ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಬ್ಬ ಆಚರಣೆಯಲ್ಲಿ ಸಾಮರಸ್ಯವಿರಲಿ

ಗಣೇಶ ಚತುರ್ಥಿ–ಮೊಹರಂ ಸೌಹಾರ್ದ ಸಭೆಯಲ್ಲಿ ಪೊಲೀಸ್ ಕಮಿಷನರ್ ಆರ್. ದಿಲೀಪ್
Last Updated 29 ಆಗಸ್ಟ್ 2019, 15:47 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಗಣೇಶ ಚತುರ್ಥಿ ಹಬ್ಬ ಮತ್ತು ಮೊಹರಂ ಯಾವುದೇ ಅಹಿತಕರ ಘಟನೆಗೆ ಆಸ್ಪದ ನೀಡದಂತೆ, ಸಾಮರಸ್ಯದಿಂದ ಆಚರಿಸಬೇಕು’ ಎಂದು ಪೊಲೀಸ್ ಕಮಿಷನರ್ ಆರ್. ದಿಲೀಪ್ ಹೇಳಿದರು.

ನಗರದಲ್ಲಿ ಗುರುವಾರ ನಡೆದ ಗಣೇಶ ಚತುರ್ಥಿ ಹಬ್ಬ ಮತ್ತು ಮೊಹರಂ ಸೌಹಾರ್ದ ಸಭೆಯಲ್ಲಿ ಮಾತನಾಡಿದ ಅವರು, ‘ಗಣೇಶ ಮೂರ್ತಿ ಪ್ರತಿಷ್ಠಾಪಿಸುವ ನಗರದ 900 ಗಣೇಶ ಮಂಡಳಗಳ 3 ಸಾವಿರಕ್ಕೂ ಹೆಚ್ಚು ಮಂದಿಗೆ ಗುರುತಿನ ಚೀಟಿ ವಿತರಿಸಲಾಗಿದೆ. ಮೂರ್ತಿ ಕೂರಿಸುವ ಸ್ಥಳಗಳಲ್ಲಿ ಕಾನೂನು ಮತ್ತು ಸುವ್ಯವಸ್ಥೆಗೆ ಸಮಸ್ಯೆಯಾಗದಂತೆ, ಅವರೆಲ್ಲರೂ ಪೊಲೀಸರಿಗೆ ಪೂರಕವಾಗಿ ಸಹಕರಿಸಬೇಕು’ ಎಂದರು.

‘ಹಬ್ಬ ಆಚರಣೆ ಮುಗಿಯುವವರೆಗೆ ನಗರದಾದ್ಯಂತ ಬಿಗಿ ಬಂದೋಬಸ್ತ್ ಮಾಡಲಾಗಿರುತ್ತದೆ. ಅದಕ್ಕಾಗಿ, ಹೊರ ಭಾಗದಿಂದಲೂ ಪೊಲೀಸ್ ಸಿಬ್ಬಂದಿ ಇಲ್ಲಿಗೆ ಬರುತ್ತಾರೆ. ಗಣೇಶ ಮೂರ್ತಿ ಮತ್ತು ಪಂಜಾ ಮೆರವಣಿಗೆಯನ್ನು ನಿಗದಿತ ಮಾರ್ಗದಲ್ಲಿಯೇ ನಡೆಸಿ, ಆದಷ್ಟು ಬೇಗ ಮುಗಿಸಬೇಕು’ ಎಂದು ಹೇಳಿದರು.

ಬಹುಮಾನ:‘ಹಬ್ಬವನ್ನು ಚನ್ನಾಗಿ ಆಚರಿಸುವ ಗಣೇಶ ಮಂಡಳಗಳಿಗೆ ಬಹುಮಾನ ನೀಡುವ ರೀತಿಯಲ್ಲೇ, ಉತ್ತಮವಾಗಿ ಬಂದೋಬಸ್ತ್ ಕೆಲಸ ನಿರ್ವಹಿಸುವ ಪೊಲೀಸರಿಗೂ ಬಹುಮಾನ ನೀಡಲಾಗುವುದು’ ಎಂದು ದಿಲೀಪ್ ಹೇಳಿದರು.

ಜಿಲ್ಲಾಧಿಕಾರಿ ದೀಪಾ ಚೋಳನ್ ಮಾತನಾಡಿ, ‘ಪರಿಸರಕ್ಕೆ ಮಾರಕವಾಗುವ ಪಿಒಪಿ ಗಣೇಶ ಮೂರ್ತಿಗಳ ಬದಲಿಗೆ, ಮಣ್ಣಿನ ಮೂರ್ತಿಗಳನ್ನೇ ಎಲ್ಲರೂ ಪ್ರತಿಷ್ಠಾಪಿಸಬೇಕು. ಪರಿಸರ ಸ್ನೇಹಿ ಗಣೇಶ ಚತುರ್ಥಿ ಆಚರಣೆಗೆ ಎಲ್ಲರೂ ಕೈ ಜೋಡಿಸಬೇಕು. ಜತೆಗೆ, ಜಿಲ್ಲೆಯಲ್ಲಿ ಪ್ರವಾಹ ಪರಿಸ್ಥಿತಿ ಇರುವುದರಿಂದ ಹಬ್ಬವನ್ನು ಸರಳವಾಗಿ ಆಚರಿಸಬೇಕು’ ಎಂದು ಸಲಹೆ ನೀಡಿದರು.

ಜತೆಗೆ, ಪ್ರವಾಹ ಸಂತ್ರಸ್ತರಿಗಾಗಿ ಮುಖ್ಯಮಂತ್ರಿ ಪರಿಹಾರ ನಿಧಿಗೆ ₹45 ಲಕ್ಷ ದೇಣಿಗೆ ನೀಡಿದ ಜಿಲ್ಲೆಯ ಜನರಿಗೆ ಕೃತಜ್ಞತೆ ಸಲ್ಲಿಸಿದರು.

ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ಡಿ.ಎಲ್. ನಾಗೇಶ್, ‘ಹುಬ್ಬಳ್ಳಿಯಲ್ಲಿ 653 ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗುತ್ತಿದೆ. ಮೊಹರಂಗೆ 109 ಪಂಜಾ 10 ಡೊಲಿ ಪ್ರತಿಷ್ಠಾಪಿಸಲಾಗುತ್ತಿದೆ. ಮೂರ್ತಿಗಳ ಮೆರವಣಿಗೆಗೆ ಮಾರ್ಗಗಳನ್ನು ಗುರುತಿಸಲಾಗಿದೆ’ ಎಂದು ಹೇಳಿದರು.

‘ಪೊಲೀಸ್ ಠಾಣೆಗಳ ಮಟ್ಟದಲ್ಲಿ ಸೌಹಾರ್ದ ಸಭೆ ನಡೆಸಲಾಗಿದೆ. ಮೂರ್ತಿ ಪ್ರತಿಷ್ಠಾಪನೆ ಅನುಮತಿಗಾಗಿ ಪಾಲಿಕೆಯಲ್ಲಿ ಏಕಗವಾಕ್ಷಿ ವ್ಯವಸ್ಥೆ ಮಾಡಲಾಗಿದ್ದು, ಬಂದೋಬಸ್ತ್‌ಗಾಗಿ ಜಿಲ್ಲೆಯಷ್ಟೇ ಅಲ್ಲದೆ ಹೊರ ಭಾಗದಿಂದಲೂ ಸಿಬ್ಬಂದಿ ಬರುತ್ತಿದ್ದಾರೆ’ ಎಂದರು.

‘ಉದ್ದೇಶಪೂರ್ವಕವಾಗಿ ಅನ್ಯ ಧರ್ಮದವರ ಧಾರ್ಮಿಕ ಕೇಂದ್ರಗಳ ಎದುರು ಪಟಾಕಿ ಹಚ್ಚಬಾರದು. ಪ್ರಚೋದನಾಕಾರಿಯಾಗಿ ಮಾಡಬಾರದು. ರಾತ್ರಿ 10.30ರ ಬಳಿಕ, ಧ್ವನಿ ವರ್ಧಕ ಮತ್ತು ಡಿ.ಜೆ ಸಂಗೀತ ಬಳಸಿದರೆ, ಉಪಕರಣಗಳನ್ನು ಜಪ್ತಿ ಮಾಡಿ ಪ್ರಕರಣ ದಾಖಲಿಸಲಾಗುವುದು. ಸೌಹಾರ್ದ ಕಲಕುವ ಕೆಲಸ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು’ ಎಂದು ಎಚ್ಚರಿಕೆ ನೀಡಿದರು.

ಬಿಗಿ ಬಂದೋಬಸ್ತ್‌ಗೆ ಎಷ್ಟು ಮಂದಿ:‘ಹಬ್ಬದಂದು ಅಹಿತಕರ ಘಟನೆ ನಡೆಯದಂತೆ ಐವರು ಎಸ್‌ಪಿ ದರ್ಜೆಯ ಅಧಿಕಾರಿಗಳು, 14 ಡಿವೈಎಸ್ಪಿ, 47 ಇನ್‌ಸ್ಪೆಕ್ಟರ್‌ಗಳು, 144 ಸಬ್ ಇನ್‌ಸ್ಪೆಕ್ಟರ್‌ಗಳು, 1490 ಹೆಡ್‌ ಕಾನ್‌ಸ್ಟಬಲ್‌ಗಳು, 500 ಗೃಹ ರಕ್ಷಕ ಸಿಬ್ಬಂದಿ, 12 ನಗರ ಸಶಸ್ತ್ರ ಮೀಸಲು ಪಡೆ ತುಕಡಿ, 10 ಕೆಎಸ್‌ಆರ್‌ಪಿ ತುಕಡಿ ಹಾಗೂ ಒಂದು ಪ್ಯಾರಾ ಮಿಲಿಟರಿ ತುಕಡಿಯನ್ನು ಬಂದೋಬಸ್ತ್‌ಗಾಗಿ ನಿಯೋಜಿಸಲಾಗುವುದು’ ಎಂದು ಡಿಸಿಪಿ ಡಿ.ಎಲ್. ನಾಗೇಶ ಹೇಳಿದರು.

ಡಿಸಿಪಿ ಶಿವಕುಮಾರ ಗುಣಾರೆ ಸ್ವಾಗತಿಸಿದರು. ಇನ್‌ಸ್ಪೆಕ್ಟರ್ ಮಾರುತಿ ಗುಳ್ಳಾರಿ ನಿರೂಪಣೆ ಮಾಡಿದರು. ಗಿರೀಶ ಭೋಜಣ್ಣವರ ಪ್ರಾರ್ಥಿಸಿದರು. ಹೊಸಮಠದ ಚಂದ್ರಶೇಖರ ಸ್ವಾಮೀಜಿ, ಮುಸ್ಲಿಂ ಧರ್ಮಗುರುಗಳಾದ ತಾಜುದ್ದೀನ್ ಖಾದ್ರಿ, ಅಂಜುಮನ್ ಸಂಸ್ಥೆ ಅಧ್ಯಕ್ಷ ಯೂಸುಫ್ ಸವಣೂರ, ಸಿಖ್ ಧರ್ಮಗುರು ಗ್ಯಾನಿ ಮೇಜರ್ ಜೈಸಿಂಗ್, ಕ್ರೈಸ್ತ ಧರ್ಮದ ಎಚ್.ಎಸ್. ಉಳ್ಳಾಗಡ್ಡಿ, ಫಾದರ್ ಫಿಡೆಲಿನೊ, ಫಾದರ್ ಜೇಕಬ್, ಎಸ್‌ಎಸ್‌ಕೆ ಸಮಾಜದ ನೀಲಕಂಠಸಾ ಜಡಿ, ದಲಿತ ಮುಖಂಡ ಪಿತಾಂಬ್ರಪ್ಪ ಬೀಳಾರ, ರಾಜಕೀಯ ಮುಖಂಡರಾದ ಐ.ಜಿ. ಸನದಿ, ಎ.ಎಂ. ಹಿಂಡಸಗೇರಿ, ನಾಗೇಶ ಕಲಬುರ್ಗಿ, ಅಲ್ತಾಫ್ ಹಳ್ಳೂರ, ಅಲ್ತಾಫ್ ಕಿತ್ತೂರ, ರಾಜಣ್ಣ ಕೊರವಿ, ಡಿ.ಕೆ. ಚವ್ಹಾಣ, ಶಿವಾನಂದ ಮುತ್ತಣ್ಣ ಹಾಗೂ ಪಾಲಿಕೆ ಆಯುಕ್ತ ಸುರೇಶ ಇಟ್ನಾಳ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT