ಶನಿವಾರ, ಡಿಸೆಂಬರ್ 7, 2019
24 °C

ಸಂಕ್ಷಿಪ್ತ ಸುದ್ದಿ | ಸಚಿವ ಶ್ರೀನಿವಾಸ ಪೂಜಾರಿ ಭೇಟಿ 19ರಂದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ಮುಜರಾಯಿ, ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಗುರುವಾರ ಧಾರವಾಡ ಜಿಲ್ಲೆಯ ಪ್ರವಾಸ ಕೈಗೊಂಡಿದ್ದಾರೆ.

ಬೆಳಿಗ್ಗೆ 8ರಿಂದ 8.30ರವರೆಗೆ ಹುಬ್ಬಳ್ಳಿಯ ದೇಶಪಾಂಡೆ ನಗರದ ಕೃಷ್ಣ ದೇವಸ್ಥಾನಕ್ಕೆ ಭೇಟಿ ನೀಡುವರು. 9.30ರಿಂದ 11ರವರೆಗೆ ಧಾರವಾಡದಲ್ಲಿ ಹಿರಿಯ ಸಾಹಿತಿ ಡಾ. ಚನ್ನವೀರ ಕಣವಿ, ವೈದ್ಯರಾದ ಡಾ. ಸುಧೀರ್ ಜಂಬಗಿ ಹಾಗೂ ಡಾ. ಖಾಜಿ ಅವರ ಮನೆಗೆ ಭೇಟಿ ನೀಡುವರು. 11ಕ್ಕೆ ಧಾರವಾಡದ ಗೋಪಾಲಕೃಷ್ಣ ಮಂಗಲ ಕಾರ್ಯಾಲಯದಲ್ಲಿ ‘ಒಂದು ದೇಶ - ಒಂದು ಸಂವಿಧಾನ’ ಗೋಷ್ಠಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸುವರು. ಮಧ್ಯಾಹ್ನ 12ಕ್ಕೆ ಕಾರವಾರಕ್ಕೆ ತೆರಳುವರು ಎಂದು ಪ್ರಕಟಣೆ ತಿಳಿಸಿದೆ.

ಪಶುಪತಿಹಾಳ: ಗುರುವಂದನಾ ಕಾರ್ಯಕ್ರಮ

ಕುಂದಗೋಳ ತಾಲ್ಲೂಕಿನ ಪಶುಪತಿಹಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರ ದಿನದ ಅಂಗವಾಗಿ ಮಂಗಳವಾರ ಗುರುವಂದನಾ ಕಾರ್ಯಕ್ರಮ ಜರುಗಿತು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಎಸ್‌ಡಿಎಂಸಿ ಅಧ್ಯಕ್ಷ ಹಾಗೂ ಜನಪದ ಕಲಾವಿದ ಮಹಾಂತೇಶ ಡೊಳ್ಳಿನ, ‘ವಿದ್ಯಾರ್ಥಿಗಳು ಜಾತಿ–ಮತ ಭೇದಗಳನ್ನು ಮೀರಿ ವಿದ್ಯೆ ಕಲಿತು ಮುಂದೆ ಬರಬೇಕು’ ಎಂದರು.

ಗ್ರಾಮದ ಹಿರಿಯ ಹಾಗೂ ಕಿರಿಯ ಪ್ರಾಥಮಿಕ ಶಾಲೆಗಳ ಶಿಕ್ಷಕರು, ಅಂಗನವಾಡಿ ಕಾರ್ಯಕರ್ತರು ಹಾಗೂ ಅಡುಗೆ ಸಿಬ್ಬಂದಿಗೆ ಎಸ್‌ಡಿಎಂಸಿ ವತಿಯಿಂದ ಸನ್ಮಾನಿಸಲಾಯಿತು.

‌ಮುಖಂಡರಾದ ಬಸವರಾಜ ಕೆ. ನಾಯ್ಕರ್, ಗುರುನಗೌಡ್ರ ‌ಪಾಟೀಲ, ಹಿರಿಯ ಪ್ರಾಥಮಿಕ ಶಾಲೆ ಮುಖ್ಯೋಪಾಧ್ಯಾಯ ಎ.ಬಿ. ಬಳ್ಳಾರಿ, ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಜಿ.ಪಿ. ಮಾಂಡ್ರೆ, ಶಿಕ್ಷಕರಾದ ಪಿ.ಐ. ಗೋಡಿ, ಶಿವಾನಂದ ಹುಣಸೀಮರದ, ಅಮಿತ್ ಮುನ್ಸಿಬಣ, ಎನ್.ಎಂ. ಹಂಚಿನಾಳ , ಎ.ಜೆ. ಮಂಕಲ್, ಗೀತಾ ರೇವಣಕರ್, ಅಶೋಕ ಬೂದಿಹಾಳ, ಎನ್.ಬಿ. ಪಾಟೀಲ, ಜಿ.ಬಿ. ಛಬ್ಬಿ ಹಾಗೂ ಎಸ್.ಎ. ಬಣಕಾರ್ ಇದ್ದರು.

ತಾಲ್ಲೂಕು ಮಟ್ಟದ ಕ್ರೀಡಾಕೂಟ 20ರಿಂದ

ಸರ್ಕಾರಿ, ಅನುದಾನಿತ ಹಾಗೂ ಅನುದಾನರಹಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ತಾಲ್ಲೂಕು ಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟಗಳು ಸೆ. 20 ಹಾಗೂ ಸೆ. 21ರಂದು ಹುಬ್ಬಳ್ಳಿಯ ನೆಹರು ಮೈದಾನದಲ್ಲಿ ಜರುಗಲಿದೆ.

ಗುಂಪು ಕ್ರೀಡೆಗಳಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದ ಕ್ರೀಡಾಪಟುಗಳು ಕ್ರೀಡಾಕೂಟದಲ್ಲಿ ಭಾಗವಹಿಸಬಹುದು. ಕ್ರೀಡೆಗಳು ಬೆಳಗ್ಗೆ 9ಕ್ಕೆ ಆರಂಭವಾಗಲಿವೆ. ತಾಲ್ಲೂಕು ಮಟ್ಟದಲ್ಲಿ ವಿಜೇತರಾದ ಕ್ರೀಡಾಪಟುಗಳು ಜಿಲ್ಲಾ ಮಟ್ಟಕ್ಕೆ ಸ್ಪರ್ಧಿಸಬಹುದು.

ವೈದ್ಯಕೀಯ, ಅರೆ ವೈದ್ಯಕೀಯ ಸಿಬ್ಬಂದಿ ನೇಮಕಾತಿಗೆ ಅರ್ಜಿ

ಪಾಲಿಕೆಯ ಚಿಟಗುಪ್ಪಿ ಆಸ್ಪತ್ರೆಗೆ ಅಗತ್ಯವಿರುವ ಎಂಬಿಬಿಎಸ್ ಹಾಗೂ ಚರ್ಮರೋಗ, ಅರವಳಿಕೆ, ಸ್ತ್ರೀರೋಗ ಶುಶ್ರೂಷಕಿ ವೈದ್ಯ ಹಾಗೂ ತಜ್ಞ ವೈದ್ಯರನ್ನು ಮಾಸಿಕ ಗೌರವ ಧನದ ಆದಾರದ ಮೇಲೆ ಒಂದು ವರ್ಷದ ಮಟ್ಟಿಗೆ ನೇಮಕ ಮಾಡಿಕೊಳ್ಳಲು ಅರ್ಜಿ ಆಹ್ವಾನಿಸಲಾಗಿದೆ.

ಆಸಕ್ತ ಅರ್ಹರು ತಮ್ಮ ಮೂಲ ಹಾಗೂ ಧೃಡೀಕೃತ ದಾಖಲಾತಿಗಳೊಂದಿಗೆ ಸೆ. 23ರಿಂದ 30ರೊಳಗೆ, ಬೆಳಿಗ್ಗೆ 11 ಗಂಟೆ ನಂತರ ಚಿಟಗುಪ್ಪಿ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಕಚೇರಿಯ ಎರಡನೇ ದರ್ಜೆ ಸಹಾಯಕರ ಹತ್ತಿರ ತಮ್ಮ ಹೆಸರು ನೋಂದಾಯಿಸಿ ಸಂದರ್ಶನಕ್ಕೆ ಹಾಜರಾಗಬಹುದು. ಮಾಹಿತಿಗೆ 0836 2358922 ಸಂಪರ್ಕಿಸಬಹುದು.

ಪ್ರತಿಕ್ರಿಯಿಸಿ (+)