ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಆರ್‌ಟಿಎಸ್: ಮತ್ತಷ್ಟು ಕಟ್ಟಡ ತೆರವಿಗೆ ಯೋಜನೆ

ಜಿಲ್ಲೆಯಲ್ಲಿವೆ 280 ಅನಧಿಕೃತ ಕಟ್ಟಡ; ಧಾರ್ಮಿಕ ಕಟ್ಟಡಗಳ ರಕ್ಷಣೆಗೆ ಕಾನೂನು
Last Updated 24 ಡಿಸೆಂಬರ್ 2022, 12:48 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಇಲ್ಲಿನ ಬೈರಿದೇವರಕೊಪ್ಪದ ಹಜರತ್ ಸೈಯ್ಯದ್ ಮಹ್ಮದ್ ಶಾ ಖಾದ್ರಿ ದರ್ಗಾದ ಭಾಗಶಃ ತೆರವು ಕಾರ್ಯ ಪೂರ್ಣಗೊಂಡ ಬೆನ್ನಲ್ಲೇ, ಬಿಆರ್‌ಟಿಎಸ್‌ ವ್ಯಾಪ್ತಿಗೊಳಪಟ್ಟಿರುವ ಇನ್ನುಳಿದ ಮೂರು ಧಾರ್ಮಿಕ ಕಟ್ಟಗಳ ತೆರವು ಕಾರ್ಯಕ್ಕೆ ಚಿಂತನೆ ನಡೆದಿದೆ.

ಎರಡು ತಿಂಗಳ ಹಿಂದಷ್ಟೇ ಉಣಕಲ್‌ನ ರಾಮಲಿಂಗೇಶ್ವರ ದೇವಸ್ಥಾನದ ತೆರವಿಗೆ ಮುಂದಾಗಿದ್ದ ಬಿಆರ್‌ಟಿಎಸ್‌, ದೇವಸ್ಥಾನದ ಗೋಡೆಗೆ ನೋಟಿಸ್‌ ಅಂಟಿಸಿತ್ತು. ಆ ವೇಳೆ ನಡೆದ ಆಂತರಿಕ ರಾಜಕೀಯದಿಂದ ತೆರವು ಕಾರ್ಯ ಸ್ಥಗಿತಗೊಂಡಿತ್ತು. ಇದೀಗ ದರ್ಗಾ ತೆರವು ಕಾರ್ಯ ಮುಕ್ತಾಯವಾಗು
ತ್ತಿದ್ದಂತೆ, ಉಳಿದ ಧಾರ್ಮಿಕ ಕಟ್ಟಡಗಳ ತೆರವಿಗೆ ಬಿಆರ್‌ಟಿಎಸ್‌ ಮುಂದಾಗಿದೆ.

ಕಟ್ಟಡಗಳಿಗೆ ಸಂಬಂಧಿಸಿದವರಿಗೆ ತೆರವಿಗೆ ಸೂಚನೆ ನೀಡಿ, ಕಾಲಾವಕಾಶ ನೀಡಲಿದೆ. ಇಲ್ಲದಿದ್ದರೆ, ಜಿಲ್ಲಾಡಳಿತದ ಸಹಕಾರದಿಂದ ತಾನೇ ತೆರವಿಗೆ ನಿರ್ಧರಿಸಿದೆ. ಆದರೆ, ಚುನಾವಣೆ ಹಿನ್ನೆಲೆಯಲ್ಲಿ ಕೆಲವು ರಾಜಕೀಯ ಒತ್ತಡದಿಂದ ವಿಳಂಬವಾಗುವ ಸಾಧ್ಯತೆಯೂ ಇದೆ ಎನ್ನುವುದು ಸಾರ್ವಜನಿಕರ ಅಭಿಪ್ರಾಯ.

ಜೊತೆಗೆ, ಧಾರವಾಡ ಜಿಲ್ಲೆಯಲ್ಲಿ ಸಾರ್ವಜನಿಕ ಸ್ಥಳಗಳನ್ನು ಅತಿಕ್ರಮಿಸಿ ನಿರ್ಮಿಸಿರುವ ಧಾರ್ಮಿಕೇತರ ಅನಧಿಕೃತ ಕಟ್ಟಡಗಳನ್ನು ತೆರವುಗೊಳಿಸುವ ಕುರಿತು ಸಹ ಚರ್ಚೆ ನಡೆದಿದೆ.

ಸಾರ್ವಜನಿಕ ಕಾಮಗಾರಿಗೆ ಹಾಗೂ ವಾಹನಗಳ ಸಂಚಾರಕ್ಕೆ ತೊಂದರೆಯಾಗುತ್ತದೆ ಎಂದು 2009ರಲ್ಲಿ ಸುಪ್ರೀಂಕೋರ್ಟ್ ಅನಧಿಕೃತ ಕಟ್ಟಡಗಳ ತೆರವಿಗೆ ಆದೇಶ ನೀಡಿತ್ತು. ಆಗ, ಸಮೀಕ್ಷೆ ನಡೆಸಿದಾಗ ಧಾರವಾಡ ಜಿಲ್ಲೆಯಲ್ಲಿ 305 ಕಟ್ಟಡಗಳನ್ನು ಅನಧಿಕೃತವಾಗಿ ನಿರ್ಮಿಸಿರುವುದು ಪತ್ತೆಯಾಗಿತ್ತು. ಕೋರ್ಟ್‌ ಆದೇಶದ ನಂತರದ ವರ್ಷಗಳಲ್ಲಿ 19 ಕಟ್ಟಡಗಳು ಅನಧಿಕೃತವಾಗಿ ನಿರ್ಮಾಣವಾಗಿ, ಒಟ್ಟು ಸಂಖ್ಯೆ 324ಕ್ಕೆ ಏರಿಕೆಯಾಗಿತ್ತು.

ಕುಂದಗೋಳ, ಕಲಘಟಗಿ, ನವಲಗುಂದ ಸೇರಿದಂತೆ ಧಾರವಾಡ–ಹುಬ್ಬಳ್ಳಿಯ ಗ್ರಾಮೀಣ ಭಾಗದಲ್ಲಿನ ಕೆಲವು ಸಣ್ಣಪುಟ್ಟ ಗುಡಿ, ಕಟ್ಟೆಗಳು ಹಾಗೂ ಅನಿವಾರ್ಯವಿದ್ದ ಕಡೆ ನಗರ ಪ್ರದೇಶಗಳಲ್ಲಿನ 40ರಷ್ಟು ಕಟ್ಟಡಗಳನ್ನಷ್ಟೇ ತೆರವು ಮಾಡಲಾಗಿದೆ. ಆದರೆ, ದೊಡ್ಡ ಧಾರ್ಮಿಕ ಕೇಂದ್ರಗಳು, ಬೃಹತ್‌ ಕಟ್ಟಡಗಳು ಹಾಗೆಯೇ ಇವೆ. ಇದೀಗ ಜಿಲ್ಲೆಯಲ್ಲಿ ಒಟ್ಟಾರೆ 280ರಷ್ಟು ಅನಧಿಕೃತ ಕಟ್ಟಡಗಳು ತೆರವು ಆಗಬೇಕಿದೆ.

ಕೋರ್ಟ್ಆದೇಶ ನೀಡಿ 14 ವರ್ಷವಾಗಿದೆ. 2020ರ ಡಿಸೆಂಬರ್‌ನಲ್ಲಿಯೂ ಹೈಕೋರ್ಟ್ ಅನಧಿಕೃತ ಕಟ್ಟಡಗಳ ತೆರವಿಗೆ ನಿರ್ದೇಶನ ನೀಡಿತ್ತು. ನ್ಯಾಯಾಂಗ ನಿಂದನೆಯ ತೂಗುಗತ್ತಿ ತಪ್ಪಿಸಿಕೊಳ್ಳಲುಸರ್ಕಾರದ ಅಂದಿನ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್, ಎಲ್ಲಾ ಜಿಲ್ಲಾಧಿಕಾರಿಗೆ ಪತ್ರ ಬರೆದು ತೆರವು ಕಾರ್ಯಾಚರಣೆಗೆ ತುರ್ತು ಕ್ರಮ ಕೈಗೊಳ್ಳಲು ಸೂಚಿಸಿದ್ದರು. ‘ಕಾರ್ಯಯೋಜನೆ ಸಿದ್ಧಪಡಿಸಿ, ವಾರಕ್ಕೆ ಒಂದು ಕಟ್ಟಡವನ್ನಾದರೂ ತೆರವುಗೊಳಿಸಿ, ಪ್ರತಿ ತಿಂಗಳು ಗೃಹ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿಗೆ ವರದಿ ಕಳಿಸಬೇಕು’ ಎಂದು ನಿರ್ದೇಶಿಸಿದ್ದರು.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ‘ಸಾರ್ವಜನಿಕ ಸ್ಥಳದಲ್ಲಿ ಅನಧಿಕೃತವಾಗಿ ನಿರ್ಮಿಸಿರುವ ಧಾರ್ಮಿಕ ಕಟ್ಟಗಳ ರಕ್ಷಣೆಗೆ ಸರ್ಕಾರ ಪ್ರತ್ಯೇಕ ಕಾಯ್ದೆ ರೂಪಿಸಿದೆ. ಅವುಗಳನ್ನು ತೆರವು ಮಾಡಲು ಸರ್ಕಾರದ ಅನುಮತಿ ಅಗತ್ಯ. ಅವುಗಳನ್ನು ಹೊರತು
ಪಡಿಸಿ ಅನಧಿಕೃತವಾಗಿ ನಿರ್ಮಿಸಿರುವ ಇತರ ಕಟ್ಟಗಳ ತೆರವಿಗೆ ಕ್ರಮ ಕೈಗೊಳ್ಳಲಾಗುವುದು. ಬಿಆರ್‌ಟಿಎಸ್‌ ಯೋಜನೆಗೆ ಭೂಸ್ವಾಧೀನ ಮಾಡಿಕೊಂಡಾಗ, ಆ ವ್ಯಾಪ್ತಿಗೆ ಒಳಪಟ್ಟ ಬಹುತೇಕ ಧಾರ್ಮಿಕ ಕಟ್ಟಡಗಳನ್ನು ತೆರವು ಮಾಡಲಾಗಿದೆ. ಇನ್ನುಳಿದ ಕಟ್ಟಡಗಳ ತೆರವಿಗೆ ಕ್ರಮ ಕೈಗೊಳ್ಳಲಾಗುವುದು’ ಎಂದರು.

‘ಸುಪ್ರೀಂ ಆದೇಶದ ಹಿನ್ನೆಲೆಯಲ್ಲಿ ತೆರವು’

ಹುಬ್ಬಳ್ಳಿ: ‘ಸಾರ್ವಜನಿಕ ಸ್ಥಳಗಳಲ್ಲಿ ಅನಧಿಕೃತ ಕಟ್ಟಡಗಳನ್ನು ನಿರ್ಮಿಸಿದ್ದರೆ ಅವುಗಳನ್ನು ತೆರವುಗೊಳಿಸುವಂತೆ ಸುಪ್ರೀಂಕೋರ್ಟ್‌ ಕಟ್ಟುನಿಟ್ಟಿನ ಆದೇಶ ನೀಡಿರುವ ಹಿನ್ನೆಲೆಯಲ್ಲಿ, ಕಟ್ಟಡಗಳ ತೆರವು ಕಾರ್ಯ ಮಾಡಲಾಗುತ್ತಿದೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ನಗರದ ಬೈರಿದೇವರಕೊಪ್ಪದಲ್ಲಿ ನಡೆಯುತ್ತಿರುವ ದರ್ಗಾ ತೆರವು ಕಾರ್ಯಾಚರಣೆ ಸ್ಥಳಕ್ಕೆ ಶುಕ್ರವಾರ ರಾತ್ರಿ ಭೇಟಿ ನೀಡಿ, ಮಾಧ್ಯಮದವರೊಂದಿಗೆ ಅವರು ಮಾತನಾಡಿದರು.

‘ಧಾರ್ಮಿಕ ಕಟ್ಟಡಗಳ ರಕ್ಷಣೆಗೆ ಕಾನೂನು ಜಾರಿಗೊಳಿಸಲಾಗಿದೆ. ಅನಧಿಕೃತವಾಗಿ ನಿರ್ಮಿಸಿರುವ ಧಾರ್ಮಿಕ ಕಟ್ಟಡಗಳನ್ನು ಮೊದಲು ಉಳಿಸುವ ಯತ್ನ ಮಾಡುತ್ತೇವೆ. ಇಲ್ಲವಾದರೆ ವೈಜ್ಞಾನಿಕವಾಗಿ ಸ್ಥಳಾಂತರಿಸಲು ಚಿಂತಿಸುತ್ತೇವೆ. ಇವೆರಡೂ ಸಾಧ್ಯವಿಲ್ಲ ಎಂದಾದರೆ, ಅನಿವಾರ್ಯವಾಗಿ ತೆರವು ಮಾಡಬೇಕಾಗುತ್ತದೆ. ಇದಕ್ಕೆ ಸಾರ್ವಜನಿಕರ ಸಹಕಾರ ಅಗತ್ಯ’ ಎಂದರು.

ಕೋಟ್‌....

ಬಿಆರ್‌ಟಿಎಸ್‌ ವ್ಯಾಪ್ತಿಗೆ ಒಳಪಟ್ಟಿದ್ದ 15 ಕಟ್ಟಡಗಳನ್ನು ತೆರವು ಮಾಡಲಾಗಿದೆ. ಉಳಿದ ಕಟ್ಟಡಗಳ ತೆರವಿಗೆ ಮಾಲೀಕರಿಗೆ ಕಾಲಾವಕಾಶ ನೀಡಲಾಗುವುದು. ಇಲ್ಲದಿದ್ದರೆ ಜಿಲ್ಲಾಡಳಿತದ ನೆರವಿನಲ್ಲಿ ಬಿಆರ್‌ಟಿಎಸ್‌ ತೆರವು ಮಾಡಲಿದೆ
– ಗುರುದತ್ತ ಹೆಗಡೆ, ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT