ಗುರುವಾರ , ಡಿಸೆಂಬರ್ 12, 2019
17 °C
ಕಟ್ಟಡಗಳ ತ್ಯಾಜ್ಯದಿಂದ ಇಟ್ಟಿಗೆ, ಪೇವರ್ಸ್‌ ತಯಾರಿಸಲು ಶಿವಳ್ಳಿಯಲ್ಲಿ ತಲೆ ಎತ್ತಲಿದೆ ಘಟಕ

ರಸ್ತೆಗಳ ಪಕ್ಕ ಕಟ್ಟಡ ತ್ಯಾಜ್ಯ ರಾಶಿ

ಬಸವರಾಜ್‌ ಸಂಪಳ್ಳಿ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ಅವಳಿ ನಗರದಲ್ಲಿ ಹೊಸ ಹೊಸ ಮನೆಗಳು, ಅಪಾರ್ಟ್‌ಮೆಂಟ್‌ಗಳು, ವಾಣಿಜ್ಯ ಮಳಿಗೆಗಳು ತಲೆ ಎತ್ತುವ ಮೂಲಕ ‘ಸ್ಮಾರ್ಟ್‌ಸಿಟಿ’ ಅಂದ ಹೆಚ್ಚಿಸುತ್ತಿರುವ ಬೆನ್ನಲ್ಲೇ, ಹಳೇ ಕಟ್ಟಡಗಳ ತ್ಯಾಜ್ಯವನ್ನು ರಸ್ತೆಗಳ ಪಕ್ಕದಲ್ಲಿ ಸುರಿದು ಹೋಗುತ್ತಿರುವುದರಿಂದ ಮಾಲಿನ್ಯ ಉಂಟಾಗತೊಡಗಿದೆ.

ಹಳೇ ಕಟ್ಟಡಗಳನ್ನು ಕೆಡವಿದ ಬಳಿಕ ಸಿಗುವ ಇಟ್ಟಿಗೆ, ಸಿಮೆಂಟ್‌, ಕಬ್ಬಿಣ, ಎಲೆಕ್ಟ್ರಿಕ್‌ ವೈರ್‌, ಕಟ್ಟಿಗೆ ಸೇರಿದಂತೆ ಮತ್ತಿತರರ ತ್ಯಾಜ್ಯಗಳನ್ನು ಪ್ರಮುಖ ರಸ್ತೆಗಳ ಆಜುಬಾಜು ತಂದು ರಾಶಿ ಹಾಕುತ್ತಿರುವುದರಿಂದ ಸಮೀಪದ ನಿವಾಸಿಗಳಿಗೆ ಹಾಗೂ ಸಾರ್ವಜನಿಕರ ಸಂಚಾರಕ್ಕೆ ಅಡಚಣೆಯಾಗುತ್ತಿದೆ.

ಕಟ್ಟಡಗಳ ತ್ಯಾಜ್ಯವನ್ನು ಟ್ರ್ಯಾಕ್ಟರ್‌, ಲಾರಿಗಳಲ್ಲಿ ತುಂಬಿಕೊಂಡು ರಾತ್ರಿ ವೇಳೆ ಜನ ಸಂಚಾರವಿಲ್ಲದ ಸಂದರ್ಭದಲ್ಲಿ ಸುರುವಿ ಹೋಗುತ್ತಿರುವುದರಿಂದ ಯಾರು ತಂದು ಹಾಕಿದ್ದಾರೆ ಎಂಬುದು ಯಾರಿಗೂ ತಿಳಿಯದಾಗಿದೆ.

ಹುಬ್ಬಳ್ಳಿಯ ಕಾರವಾರ ರಸ್ತೆ, ಸುಳ್ಳ ರಸ್ತೆ, ಗೋಕುಲ ಬೈಪಾಸ್‌ ರಸ್ತೆ, ಅಶೋಕನಗರದ ಸಂತೆ ಮೈದಾನದ ಪಕ್ಕದ ರಸ್ತೆ, ನೃಪತುಂಗ ಬೆಟ್ಟದ ರಸ್ತೆ, ವಿಶ್ವೇಶ್ವರನಗರದಲ್ಲಿ ಖಾಲಿ ಬಿದ್ದಿರುವ ಸೇನೆಗೆ ಸೇರಿದ ಜಾಗದಲ್ಲಿ, ಕಿಮ್ಸ್‌ ಹಿಂಭಾಗದ ಸಿಆರ್‌ಎಫ್‌ ರಸ್ತೆ ಪಕ್ಕದಲ್ಲಿ ಹಾಗೂ ಧಾರವಾಡದ ಕೆಲಗೇರಿ ರಸ್ತೆಯಲ್ಲಿ ಹೆಚ್ಚಾಗಿ ಹಳೇ ಕಟ್ಟಡಗಳ ತ್ಯಾಜ್ಯವನ್ನು ತಂದು ರಾಶಿ ಹಾಕಲಾಗುತ್ತಿದೆ.

ಕ್ರಮಕ್ಕೆ ಆಗ್ರಹ: ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಶಕ್ತಿ ಕಾಲೊನಿ ನಿವಾಸಿ ರಾಮಚಂದ್ರ ಹೊಸಮನಿ, ಹಳೇ ಕಟ್ಟಡಗಳ ತ್ಯಾಜ್ಯವನ್ನು ರಾತ್ರಿ ವೇಳೆ ತಂದು ರಸ್ತೆ ಪಕ್ಕದಲ್ಲಿ ಸುರಿದು ಹೋಗುತ್ತಿರುವವರನ್ನು ಮಹಾನಗರ ಪಾಲಿಕೆ ಸಿಬ್ಬಂದಿಗಳು ಪತ್ತೆ ಹಚ್ಚಿ, ಅಂತವರ ವಿರುದ್ಧ ಕ್ರಮಕೈಗೊಳ್ಳಬೇಕು. ಇಲ್ಲವಾದರೆ ನಗರದ ಸೌಂದರ್ಯ ಹಾಳಾಗುವ ಜೊತೆಗೆ ಜನರ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ ಎಂದರು.

ಹಳೇ ಕಟ್ಟಡಗಳ ತ್ಯಾಜ್ಯ ವಿಲೇವಾರಿಗೆ ಪಾಲಿಕೆಯಿಂದ ಸ್ಥಳ ನಿಗದಿ ಮಾಡಬೇಕು. ಅಲ್ಲಿಗೆ ತಂದು ಹಾಕುವಂತೆ ಕಟ್ಟಡ ನಿರ್ಮಾಣಗಾರರಿಗೆ ಕಟ್ಟುನಿಟ್ಟಿನ ಸೂಚನೆ ನೀಡಬೇಕು ಎಂದರು.

ಶಿವಳ್ಳಿಯಲ್ಲಿ ಘಟಕ: ಹಳೇ ಕಟ್ಟಡಗಳ ತ್ಯಾಜ್ಯ ವಿಲೇವಾರಿ ಸಂಬಂಧ ಈಗಾಗಲೇ ಶಿವಳ್ಳಿಯಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ₹ 5.76 ಕೋಟಿ ಅನುದಾನದಲ್ಲಿ ಪ್ಲಾಂಟ್‌ವೊಂದನ್ನು ನಿರ್ಮಿಸುವ ಕಾರ್ಯ ಆರಂಭವಾಗಿದೆ. ಹಳೇ ಕಟ್ಟಡಗಳ ತ್ಯಾಜ್ಯವನ್ನು ಕೊಂಡೊಯ್ದು ಅವುಗಳನ್ನು ಸಂಸ್ಕರಿಸಿ ಇಟ್ಟಿಗೆ, ಪೇವರ್ಸ್‌ಗಳನ್ನು ಅಲ್ಲಿ ನಿರ್ಮಿಸಲಾಗುವುದು ಎಂದು ಮಹಾನಗರ ಪಾಲಿಕೆ ಆಯುಕ್ತ ಸುರೇಶ ಇಟ್ನಾಳ ‘ಪ್ರಜಾವಾಣಿ’ಗೆ ತಿಳಿಸಿದರು.

ಹಳೇ ಕಟ್ಟಡಗಳ ತ್ಯಾಜ್ಯವನ್ನು ಸುರಿಯಲು ಶೀಘ್ರದಲ್ಲೇ ನಗರದಲ್ಲಿ ಸ್ಥಳಗಳನ್ನು ನಿಗದಿಪಡಿಸಲಾಗುವುದು. ಕಟ್ಟಡಗಳ ನಿರ್ಮಾಪಕರು ಇನ್ನು ಮುಂದೆ ಹಳೇ ಕಟ್ಟಡಗಳ ತ್ಯಾಜ್ಯವನ್ನು ನಿಗದಿತ ಸ್ಥಳದಲ್ಲೇ ಹಾಕಬೇಕು. ಅಲ್ಲಿಂದ ಪಾಲಿಕೆಯ ವಾಹನಗಳ ಮೂಲಕ ಶಿವಳ್ಳಿ ಪ್ಲಾಂಟ್‌ಗೆ ಸಾಗಾಟ ಮಾಡಲಾಗುವುದು ಎಂದು ಹೇಳಿದರು.

ಸಿಸಿಟಿವಿ ಅಳವಡಿಕೆ: ಅವಳಿ ನಗರದ ಯಾವಾವ ಸ್ಥಳಗಳಲ್ಲಿ ಕಟ್ಟಡಗಳ ತ್ಯಾಜ್ಯವನ್ನು ರಾಶಿ ಹಾಕಲಾಗುತ್ತಿದೆ ಎಂಬುದರ ಬಗ್ಗೆ ಈಗಾಗಲೇ ಸ್ಥಳಗಳನ್ನು ಗುರುತಿಸಲಾಗಿದೆ. ಅಂತಹ ಸ್ಥಳಗಳ ಬಳಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗುವುದು. ಇನ್ನು ಮುಂದೆ ಯಾರಾದರೂ ರಸ್ತೆ ಪಕ್ಕದಲ್ಲಿ ಕಟ್ಟಡ ತ್ಯಾಜ್ಯ ಸುರಿದು ಹೋದರೆ ಅಂತವರನ್ನು ಗುರುತಿಸಲು ಸುಲಭವಾಗಲಿದೆ ಎಂದು ತಿಳಿಸಿದರು.

ಪ್ರತಿಕ್ರಿಯಿಸಿ (+)