ಭಾನುವಾರ, ಆಗಸ್ಟ್ 18, 2019
25 °C

ವ್ಯಾಸರಾಯರ ಬೃಂದಾವನ ಧ್ವಂಸ: ಕ್ರಮಕ್ಕೆ ಒತ್ತಾಯ

Published:
Updated:
Prajavani

ಹುಬ್ಬಳ್ಳಿ: ಆನೆಗೊಂದಿಯ ತುಂಗಭದ್ರಾ ನದಿಯ ತಟದಲ್ಲಿರುವ ನವಬೃಂದಾವನ ನಡುಗಡ್ಡೆಯಲ್ಲಿ ವ್ಯಾಸರಾಯರ ಬೃಂದಾವನ ಧ್ವಂಸಗೊಳಿಸಿದ ದುಷ್ಕರ್ಮಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಅಖಿಲ ಭಾರತ ಬ್ರಾಹ್ಮಣ ಮಹಾಸಂಘದ ಧಾರವಾಡದ ಜಿಲ್ಲಾ ಘಟಕದ ಪದಾಧಿಕಾರಿಗಳು ಗುರುವಾರ ಆಗ್ರಹಿಸಿದರು.

‘ನಮ್ಮ ಸನಾತನ ಪರಂಪರೆಯ ಶ್ರೇಷ್ಠ ಯತಿಗಳಾದ ವ್ಯಾಸರಾಯರ ಮೂಲ ಬೃಂದಾವನ ಧ್ವಂಸ ಮಾಡಿರುವ ಘಟನೆಯಿಂದ ಸಮಾಜದ ಜನರಿಗೆ ತೀವ್ರ ನೋವಾಗಿದೆ. ಇದಕ್ಕೆ ಕಾರಣರಾದವರನ್ನು ಬಂಧಿಸಿ ಕಠಿಣ ಶಿಕ್ಷೆ ವಿಧಿಸಬೇಕು. ಮುಂದೆ ಈ ರೀತಿಯ ಘಟನೆ ನಡೆಯದಂತೆ ಎಚ್ಚರಿಕೆ ವಹಿಸಬೇಕು’ ಎಂದು ಸಮಾಜದ ಪದಾಧಿಕಾರಿಗಳು ಆಗ್ರಹಿಸಿದರು.

‘ಎಲ್ಲ ಧರ್ಮಗಳ ರಕ್ಷಣೆ ಮತ್ತು ಅವರ ಭಾವನೆಗಳಿಗೆ ಬೆಲೆ ಕೊಡಬೇಕಾದ್ದು ಮುಖ್ಯಮಂತ್ರಿ ಅವರ ಕರ್ತವ್ಯ. ಕೂಡಲೇ ಕ್ರಮ ತೆಗೆದುಕೊಳ್ಳಬೇಕು’ ಎಂದಿದ್ದಾರೆ. ಈ ಕುರಿತು ಮುಖ್ಯಮಂತ್ರಿಗೆ ಬರೆದ ಪತ್ರವನ್ನು ಹುಬ್ಬಳ್ಳಿ ತಹಶೀಲ್ದಾರ್‌ ಕಚೇರಿಯ ಅಧಿಕಾರಿಗಳಿಗೆ ನೀಡಿದರು.

ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎನ್‌. ಪುರೋಹಿತ, ಪ್ರಧಾನ ಕಾರ್ಯದರ್ಶಿ ಡಾ. ಪವನ ವಿ. ಜೋಶಿ, ಖಜಾಂಚಿ ಮಾಲತೇಶ ಗ್ರಾಮಪುರೋಹಿತ, ಸಮಾಜದ ಪ್ರಮುಖರಾದ ರಮೇಶ ಕುಲಕರ್ಣಿ, ಸಂಜೀವ ಕುಲಕರ್ಣಿ, ಸಂತೋಷ ಹಾವನೂರ, ಅಭಿಷೇಕ ಕೌಜಲಗಿ, ಪ್ರಕಾಶ ಕುಲಕರ್ಣಿ, ಪ್ರಾಣೇಶ ಕುಲಕರ್ಣಿ ಮತ್ತು ಸಮೀರ ಪಾಲ್ಗೊಂಡಿದ್ದರು.

Post Comments (+)