ಬುಧವಾರ, ಡಿಸೆಂಬರ್ 11, 2019
19 °C
CRICKET

ಸೇಂಟಿನರಿ ಕಪ್‌: ಠಕ್ಕರ್ ಶಾಲೆ ಚಾಂಪಿಯನ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ಆತಿಥೇಯ ಕೆ.ಇ. ಬೋರ್ಡ್ಸ್‌ ಶಾಲಾ ತಂಡದ ಎದುರು ಆರು ವಿಕೆಟ್‌ಗಳ ಗೆಲುವು ಸಾಧಿಸಿದ ನಗರದ ಎನ್‌.ಕೆ. ಠಕ್ಕರ್‌ ಆಂಗ್ಲ ಮಾಧ್ಯಮ ಶಾಲೆಯು 14 ವರ್ಷದ ಒಳಗಿನವರಿಗೆ ನಡೆದ ‘ಕೆ.ಇ. ಬೋರ್ಡ್ಸ್‌ ಸೇಂಟಿನರಿ ಕಪ್‌’ ತನ್ನದಾಗಿಸಿಕೊಂಡಿತು.

ಧಾರವಾಡದ ಕೆ.ಇ. ಬೋರ್ಡ್ಸ್‌ ಶಾಲಾ ಮೈದಾನದಲ್ಲಿ ಭಾನುವಾರ ನಡೆದ ಫೈನಲ್‌ ಪಂದ್ಯದಲ್ಲಿ ಗೆಲ್ಲಲು ಅಗತ್ಯವಿದ್ದ 148 ರನ್‌ಗಳನ್ನು ಠಕ್ಕರ್‌ ಶಾಲೆ 20.3 ಓವರ್‌ಗಳಲ್ಲಿ ನಾಲ್ಕು ವಿಕೆಟ್‌ ಕಳೆದುಕೊಂಡು ತಲುಪಿತು. 50 ಎಸೆತಗಳಲ್ಲಿ 10 ಬೌಂಡರಿ ಸೇರಿದಂತೆ ಅಜೇಯ 60 ರನ್‌ ಗಳಿಸಿದ ಹರ್ಷವರ್ಧನ ಮತ್ತು ಡಿ.ಪಿ. ಅನ್ಮೋಲ 20 ಎಸೆತಗಳಲ್ಲಿ 32 ರನ್‌ ಗಳಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ಕೆ.ಇ. ಬೋರ್ಡ್ಸ್ ಶಾಲಾ ತಂಡದ ಎಸ್‌. ಅಖಿಲ್‌ (48 ಎಸೆತಗಳಲ್ಲಿ 70 ರನ್‌) ಮತ್ತು ಸಾಯಿಕಿರಣ ಕದಮ್‌ (36) ಬ್ಯಾಟಿಂಗ್‌ ಬಲದಿಂದ 25 ಓವರ್‌ಗಳಲ್ಲಿ ಎಂಟು ವಿಕೆಟ್‌ ನಷ್ಟಕ್ಕೆ 147 ರನ್‌ ಕಲೆಹಾಕಿತ್ತು. ಠಕ್ಕರ್‌ ಶಾಲೆಯ ಕುನಾಲ ಶಾನಭಾಗ, ವಿನಾಯಕ ಪಾಂಡ್ಯ ಮತ್ತು ಸಾಯಿನಾಥ ತಲಾ ಎರಡು ವಿಕೆಟ್‌ಗಳನ್ನು ಕಬಳಿಸಿದರು.

ಠಕ್ಕರ್‌ ಶಾಲೆಯ ಹರ್ಷವರ್ಧನ ಪಂದ್ಯಶ್ರೇಷ್ಠ ಗೌರವ ಪಡೆದರೆ, ಕುನಾಲ ಶಾನಭಾಗ ಅತ್ಯುತ್ತಮ ಬೌಲರ್‌ ಗೌರವಕ್ಕೆ ಭಾಜನರಾದರು. ಅನ್ಮೋಲ ಟೂರ್ನಿ ಪುರುಷೋತ್ತಮ, ಕೆ.ಇ. ಬೋರ್ಡ್ಸ್ ಶಾಲೆಯ ಎಸ್. ಅಖಿಲ್‌ ಟೂರ್ನಿಯ ಅತ್ಯುತ್ತಮ ಬ್ಯಾಟ್ಸ್‌ಮನ್‌ ಕೀರ್ತಿ ಸಂಪಾದಿಸಿದರು. 

ಕೆ.ಇ. ಬೋರ್ಡ್‌ನ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ವಸಂತ ಮುರ್ಡೇಶ್ವರ, ಉಪ ಪ್ರಾಚಾರ್ಯ ಗೋವಿಂದ ರೆಡ್ಡಿ, ಕ್ರಿಕೆಟ್‌ ಕೋಚ್‌ ಸೋಮಶೇಖರ ಶಿರಗುಪ್ಪಿ, ವಿಎಂಸಿ ಅಕಾಡೆಮಿಯ ಕಾರ್ಯದರ್ಶಿ ಶಿವಪ್ರಕಾಶ ಶಿರಕೋಳ, ಹಿರಿಯ ಕ್ರಿಕೆಟಿಗ ರಾಜು ಕೆರೂರ ಇದ್ದರು.

ಪ್ರತಿಕ್ರಿಯಿಸಿ (+)