ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಆರ್‌ಟಿಎಸ್: ₹ 970.87 ಕೋಟಿ, ಉದ್ಘಾಟನೆಗೆ ಸಜ್ಜು

Last Updated 10 ಜನವರಿ 2020, 14:45 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಅವಳಿ ನಗರದ ನಡುವೆ ತ್ವರಿತ ಸಾರಿಗೆ ಸೇವೆ (ಬಿಆರ್‌ಟಿಎಸ್‌) ಒದಗಿಸುವ ಮಹತ್ವಾಕಾಂಕ್ಷೆ ಯೋಜನೆಯ ಕಾಮಗಾರಿ ಬಹುತೇಕ ಪೂರ್ಣಗೊಳಿಸಲಾಗಿದ್ದು, ನಿತ್ಯ 90 ಸಾವಿರ ಪ್ರಯಾಣಿಕರು ಇದರ ಲಾಭ ಪಡೆಯುತ್ತಿದ್ದಾರೆ’ ಎಂದು ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್‌ ಹೇಳಿದರು.

ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘2012 ರಲ್ಲಿ ನಾನು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಸಚಿವ ಸಂಪುಟದಲ್ಲಿ ಅನುಮೋದನೆ ನೀಡಲಾಗಿತ್ತು. ₹ 178 ಕೋಟಿ ವೆಚ್ಚದಲ್ಲಿ ಅತ್ಯಾಧುನಿಕ ಹವಾನಿಯಂತಿತ್ರ ಬಸ್‍ಗಳನ್ನು ಖರೀದಿ ಮಾಡಲಾಗಿದೆ. ಬಸ್ ಖರೀದಿಗಾಗಿ ಜೆನರ್ಮ್ ಯೋಜನೆಯಡಿ ₹78 ಕೋಟಿ ಬಿಡುಗಡೆಯಾಗಿತ್ತು’ ಎಂದರು.

‘₹ 44 ಕೋಟಿ ವೆಚ್ಚದಲ್ಲಿ 55 ವಿದ್ಯುತ್ ಚಾಲಿತ ವಾಹನಗಳನ್ನು ಖರೀದಿ ಮಾಡಲು ಉದ್ದೇಶಿಸಲಾಗಿದೆ. 32 ಬಸ್‌ ನಿಲ್ದಾಣ, ಆರು ಕಡೆ ಮೇಲ್ಸೇತುವೆಗಳನ್ನು ನಿರ್ಮಿಸಲಾಗಿದೆ ಎಂದು ಹೇಳಿದರು.

‘ಪ್ರತಿ ತಿಂಗಳು ಬಿಆರ್‌ಟಿಎಸ್‌ ಬಸ್‌ಗಳ ಕಾರ್ಯಾಚರಣೆಗಾಗಿ ₹ 5 ಕೋಟಿ ವೆಚ್ಚವಾಗುತ್ತಿದೆ. ₹ 3 ಕೋಟಿ ಆದಾಯ ಬರುತ್ತಿದ್ದು, ₹ 2 ಕೋಟಿ ನಷ್ಟವಾಗುತ್ತಿದೆ. ಮುಂದಿನ ದಿನಗಳಲ್ಲಿ ಬೇಂದ್ರೆ ಸಾರಿಗೆ ಸಂಚಾರ ಬಂದ್‌ ಆಗಲಿದ್ದು, ಆಗ ಆದಾಯ ಇನ್ನಷ್ಟು ಹೆಚ್ಚಾಗಲಿದೆ. ಜಾಹೀರಾತು, ಬಾಡಿಗೆಯಿಂದ ₹50 ಲಕ್ಷ ಆದಾಯದ ನಿರೀಕ್ಷೆ ಇದೆ. ನಷ್ಟ ಸರಿದೂಗಿಸಲು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ’ ಎಂದರು.

‘ಬಿಎಂಟಿಸಿ ನಗರ ಸಾರಿಗೆಯಲ್ಲಿ ಹವಾನಿಯಂತ್ರಿತ ಬಸ್‍ಗಳಲ್ಲಿ ಸಂಚರಿಸಲು ಪ್ರತಿ ಕಿ.ಮೀ.ಗೆ ₹3.72 ದರ ನಿಗದಿ ಮಾಡಿದ್ದರೆ, ಬಿಆರ್‌ಟಿಎಸ್‌ ಪ್ರತಿ ಕಿ.ಮೀ. ₹ 1.18 ದರ ನಿಗದಿ ಮಾಡಲಾಗಿದೆ. ಕಡಿಮೆ ದರದಲ್ಲಿ ಜನರಿಗೆ ಉತ್ತಮ ಸಾರಿಗೆ ಸೇವೆ ನೀಡಲಾಗುತ್ತಿದೆ’ ಎಂದು ಹೇಳಿದರು.

ನವಲೂರು ಮೇಲ್ಸೇತುವೆ ಕಾಮಗಾರಿ ಬಾಕಿ ಉಳಿದಿದ್ದು, ಕೆಲ ಬದಲಾವಣೆಯೊಂದಿಗೆ ₹ 6.50 ಕೋಟಿ ವೆಚ್ಚದಲ್ಲಿ ಸೇತುವೆ ನಿರ್ಮಾಣ ಮಾಡಲಾಗುತ್ತಿದೆ. ಮಳೆಗಾಲದಲ್ಲಿ ಧಾರವಾಡದ ಟೋಲ್ ನಾಕಾದಲ್ಲಿ ನೀರು ಸಂಗ್ರಹವಾಗಿ ಸಂಚಾರಕ್ಕೆ ತೊಂದರೆಯಾಗಿತ್ತು. ಅಲ್ಲಿ ನಾಲಾ ನಿರ್ಮಿಸಲು ₹1.30 ಕೋಟಿಯನ್ನು ಪಾಲಿಕೆಗೆ ಪಾವತಿಸಲಾಗುತ್ತಿದ್ದು, ಶೀಘ್ರದಲ್ಲಿಯೇ ಸಮಸ್ಯೆ ಪರಿಹಾರವಾಗಲಿದೆ’ ಎಂದರು.

ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಧಕ್ಷ ವಿ.ಎಸ್.ಪಾಟೀಲ, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಮೋಹನ ಲಿಂಬಿಕಾಯಿ, ಶಾಸಕರಾದ ಬಸವರಾಜ ಹೊರಟ್ಟಿ, ಪ್ರಸಾದ ಅಬ್ಬಯ್ಯ, ಸಿ.ಎಂ. ನಿಂಬಣ್ಣನವರ, ಬಿಆರ್‌ಟಿಎಸ್ ವ್ಯವಸ್ಥಾಪಕ ನಿರ್ದೇಶಕ ರಾಜೇಂದ್ರ ಚೋಳನ್ ಇದ್ದರು.

₹ 200 ಪಾವತಿಸಿ ಕಾರ್ಡ್‌ ಪಡೆಯಬಹುದು. ₹50 ರಿಂದ ₹1,800ರ ವರೆಗೆ ರಿಚಾರ್ಜ್‌ ಮಾಡಿಸಬಹುದು. ₹ 100 ರಿಚಾರ್ಜ್‌ ಮಾಡಿಸಿದರೆ, ₹ 10 ಬೋನಸ್‌ ನೀಡಲಾಗುತ್ತದೆ. ಕಾರ್ಡ್‌ನಲ್ಲಿ ಕನಿಷ್ಠ ₹26 ಮೊತ್ತ ಬಾಕಿ ಇರಬೇಕು.

ಮಾಹಿತಿಗೆ ಸಂಪರ್ಕ: ಮಾಹಿತಿಗೆ ಉಚಿತ ಸಹಾಯವಾಣಿ ಸಂಖ್ಯೆ 18005991010. ವೆಬ್‌ ವಿಳಾಸ www.hdbrts.com, ಚಿಗರಿ ಆ್ಯಪ್‌ ಮೂಲಕ ಪಡೆಯಬಹುದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT