ಶನಿವಾರ, ಆಗಸ್ಟ್ 13, 2022
28 °C

ಇನ್ನುಳಿದ ಅವಧಿಗೆ ಬಿ.ಎಸ್. ಯಡಿಯೂರಪ್ಪ ಅವರೇ ಮುಖ್ಯಮಂತ್ರಿ: ಪುತ್ರಿ ಅರುಣಾದೇವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಧಾರವಾಡ: ‘ರಾಜ್ಯದಲ್ಲಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಇನ್ನುಳಿದ ಅವಧಿಗೆ ಅವರೇ ಮುಖ್ಯಮಂತ್ರಿಯಾಗಿ ಮುಂದುವರೆಯಲಿದ್ದಾರೆ’ ಎಂದು ಯಡಿಯೂರಪ್ಪ ಅವರ ಪುತ್ರಿ ಅಖಿಲ ಭಾರತ ವೀರಶೈವ ಮಹಾಸಭಾ ಮಹಿಳಾ ರಾಜ್ಯ ಘಟಕದ ಅಧ್ಯಕ್ಷೆ ಅರುಣಾದೇವಿ ಉದಯಕುಮಾರ ಹೇಳಿದರು.

‘ಬಿಜೆಪಿ ವರಿಷ್ಠರು 75 ವರ್ಷ ಮೇಲ್ಪಟ್ಟವರಿಗೆ ಯಾವುದೇ ಅಧಿಕಾರ ನೀಡುವುದಿಲ್ಲ ಎಂದು ತೀರ್ಮಾನಿಸಿದ್ದಾರೆ. ಕೆಲವರ ವಿಚಾರದಲ್ಲಿ ವಯೋಮಾನದಲ್ಲಿ ವಿನಾಯತಿ ನೀಡಲಾಗುತ್ತದೆ. ಅದೇ ರೀತಿ ಯುಡಿಯೂರಪ್ಪ ಅವರಿಗೂ ವಿನಾಯತಿ ನೀಡಲಿದ್ದಾರೆ. ಹೀಗಾಗಿ ನಮ್ಮ ತಂದೆ ಯಾವುದೇ ತೊಂದರೆ ಇಲ್ಲದೆ ಅವಧಿ ಪೂರ್ಣಗೊಳಿಸುತ್ತಾರೆ’ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಮಹಿಳಾ ಘಟಕದ ಅಧ್ಯಕ್ಷೆಯಾಗಿ ಕೋವಿಡ್ ಸಂದರ್ಭದಲ್ಲಿ ಅಧಿಕಾರ ಸ್ವೀಕರಿಸಿದ ಹಿನ್ನೆಲೆಯಲ್ಲಿ ವಿವಿಧ ಕಡೆಗಳಲ್ಲಿ ಪ್ರವಾಸ ನಡೆಸಲು ಸಾಧ್ಯವಾಗಿರಲಿಲ್ಲ. ಇದೀಗ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಮುಖವಾಗಿರುವುದರಿಂದ ರಾಜ್ಯದಾದ್ಯಂತ ಪ್ರವಾಸ ಮಾಡುತ್ತಿದ್ದೇನೆ. ಈಗಾಗಲೇ ಮಂಡ್ಯ, ತುಮಕೂರು ಸೇರಿ ವಿವಿಧ ಕಡೆಗಳಲ್ಲಿ ಪ್ರವಾಸ ನಡೆಸಿದ್ದೇನೆ’ ಎಂದರು.

‘ಸಮಾಜದ ಬಡ ವಿದ್ಯಾರ್ಥಿಗಳಿಗೆ ಸಹಾಯ ಮಾಡುವ ಕೆಲಸ ನಡೆದಿದೆ. ಧಾರವಾಡದಲ್ಲಿ ನಿರ್ಮಿಸಿರುವ ಲಿಂಗಾಯತ ಭವನ ಮಾದರಿಯಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಉತ್ತಮ ಸೇವೆ ಮಾಡಲು ಪ್ರಯತ್ನಿಸಲಾಗುವುದು. ನಾನು ಮೊದಲಿನಿಂದಲೂ ಸಮಾಜ ಸೇವೆಯಲ್ಲಿ ತೊಡಗಿಕೊಂಡಿರುವ ಕಾರಣಕ್ಕೆ ಈ ಜವಾಬ್ದಾರಿ ನೀಡಿದ್ದಾರೆ. ನನಗೆ ನೀಡಿರುವುದು ಜವಾಬ್ದಾರಿಯೇ ಹೊರತು ಅಧಿಕಾರವಲ್ಲ ಎಂದು ತಿಳಿದುಕೊಂಡು ಸಮಾಜದ ಏಳ್ಗೆಗೆ ಶ್ರಮಿಸುತ್ತೇನೆ’ ಎಂದು ಅರುಣಾದೇವಿ ಹೇಳಿದರು. 

ವೀರಶೈವ ಮಹಾಸಭಾದ ಜಿಲ್ಲಾ ಘಟಕದ ಪದಾಧಿಕಾರಿಗಳಾದ ಗುರುರಾಜ ಹುಸಿಮರದ, ಶಿವಾನಂದ ಅಂಬಡಗಟ್ಟಿ, ಶಿವಶರಣ ಕಲಬಶೆಟ್ಟರ, ಎಂ.ಎಫ್. ಹಿರೇಮಠ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು