ನಿದ್ದೆಯಲ್ಲಿ ಉಸಿರುಗಟ್ಟುವಿಕೆ

7

ನಿದ್ದೆಯಲ್ಲಿ ಉಸಿರುಗಟ್ಟುವಿಕೆ

Published:
Updated:

ನಿದ್ರೆಯು ನಮ್ಮ ಆರೋಗ್ಯಕರ ಜೀವನದಲ್ಲಿ ಅತ್ಯುತ್ತಮ ಪಾತ್ರ ವಹಿಸುತ್ತದೆ. ಮಾನವ ತನ್ನ ಜೀವಿತಾವಧಿಯ ಒಂದು ಮೂರಾಂಶ ಭಾಗವನ್ನು ನಿದ್ರೆಯಲ್ಲಿ ಕಳೆಯುತ್ತಾನೆ.

ನಮ್ಮ ನಿದ್ರೆಯಲ್ಲಿ ಎರಡು ಹಂತಗಳಿವೆ, ತಿಳಿನಿದ್ರೆ ಮತ್ತು ಗಾಢನಿದ್ರೆ(NREM  ಮತ್ತು REM). ಈ ಎರಡೂ ಹಂತಗಳಲ್ಲಿ ನಮ್ಮ ದೇಹದಲ್ಲಿ ವಿವಿಧ ರೀತಿಯ ಕಾರ್ಯವೈಖರಿಗಳು ಸಹಜವಾಗಿ ನಡೆಯುತ್ತಿರುತ್ತವೆ. ನಿದ್ದೆಯು ನಮಗೆ ಸಿಕ್ಕ ವರ ಆದರೆ ಕೆಲವರಿಗೆ ನಿದ್ದೆಯೇ ಶಾಪವಾಗಿ ಅವರ ಉಸಿರಾಟದಲ್ಲಿ ಏರು ಪೇರಾಗಿ ಮತ್ತೆ ಮತ್ತೆ ಉಸಿರು ಕಟ್ಟುವ ಸಮಸ್ಯೆಯನ್ನು ನಿದ್ದೆಯಲ್ಲಿ ಅನುಭವಿಸುತ್ತಾರೆ. ತೃಪ್ತಿದಾಯಕ ನಿದ್ದೆ ಇಲ್ಲದೆ ದೇಹದ ಸಮತೋಲನದಲ್ಲಿ ಏರುಪೇರಾಗುತ್ತದೆ ಹಾಗೂ ದಿನವಿಡೀ ಕ್ರೀಯಾಶೀಲರಾಗಿ ಕೆಲಸ ಮಾಡುವ ವೇಳೆ ಅತಿ ಸುಲಭವಾಗಿ ನಿದ್ದೆಗೆ ಹೋಗುವ ತೊಂದರೆಗೆ ತುತ್ತಾಗುತ್ತಾರೆ. ಇಷ್ಟೆ ಅಲ್ಲದೆ ಇದರಿಂದ ಉದ್ಬವಿಸುವ ಅನೇಕ ಸಮಸ್ಯೆಗಳಿಗೆ ಎದುರಾಗುತ್ತಾರೆ.
ಗೊರಕೆ ಹೊಡೆಯುವುದು ೪೫ ಪ್ರತಿಶತ ಜನರಲ್ಲಿ ಅತಿ ಸಾಮಾನ್ಯವಾಗಿರುತ್ತದೆ. ಅತಿಯಾಗಿ ಗೊರಕೆ ಹೊಡೆಯುವ ಜನರಲ್ಲಿ ಸುಮಾರು ೩೪ ರಿಂದ ೬೦ ಪ್ರತಿಶತ ಜನ ಉಸಿರಾಟದ ತೊಂದರೆ ಹೊಂದಿದವರಾಗಿರುತ್ತಾರೆ. ಇದಕ್ಕೆ ಅಬ್ಸಟ್ರಕ್ಟಿವ್ ಸ್ಲೀಪ್ ಅಪ್ನಿಯಾ (Obstructive Sleep apnea) ಅಂದರೆ ನಿದ್ದೆಯಲ್ಲಿ ಉಸಿರುಗಟ್ಟುವಿಕೆ ಎಂದು ಕರೆಯುತ್ತೇವೆ. ನಮ್ಮ ನಿದ್ರೆಯಲ್ಲಿ ಕನಿಷ್ಠ ೧೦ ಸೆಕೆಂಡಗಳ ಕಾಲ ಉಸಿರು ನಿಂತರೆ ಅದಕ್ಕೆ OSA ಎಂದು ಕರೆಯುತ್ತೇವೆ.

ಇದು ಹೇಗೆ ಆಗುತ್ತದೆ?
ಗಂಟಲಿನಲ್ಲಿ ಎಂದರೆ ಉಸಿರಾಟದ ನಾಳದ ಮೇಲ್ಭಾಗದಲ್ಲಿ ಯಾವದೇ ತರಹದ ಮೂಳೆಗಳಿರುವುದಿಲ್ಲ ಇದರಿಂದ ಈ ನಾಳವು ನಿದ್ರೆಯಲ್ಲಿ ಮುಚ್ಚಿಕೊಳ್ಳುವ ಸಾಧ್ಯತೆ ಇರುತ್ತದೆ. ಈ ಕಾಯಿಲೆ ಇರುವ ಜನರಲ್ಲಿ ಉಸಿರಾಟದ ನಾಳ ಚಿಕ್ಕದಾಗಿರುವದರಿಂದ ಮುಚ್ಚಿಕೊಳ್ಳುವ ಸಾಧ್ಯತೆ ಹೆಚ್ಚಾಗಿರುತ್ತದೆ. ಈ ಕಾಯಿಲೆ ಇರುವ ಜನರಲ್ಲಿ ಉಸಿರಾಟದ ನಾಳ ಚಿಕ್ಕದಾಗಲು ಅದರ ಸುತ್ತಮುತ್ತಲು ಕೊಬ್ಬು ಸೇರಿಕೊಳ್ಳುವದು ಒಂದು ಸಾಮಾನ್ಯ ಕಾರಣವಾಗಿರುತ್ತದೆ.

ಈ ಸಮಸ್ಯೆ ಯಾರಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ ?
ಈ ತೊಂದರೆ ಹೆಂಗಸರಿಗಿಂತ ಗಂಡಸರಲ್ಲಿ ಹೆಚ್ಚಾಗಿರುತ್ತದೆ. ಸುಮಾರು 40 ವರ್ಷಕ್ಕಿಂತ ಮೇಲ್ಪಟ್ಟವರಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ.
ಅತಿಯಾದ ದೇಹದ ತೂಕ, ದಪ್ಪ ಮತ್ತು ಚಿಕ್ಕದಾದ ಕುತ್ತಿಗೆಯುಳ್ಳವರಿಗೆ,

ಸಾಮಾನ್ಯವಾದ ಗಾತ್ರಕ್ಕಿಂತ ಹೆಚ್ಚಿನ ಗಾತ್ರದ ನಾಲಿಗೆ ಇರುವವರಿಗೆ, ಮೂಗಿನ ಮದ್ಯದ ಮೃದು ಮೂಳೆ ಸೊಟ್ಟಾಗಿರುವವರಿಗೆ,
ಕೆಳದವಡೆ ಚಿಕ್ಕದು ಮತ್ತು ಸ್ವಲ್ಪ ಹಿಂದೆ ಇರುವವರಿಗೆ, ಹೈಪೊಥೈರಾಯ್ಡಿಸಮ್ ಮತ್ತು ಅಕ್ರೋಮೆಗಾಲಿ (Hypothyroidism ಮತ್ತು Acromegaly) ಇರುವವರಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ.  ಅತಿಯಾದ ಧೂಮಪಾನ ಮತ್ತು ಮಧ್ಯ ಸೇವನೆ ಮಾಡುವವರಲ್ಲಿ, ಟಾನ್ಸಿಲ್ಸ್‌ ಮತ್ತು ಅಡೆನೊಯ್ಡ ಗಡ್ಡೆಗಳ ಸಮಸ್ಯೆ ಇರುವವರಲ್ಲೂ ಕೂಡ ಇದು ಕಂಡುಬರುತ್ತದೆ.

ಈ ರೋಗದ ಲಕ್ಷಣಗಳೇನು ?
ಹೆಚ್ಚಾಗಿ ಗೊರಕೆ ಹೊಡೆಯುವುದು- ಸುಮಾರು ಶೇ 40ರಷ್ಟು ಗೊರಕೆ ಹೊಡೆಯುವ ಜನರಲ್ಲಿ ಈ ಸಮಸ್ಯೆ ಇರಬಹುದು. ರಾತ್ರಿ ಪದೆ ಪದೆ ಉಸಿರು ಕಟ್ಟಿದಂತಾಗುವುದು. ಪ್ರತಿ ಮುಂಜಾನೆ ತಲೆನೋವು ಮತ್ತು ಸಂಪೂರ್ಣ ನಿದ್ದೆ ಯಾಗಿಲ್ಲದಂತಹ ಅನುಭವ. ದೈನಂದಿನ ಚಟುವಟಿಕೆಯಲ್ಲಿರುವಾಗ ಅತಿ ಸುಲಭವಾಗಿ ನಿದ್ರೆ ಹೋಗುವುದು. ಉದಾಹರಣೆಗೆ ಟಿ.ವಿ ನೋಡುವಾಗ, ದಿನಪತ್ರಿಕೆ ಓದುವಾಗ. ಯಾವುದೇ ವಿಷಯದಲ್ಲಿ ಗಮನ ಹರಿಸುವುದರಲ್ಲಿ ಕಷ್ಟ ಅನಿಸುವುದು. ಬಾಯಿ ಒಣಗುವುದು, ರಾತ್ರಿಹೊತ್ತು ಪದೆ ಪದೆ ಮೂತ್ರಕ್ಕೆ ಹೋಗುವುದು.

ಚಿಕಿತ್ಸೆ ಪಡೆಯದಿದ್ದರೆ ಆಗುವ ದುಷ್ಪರಿಣಾಮಗಳೇನು?
ಆಮ್ಲತೆ, ಹತೋಟಿಯಲ್ಲಿರದ ರಕ್ತದೊತ್ತಡ ಮತ್ತು ಮಧುಮೇಹ. ಹೃದಯ ಸಂಬಂಧಿ ರೋಗಗಳು, ಪಾರ್ಶ್ವವಾಯು. ರಕ್ತದಲ್ಲಿ ಕೊಬ್ಬಿನಾಂಶ ಹೆಚ್ಚುವಿಕೆ, ಮತ್ತು ಮೂತ್ರ ಜನಕಾಂಗಕ್ಕೆ ಸಂಬಂಧಿಸಿದ ಸಮಸ್ಯೆಗಳು ಉಲ್ಬಣಗೊಳ್ಳುತ್ತವೆ. ಮಾನಸಿಕ ಖಿನ್ನತೆಗೊಳಗಾಗುವುದು. ಶ್ವಾಸಕೋಶದ ನಿಷ್ಕ್ರೀಯತೆ. ರೋಗದ ತೀಕ್ಷ್ಣತೆ ಅತೀ ಹೆಚ್ಚಾದಾಗ ನಿದ್ರೆಯಲ್ಲಿ ಸಾವು ಸಂಭವಿಸುವ ಸಾಧ್ಯತೆಗಳೂ ಉಂಟು.

ಈ ರೋಗ ಹೇಗೆ ಕಂಡುಹಿಡಿಯಬಹುದು ?
ಈ ಪರೀಕ್ಷೆಗೆ ಸ್ಲೀಪ್ ಸ್ಟಡಿ ಅಥವಾ Polysomnography ಪರೀಕ್ಷೆ ಎನ್ನುತ್ತೇವೆ. ಈ ಪರೀಕ್ಷೆಗಳನ್ನು ಕೇವಲ ರಾತ್ರಿ ಹೊತ್ತಿನಲ್ಲಿ ಮಾಡಲಾಗುತ್ತಿದ್ದು ಸುಮಾರು 6–8 ಗಂಟೆಗಳ ಕಾಲ ಪರೀಕ್ಷೆ ಮಾಡಿ ನಿದ್ದೆಯ ಸಂಪೂರ್ಣ ಮಾಹಿತಿಯನ್ನು ಶ್ವಾಸಕೋಶದ ತಜ್ಞರು ಕೂಲಂಕಶವಾಗಿ ಪರಿಶೀಲಿಸಿ ರೋಗದ ಬಗ್ಗೆ ನಿರ್ಣಯಿಸುತ್ತಾರೆ.

ಇದಕ್ಕೆ ಚಿಕಿತ್ಸೆ ಉಂಟೇ ?
CPAP ಯಂತ್ರದಿಂದ ಬೇಕಾದ ಒತ್ತಡದಲ್ಲಿ ಗಾಳಿ ಕೊಡುವುದು(ನಿದ್ರಾವಸ್ಥೆಯಲ್ಲಿ). ಉಸಿರಾಟ ನಾಳ ಅಗಲಿಸುವ ಕೆಲವು ಶಸ್ತ್ರಚಿಕಿತ್ಸೆಗಳು
ಥೈರಾಯಿಡ್ ಮತ್ತು ಟಾನ್ಸಿಲ್ಸ್ ಸಮಸ್ಯೆಗಳ ಚಿಕಿತ್ಸೆಯಿಂದ ಮಲಗುವ ಭಂಗಿಗಳ ಅಭ್ಯಾಸ ದೇಹದ ತೂಕ ಕಡಿಮೆಮಾಡುವುದು
ಧೂಮ್ರಪಾನ ಮತ್ತು ಮದ್ಯಪಾನ ನಿಲ್ಲಿಸುವಿಕೆ.

ಈ ಒಂದು ಸಮಸ್ಯೆಯನ್ನು ಕಂಡುಹಿಡಿಯುವ ಸಾಧನವನ್ನು ಮೊಟ್ಟಮೊದಲ ಬಾರಿಗೆ ಉತ್ತರ ಕರ್ನಾಟಕದಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಪ್ರಾರಂಭಿಸಲಾಗಿದೆ. ಇಂತಹ ಒಂದು ಸೌಲಭ್ಯವು ಕಡಿಮೆ ದರದಲ್ಲಿ ಎಲ್ಲ ಜನರಿಗೆ ಲಭ್ಯವಾಗುವಂತೆ ಅನುಕೂಲ ಮಾಡಲಾಗಿದೆ. ಈ ಸೌಲಭ್ಯವನ್ನು ಇಂತಹ ತೊಂದರೆಯುಳ್ಳವರು SDM ಆಸ್ಪತ್ರೆಗೆ ಭೇಟಿ ನೀಡಿ  ಚಿಕಿತ್ಸೆ ಪಡೆದುಕೊಳ್ಳಬಹುದು.

(ಡಾ. ನಿರಂಜನ ಕುಮಾರ್‌, ಡಾ. ಸಂಜಯ್‌ ಮತ್ತು ಡಾ. ಶ್ರೀಕಾಂತ ಸಮಾಲೋಚಕರು ಪಲ್ಮೊನಾಲಜಿಸ್ಟ್‌ ಆ್ಯಂಡ್‌ ಸ್ಲೀಪ್ ಸ್ಪೆಷಲಿಸ್ಟ್‌ ಎಸ್‌ಡಿಎಂ)

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !