ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧಾರ್ಮಿಕ ವಿದ್ಯಾಕೇಂದ್ರಗಳನ್ನು ನಿರ್ಮಿಸಿ

ಕನಕಗಿರಿ ಜೈನ ಮಠದ ಭುವನಕೀರ್ತಿ ಭಟ್ಟಾರಕ ಸ್ವಾಮೀಜಿ ಸಲಹೆ
Last Updated 3 ಜುಲೈ 2022, 14:11 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಜೈನ ಸಮಾಜದವರು ಐದು ವರ್ಷ ಬಸದಿಗಳನ್ನು ಕಟ್ಟಿಸುವುದನ್ನು ನಿಲ್ಲಿಸಿ ಧಾರ್ಮಿಕ ವಿದ್ಯಾಕೇಂದ್ರಗಳನ್ನು ನಿರ್ಮಿಸಬೇಕು’ ಎಂದುಚಾಮರಾಜನಗರ ಜಿಲ್ಲೆಯ ಕನಕಗಿರಿ ಜೈನ ಮಠದ ಭುವನಕೀರ್ತಿ ಭಟ್ಟಾರಕ ಸ್ವಾಮೀಜಿ ಸಲಹೆ ನೀಡಿದರು.

ನಗರದ ಮಹಾವೀರ ಗಲ್ಲಿಯಲ್ಲಿರುವ ಶಾಂತಿನಾಥ ಸಾಂಸ್ಕೃತಿಕ ಭವನದಲ್ಲಿ ದಿಗಂಬರ ಜೈನ ಸಮಾಜವು ಭುವನಕೀರ್ತಿ ಭಟ್ಟಾರಕ ಸ್ವಾಮೀಜಿ ಅವರ ಪಟ್ಟಾಭಿಷೇಕದ ರಜತ ಮಹೋತ್ಸವದ ಅಂಗವಾಗಿ ಭಾನುವಾರ ಏರ್ಪಡಿಸಿದ್ದ ಗೌರವ ಸಮರ್ಪಣೆ, ನಿಜಾನಂದಸಾಗರ ಮಹಾರಾಜರ ಸ್ಮರಣಾರ್ಥ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಅವರು ಮಾತನಾಡಿದರು.

‘ನಮ್ಮ ಸಮಾಜದ ಪರಂಪರೆ ಮತ್ತು ಸಂಸ್ಕೃತಿ ಉಳಿಸುವ ಕೆಲಸ ಆಗಬೇಕು. ಆ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ, ಮಾರ್ಗದರ್ಶನ ನೀಡಬೇಕು. ಸಮಾಜದ ವಿದ್ಯಾರ್ಥಿಗಳು ಅತ್ಯುನ್ನತ ಹುದ್ದೆಗಳನ್ನು ಅಲಂಕರಿಸಬೇಕು’ ಎಂದರು.

‘ಜೈನ ಧರ್ಮವು ಕನ್ನಡ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿದೆ. ಜೈನ ಪುರಾಣ ಕಾಲ್ಪನಿಕವಾದುದಲ್ಲ. ಅದು ಮಹಾತ್ಮರ ಕುರಿತ ಸತ್ಯ ಘಟನೆಗಳನ್ನು ಆಧರಿಸಿದೆ. ಸಮಾಜದ ಆಚಾರ್ಯರು ರಚಿಸಿದ ಶಾಸ್ತ್ರಗಳು ಸಕಲ ಜೀವಿಗಳಿಗೆ ಧರ್ಮ ಮಾರ್ಗದಲ್ಲಿ ನಡೆಯುವಂತೆ ಪ್ರೇರೇಪಿಸಿವೆ’ ಎಂದು ತಿಳಿಸಿದರು.

‘ಇತಿಹಾಸದಲ್ಲಿ ಉಲ್ಲೇಖವಾಗಿರುವ ಪ್ರಮುಖ ಗ್ರಂಥಗಳು ಇಂದಿಗೂ ಸಿಕ್ಕಿಲ್ಲ. ಅವುಗಳನ್ನು ಬೆಳಕಿಗೆ ತರುವ ನಿಟ್ಟಿನಲ್ಲಿ ಸಂಶೋಧನೆ ನಡೆಸಬೇಕು. ಪ್ರಮುಖ ಸ್ಥಳಗಳಲ್ಲಿ ಉತ್ಖನನ ನಡೆಸಬೇಕಾದ ಅಗತ್ಯ ಇದೆ’ ಎಂದು ಅಭಿಪ್ರಾಯಪಟ್ಟರು.

ದಿಗಂಬರ ಜೈನ ಸಮಾಜದ ಅಧ್ಯಕ್ಷ ರಾಜೇಂದ್ರ ಬೀಳಗಿ ಮಾತನಾಡಿ, ‘ಸಮಾಜದ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಪ್ರತಿ ವರ್ಷ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿತ್ತು. ಕೋವಿಡ್‌ನಿಂದಾಗಿ ಎರಡು ವರ್ಷಗಳಿಂದ ಕಾರ್ಯಕ್ರಮ ಆಯೋಜಿಸಲು ಸಾಧ್ಯವಾಗಿರಲಿಲ್ಲ’ ಎಂದರು.

ಎಸ್ಸೆಸ್ಸೆಲ್ಸಿ, ಪಿಯುಸಿ ಹಾಗೂ ಇತರ ಉನ್ನತ ಪರೀಕ್ಷೆಗಳಲ್ಲಿ ಸಾಧನೆ ಮಾಡಿದ ಸಮಾಜದ ವಿದ್ಯಾರ್ಥಿಗಳನ್ನು ಗಣ್ಯರು ಸನ್ಮಾನಿಸಿದರು. ಸಮಾಜದ ಉಪಾಧ್ಯಕ್ಷ ವಿಮಲ್ ತಾಳಿಕೋಟೆ ಮತ್ತು ಸಿದ್ಧಾರೂಢ ಮಠದ ಟ್ರಸ್ಟ್‌ ಚೇರ್ಮನ್ ಧರಣೇಂದ್ರ ಜವಳಿ ಅವರನ್ನು ಸನ್ಮಾನಿಸಲಾಯಿತು.

ಸಮಾಜದ ಉಪಾಧ್ಯಕ್ಷರಾದ ಸುಹಾಸ ಜವಳಿ, ಶ್ರೇಣಿಕರಾಜ ರಾಜಮಾನೆ, ಪ್ರಧಾನ ಕಾರ್ಯದರ್ಶಿ ಆರ್‌.ಟಿ. ತವನಪ್ಪನವರ, ಸಹ ಕಾರ್ಯದರ್ಶಿ ಮನ್ಮಥ ಕ್ಯಾಸಾ, ಅನಿಲ ಬೀಳಗಿ, ಸುಹಾಸ ಲೇಂಗಡೆ, ಸಂತೋಷ ಮುರಗಿಪಾಟೀಲ, ಶಾಂತಿನಾಥ ಹೋತಪೇಟಿ, ಆರ್.ಟಿ. ಅಣ್ಣಿಗೇರಿ ಹಾಗೂ ಬ್ರಹ್ಮಕುಮಾರ ಬೀಳಗಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT