ಭಾನುವಾರ, ಏಪ್ರಿಲ್ 5, 2020
19 °C
ಎನ್‌ಪಿಆರ್‌, ಎನ್‌ಆರ್‌ಸಿ ವಿರೋಧಿಸಿ ಸಾಮೂಹಿಕ ಉಪವಾಸ ಸತ್ಯಾಗ್ರಹ

ಅಸಹಕಾರ ಚಳವಳಿಗೆ ಸಜ್ಜಾಗಿ: ಗಣೇಶ ದೇವಿ ಕರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ‘ಕೇಂದ್ರ ಸರ್ಕಾರವು ಜಾರಿಗೆ ತರಲು ಮುಂದಾಗಿರುವ ಜನವಿರೋಧಿ ಕಾಯ್ದೆಗಳನ್ನು ವಿರೋಧಿಸಿ ಜೈಲಿಗೆ ಬೇಕಾದರೆ ಹೋಗೋಣ. ಯಾವುದೇ ಕಾರಣಕ್ಕೂ ಎನ್‌ಪಿಆರ್ ಪ್ರಶ್ನೆಗಳಿಗೆ ಉತ್ತರಿಸುವುದಿಲ್ಲ, ಎನ್‌ಆರ್‌ಸಿಗೆ ದಾಖಲೆ ತೋರಿಸುವುದಿಲ್ಲ ಎಂಬ ಅಸಹಕಾರ ಚಳವಳಿಗೆ ಎಲ್ಲರೂ ಸಜ್ಜಾಗಬೇಕು’ ಎಂದು ಭಾಷಾತಜ್ಞ ಡಾ.ಗಣೇಶ ಎನ್.ದೇವಿ ಕರೆ ನೀಡಿದರು.

ಹುಬ್ಬಳ್ಳಿ–ಧಾರವಾಡ ಸಂವಿಧಾನ ಸುರಕ್ಷಾ ಸಮಿತಿಯಿಂದ ಇಲ್ಲಿನ ಮಿನಿವಿಧಾನಸೌಧದ ಎದುರು ಗುರುವಾರ ಆಯೋಜಿಸಲಾಗಿದ್ದ ಉಪವಾಸ ಸತ್ಯಾಗ್ರಹದಲ್ಲಿ ಮಾತನಾಡಿದ ಅವರು, ‘ದೇಶದಲ್ಲಿ ಆರ್ಥಿಕ ಸಂಕಷ್ಟವಿದೆ. ಯುವಕರು ನಿರುದ್ಯೋಗದಿಂದ ಬಳಲುತ್ತಿದ್ದಾರೆ. ಕೈಗಾರಿಕೆಗಳು ಮುಚ್ಚುತ್ತಿವೆ. ದೇಶದ ಜನ ಸಂಕಷ್ಟದಲ್ಲಿರುವಾಗ ಈ ಧರ್ಮಾಧಾರಿತ ಸಂವಿಧಾನ ವಿರೋಧಿ ಕಾನೂನಿನ ಅಗತ್ಯವಿರಲಿಲ್ಲ’ ಎಂದು ವಿರೋಧ ವ್ಯಕ್ತಪಡಿಸಿದರು.

ಕೈಬಿಡಲು ಆಗ್ರಹ

ರಾಜ್ಯದಲ್ಲಿ ಎನ್‌ಪಿಆರ್ ಜಾರಿ ಮಾಡುವುದಿಲ್ಲ ಎಂಬ ನಿರ್ಧಾರವನ್ನು ವಿಧಾನಮಂಡಲ ಅಧಿವೇಶನದಲ್ಲಿ ಮುಖ್ಯಮಂತ್ರಿ ಪ್ರಕಟಿಸಬೇಕು ಎಂದು ಧರಣಿ ನಿರತರು ಆಗ್ರಹಿಸಿ, ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದರು.

ಅಸ್ಸಾಂನಲ್ಲಿ ಈಗಾಗಲೇ ನಡೆಸಲಾದ ಎನ್‌ಆರ್‌ಸಿಯಿಂದಾಗಿ 19.42 ಲಕ್ಷ ಜನರು ನಿರಾಶ್ರಿತರಾಗಿದ್ದಾರೆ. ಅಂತೆಯೇ, ಕರ್ನಾಟಕದಲ್ಲೂ ಹಿಂದೂ, ಮುಸ್ಲಿಂ, ದಲಿತ, ಅದಿವಾಸಿಗಳನ್ನು ನಿರಾಶ್ರಿತರನ್ನಾಗಿ ಮಾಡಬಾರದು ಎಂದು ಮನವಿ ಮಾಡಿದರು.

‘ಏಪ್ರಿಲ್ 15ರಿಂದ ರಾಜ್ಯದಲ್ಲಿ ಜನಗಣತಿಯ ಭಾಗವಾಗಿ ಆರಂಭವಾಗುವ ಮನೆಗಣತಿಗೆ ನಮ್ಮ ವಿರೋಧವಿಲ್ಲ. ಆದರೆ, ಜನಗಣತಿಯ ಜೊತೆಯಲ್ಲಿ ಎನ್‌ಪಿಆರ್ ಮಾಹಿತಿ ಸಂಗ್ರಹಿಸುವ ಷಡ್ಯಂತ್ರ ನಡೆದದ್ದೇ ಆದಲ್ಲಿ, ಹಿಂದುಳಿದ ವರ್ಗಗಳು, ದಲಿತ ಸಮುದಾಯಗಳು, ಅಲೆಮಾರಿಗಳು, ಆದಿವಾಸಿಗಳು, ಕೊಳಗೇರಿ ನಿವಾಸಿಗಳು, ಗುಳೆ ಕಾರ್ಮಿಕರು, ಮಹಿಳೆಯರು, ದೇವದಾಸಿಯರ ಮಕ್ಕಳು, ಪ್ರವಾಹ ಪೀಡಿತರು, ಅನಾಥ ಮಕ್ಕಳು ಹಾಗೂ ವೃದ್ಧರು ದಾಖಲೆ ನೀಡಲು ಸಾಧ್ಯವಿಲ್ಲ. ಇದರಿಂದ ನೂರಕ್ಕೆ 60ರಷ್ಟು ಜನರು ಪೌರತ್ವ ಕಳೆದುಕೊಳ್ಳಬೇಕಾಗುತ್ತದೆ’ ಎಂದು ಆತಂಕ ವ್ಯಕ್ತಪಡಿಸಿದರು.

ಹೋರಾಟವನ್ನು ಬೆಂಬಲಿಸಿ ಸುರೇಖಾ ಗಣೇಶ ದೇವಿ, ಮಾಜಿ ಸಚಿವ ಎಂ.ಎಂ.ಹಿಂಡಸಗೇರಿ, ಮಾಜಿ ಶಾಸಕ ಇಸ್ಮಾಯಿಲ್ ಕಾಲೆಬುಡ್ಡೆ, ಧರ್ಮಗುರು ತಾಜುದ್ದೀನ್‌ ಖಾದ್ರಿ ಪೀರಾ, ಜೆಡಿಎಸ್ ಮುಖಂಡ ಶಿವಣ್ಣ ಹುಬ್ಬಳ್ಳಿ, ವಿನಾಯಕ ಗಾಲಿವಡ್ಡರ, ಸಿದ್ದು ತೇಜಿ, ಕಾಂಗ್ರೆಸ್‌ನ ಅಲ್ತಾಫ್ ಹಳ್ಳೂರ, ಜಾಕೀರ್‌ ಸನದಿ, ಎಡಪಕ್ಷಗಳ ಮುಖಂಡರಾದ ಗಂಗಾಧರ ಗಾಡದ, ಎ.ಎಸ್.ಪಿರಜಾದೆ, ಎನ್.ಎ.ಖಾಜಿ ಮತ್ತು ಗಂಗಾಧರ ಪೆರೂರ, ಎನ್.ಬಿ.ಪಮ್ಮಾರ, ಎಂ.ಎಚ್,ಮುಲ್ಲಾ, ಮೇಷಕ್, ಕತಾಲಸಾಬ ಮಾತನಾಡಿದರು.

ಮುಖಂಡರಾದ ಪಿತಾಂಬ್ರಪ್ಪ ಬಿಳಾರ, ಅನ್ವರ್‌ ಮುಧೋಳ, ಮಹೇಶ ಪತ್ತಾರ, ಅಶ್ರಫ್ ಅಲಿ, ಸಿದ್ದು ತೇಜಿ, ವಿಜಯ ಗುಂಟ್ರಾಳ, ಇಸ್ಮಾಯಿಲ್‌ ಕಾಲೇಬುಡ್ಡೆ, ರಮೇಶ ಬೋಸ್ಲೆ, ಆಶೀಫ್ ಪಾಚಾಪೂರ,ನೇಹಾ ಮುಲ್ಲಾ, ಅಯೂಬ್ ಸವಣೂರ, ಬಾಬಾಜಾನ್‌ ಮುಧೋಳ, ದೇವಾನಂದ ಜಗಾಪೂರ, ಅಬ್ದುಲ್ ರೆಹಮಾನ್‌ ಮುಲ್ಲಾ, ಫರೀದ ಬೆಂಗಳೂರಿ, ಇಮ್ತಿಯಾಜ್ ಬಿಳೆಪಸಾರ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು