ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪ್ರತ್ಯೇಕತಯೆ ಕೂಗು ನಿಲ್ಲಲಿ’

ವಿಧಾನಸಭೆ ವಿರೋಧ ಪಕ್ಷದ ನಾಯಕ ಬಿ.ಎಸ್‌.ಯಡಿಯೂರಪ್ಪ
Last Updated 6 ಜನವರಿ 2019, 18:53 IST
ಅಕ್ಷರ ಗಾತ್ರ

ಅಂಬಿಕಾತನಯದತ್ತ ಪ್ರಧಾನ ವೇದಿಕೆ (ಧಾರವಾಡ): ‘ಉತ್ತರ ಕರ್ನಾಟಕ ಅಭಿವೃದ್ಧಿಯಲ್ಲಿ ಹಿಂದುಳಿದಿದೆ ಎಂಬುದನ್ನು ಒಪ್ಪಿಕೊಳ್ಳುತ್ತೇವೆ. ಆದರೆ, ಅಖಂಡ ಕರ್ನಾಟಕವೇ ಇರಬೇಕು. ಪ್ರತ್ಯೇಕತೆಯ ಕೂಗು ನಿಲ್ಲಬೇಕು’ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಬಿ.ಎಸ್‌.ಯಡಿಯೂರಪ್ಪ ಮನವಿ ಮಾಡಿದರು.

84ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಯುಕ್ತ ಕನ್ನಡ ಸಾಹಿತ್ಯ ಪರಿಷತ್‌ ವತಿಯಿಂದ ಆಯೋಜಿಸಿದ್ದ ಸಾಧಕರ ಸನ್ಮಾನ ಸಮಾರಂಭದಲ್ಲಿ ಕನ್ನಡಿಗ ಸಾಧಕರಿಗೆ ಸನ್ಮಾನ ನೆರವೇರಿಸಿದ ಬಳಿಕ ಮಾತನಾಡಿದ ಅವರು, ‘ಇತ್ತೀಚಿನ ದಿನಗಳಲ್ಲಿ ಉತ್ತರ ಕರ್ನಾಟಕದಲ್ಲಿ ಪ್ರತ್ಯೇಕತೆಯ ಕೂಗು ಕೇಳಿಬರುತ್ತಿದೆ. ಸಾಹಿತಿಗಳು, ಹೋರಾಟಗಾರರು ಮತ್ತು ಜನರ ಹೋರಾಟದ ಫಲವಾಗಿ ನಡೆದಿರುವ ಕರ್ನಾಟಕ ಏಕೀಕರಣದ ಆಶಯವನ್ನು ನಾವು ರಕ್ಷಿಸಬೇಕು’ ಎಂದರು.

ಉತ್ತರ ಕರ್ನಾಟಕದ ಸಮಗ್ರ ಅಭಿವೃದ್ಧಿ ಸರ್ಕಾರ ಆದ್ಯತೆ ನೀಡಬೇಕು. ತಾವು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಹಿಂದುಳಿದ ತಾಲ್ಲೂಕುಗಳ ಅಭಿವೃದ್ಧಿಗೆ ಸಂಬಂಧಿಸಿದಂತೆ ಡಾ.ಡಿ.ಎಂ.ನಂಜುಂಡಪ್ಪ ಅವರ ವರದಿಯ ಶಿಫಾರಸುಗಳ ಅನುಷ್ಠಾನಕ್ಕೆ ಹೆಚ್ಚಿನ ಅನುದಾನ ನೀಡಲಾಗಿತ್ತು. ಅಂತಹ ಪ್ರಯತ್ನಗಳು ಮುಂದುವರಿಯಬೇಕು. ಉತ್ತರ ಕರ್ನಾಟಕದ ಹಿಂದುಳಿದ ಪ್ರದೇಶಗಳ ರೈತರು, ಕಾರ್ಮಿಕರು ಸೇರಿದಂತೆ ಎಲ್ಲ ಜನರಿಗೆ ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲು ಅನುವಾಗುವಂತಹ ಯೋಜನೆಗಳನ್ನು ಜಾರಿಗೊಳಿಸಬೇಕು ಎಂದು ಸಲಹೆ ನೀಡಿದರು.

‘ಈ ಭಾಗದ ರೈತರ ಜೀವನಮಟ್ಟ ಸುಧಾರಣೆಗೆ ಕಾರಣವಾಗುವಂತಹ ನೀರಾವರಿ ಯೋಜನೆಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು. ಕೃಷ್ಣಾ ಮೇಲ್ದಂಡೆ ಯೋಜನೆಯನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸಬೇಕು. ಕಳಸಾ ಬಂಡೂರಿ ಯೋಜನೆಯನ್ನು ಆದಷ್ಟು ಬೇಗ ಪೂರ್ಣಗೊಳಿಸಬೇಕು. ಈ ವರ್ಷ 156 ತಾಲ್ಲೂಕುಗಳಲ್ಲಿ ಬರ ಪರಿಸ್ಥಿತಿ ಇದೆ ಎಂದು ರಾಜ್ಯ ಸರ್ಕಾರ ಘೋಷಿಸಿದೆ. ಈ ಎಲ್ಲ ತಾಲ್ಲೂಕುಗಳಲ್ಲಿ ನದಿ ಮೂಲದಿಂದ ನೀರು ತಂದು ಕೆರೆಗಳನ್ನು ತುಂಬಿಸುವ ಕೆಲಸ ಮಾಡಬೇಕು’ ಎಂದು ಆಗ್ರಹಿಸಿದರು.

ಹಿರಿಮೆಯ ನೆನೆದು ಮೈಮರೆತುವ ಕುಳಿತುಕೊಳ್ಳುವ ಕಾಲ ಇದಲ್ಲ. ಜನಸಾಮಾನ್ಯರ ಜೀವನಮಟ್ಟ ಸುಧಾರಣೆಗೆ ಪೂರಕವಾಗಿ ಹೆಚ್ಚಿನ ಕೆಲಸ ಮಾಡಬೇಕು. ರಾಜ್ಯವನ್ನು ಎಲ್ಲ ಕ್ಷೇತ್ರಗಳಲ್ಲಿ ಸಮಗ್ರವಾಗಿ ಅಭಿವೃದ್ಧಿಪಡಿಸುವುದಕ್ಕೆ ಪ್ರಯತ್ನಿಸಬೇಕು ಎಂದರು.

ರಾಷ್ಟ್ರೀಯ ಸ್ಮಾರಕ ಮಾಡಿ: ಕನ್ನಡದ ಹಿರಿಮೆಯನ್ನು ಸಾರಿದ ವರಕವಿ ದ.ರಾ.ಬೇಂದ್ರೆಯವರ ಮನೆಯನ್ನು ರಾಷ್ಟ್ರೀಯ ಸ್ಮಾರಕವನ್ನಾಗಿ ಮಾಡಬೇಕು. ಅದಕ್ಕೆ ಪೂರಕವಾದ ಎಲ್ಲ ಪ್ರಕ್ರಿಯೆಗಳನ್ನು ರಾಜ್ಯ ಸರ್ಕಾರ ತ್ವರಿತವಾಗಿ ನಡೆಸಬೇಕು ಎಂದು ಯಡಿಯೂರಪ್ಪ ಒತ್ತಾಯಿಸಿದರು.

ಕನ್ನಡದ ಸಾರಸ್ವತ ಲೋಕ ಗಟ್ಟಿತನದಿಂದ ಕೂಡಿದೆ. ಎಂಟು ಜ್ಞಾನಪೀಠ ‍ಪ್ರಶಸ್ತಿಗಳು ಕನ್ನಡ ಸಾಹಿತ್ಯ ಲೋಕಕ್ಕೆ ಸಂದಿವೆ. ನೃಪತುಂಗನಿಂದ ಆರಂಭವಾಗಿ ಕುವೆಂಪುರವರೆಗೆ ಮತ್ತು ನಂತರದ ಕಾಲಘಟ್ಟದಲ್ಲಿ ಸಾವಿರಾರು ಮಂದಿ ಸಾಹಿತಿಗಳನ್ನು ಕನ್ನಡ ಸಾಹಿತ್ಯ ಲೋಕವನ್ನು ಎತ್ತರಕ್ಕೆ ಕೊಂಡೊಯ್ದಿದ್ದಾರೆ. ಜಾತಿ, ಧರ್ಮ, ಕುಲದ ಎಲ್ಲೆ ಮೀರಿ ಕನ್ನಡದ ಬೆಳವಣಿಗೆಗಾಗಿ ದುಡಿದಿದ್ದಾರೆ. ಈಗ ಸಾಹಿತ್ಯ ಲೋಕದ ಜೊತೆಗೆ ರಾಜಕಾರಣಿಗಳೂ ಕನ್ನಡ ಬೆಳವಣಿಗೆಗೆ ಸಹಕಾರ ನೀಡಬೇಕು ಎಂದರು.

ಎಚ್ಚರ ಅಗತ್ಯ: ಸನ್ಮಾನ ಸ್ವೀಕರಿಸಿದ ಮಾಜಿ ಸಚಿವ ಡಾ.ಎಚ್‌.ಸಿ.ಮಹದೇವಪ್ಪ ಮಾತನಾಡಿ, ‘ರಾಜ್ಯದಲ್ಲಿ ಎಂದಿಗೂ ಪ್ರತ್ಯೇಕತೆಯ ಕೂಗು ಬಾರದಂತೆ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾಗಿರುವ ಕನ್ನಡ ಸಾಹಿತ್ಯ ಪರಿಷತ್‌ ಎಚ್ಚರ ವಹಿಸಬೇಕು. ಈ ದಿಸೆಯಲ್ಲಿ ಕಾಲಕಾಲಕ್ಕೆ ಸರ್ಕಾರಕ್ಕೆ ಸೂಕ್ತವಾದ ಸಲಹೆಗಳನ್ನು ನೀಡಬೇಕು. ಯಾವ ಅಂಜಿಕೆಯೂ ಇಲ್ಲದೇ ಕನ್ನಡದ ಉಳಿವಿಗಾಗಿ ಕೆಲಸ ಮಾಡೇಕು’ ಎಂದು ಸಲಹೆ ಮಾಡಿದರು.

ಕನ್ನಡ ಭಾಷೆ ಬಡವರಿಗೆ ಸೀಮಿತವಾಗಬಾರದು. ಎಲ್ಲರೂ ಕನ್ನಡವನ್ನು ಬಳಸುವುದಕ್ಕೆ ಪೂರಕವಾದ ವಾತಾವರಣ ನಿರ್ಮಾಣವಾಗಬೇಕು. ಅಸಮಾನತೆಯ ಸಮಾಜವನ್ನು ತೊಡೆದುಹಾಕಿ ಸಮಾನತೆಯ ಸಮಾಜ ನಿರ್ಮಾಣಕ್ಕೆ ಸಾಹಿತ್ಯ ಪರಿಷತ್‌ ದಿಕ್ಸೂಚಿ ಆಗಬೇಕು. ಗುಂಪು, ಜಾತಿ, ಧರ್ಮಗಳ ಹೆಸರಿನಲ್ಲಿ ಭೇದ ಸಲ್ಲದು. ಸಂವಿಧಾನದ ಆಶಯಗಳ ಸಾಕಾರಕ್ಕೆ ಸಾಹಿತ್ಯ ಪರಿಷತ್‌ ಕೊಡುಗೆ ನೀಡಬೇಕು ಎಂದರು.

ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಮನು ಬಳಿಗಾರ್‌ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಮ್ಮೇಳನಾಧ್ಯಕ್ಷ ಡಾ.ಚಂದ್ರಶೇಖರ ಕಂಬಾರ ಉಪಸ್ಥಿತರಿದ್ದರು.

ಇಂಗ್ಲಿಷ್‌ ಶ್ರೀಮಂತರ ಸ್ವತ್ತಾಗದಿರಲಿ

‘ಕನ್ನಡ ಮತ್ತು ಇಂಗ್ಲಿಷ್‌ ಮಾಧ್ಯಮ ಶಿಕ್ಷಣ ಕುರಿತು ತೀವ್ರವಾದ ಚರ್ಚೆ ನಡೆಯುತ್ತಿದೆ. ಮಾತೃಭಾಷೆಯಲ್ಲೇ ಮಕ್ಕಳಿಗೆ ಶಿಕ್ಷಣ ನೀಡುವುದು ಉತ್ತಮ ಎಂಬುದನ್ನು ಒಪ್ಪುತ್ತೇನೆ. ಆದರೆ, ವ್ಯವಹಾರಿಕ ಬಳಕೆಗೆ ಇಂಗ್ಲಿಷ್‌ ಅಗತ್ಯ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಬಿ.ಎಸ್‌.ಯಡಿಯೂರಪ್ಪ ಪ್ರತಿಕ್ರಿಯಿಸಿದರು.

‘ಇಂಗ್ಲಿಷ್‌ ಭಾಷೆ ಕೇವಲ ಶ್ರೀಮಂತರು ಮತ್ತು ನಗರವಾಸಿಗಳ ಸ್ವತ್ತಾಗಬಾರದು. ಅದು ಬಡವರ ಮಕ್ಕಳಿಗೂ ತಲುಪಬೇಕು ಎಂಬುದು ನನ್ನ ಅಭಿಪ್ರಾಯ’ ಎಂದರು. ‘ಸಾಹಿತ್ಯ ಸಮ್ಮೇಳನ ಜಾತ್ರೆಯಂತೆ ನಡೆಯುತ್ತಿದೆ. ನೀವು ಜಾತ್ರೆಗೆ ಬಂದವರಂತೆ ವಾಪಸು ಹೋಗಬೇಡಿ. ಸಮ್ಮೇಳನಾಧ್ಯಕ್ಷ ಚಂದ್ರಶೇಖರ ಕಂಬಾರರ ಭಾಷಣದ ಪ್ರತಿಯನ್ನು ಕೊಂಡೊಯ್ಯಿರಿ. ಮಕ್ಕಳಿಗೆ ಅದನ್ನು ಓದಿಸಿ, ಅವರ ಸಂದೇಶ ತಲುಪಿಸಿ’ ಎಂದು ಜನರಿಗೆ ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT