ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಂದಗೋಳ ಉಪ ಚುನಾವಣೆ: ಪ್ರತಿಷ್ಠೆಯ ಪ್ರಶ್ನೆಯಾದ ಗೆಲುವು

ಮೈತ್ರಿ, ಬಿಜೆಪಿ ನಾಯಕರ ಬಿರುಸಿನ ಪ್ರಚಾರ
Last Updated 8 ಮೇ 2019, 15:11 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಕುಂದಗೋಳ ಉಪ ಚುನಾವಣೆಯ ಗೆಲುವು, ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರಿಗೆ ಪ್ರತಿಷ್ಠೆಯ ಪ್ರಶ್ನೆಯಾಗಿ ಪರಿಣಮಿಸಿದೆ. ಅದಕ್ಕಾಗಿ, ತಮ್ಮ ಅಭ್ಯರ್ಥಿಯ ಗೆಲುವಿಗಾಗಿ ಉಭಯ ನಾಯಕರುಗಳು ಬಿಡುವಿಲ್ಲದ ಪ್ರಚಾರದಲ್ಲಿ ತೊಡಗಿದ್ದಾರೆ.

ಆಡಳಿತಾರೂಢ ಮೈತ್ರಿ ಸರ್ಕಾರದ ಸಚಿವರು ಮತ್ತು ನಾಯಕರು ಕ್ಷೇತ್ರದಲ್ಲಿ ಬೀಡುಬಿಟ್ಟು ಅಭ್ಯರ್ಥಿ ಕುಸುಮಾವತಿ ಶಿವಳ್ಳಿ ಗೆಲುವಿಗೆ ಶ್ರಮಿಸುತ್ತಿದ್ದರೆ, ಬಿಜೆಪಿ ಅಭ್ಯರ್ಥಿ ಎಸ್.ಐ. ಚಿಕ್ಕನಗೌಡ್ರ ಪರ ಬಿಜೆಪಿ ನಾಯಕರ ದಂಡು ಕ್ಷೇತ್ರದ ಗ್ರಾಮೀಣ ಭಾಗದಲ್ಲಿ ಬಿರುಸಿನ ಪ್ರಚಾರದ ಜತೆಗೆ, ರೋಡ್‌ ಷೋ ನಡೆಸುತ್ತಾ ಬೆವರು ಹರಿಸುತ್ತಿದೆ.

ಮೈತ್ರಿ ನಾಯಕರ ಸರಣಿ ಸಭೆ:

ಕ್ಷೇತ್ರದ ಉಸ್ತುವಾರಿ ವಹಿಸಿಕೊಂಡಿರುವ ಜಲ ಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಬುಧವಾರ ಬೆಳಿಗ್ಗೆ ಹುಬ್ಬಳ್ಳಿಯಲ್ಲಿ ಹಾಗೂ ಮತ್ತೊಬ್ಬ ಸಚಿವ ಸತೀಶ ಜಾರಕಿಹೊಳಿ ಕುಂದಗೋಳದಲ್ಲಿ ಸ್ಥಳೀಯ ಮುಖಂಡರೊಂದಿಗೆ ಚರ್ಚಿಸಿದರು. ಈ ಮಧ್ಯೆ ಸಚಿವ ಆರ್.ವಿ. ದೇಶಪಾಂಡೆ ಕೂಡ ಕ್ಷೇತ್ರಕ್ಕೆ ಭೇಟಿ ನೀಡಿ ಕೆಲವರ ಜತೆ ಮಾತುಕತೆ ನಡೆಸಿದರು.

‘ಸಮ್ಮಿಶ್ರ ಹಾಗೂ ಹಿಂದಿನ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಅಭಿವೃದ್ಧಿ ಕೆಲಸಗಳೇ ಮೈತ್ರಿ ಅಭ್ಯರ್ಥಿಯ ಗೆಲುವಿಗೆ ಶ್ರೀರಕ್ಷೆ. ಕುಸುಮಾವತಿ ಗೆಲ್ಲುವುದರಲ್ಲಿ ಅನುಮಾನವಿಲ್ಲ’ ಎಂದು ಸತೀಶ ಜಾರಕಿಹೊಳಿ ವಿಶ್ವಾಸ ವ್ಯಕ್ತಪಡಿಸಿದರು.

ಅನಾರೋಗ್ಯ ಲೆಕ್ಕಿಸದೆ ಪ್ರಚಾರ:

ಶಾಸಕ ಶ್ರೀರಾಮುಲು, ಚಳಿ– ಜ್ವರ ಲೆಕ್ಕಿಸದೆ ಅಭ್ಯರ್ಥಿ ಚಿಕ್ಕನಗೌಡ್ರ ಅವರೊಂದಿಗೆ, ಕ್ಷೇತ್ರದ ಅಂಚಟಗೇರಿ ಮತ್ತು ಬೆಟದೂರಿನಲ್ಲಿ ಪ್ರಚಾರ ನಡೆಸಿದರು. ಸಂಜೆ ಶಾಸಕ ಜಗದೀಶ ಶೆಟ್ಟರ್, ಬಸನಗೌಡ ಪಾಟೀಲ ಯತ್ನಾಳ್ ಹಾಗೂ ಸಂಸದ ಪ್ರಹ್ಲಾದ ಜೋಶಿ, ಕುಂದಗೋಳ ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿ ಮತ ಯಾಚಿಸಿದರು.

‘ಎರಡೂ ಉಪ ಚುನಾವಣೆಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲ್ಲುವುದು ಖಚಿತ. ಆ ಮೂಲಕ ರಾಜ್ಯದಲ್ಲಿ ಮತ್ತೆ ಬಿಜೆಪಿ ಸರ್ಕಾರ ರಚಿಸುವ ನಮ್ಮ ಪ್ರಯತ್ನ ಫಲ ನೀಡಲಿದೆ’ ಎಂದು ಶ್ರೀರಾಮುಲುಬೆಟದೂರಿನಲ್ಲಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT