ ಕಚ್ಚುವುದು ಖಚಿತ’ ಎಂದು ಸಂಘ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.

‘ಬ್ರಾಹ್ಮಣ ಸಮಾಜ ಸ್ವಾತಂತ್ರ್ಯ ಪೂರ್ವ ಹಾಗೂ ಸ್ವಾತಂತ್ರ್ಯೋತ್ತರ ಎಲ್ಲಾ ಕ್ಷೇತ್ರಗಳಲ್ಲಿ ದೇಶಕ್ಕೆ ಅಪಾರ ಕೊಡುಗೆ ಕೊಟ್ಟಿದೆ. ರಾಜ್ಯದಲ್ಲಿ ಮೌಲ್ಯಾಧಾರಿತ ಆಡಳಿತ ನೀಡಿದ್ದ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರನ್ನೇ ಪಕ್ಷದಿಂದ ಹೊರ ಹಾಕಿದವರು ನೀವು. ಆರ್.ವಿ. ದೇಶಪಾಂಡೆ ಅವರನ್ನು ವೇದಿಕೆಯಲ್ಲಿ ಅವಮಾನಿಸಿದ್ದೀರಿ. ವೈ.ಎಸ್.ವಿ. ದತ್ತ ಕೂಡ ಪಕ್ಷ ತೊರೆದಿದ್ದಾರೆ. ಒಳ್ಳೆಯ ಆಡಳಿತ ಕೊಡುವ ಬ್ರಾಹ್ಮಣ ಸಮಾಜದವರು ಮುಖ್ಯಮಂತ್ರಿಯಾದರೆ ತಪ್ಪೇನಿದೆ?’ ಎಂದು ಪ್ರಶ್ನಿಸಿದೆ.

‘ಜೋಶಿ ಅವರು ಜಾತಿ ಮೀರಿ ನಾಯಕರಾಗಿ ಬೆಳೆದವರು. ಅವರು ಮುಖ್ಯಮಂತ್ರಿಯಾದರೆ ನಿಮಗೇನು ತೊಂದರೆ? ನಿಮ್ಮ ಹೇಳಿಕೆಯಿಂದಲೇ ಜೆಡಿಎಸ್ ಸರ್ವನಾಶದತ್ತ ಸಾಗುತ್ತಿದೆ. ಜಾತ್ಯತೀತ ಜನತಾದಳ ಎಂದು ಹೆಸರಿಟ್ಟುಕೊಂಡು ಜಾತಿ ರಾಜಕಾರಣ ಮಾಡುವವರು ನೀವು. ಚುನಾವಣೆಯಲ್ಲಿ ಸೋಲುವ ಭೀತಿಯಿಂದ ಮನಬಂದಂತೆ ಬ್ರಾಹ್ಮಣ ಸಮಾಜದ ಬಗ್ಗೆ ಮಾತನಾಡಿದರೆ, ನಿಮ್ಮ ವಿರುದ್ಧ ರಾಜ್ಯದಾದ್ಯಂತ ಪ್ರತಿಭಟನೆ ಮಾಡಬೇಕಾಗುತ್ತದೆ’ ಎಂದು ಸಂಘ ಎಚ್ಚರಿಕೆ ನೀಡಿದೆ.

‘ಶೋಭೆ ತರುವ ಮಾತಲ್ಲ’

ಎಚ್‌ಡಿಕೆ ಹೇಳಿಕೆ ಖಂಡಿಸಿರುವ ಹುಬ್ಬಳ್ಳಿ–ಧಾರವಾಡ ಮಹಾನಗರ ಬಿಜೆಪಿ ಘಟಕದ ಅಧ್ಯಕ್ಷ ಸಂಜಯ ಕಪಟಕರ, ‘ಬ್ರಾಹ್ಮಣ ಸಮಾಜದ ಕುರಿತ ಕುಮಾರಸ್ವಾಮಿ ಅವರ ಮಾತುಗಳು, ಅವರ ಸ್ಥಾನಕ್ಕೆ ಶೋಭೆ ತರುವುದಿಲ್ಲ. ಬೆರಳೆಣಿಕೆಯಷ್ಟು ಶಾಸಕರನ್ನು ಹೊಂದಿರುವ ಜೆಡಿಎಸ್‍, ಹಿಂಬಾಗಿಲಿಂದ ರಾಜಕೀಯ ಮಾಡುತ್ತಾ ಬಂದಿದೆ. ವಚನಭ್ರಷ್ಟ ಪಕ್ಷ ಜೆಡಿಎಸ್. ನಿಮ್ಮ ಹೇಳಿಕೆಗೆ ಆ ಸಮುದಾಯ ಮುಂದಿನ ದಿನಗಳಲ್ಲಿ ತಕ್ಕ ಉತ್ತರ ನೀಡಲಿದೆ. ಪ್ರಲ್ಹಾದ ಜೋಶಿ ಅವರು ರಾಜ್ಯದ ಮುಖ್ಯಮಂತ್ರಿಯಾದರೆ, ನಾವು ತುಂಬು ಹೃದಯದಿಂದ ಸ್ವಾಗತಿಸುತ್ತೇವೆ’ ಎಂದಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.